Hot Posts

10/recent/ticker-posts

ಜೀವನದ ಪಾಠ ಕಲಿಸಿದವರು..



ಅ.ಆ,ಇ.ಈ ಅಂತ ಹೇಳಿ ಕೊಟ್ಟಿದ್ದು ಅಂಬಿಕಾ ಮೇಡಂ..
ಲೆಕ್ಕಾ ಹೇಳಿ ಕೊಟ್ಟು ಪಕ್ಕಾ ಮನುಷ್ಯನನ್ನಾಗಿ ಮಾಡಿದ್ದು ಪ್ರಭಾವತಿ ಮೇಡಂ.


ಹಿಂದಿ ಹೇಳಿ ಸಮಾಜದ ಬಗ್ಗೆ ತಿಳಿಸಿದೋರು ಸಿದ್ರಾಮಯ್ಯಾ ಮೇಷ್ಟರು..
ಇವರೆಲ್ಲರೂ ನನ್ನ ಪ್ರಾಥಮಿಕ ಶಾಲೆಯ ಗುರುವೃಂದ.


ಆಶಾ ಟೀಚರ ಹೇಳಿಕೊಟ್ಟ ಆಶಾವಾದ, ಸುನಂದ ಟೀಚರ‍್ ಹೇಳಿ ಕೊಟ್ಟ ಸೌಜನ್ಯ, ಕೃಷ್ಣ ಪ್ರಸಾದ್ ಸರ‍್ ಹೇಳಿಕೊಟ್ಟ ಕಂಪ್ಯೂಟರ ಜ್ಞಾನ, ಹೇಮಲತ ಟೀಚರ‍್ ಹೇಳಿಕೊಟ್ಟ ವಿಜ್ಞಾನ ಇಂದಿಗೂ ನನ್ನ ನೆನಪಲ್ಲಿ ಉಳಿದಿವೆ..


ಪಿ.ಯು.ಸಿ.ನಲ್ಲಿ ಓದುವಾಗ ಲಿಂಗರಾಜು ಸರ‍್ ಮತ್ತು ಜಗದೇವಿ ಟೀಚರ‍್ ಗೆ ನಾನು ಅಂದ್ರೆ ಅದೇನು ಕೋಪವೋ ಏನೋ..! ನಮ್ಮನ್ನು ಪಕ್ಕಾ ಪುಡಾರಿಗಳಂತೆ ಕಂಡಿದ್ದು ಮಾತ್ರ ನಿಜ.. ನನ್ನನ್ನು ಕಂಡ ತಕ್ಷಣ ಮಂಗಳಾರತಿ ಮಾಡದೇ ಇದ್ದರೆ ಪಾಠ ಮುಂದಕ್ಕೇ ಹೋಗ್ತಾನೇ ಇರಲಿಲ್ಲ.. ಆದರೆ ದ್ವಿತೀಯ ಪಿಯು.ಸಿ. ನಲ್ಲಿ ನನ್ನ ಅಂಕಗಳನ್ನು ನೋಡಿ ನನಗೆ ಓದಿನ ಬಗ್ಗೆ ಮಾರ್ಗದರ್ಶನ ನೀಡಿ “journalism” ಮಾಡು ಅಂತ ಬುದ್ದಿ ಹೇಳಿದ್ದರು.. ನಿಜಕ್ಕೂ ಅದು ನನ್ನ ಜೀವನವನ್ನೇ ಬದಲಿಸಿದ್ದು ಮಾತ್ರ ಸುಳ್ಳಲ್ಲ.. ಅದರಲ್ಲೂ ನನ್ನ ಮೇಲೆ ಅತಿಯಾಗಿ ಕೋಪಿಸಿಕೊಂಡ ಟೀಚರ‍್ ಯಾರಿಗೂ ಹೇಳದ ಹಿತವಚನ ಹೇಳಿದ್ದರು.
ವಿಚಿತ್ರ ಅಂದ್ರೆ ನಾನು ಹೈ ಸ್ಕೂಲ್ ನಲ್ಲಿ ಓದುತ್ತಿದ್ದಾಗ ಸರೋಜಾ ಟೀಚರ‍್ ಗಣಿತ ಪಾಠ ಮಾಡ್ತಾ ಇದ್ರು.. 25 ಕ್ಕೆ 24 ½ ಅಂಕಗಳನ್ನು ಗಳಿಸಿದ್ರೂ ನನ್ನನ್ನು ಬಯ್ಯುತ್ತಿದ್ದರು.. ಆದರೆ ಉಳಿದವರೆಲ್ಲರೂ ನನಗಿಂತ ಅತ್ಯಂತ ಕಡಿಮೆ ಅಂಕ ತೆಗೆದುಕೊಂಡರೂ ಅವರು ಬಯ್ಯುತ್ತಿರಲಿಲ್ಲ.. ಅದು ನನಗೆ ತೀವ್ರ ಚಿಂತೆಗೆ ಈಡು ಮಾಡಿತ್ತು.. ಅವರ ಬಗ್ಗೆ ಕೋಪ ಬಂದಿದ್ದೂ ನಿಜ.. ಆದರೆ ಹತ್ತನೇ ತರಗತಿಯ ಕೊನೆಯಲ್ಲಿ ಅದಕ್ಕೆ ಕಾರಣ ಹೇಳಿದರು “ನೀನು ಅರ್ಧ ಅಂಕವನ್ನು ಬಿಟ್ಟಿದ್ದು ತಪ್ಪಲ್ಲ.. ಆದರೆ ಆ ಅರ್ಧವನ್ನೂ ನೀನು ಪಡೆಯಬೇಕು.. ನಿನ್ನಲ್ಲಿ ಆ ಆತ್ಮ ಸ್ಥೈರ್ಯ ಇದೆ.. ಅದಕ್ಕಾಗಿ ನಾನು ನಿನ್ನನ್ನು ಬಯ್ಯುತ್ತಿದ್ದೆ ಅಷ್ಟೇ” ಎಂದು ಹೇಳಿದ್ದು ಇನ್ನೂ ನನ್ನ ಕಣ್ಮುಂದೆ ಕಾಡುತ್ತದೆ..


ಅಂತೂ ಇಂತು ಪದವಿ ಮುಗಿಸಿದೆವು.. ಆಗ ಕಾಡಿದ್ದು ಕೆಲಸದ ಚಿಂತೆ..  ಕೆಲಸಕ್ಕಾಗಿ ಅಲೆದಾಡಿ ಸೋತು ಬಿದ್ದಾಗ ನಮಗಾಗಿ ಪರಿತಪಿಸಿದವರು ಶೈಲಜಾ ಮೇಡಂ.. ಅವರನ್ನು ನಾವು ಮರೆಯಲು ಸಾಧ್ಯವೇ ಇಲ್ಲ.. “ಕೆಲಸವೇ ಸಿಗೋದಿಲ್ಲ.. ಸುಮ್ಮನೆ ತೆಪ್ಪಗೆ ಇದ್ದುಬಿಡಬೇಕು” ಎಂದು ಗಟ್ಟಿ ನಿರ್ಧಾರ ಮಾಡಿದಾಗ ನಿನ್ನ ಟ್ಯಾಲೆಂಟ್ ಗೆ ಕೆಲಸ ಸಿಕ್ಕೆ ಸಿಗುತ್ತೆ.. ಆದ್ರೆ ಹುಡುಕೋದು ಬಿಡಬೇಡ.. ಈ ಟಿವಿ ಗೆ ಹೋಗು.. ಆ ಟಿವಿ ಗೆ ಹೋಗು ಅಂತ ಹೇಳಿ ನಮ್ಮಲ್ಲಿ ಮತ್ತೆ ಆಸೆ ಚಿಗುರೊಡೆಯುವಂತೆ ಮಾಡಿದ್ದರು..
ತದ ನಂತರ ಓದಿನ ಹವ್ಯಾಸ ಮುಂದುವರೆಸಿದ ನಾನು ಶಿಕ್ಷಕ ತರಬೇತಿಯನ್ನು ಚಿಕ್ಕಬಳ್ಳಾಪುರದ ಬಿ.ಎಡ್ ಕಾಲೇಜಿನಲ್ಲಿ ಪಡೆದೆ. ಸೈಕಾಲಜಿ ಮತ್ತು ಪಕ್ಕಾ ಶಿಸ್ತು ಅಂದ್ರೆ ಡಾ.ಕೆ.ಶಿವರಾಮ ರೆಡ್ಡಿಯವರಿಂದ ಕಲಿತಿದ್ದೇವೆ.. ಪಾಠ ಮಾಡಿದ್ರೆ ಅವರಂತೆ ಮಾಡಬೇಕು ಎಂದು ಸ್ಪೂರ್ತಿ ಪಡೆದಿದ್ದೇವೆ.. ಕಠಿಣ ವಿಷಯಗಳನ್ನು ಸುಲಭವಾದ ಉದಾಹರಣೆಗಳ ಮೂಲಕ ಮತ್ತು ಕಲಿಕಾ ಅನುಭವಗಳ ಮೂಲಕ ಹೇಳಿಕೊಡುತ್ತಿದ್ದರು.. ಒಂದು ದಿನ ನಾನು ಶಾಲೆಯಲ್ಲಿ ಪಾಠಮಾಡುತ್ತಿದ್ದೆ “ಕ್ರಾಂತಿ ವೀರ ಭಗತ್ ಸಿಂಗ್” ಬಗ್ಗೆ ಹೇಳುತ್ತಿದ್ದೆ.. ರಸಾನುಭವಗಳ ಮೂಲಕ ಏರಿಳಿತಗಳೊಂದಿಗೆ ಕಣ್ಣಿಗೆ ಕಟ್ಟುವಂತೆ ಪಠ್ಯವನ್ನು ವಿವರಿಸುತ್ತಿದ್ದೆ.. “ ನಾನೊಬ್ಬ ಸತ್ತರೆ ನನ್ನಂಥ ನೂರಾರು ಭಗತ್ ಸಿಂಗ್ ಗೆ ಜನ್ಮ ನೀಡುವ ಶಕ್ತಿ ಭಾರತ ಮಾತೆಗೆ ಇದೆ ಎಂಬ ದೃಢ ವಿಶ್ವಾಸ ಭಗತ್ ಸಿಂಗ್ ರವರಿಗಿತ್ತು.. ಆ ವಿಶ್ವಾಸದಲ್ಲೇ ಅವರು ನಗುನಗುತ್ತಲೇ ನೇಣಿಗೆ ಶರಣಾದ್ರು..!!  ಅಂದು ಭಾರತದ ಆಶಾಕಿರಣ ಆರಿ ಹೋಯಿತು” ಎಂದು ಹೇಳುತ್ತಿದ್ದೆ.. ಒಂದು ಕ್ಷಣ ಆ ಮಕ್ಕಳ ಕಣ್ಣಲ್ಲಿ ಇದ್ದ ಕಣ್ಣೀರು ಜಾರಿತು.. ಅದನ್ನು ಕಂಡು ಗುರುಗಳು “ಶಭಾಷ್..!! ಪಾಠ ಮಾಡಿದ್ರೆ ಮಕ್ಕಳ ಭಾವನೆಗಳ ಮೇಲೆ ಪರೀಣಾಮ ಬೀರಬೇಕು.. ಅವರ ಹೃದಯವನ್ನು ಕದಡಬೇಕು. ನಾನು ಇಪ್ಪತ್ನಾಲ್ಕು ವರ್ಷಗಳಲ್ಲಿ ಕಂಡ ಹುಡುಗರಲ್ಲಿ ನಿನ್ನ ಪಾಠ ಮೆಚ್ಚುಗೆಯಾಯ್ತು.” ಎಂದು ಬೆನ್ನು ತಟ್ಟಿದರು.. ನಿಜಕ್ಕೂ ಅಂದು ನನಗೆ ಸಾರ್ಥಕತೆ ಸಿಕ್ಕಿತು.. ಆ ಖುಷಿಗೆ ಪಾರವೇ ಇರಲಿಲ್ಲ..


ಡಾ.ಕೋಡಿ ರಂಗಪ್ಪನವರು ಹೇಳಿ ಕೊಟ್ಟ ಜೀವನದ ಪಾಠ, ಸಮಾಜದ ಪಾಠ ನಮಗೆ ಈಗೀಗ ತಿಳೀತಾ ಇದೆ.. ಲೀಲಾವತಿ ಮೇಡಂ ರವರ ಜ್ಞಾನಾರ್ಜನೆ, ವಿಷಯದ ಹೂರಣಕ್ಕೆ ನಾವು ಸಲಾಂ ಹೊಡೆಯಲೇ ಬೇಕು.. ಅವರಂತೆ ಜ್ಞಾನಾರ್ಜನೆ ಪಡೆಯಲು ಸಾಧ್ಯವಿಲ್ಲವಾದರೂ ಅವರ ಶಿಷ್ಯರಾಗಿದ್ದಕ್ಕೆ ಹೆಮ್ಮೆ ಪಡುತ್ತೇವೆ..



ಇಲ್ಲಿಯವರೆಗೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಮಾಡಿದ ಗುರುಗಳ ಬಗ್ಗೆ ಮಾತ್ರ ನಾನು ಹೇಳಿದೆ.. ಆದರೆ ಕೊಠಡಿಗಳಿಂದ ಹೊರ ಬಂದಾಗ ಕಲಿತ ಪಾಠ ಇನ್ನೂ ಹೆಚ್ಚಿನದ್ದು.. ಹಸಿವು ಮತ್ತು ಬಡತನ ಕಲಿಸುವ ಪಾಠ ಯಾವ ಯೂನಿವರ್ಸಿಟಿಯೂ ಕಲಿಸೋದಿಲ್ಲ ಎಂಬುದು ಅಕ್ಷರಸಹಃ ಸತ್ಯ.. ಆದರೆ ಅದರ ಜೊತೆಗೆ ನಿಂದನೆ ಎಂಬ ಪದವೂ ಸೇರಿಸಬೇಕಾಗುತ್ತೆ.. “ಓದಿದ್ದು ಆಯ್ತು ಸುಮ್ಮನೆ ಮನೇಲಿ ಇದ್ದೀಯ..??”  ಅನ್ನೋ ಅಕ್ಕ ಪಕ್ಕದವರ ನಿಂದನೆಯ ಮಾತುಗಳು ನಮ್ಮ ಪೋಷಕರ ಮೇಲೆ ಹೆಚ್ಚು ಗಾಢ ಪರಿಣಾಮ ಬೀರಿದ್ದಂತೂ ಸುಳ್ಳಲ್ಲ.. ಹೊಟ್ಟೆಯಲ್ಲಿ ನೋವಾದರೂ ನೀರು ಬರೋದು ಮಾತ್ರ ಕಣ್ಣಲ್ಲಿ ಎಂಬಂತೆ, ಪೋಷಕರಿಗೆ ಆ ಮಾತುಗಳು ಕೇಳಿ ಬಂದರೂ ಅದರ ಪರಿಣಾಮ ನಮ್ಮ ಮೇಲೆ ಬೀರದೇ ಇರುತ್ತದೆಯೇ..?? ಖಂಡಿತ ಪರಿಣಾಮ ಬೀರಿತು.. ಆದರೆ ಕೆಲಸ ಹುಡುಕಿ ಕಂಗಾಲಾಗಿದ್ದ ಸಮಯದಲ್ಲಿ ಜನರ ವರ್ತನೆಗಳು ತಿಳಿಯತೊಡಗಿತು.. ಆತ್ಮೀಯರು, ಎಂದು ಹೇಳಿಕೊಳ್ಳುತ್ತಿದ್ದವರು ಬರ ಬರುತ್ತ ದೂರವಾದರು.. ಇದಕ್ಕೆ ಕಾರಣ ಅವರಿಗೆ ಸಮಯ ಇರಲಿಲ್ಲವೋ ಅಥವ ನಮ್ಮ ಹಣೆಬರ ನೆಟ್ಟಗಿರಲಿಲ್ಲವೋ ಒಂದೂ ಗೊತ್ತಿಲ್ಲ.. ಆದರೆ ಏನೂ ಇಲ್ಲದೇ ಇರುವ ವೇಳೇಯಲ್ಲಿ ನನ್ನವರು ಎಂದು ಯಾರೂ ಇರಲಿಲ್ಲ ಎಂಬುದು ಗಮನಾರ್ಹ ಸಂಗತಿ..


ಅಂತೂ ಇಂತು ಜಗದ ನಿಂದನೆಯಿಂದ ದೂರವಾಗುವ ಸಮಯ ಹತ್ತಿರಕ್ಕೆ ಬಂತು.. ಮಾಧ್ಯಮದಲ್ಲಿ ಕೆಲಸ ಕೂಡ ಸಿಕ್ಕಿತು.. ಅಲ್ಲಿಯವರೆಗೂ ನಾನು ಕಳೆದ ದಿನಗಳು ನಿಜಕ್ಕೂ ಕರಾಳ  ದಿನಗಳು..
ಆದರೆ ಆ ಕರಾಳ ದಿನಗಳಿಗೆ ನಮ್ಮ ಇಂಗ್ಲೀಷ್ ಟೀಚರ‍್ ಕೂಡ ಕಾರಣರು ಅಂತ ಹೇಳಿದ್ರೆ ತಪ್ಪಿಲ್ಲ.. ಏಳನೆಯ ತರಗತಿಯವರೆಗೆ ಇಂಗ್ಲೀಷ್ ನಲ್ಲಿ ಕಿಂಗ್ ಆಗಿದ್ದ ನಾನು ಎಂಟನೇ ತರಗತಿಯಿಂದ ಇಂಗ್ಲೀಷ್ ಪಾಠ ಕೇಳಲೇ ಇಲ್ಲ ಎಂಬುದು ಅತ್ಯಂತ ಗಮನಾರ್ಹ.. ನಾವು ಓದಿದ್ದೇ ಪಾಠ.. ಬರೆದದ್ದೇ ಉತ್ತರ..!! ನಮಗೆ ಇಂಗ್ಲೀಷ್ ಹೇಳಿಕೊಡುವ ಮನಸ್ಸು ಯಾರಿಗೂ ಬರಲಿಲ್ಲ.. ಸಾವಿರ ರೂಪಾಯಿ ಕೊಟ್ಟು ಟ್ಯೂಷನ್ ಹೋಗೋ ಪರಿಸ್ಥಿತಿಯಲ್ಲೂ ನಾವು ಇರಲಿಲ್ಲ.. ಇದರ ಪರಿಣಾಮ ಶಾಲೆಗಳಿಗೆ ಆಗಲಿಲ್ಲ.. ಬದಲಾಗಿ ಸಾಧನೆಯ ಕನಸುಗಳನ್ನು ಹೊತ್ತು ಯಶಸ್ಸಿನೆಡೆಗೆ ಮುಖ ಮಾಡಿದ ನಮ್ಮಂಥ ಅಸಹಾಯಕ ವಿಧ್ಯಾರ್ಥಿಗಳ ಮೇಲೆ ಆಯ್ತು..
ಎಷ್ಟರ ಮಟ್ಟಿಗೆ ಅಂದ್ರೆ “ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ಶಿಕ್ಷಕರ ಸಂಘ, ವಿವಿಧ ಸಂಘಟನೆಗಳು ನನಗೆ ಮತ್ತು ನನ್ನ ಶಾಲೆಗೆ ಸನ್ಮಾನ ಮಾಡಿ ಗೌರವಿಸಿತು.. ನಿನ್ನಿಂದ ನಮ್ಮ ಶಾಲೆಗೆ ಹೆಮ್ಮೆ ಆಗಿದೆ.. ಅಂತ ಅಂದು ನಮ್ಮ ಶಿಕ್ಷಕ ವೃಂದ ಬೆನ್ನು ತಟ್ಟಿತ್ತು..  ಆದರೆ ನಾನು ಬಿ.ಎಡ್. ಮುಗಿಸಿದಾಗ ಅದೇ ಶಾಲೆಗೆ ಹೋಗಿ ರಿಸ್ಯೂಮ್ ಕೊಟ್ಟೆ.. ಆಗ ಅಂದು ನನ್ನನ್ನು ಪ್ರಶಂಸಿದ ಶಿಕ್ಷಕರು ನನ್ನ ರಿಸ್ಯೂಮ್ ತಗೊಂಡು ಹೇಳ್ತೀವಿ ಹೋಗಪ್ಪ ಅಂತ ನೀರಸವಾಗಿ ಕಳಿಸಿದ್ರು..  ಆಗ ಗೊತ್ತಾಯ್ತು ಪ್ರಪಂಚ ಕೇವಲ ಆಡಂಬರ.. ಕಾಲಕ್ಕೆ ತಕ್ಕಂತೆ ಬದಲಾಗುತ್ತೆ ಅಂತ..


ನನ್ನ ವಯಸ್ಸು ಅತ್ಯಂತ ಕಡಿಮೆಯೇ ಇರಬಹುದು.. ಆದರೆ ಬಹಳಷ್ಟು ಸನ್ನಿವೇಶಗಳನ್ನು ಎದುರಿಸಿದ್ದೇನೆ.. ಎಲ್ಲಾ ಸನ್ನಿವೇಶಗಳಿಂದಲೂ ಒಂದೊಂದು ಪಾಠವನ್ನು ಕಲಿತಿದ್ದೇನೆ..  ಅದಕ್ಕೆ ನಾನು ಸದಾ ಹೇಳ್ತಾ ಇರ‍್ತೀನಿ “ಜೀವನದ ಪಾಠ ಕಲಿಸಿದವರಿಗೆ ಥ್ಯಾಂಕ್ಸ್” ಅಂತ..
ಮೇಷ್ಟ್ರು ಶಾಲೆಯಲ್ಲಿ ಪಾಠ ಕಲಿಸಿ ಪರೀಕ್ಷೆ ಕೊಡ್ತಾರೆ.. ಆದ್ರೆ ಜೀವನ ಅನ್ನೋದು ಮೊದಲು ಪರೀಕ್ಷೆಗಳನ್ನು ಕೊಟ್ಟು ಅದರ ಮೂಲಕ ಪಾಠ ಕಲಿಸುತ್ತೆ..
ಇನ್ನೂ ಅನೇಕ ನಿಜವಾದ ಕನ್ನಡಿಗರು ನಿರುದ್ಯೋಗಿ ಎಂಬ ಹಣೆ ಪಟ್ಟಿ ಹೊತ್ತು ಸಮಾಜದಲ್ಲಿ ಈಜುತ್ತಿದ್ದಾರೆ,, ನನ್ನ ಹಲವು ಸ್ನೇಹಿತರೇ ಇದಕ್ಕೆ ಸಾಕ್ಷಿ.. ಆದ್ರೆ ಅವರೆಲ್ಲರನ್ನೂ ದಡ ಮುಟ್ಟಿಸಲು ಸಾಧ್ಯವೇ ಎಂಬ ಯೋಚನೆ ನನ್ನನ್ನು ಸದಾ ಕಾಡುತ್ತೆ.. ಆದರೂ ನನ್ನ ಪ್ರಯತ್ನ ನಾನು ಮಾಡುತ್ತಿದ್ದೇನೆ.. ನಮಗೆ ಯಾರೋ ಮಾಡಿದ ಸಹಾಯವನ್ನು ನಾವು ಮತ್ತೊಬ್ಬರಿಗೆ ಮಾಡಿದರೆ ಆ ಶ್ರಮ ಮತ್ತು ಸಹಾಯಕ್ಕೆ ತಕ್ಕ ಫಲ ಸಿಕ್ಕಂತಾಗುತ್ತದೆ..


ಸಹಾಯಕ್ಕಾ ಕೈ ಜೋಡಿಸೋಣ.. ನಮ್ಮೊಂದಿಗೆ ನೀವಿರಿ.. ನಿಮ್ಮೊಂದಿಗೆ ನಾನಿರ‍್ತೀನಿ..




Отправить комментарий

0 Комментарии