Hot Posts

10/recent/ticker-posts

ಬೈಯ್ಯುತ್ತಲೇ ಬದುಕು ಕಟ್ಟಿಕೊಟ್ಟ ಭಾವುಕ ಜೀವಿ ಕೆ.ಆರ್​​




ಹೇ ಏನ್ ಗಲೀಜ್‌ ಜನಗಳಯ್ಯ ನೀವು..? ಯಾವನಯ್ಯ ನಿಮಗ್ ಡಿಗ್ರಿ ಕೊಟ್ಟೋನು..?
ನೋಡ್ರಯ್ಯ ಕಾಲೇಜಿಗೆ ತಪ್ಪಿಸಿಕೊಂಡು ಮನೇಲ್ ಕೂತ್ಕೊಂಡು ಕಿತ್ ಗುಡ್ಡೆ ಹಾಕೋ ಕೆಲಸ
ಅಂಥದ್ದೇನಿತ್ತಯ್ಯ..?  ಯಾರಾದ್ರೂ ಸಾಯ್ತಾ ಇದ್ರೆ ಮಾತ್ರ ಕಾಲೇಜಿಗೆ ರಜೆ ಹಾಕ್ಬೇಕು..
ಅದೂ ಬದುಕಿಸೋದಕ್ಕೆ ಸಾಧ್ಯ ಆಗೋ ಹಾಗಿದ್ರೆ.. ಸತ್ತೋಗ್ಬಿಟ್ರೆ ರಜಾ ಹಾಕಿ ಕೂಡ ಏನೂ
ಪ್ರಯೋಜನ ಇಲ್ರಯ್ಯ..!



 ಹೀಗೆ ನಮ್ಮ ಕಾಲೇಜು ದಿನಗಳಲ್ಲಿ ಅತ್ಯಂತ
ಕಠೋರವಾಗಿ ಮಾತನಾಡುತ್ತಿದ್ದವರು ಪ್ರೊ.ಕೋ.ಡಿ ರಂಗಪ್ಪನವರು. ಮೂಲತಃ ಮಧುಗಿರಿಯವರಾಗಿರುವ
ಪ್ರೋ.ಕೋಡಿ ರಂಗಪ್ಪನವರು ಚಿಕ್ಕಬಳ್ಳಾಪುರ, ಕೋಲಾರ, ಬಾಗೆಪಲ್ಲಿ ಸೇರಿದಂತೆ ಬೆಂಗಳೂರು
ಗ್ರಾಮಾಂತರದ ಬುದ್ದಿ ಜೀವಿಗಳಿಗೆ ಚಿರಪರಿಚಿತರು. ಸದ್ಯಕ್ಕೆ ಚಿಕ್ಕಬಳ್ಳಾಪುರದ ಸರ್ಕಾರಿ
ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರೋಫೇಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.



ಪಾಠ
ಮಾಡುವುದಕ್ಕಿಂತಲೂ ಹೆಚ್ಚಾಗಿ ಹೊರಗಿನ ವಿಷಯವನ್ನೇ ಹೆಚ್ಚಾಗಿ ತಲೆಯೊಳಗೆ
ತುರುಕುತ್ತಿದ್ದರು. ಅವರು ಒಂದು ಗಂಟೆ ಪಾಠ ಮಾಡ್ತೀನಿ ಅಂತ ಹೇಳಿದರು ಎಂದರೆ,
ವಿದ್ಯಾರ್ಥಿಗಳ ಮನಸಿನಲ್ಲಿ ಅದಾಗಲೇ ಲೆಕ್ಕಾಚಾರಗಳು ಶುರುವಾಗಿಬಿಡುತ್ತಿದ್ದವು.
“ಮೇಷ್ಟ್ರು ಮೂರ್ ಅವರ್ ಬಿಡಲ್ಲ ಕಣ್ರಪ್ಪ.. ಓಡೋಗೋಣ ನಡೀರೋ” ಅಂತ ಅವರ ಕ್ಲಾಸುಗಳಿಗೆ
ಹಾಜರಾಗದೇ ಕಾಲ್ಕಿತ್ತವರೇ ಹೆಚ್ಚು.



ಅವರು ಪಾಠ ಮಾಡಿದ್ದು ಎಷ್ಟು
ನೆನಪಿದೆಯೋ.. ಅದಕ್ಕಿಂತಲೂ ಹೆಚ್ಚಾಗಿ ಅವರ ಬೈಗುಳಗಳು ನಮಗೆ ಇನ್ನೂ ನೆನಪಿದೆ.. “ಏನ್‌
ಗಲೀಜ್‌ ಜನಗಳಯ್ಯ ನೀವು? ಒಂದು ಕ್ಲಾಸ್ ನೆಟ್ಟಗೆ ಅಟೆಂಡ್ ಮಾಡೋಕ್ ಆಗಲ್ಲ ನಿಮಗೆ..
ನಿಮಗೆ ಯಾರಯ್ಯ ಡಿಗ್ರಿ ಕೊಟ್ಟೋನು?” ಎಂದೆಲ್ಲಾ ಪ್ರವಚನ ಶುರು ಮಾಡುತ್ತಿದ್ದರು.



ಆದ್ರೆ
ಕೆಆರ್ ಮೆಷ್ಟ್ರು ಬೈಗಳುಗಳನ್ನು ಕೇಳಿದ ಎಲ್ಲಾ ವಿದ್ಯಾರ್ಥಿಗಳು, ಓದು ಮುಗಿಸಿ
ಅಂತಿಮವಾಗಿ ಹೊರಗೆ ಬರುತ್ತಿರುವಾಗ ತುಂಬಾನೇ ಮಿಸ್ ಮಾಡ್ಕೊಳ್ಳೋದು ಅದೇ
ಕೆ.ಆರ್.ಮೇಷ್ಟ್ರನ್ನ..



ಯಸ್‌.. ಅವರು ಹೊರಗೆ ಎಷ್ಟು ಕಠೋರ ವಾಗ್ಮಿಗಳೋ.. ವಿದ್ಯಾರ್ಥಿಗಳ ಮೇಲೆ ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿದ್ದ ದ್ರೋಣರು.



ನನಗೆ
ಇನ್ನು ನೆನಪಿದೆ.... ಕಾಲೇಜು ಬಿಟ್ಟಾಗ ಶಿಕ್ಷಕರು ಸೇರಿದಂತೆ, ಆಫೀಸ್ ಬಾಯ್ ಕೂಡ
ಕಾಲೇಜು ಬೀಗ ಹಾಕಿ ಮನೆಗೆ ಹೋದಾಗ ಅವರು ಒಬ್ಬರೇ ಕಾಲೇಜು ಹೊರಗೆ ಗಂಟೆ ಗಟ್ಟಲೇ
ನಿಲ್ಲುತ್ತಿದ್ದರು... ಇದು ನಮಗೆಲ್ಲರಿಗೂ ಒಂದು ರೀತಿಯ ಕುತೂಹಲವನ್ನೂ ಕೆರಳಿಸಿತ್ತು..
ನನಗೆ ಹೆಚ್ಚು ಆತ್ಮೀಯ ಗುರುಗಳಾಗಿದ್ದರಿಂದ ತಡ ಮಾಡದೇ ಅವರಲ್ಲಿ ನನ್ನ ಪ್ರೆಶ್ನೆ
ಪತ್ರಿಕೆಯನ್ನು ಇಟ್ಟುಬಿಟ್ಟೆ.



ಅದಕ್ಕೆ ಅವರು ಕೊಟ್ಟ ಉತ್ತರ
ಏನುಗೊತ್ತಾ? “ನೋಡ್ರಯ್ಯ.. ಎಲ್ಲಾರೂ ಎಲ್ಲೆಲ್ಲಿಂದಾನೋ ಬಂದಿರ್ತಾರೆ.. ಅದ್ರಲ್ಲೂ
ಹೆಣ್ಮಕ್ಕಳು ದೂರದಿಂದ ಇಲ್ಲಿವರೆಗೂ ಬಂದಿರ್ತಾರೆ. ಅವರ ಅಪ್ಪ ಅಮ್ಮ ಎಲ್ರೂ ನಮ್ ಮೇಲೆ
ನಂಬಿಕೆ ಇಟ್ಟು ಕಳಿಸಿರ್ತಾರೆ.. ಅವರು ಎಲ್ರೂ ಬಸ್ ಹತ್ತಿದ ಮೇಲೆ ನಾನು ಮನೆಗೆ ಹೋಗೋದು
ನ್ಯಾಯ ಅಲ್ವಾ? ನಾನ್ ಮನೇಗ್ ಹೋಗಿ ದೇಶ ಉದ್ದಾರ ಮಾಡೋದು ಅಷ್ಟ್ರಲ್ಲೇ ಇದೆ. ಆದ್ರೆ
ಹೆಣ್ಮಕ್ಕಳನ್ನು ಬಸ್ ಹತ್ತಿಸಿ ಹೋದರೆ ಮನಸಿಗೆ ಸಮಾಧಾನ.. ಎಂದು ಹೇಳಿದ್ರು..



ಇದಲ್ವಾ
ಮೇಷ್ಟ್ರು ಮನಸು ಅಂದ್ರೆ? ಹೊರಗೆ ಬೈದ ಮಾತ್ರಕ್ಕೆ ಮನದೊಳಗೆ ಪ್ರೀತಿಯೇ ಇಲ್ಲ
ಎಂದಲ್ಲ.. ಬದಲಿಗೆ ಹೆಚ್ಚಿನ ಪ್ರೀತಿ ಇದೆ ಎಂದರ್ಥ.. ನಿಮ್ಮ ಬದುಕಿನ ಬಗ್ಗೆ ನಿಮಗಿಂತಲೂ
ಹೆಚ್ಚಿನ ಚಿಂತೆ ಅವರಿಗೆ ಇದೆ ಎಂದರ್ಥ.. ಇಲ್ಲಿ ಇನ್ನೊಂದು ಉದಾಹರಣೆಯನ್ನು
ಉಲ್ಲೇಖಿಸದೇ ಇದ್ದರೆ ಅದು ನನ್ನ ಅಪರಾಧವಾಗುತ್ತದೆ.  ಬಿಎಡ್‌ ಓದಲು ದೂರದೂರಿನಿಂದ
ಚಿಕ್ಕಬಳ್ಳಾಪುರಕ್ಕೆ ಬರುವವರೇ ಹೆಚ್ಚು.. ಹೀಗೆ ಬಂದವರಿಗೆ ವಸತಿ ವ್ಯವಸ್ಥೆಯನ್ನು
ಕಲ್ಪಿಸಿ ಅವರಿಗೊಂದು ಗೂಡು ನಿರ್ಮಿಸುವ ಕೈಂಕರ್ಯವನ್ನೂ ಅವರು ಮಾಡಿದ್ದಾರೆ.



ಬಹುಷ
ಈ ಸಮಾಜಮುಖಿ ಕಾರ್ಯಗಳಿಂದಲೇ ಇರಬೇಕು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ
ಗುರುಗಳಾಗಿದ್ದು.. ನಾವು ಕಾಲೇಜು ಮುಗಿಸಿ ಹಲವು ವರುಷಗಳೇ ಉರುಳಿವೆ. ಆದರೂ ಕೂಡ ಅವರು
ಅಂದು ಬದುಕಿಗೆ ಹಾಕಿಕೊಟ್ಟ “ಇನ್‌ ಸೈಟ್‌” ಇದ್ಯಲ್ಲ.. ಅದನ್ನು ಇಂದಿಗೂ ಮರೆತಿಲ್ಲ.
ನಾನೊಬ್ಬನೇ ಅಂತ ಅಲ್ಲ, ಇದುವರೆಗೂ ಯಾರು ಅವರ ವಿದ್ಯಾರ್ಥಿಗಳಾಗಿ ಹೊರಗೆ ಬಂದಿದ್ದಾರೋ
ಅವರೆಲ್ಲರೂ ಕೂಡ ಕೊನೆಯಲ್ಲಿ ಕೆ.ಆರ್ ಅವರ ಬದುಕಿನ “ಇನ್ ಸೈಟ್” ವಿಚಾರವನ್ನು
ಮರೆಯುವುದೇ ಇಲ್ಲ. “ಪುಸ್ತಕದ ಪ್ರಿಂಟೆಡ್‌ ವಿದ್ಯೆಗಿಂತ, ಮಸ್ತಕದ ಅನುಭವದ ಪಾಠಗಳನ್ನು
ವಿದ್ಯಾರ್ಥಿಗಳಲ್ಲಿ ಬಿತ್ತಿದ್ದಾರೆ.. ಈಗಲೂ ಬಿತ್ತುತ್ತಿದ್ದಾರೆ.



ಸುತ್ತಮುತ್ತಲ
ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಯಾವುದೇ ಸಭೆ ಸಮಾರಂಭಗಳು ನಡೆದರೂ, ಪ್ರೋ.ಕೋಡಿ
ರಂಗಪ್ಪನವರನ್ನು ಎಲ್ಲರೂ ಆಹ್ವಾನಿಸುತ್ತಾರೆ. ಅವರ ಭಾಷಣ ಇಲ್ಲದೇ ಬಹುಷ ಬಹಳಷ್ಟು ಸಭೆ
ಸಮಾರಂಭಗಳು ಪೂರ್ತಿಯಾಗೋದಿಲ್ಲ. ಭಾಷಣ ಮಾಡುವಾಗಲೂ ಅಧಿಕಾರ ಶಾಹಿಗಳ ಬಗ್ಗೆ ಕಿಡಿ ಕಾರಿ,
ಬಡವರ ಬಗ್ಗೆ ಕಾಳಜಿ ವಹಿಸಿ ಮಾತನಾಡ್ತಾರೆ. ಬಡವರಿಗೆ ಬೇಕಾದ ಕನಿಷ್ಟ ಅವಶ್ಯಕತೆಗಳ
ಬಗ್ಗೆ ನೆರೆದಿದ್ದವರಿಗೆ ಮನದಟ್ಟು ಮಾಡಿಕೊಡ್ತಾರೆ.  ಇದು ಸಮಾಜದ ಬಗ್ಗೆ ಅವರು
ಹೊಂದಿರುವ ವಿಶೇಷ ಕಾಳಜಿಯನ್ನು ತೋರಿಸುತ್ತದೆ.



ಮೊನ್ನೆ ಒಂದು
ಕಾರ್ಯಕ್ರಮದ ನಿಮಿತ್ತ ಗೆಳೆಯ ಕಿಶೋರ್ ನಾನು ಹಾಗೂ ಇನ್ನುಳಿದ ಆತ್ಮೀಯರು ಸೇರಿ ಎಲ್ಲಾ
ಮೇಷ್ಟ್ರುಗಳನ್ನು ಭೇಟಿ ಮಾಡಿದ್ವಿ.. ಯಾವಾಗಲೂ ಬೈಯ್ಯುತ್ತಲೇ ಬದುಕು ಕಟ್ಟಿಕೊಟ್ಟ
ಗುರುಗಳು ಅಂದು ಸ್ವಲ್ಪ ಭಾವುಕರಾದಂತೆ ಕಂಡಿತು. ಮನದೊಳಗಿದ್ದ ಏನನ್ನೋ ಹೊರ ಹಾಕಲು
ಬಯಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಆದ್ರೆ ಅದನ್ನು ಕೇಳೋದು
ಹೇಗೆ? ಕೇಳಿದರೂ ದೊಡ್ಡವರು ಹೇಳಿಯಾರೇ?



ನಾವು ಸುಮ್ಮನೇ
ಕುಳಿತುಬಿಟ್ಟೆವು.. ಸ್ವಲ್ಪ ಸಮಯದ ನಂತರ ಅವರೇ ಮಾತಿಗಿಳಿದರು.. ನಿಮ್ಮನ್ನೆಲ್ಲಾ ಮಿಸ್
ಮಾಡ್ಕೊಳ್ಳೊಕೆ ಮನಸು ಒಪ್ತಾ ಇಲ್ಲ ಕಣ್ರಯ್ಯ.. ನನಗೆ ಏನ್ ಅನಿಸುತ್ತೆ ಗೊತ್ತಾ? ನನಗೆ
ಏನಾದ್ರೂ ಅಧಿಕಾರ ಇದ್ದಿದ್ರೆ, ನಮ್ ಕಾಲೇಜಿನಲ್ಲಿ ಓದಿದವರಿಗೆಲ್ಲಾ ನಾನೇ ಕೆಲಸ
ಕೊಟ್ಟು, ಅವರೆಲ್ಲರನ್ನೂ ನನ್ನ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕು ಅಂತ ಆಸೆ ಕಣ್ರಯ್ಯ..
ಆದ್ರೆ ಏನು ಮಾಡೋದು.. ಅದು ನನ್ನ ಕನಸು.. ಆದ್ರೆ ವಾಸ್ತವಿಕ
ಜಗತ್ತಿನಲ್ಲಿ ಅದು ಸಾಧ್ಯವಾಗೋದಿಲ್ಲ ಅಂತ ಗೊತ್ತು. ಯಾಕಂದ್ರೆ ಪ್ರತಿ ವರ್ಷ ಪಾಸಾಗಿ
ಹೋಗುವ ನೂರು ನೂರು ಜನರಿಗೆ ಕೆಲಸ ಕೊಡಬೇಕು ಅನ್ನೋದು ವಾಸ್ತವಿಕವಾಗಿ ಅಸಾಧ್ಯ
ಅಂತ
ಭಾವುಕರಾದ್ರು...





ಅರೆ.. ಕೆ.ಆರ್.ಮೇಷ್ಟ್ರು ಇಷ್ಟೋಂದು ಭಾವುಕ
ಜೀವಿಗಳೇ? ನಿಜಕ್ಕೂ ಅಲ್ಲಿ ನೆರೆದಿದ್ದ ಹೊಸ ವಿದ್ಯಾರ್ಥಿಗಳಿಗೆ ಮೇಷ್ಟ್ರ ಮಾತು
ಅಚ್ಚರಿಯಾಗಿತ್ತು. ಯಾಕೆಂದ್ರೆ ಅಂದು ನಾವು ವಿದ್ಯಾರ್ಥಿಗಳಾಗಿದ್ದಾಗಲೂ ಕೆ.ಆರ್
ಮೇಷ್ಟ್ರು ಯಾವಾಗಲೂ ಬೈತಾರೆ ಅಂತ ಹೀಗೇ ಅರ್ಥೈಸಿಕೊಂಡಿದ್ದೆವು. ಆದ್ರೆ ಅವರ ಕಠೋರವಾದ
ಮಾತುಗಳ ಹಿಂದೆ ಬದುಕನ್ನು ಕಟ್ಟಿಕೊಡಬೇಕು ಎಂಬ ಮಹದಾಸೆ ಇದೆ ಎಂಬುದು ಯಾರಿಗೂ
ಕಾಣಿಸಿರಲಿಲ್ಲ..  ಬಹುಷಃ ಈಗಲೂ ಕೆಲವರಿಗೆ ಗೊತ್ತಿಲ್ಲ.. ಕೆ.ಆರ್ ಮೇಷ್ಟ್ರನ್ನು ಬಹಳ
ಹತ್ತಿರದಿಂದ ನೋಡಿದವರಿಗೆ ಮಾತ್ರ ಅವರ ಹೃದಯಕಮಲ ತಿಳಿಯುತ್ತದೆ.



ನೆನಪಿನ ಬುತ್ತಿಯಿಂದ ಹೊರತೆಗೆದಿದ್ದು

ಶೇಖರ್‌ ಪೂಜಾರಿ

Отправить комментарий

0 Комментарии