
2007ರ ಡಿಸೆಂಬರ್‌ನಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ನಡೆದ ಸಂದರ್ಭದಲ್ಲಿ ಮುಷರ್ರಫ್ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಇದೀಗ ಸ್ವಯಂ ಆಗಿ ಗಡಿಪಾರುಗೊಂಡು ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಏತನ್ಮಧ್ಯೆ ಪಾಕಿಸ್ತಾನದಲ್ಲಿನ ಯಾವುದೇ ಕೋರ್ಟ್ ವಿಚಾರಣೆಗೂ ಮುಷರ್ರಫ್ ಹಾಜರಾಗುವುದಿಲ್ಲ ಎಂದು ಅವರ ವಕ್ತಾರ ಸ್ಪಷ್ಟಪಡಿಸಿದ್ದಾರೆ.
ಭುಟ್ಟೋ ಹತ್ಯೆಗೆ ಸಂಬಂಧಿಸಿದಂತೆ ಕಳೆದ ವಾರ ಪಾಕ್ ಕೋರ್ಟ್ ಮುಷ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಆದರೆ ಇಸ್ಲಾಮಾಬಾದ್‌ನಲ್ಲಿ ಇರುವ ಮುಷ್ ನಿವಾಸಕ್ಕೆ ವಾರಂಟ್ ಅನ್ನು ನೀಡಲು ಆಗಿಲ್ಲ. ಯಾಕೆಂದರೆ ಅವರು ಅಲ್ಲಿ ವಾಸಿಸುತ್ತಿಲ್ಲ ಎಂದು ಕೋರ್ಟ್‌ಗೆ ತಿಳಿಸಿರುವುದಾಗಿ ವಿಶೇಷ ಪ್ರಾಸಿಕ್ಯೂಟರ್ ಚೌಧರಿ ಜುಲ್ಫಿಕರ್ ಅಲಿ ತಿಳಿಸಿದ್ದಾರೆ.
ಹಾಗಾಗಿ ಕೋರ್ಟ್ ಶನಿವಾರ ಮತ್ತೆ ಮುಷರ್ರಫ್ ವಿರುದ್ಧ ವಾರಂಟ್ ಜಾರಿ ಮಾಡಿ ಮಾರ್ಚ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ. ನಮಗೆ ಲಂಡನ್‌ನಲ್ಲಿ ವಾಸಿಸುತ್ತಿರುವ ಮುಷರ್ರಫ್ ಅವರ ವಿಳಾಸ ಗೊತ್ತಿಲ್ಲ. ನಮಗೆ ಮಾಧ್ಯಮಗಳ ಮುಖೇನ ಅವರ ವಿಳಾಸ ದೊರಕಿದೆ. ಅಲ್ಲದೇ ಅಧಿಕೃತವಾಗಿ ನಮಗೆ ಅವರ ವಿಳಾಸ ಸಿಕ್ಕ ಕೂಡಲೇ ಮುಷರ್ರಫ್‌ಗೆ ನೋಟಿಸ್ ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
0 Комментарии