Hot Posts

10/recent/ticker-posts

ಇದು ಕರುಣಾಜನಕ ಪ್ರೇಮ ಕಥೆ.




                                         ಅವು ಕಾಲೇಜಿನ ದಿನಗಳು. ಹುಚ್ಚು ಮನಸು ಹುಚ್ಚೆದ್ದು ಕುಣಿಯುವ ದಿನಗಳವು. ಗೆಳೆಯರ ಬಳಗ, ಪ್ರೀತಿಯ ಸೆಳೆತ, ಕನಸುಗಳ ಕಲ್ಪನೆಗಳು ತುಂಬಿ ತುಳುಕುವ ವಯಸ್ಸು ಅದಾಗಿತ್ತು.. ಸದಾನಂದ ಕೂಡ ಕಾಲೇಜು ಓದುತ್ತಿದ್ದ.  ಹೀಗಾಗಿ ಆ ಎಲ್ಲಾ ಗುಣಗಳು, ಸೆಳೆತಗಳು ಆತನಲ್ಲಿದ್ದವು. ಸೂರ್ಯ ಪ್ರತಿ ದಿನವೂ ತೇಜಸ್ಸಿನಿಂದ ಬೆಳಗುವಂತೆ ಸದಾನಂದ ಸದಾ ಆನಂದವಾಗೇ ಇದ್ದ. ಸದಾ ಸ್ನೇಹಿತರ ಗುಂಪಿನಲ್ಲೇ ಇರುತ್ತಿದ್ದ ಸದಾನಂದನಿಗೆ ನಲ್ಲೆಯ ನೆನಪಿನ ನರಳಾಟ ಮಾತ್ರ ಇರಲಿಲ್ಲ. ಹಾಗಂತ ಹುಡುಗಿಯರು ಈತನ ಸ್ನೇಹಿತರಾಗಿರಲಿಲ್ಲ ಅಂತಲ್ಲ, ಜೇನಿನಂಥ ಸಿಹಿ ಹೃದಯದ ಈತನಿಗೆ ಗೆಳೆಯರು ಎಷ್ಟು ಜನರಿದ್ದರೋ ಗೆಳತಿಯರೂ ಅಷ್ಟೇ ಜನರಿದ್ದರು. ಆದ್ರೆ ಅವರೆಲ್ಲರೂ ಕೇವಲ ಗೆಳತಿಯರು ಮಾತ್ರ..



ಎಲ್ಲರನ್ನೂ ಏಕ ದೃಷ್ಟಿಯಿಂದ ನೋಡುತ್ತಿದ್ದ ಸದಾನಂದನಿಗೆ ಸುಮ ಹತ್ತಿರವಾದ ಗೆಳತಿ. ಯಾಕೆ ಅಂತೀರಾ..??

ಆರಂಭದಲ್ಲಿ, ಸುಮ ಕಾಲೇಜಿಗೆ ಬಂದಾಗ ಯಾರೊಂದಿಗೂ ತಲೆ ಎತ್ತಿ ನೋಡ್ತಾನೂ ಇರಲಿಲ್ಲ. ಮಾತಾಡ್ತಾನೂ ಇರಲಿಲ್ಲ. ಕಾಲೇಜು ಅಂದ್ರೆ ದಾರಿ ತಪ್ಪಿಸುವವರು ಹೆಚ್ಚಾಗಿ ಇರ‍್ತಾರೆ ಅಂತ ಜನರು ಹೇಳಿದ ಮಾತುಗಳು ಆಕೆಯ ಕಿವಿಯಲ್ಲಿ ಗುಯ್ ಗುಟ್ಟುತ್ತಿದ್ದವು. ಆದರೆ ಎಲ್ಲರೂ ಹಾಗಿರೋದಿಲ್ಲ ಅಂತ ನಂಬಿಕೆ ಹುಟ್ಟಿದ್ದು ಸದಾನಂದನಿಂದ. ಹೀಗಾಗಿ ಸದಾನಂದ ಆಕೆಯ ಅಚ್ಚು ಮೆಚ್ಚಿನ ಗೆಳೆಯನಾದ. ನೋವು ನಲಿವನ್ನು ಹಂಚಿಕೊಳ್ಳೋ ಬಂಧುವಾದ.. ಅಷ್ಟಕ್ಕೂ ಈ ಸ್ನೇಹ ಸಂಬಂಧ ಬೆಳೆದದ್ದೂ ಕೂಡ ಒಂದು ಅಚ್ಚರಿಯಾಗೇ ಅಂತ ಹೇಳಬಹುದು.



ಅದು ಮುಂಜಾನೆ ಒಂಬತ್ತು ಗಂಟೆಯ ಸಮಯ.  ತಡವಾಗಿದ್ದ ಕಾರಣ ಆತುರಾತುರದಲ್ಲಿ ಕಾಲೇಜಿಗೆ ಹೊರಟಳು. ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳಲೂ ಸಾಧ್ಯವಾಗದೇ ರೆಡಿಮೇಡ್ ಬಿಂದಿಯನ್ನು ದಾರಿಯಲ್ಲೇ ಇಟ್ಟುಕೊಂಡು ಬರ‍್ತಿದ್ದಳು.  ಸುಮ ಹೋಗುತ್ತಿದ್ದ ವೇಗಕ್ಕೆ ಆಕೆಯ ವೇಲು ಗಾಳಿಯಲ್ಲಿ ಹಾರಿ ಆಕೆಯನ್ನು ಹಿಂಬಾಲಿಸುತ್ತಿತ್ತು. ಮುಖದಲ್ಲಿ ಗಾಬರಿ, ಉಪಾಧ್ಯಾಯರು ಬಯ್ಯುವರೇನೋ ಎಂಬ ಆತಂಕ. ಆತುರದ ಹುಡುಗಿಗೆ ಕಾಲೇಜು ಸೇರುವ ಕಾತರ.. ಆದರೆ ಬಸ್ ಡ್ರೈವರ್ ಗೆ ದಿನಾ ಬಸ್ಸು ಓಡಿಸಿ ಬೇಸರ.. ಹೀಗಾಗಿ ಅಂದು ಡ್ರೈವರ್ ಬೇಗ ಬರಲೇ ಇಲ್ಲ. ಬಸ್ ಸ್ಟಾಪಿನಲ್ಲಿ ಒಂದೂ ಬಸ್ಸು ಇರಲಿಲ್ಲ. ಬಸ್ಸಿಗಾಗಿ ಕಾಯುತ್ತ ಸುಮ ಬಸ್ಟಾಪಲ್ಲಿ ನಿಂತಿದ್ಳು. ಸದಾನಂದ ಕೂಡ ಅಲ್ಲಿಗೇ ಬಂದ. ಒಂದೇ ಕಾಲೇಜಿನ ಹುಡುಗ. ಮಾತಾಡಿಸೋಣ ಅಂತ ಆಕೆ ಅಂದುಕೊಂಡಳು.  ಆದ್ರೆ ಅವಳಿಗೆ ಧೈರ್ಯ ಬರಲಿಲ್ಲ... ವಿಚಿತ್ರವೋ, ಕಾಕತಾಳಿಯವೋ, ಸತತವಾಗಿ ಮೂರು ದಿನಗಳ ಕಾಲ ಅದೇ ಬಸ್ಟಾಪಿನಲ್ಲಿ, ಅದೇ ಸಮಯದಲ್ಲಿ ಇಬ್ಬರೂ ಕಾಣಿಸಿ ಕೊಳ್ತಿದ್ರು. ಆದ್ರೆ ಮೌನ ಭಾಷೆಯ ಬಾಂಧವ್ಯ ಮಾತ್ರ ಅವರ ನಡುವೆ ಮನೆ ಮಾಡಿತ್ತು.



ಆ ನಗು ಮನಸ್ಸಿನ ಜೊತೆ ಸ್ನೇಹ ಬಯಸೋದು ತಪ್ಪಲ್ಲ ಅಂತ ಆಕೆ ಭಾವಿಸಿದಳು.. ಹೀಗಾಗಿ ಸ್ನೇಹ ಬೆಳೆಸೋ ಆಲೋಚನೆ ಮಾಡಿದಳು. ಮಾರನೆಯ ದಿನ ಏನಾದ್ರೂ ಆಗ್ಲಿ ಮಾತಾಡೇ ಬಿಡೋಣ ಅನ್ನೋ ಗಟ್ಟಿ ನಿರ್ಧಾರಕ್ಕೆ ಬಂದಳು. ಬಹುಷಃ ಆಕೆಯ ಉಲ್ಲಾಸ ಇಮ್ಮಡಿಯಾಗಿತ್ತು ಅಂತ ಕಾಣುತ್ತೆ. ಮಾರನೆಯ ದಿನ ಬೆಳಿಗ್ಗೆ ಬೇಗನೆ ಬಸ್ ಸ್ಟಾಪ್ ಹತ್ರ ಬಂದು ಅವನಿಗಾಗಿ ಕಾಯ್ತಾ ಇದ್ಳು. ಅವಳ ಮುಖದಲ್ಲಿದ್ದ ನಾಚಿಕೆಯನ್ನು ಕಂಡು ಅವಳು ಮುಡಿದ ಗುಲಾಬಿಯೇ ನಾಚಿ ಆಕೆಯ ಸೌಂದರ್ಯದಿಂದ ಹೊಟ್ಟೆಕಿಚ್ಚುಪಟ್ಟುಕೊಂಡು ಕೊಂಚ ಬಾಡಿದಂತಾಗಿತ್ತು. ಸರಿಯಾಗಿ ಒಂಭತ್ತು ಗಂಟೆಗೆ ಸದಾನಂದ ಎಂದಿನಂತೆ ಸದಾ ಆನಂದದಿಂದಲೇ ಬಂದಿದ್ದ. ಅವನನ್ನು ಆಕೆ ನೋಡಿದಳು . ಚಿಗುರು ಮೀಸೆಯ ಗೆಳೆಯನ, ನಗು ಮುಖದ ತುಟಿಯ ಮಧ್ಯೆ ದಾಳಿಂಬೆಯಂಥ ಹಲ್ಲುಗಳ ಸಾಲುಗಳನ್ನು ಪೋಣಿಸಲಾಗಿತ್ತು.. ತಲೆ ತಗ್ಗಿಸಿ ಹತ್ತಿರ ಹೋದಳು. ಭೂಮಿಯನ್ನು ನೋಡುತ್ತ ಭಯದಿಂದಲೇ ಹಾಯ್ ಅಂತ ಮಾತಾಡಿಸಿದ್ಳು. ಅವನು ಹಾಯ್.. ಯಾಕೋ ಕೆಳಗೆ ನೋಡ್ತಾ ಇದ್ದೀರಲ್ವಾ..?? ಏನಾದ್ರೂ ಕಳೆದೋಗಿದ್ಯಾ?? ಅಂತ ಕೇಳಿದನಾತ. ಹಾಗೇನಿಲ್ಲ. ಸುಮ್ಮನೆ.. ಅಂತ ಹೇಳಿದಳು. ಆಕೆಯ ಸ್ವರ ಕೇಳಿಸಿತೇ ಹೊರತು ಆಕೆಯ ಕಣ್ಣುಗಳು ಮಾತ್ರ ನೆಲವನ್ನೇ ನೋಡುತ್ತಿದ್ದವು. ನ್ಯೂಟನ್ ನ ಮೂರನೇ ನಿಯಮ ಇಲ್ಲಿ ಕೆಲಸ ಮಾಡ್ತಾ ಇತ್ತು. ಪ್ರತಿಯೊಂದು ಕ್ರಿಯೆಗೂ ಪ್ರತಿ ಕ್ರಿಯೆ ಇದ್ದೆ ಇರುತ್ತೆ ಎಂಬಂತೆ, ಅವಳು ಕೇಳಿದ ಪ್ರೆಶ್ನೆಗೆ ಅವನು ಪ್ರತಿಕ್ರಿಯೆ ನೀಡ್ತಾ ಇದ್ದ. ಅಷ್ಟರಲ್ಲಿ ಬಸ್ಸು ಬಂತು.. ಇಬ್ಬರೂ ಬಸ್ಸು ಹತ್ತಿದರು. ಆದ್ರೆ ಸರ್ಕಾರದ ನೀತಿ ಅವರನ್ನು ಬೇರೆ ಮಾಡಿತ್ತು.. ಆಕೆ ಹೋಗಿ ಸ್ತ್ರೀಯರ ಸೀಟಿನಲ್ಲಿ ಕೂತುಕೊಂಡು ಬಿಟ್ಳು. ಅವನು ಪೂರ್ತಿ ಹಿಂದಿನ ಸೀಟಿನಲ್ಲಿ ಕೂತುಕೊಂಡ.



ಈ ಮಾತುಕತೆ ದಿನದಿಂದ ದಿನಕ್ಕೆ ಜಾಸ್ತಿ ಆಯ್ತು. ಮಾತು ಇದ್ದಲ್ಲಿ ಬಂಧನ ಬೆಳೆದೇ ಬೆಳೆಯುತ್ತೆ.. ಹೀಗಾಗಿ ದಿನ ಕಳೆದಂತೆ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆದ್ರು.. ಫೋನು ನಂಬರ್ ಗಳು ಬದಲಾದ ಮೇಲೆ ಸ್ನೇಹ ಸಿಕ್ಕಾಪಟ್ಟೆ ಜಾಸ್ತಿ ಆಯ್ತು.. ಯಾವುದಾದ್ರೂ ಆಗ್ಲಿ, ಜಾಸ್ತಿ ಆಗ್ಬಗಾರ್ದು ಅಂತಾರೆ.. ಆದ್ರೆ ಅವರಿಬ್ಬರ ಸ್ನೇಹ ತುಂಬಾನೇ ಜಾಸ್ತಿ ಆಗಿತ್ತು.. ಅರಳು ಹುರಿದಂತೆ ಮಾತನಾಡುವ ಮಾತುಗಾರನ ಮೋಡಿಗೆ ಮರುಳಾದಳು ಸುಮ. ದಿನಾ ಮಾತಾಡ್ತಾ ಮಾತಾಡ್ತಾ  ಅವನ ಮಾತಲ್ಲಿ ಅವಳು ಕರಗಿ ಹೋಗ್ತ್ತಾ ಇದ್ಳು. ಪ್ರತಿ ದಿನ ಅವಳು ಮನೆಗೆ ಹೋಗುವಾಗ ಅವಳ ಕೈಗೆ ಒಂದು ಪುಟ್ಟ ಗೊಂಬೆಯನ್ನು ಕೊಟ್ಟು ಹೋಗ್ತಾ ಇದ್ದ ಸದಾನಂದ.



ಅವನ ಮಾತಿಗೆ, ಗುಣಕ್ಕೆ, ತುಂಬಾ ಹುಡುಗೀರು ಅವನ ಸ್ನೇಹಿತೆಯರಾಗಿದ್ರು. ಅದೊಂದು ದಿನ ಕಾಲೆಜಿನ ಹತ್ರ ತನ್ನ ಸ್ನೇಹಿತೆಯರೊಂದಿಗೆ ಮಾತಾನಾಡುತ್ತ ಸದಾನಂದ ನಿಂತಿದ್ದ. ಅವರ ಮಧ್ಯೆ ತನ್ನ ಹುಡುಗನನ್ನು ನೋಡಿದ ಇವಳಿಗೆ ಅದೇನೋ ಕಳವಳ.. ಸಿಕ್ಕಾಪಟ್ಟೆ ಜಾಸ್ತಿಯಾದ ಸ್ನೇಹ ಅವಳ ಮನದಲ್ಲಿ, ಅವಳಿಗೇ ಗೊತ್ತಿಲ್ಲದಂತೆ, ಅವನ ಮೇಲೆ ಪ್ರೀತಿ ಬೆಳೆಯುವಂತೆ ಮಾಡಿತು.. ಆದ್ರೆ ಅವನು ಎಂದಿಗೂ ಅವಳೆದುರಾಗಲೀ ಅಥವ ಪರೋಕ್ಷವಾಗಲೀ ಪ್ರೀತಿಯನ್ನು ಹೇಳಿಕೊಳ್ಲಿಲ್ಲ. ಮತ್ತು ಎಲ್ಲರೊಂದಿಗೆ ಹೇಗೆ ಇರ‍್ತಾ ಇದ್ದನೋ ಹಾಗೇ ಸುಮಾ ಜೊತೆಗೂ ಇರ‍್ತಿದ್ದ. ಇದನ್ನು ಅರಿತುಕೊಂಡ ಸುಮ ದ್ವಂದ್ವದಲ್ಲಿ ಸಿಲುಕಿ ಬಿಟ್ಟಳು. ಕೋಪದ ಮುಖದಲ್ಲೇ ಸ್ನೇಹಿತರ ಬಳಿ ಬಂದಳು.



ಗಂಟು ಮುಖ ನೋಡಿದ ಸ್ನೇಹಿತರು ಏನೇ.. ಏನಾಯ್ತೇ..?? ಅಂತ ಕೇಳಿದ್ರು. ಆಕೆಯಲ್ಲಿ ಮೌನದ ಕೋಪ ಮಾತ್ರವೇ ಇತ್ತು. ಸದಾನಂದ ಕೂಡ ಯಾಕ್ ಸುಂದರಿ ಕೋಪ ನೀನು ಕೋಪ ಮಾಡ್ಕೊಂಡ್ರೆ ಪ್ರಳಯ ಗಿಳಯ ಅಗ್ಬಿಡುತ್ತೆ.. ನಗಮ್ಮಾ!! ಅಂತ ಹೇಳಿದ.. ಊಹ್ಞೂ.. ಆಕೆ ಕೋಪ ಕಡಿಮೆ ಆಗಲೇ ಇಲ್ಲ. ಎಲ್ಲರೂ ಕ್ಲಾಸ್ ರೂಮಿಗೆ ಹೋಗುತ್ತಿದ್ರು. ಆಕೆಯ ಕೈ ಹಿಡಿದು ಎಳೆದ ಸದಾನಂದ ಮತ್ತೆ ಅಂಥದ್ದೇ ಒಂದು ಗೊಂಬೆಯನ್ನು ಕೈಯಲ್ಲಿಟ್ಟ. ನಗು.. ಖುಷಿಯಾಗಿರು. ಕೋಪ ಮಾಡ್ಕೋಬೇಡ. ನಿಂಗೆ ಚೆನ್ನಾಗಿರಲ್ಲ. ಅಂತ ಹೇಳಿದ. ಆ ಗೊಂಬೆಯನ್ನು ನೋಡಿದ ಗೊಂಬೆಯಂಥ ಹುಡುಗಿಗೆ ಕೋಪ ಕಣ್ಣೀರಿನಲ್ಲಿ ಬೆರೆತು ಹೊರಗೆ ಬಂತು. ಗೊಂಬೆ ಹಿಡಿದು ಮುಂದೆ ಹೊರಟು ಹೋದಳು. ಆದರೆ ಆಕೆಯ ನಗುವಿಗೆ, ಅಳುವಿಗೆ ಕಾರಣವೇ ತಿಳಿಯಲಿಲ್ಲ ಈತನಿಗೆ.



ಗೆಳೆಯ ಕೊಟ್ಟ ಮತ್ತೊಂದು ಗೊಂಬೆಯನ್ನು ತಂದು ಹಳೆಯ ಗೊಂಬೆಗಳ ಸಾಲುಗಳಲ್ಲಿ ಜೋಪಾನವಾಗಿ ಜೋಡಿಸಿಟ್ಟಳು. ನೋಡಿ ಖುಷಿ ಪಟ್ಟಳು. ಪ್ರಕೃತಿಯು ತನ್ನ ಮಡಿಲಲ್ಲಿ ವಿಸ್ಮಯಗಳನ್ನು ಅಡಗಿಸಿಟ್ಟುಕೊಂಡಂತೆ ಆಕೆ ತನ್ನ ಪ್ರೀತಿಯನ್ನು ಹೇಳಲಾಗದೇ ಎದೆಯಾಳದಲ್ಲಿ ಬಚ್ಚಿಟ್ಟುಬಿಟ್ಟಿದ್ದಳು.  ಸುಮಾ ಅತ್ಯುತ್ತಮ ಗೆಳತಿಯಾಗಿದ್ದ ಕಾರಣ ಅವನು ಆಕೆಗೆ ವಿಶೇಷ ಸ್ಥಾನ ಕೊಟ್ಟಿದ್ದ. ಅವನು ಏನು ಮರೆತರೂ ಪ್ರತಿ ದಿನ ಅವಳಿಗೊಂದು ಗೊಂಬೆ ಕೊಡೋದನ್ನು ಮಾತ್ರ ಅವನು ಮರೀತಾ ಇರಲಿಲ್ಲ.



ತನ್ನ ಪ್ರೀತಿಯಂತೆ ಆ ಗೊಂಬೆಗಳು ಸದಾ ಹೊಸದಾಗಿರಬೇಕು ಅಂತ ಆ ಗೊಂಬೆಗಳನ್ನು ಕವರ್ ನಲ್ಲಿ ಪ್ಯಾಕ್ ಮಾಡಿ ಇಡುತ್ತಿದ್ದಳು. ಜೋರಾಗಿ ಮುಟ್ಟಿದರೆ ನನ್ನ ನಲ್ಲನಿಗೇ ನೋವಾಗುತ್ತೇನೋ ಎಂಬಂತೆ, ಮೃದುವಾಗಿ ಜೋಪಾನವಾಗಿ ಕಾಪಾಡುತ್ತಿದ್ದಳು..  ಪ್ರತಿ ದಿನ ಆ ಗೊಂಬೆಗಳ ಎದುರಿಗೆ ಕೂತು ತನ್ನ ಪ್ರೀತಿಯನ್ನು ಹೇಳಿ ಕೊಳ್ತಾ ಇದ್ಳು ಸುಮ. ಮೇಣದ ಬತ್ತಿಗೆ ಕತ್ತಲೆ ಜೋಡಿಯಾದಂತೆ ಸುಮಾಗೆ ಆ ಗೊಂಬೆಗಳು ಮಾತ್ರವೇ ಜೋಡಿಯಾದವು. ಆದರೆ ಸದಾನಂದನಿಗೆ ಇದರ ಪರಿವೇ ಇರಲಿಲ್ಲ. ಇತ್ತ ಸುಮ ದಿನೇ ದಿನೆ ಅವನನ್ನು ಬಿಟ್ಟು ಇರೋಕೆ ಆಗದೇ ಇರೋ ಥರ ಆಗಿ ಹೋದ್ಳು. ನಿದ್ದೆಯಲ್ಲು ಕದ್ದು ಬರುವ ಕಳ್ಳನಾಗಿ ಹೋದ ಸದಾನಂದ. ತನು ಮನದಲ್ಲಿ ತುಂಬಿದ್ರೂ ಹೇಳಬೇಕೆಂಬ ತಳಮಳ ಇದ್ರೂ ಹೇಳಲಾಗದಂಥ ಸಂದಿಗ್ಧತೆ ಆಕೆಯದ್ದು. ಹೇಳಿದರೆ ಎಲ್ಲಿ ಸ್ನೇಹಕ್ಕೂ ಕುತ್ತು ಬರುವುದೋ ಎಂಬ ತಲ್ಲಣ... ಮನದೊಳಗೇ ನಡೀತಿತ್ತು ಪ್ರೀತಿ ಸ್ನೇಹದ ಮಂಥನ..



       ಅವನಿಗೆ ನನ್ನ ಮೇಲೆ ಪ್ರೀತಿ ಇದೆಯೋ ಇಲ್ವೋ ಗೊತ್ತಿಲ್ಲ. ಈ ಪ್ರೀತಿ ವಿಷಯ ಹೇಳಿದ್ರೆ ಅವನ ಸ್ನೇಹ ಕೂಡ ತನ್ನಿಂದ ದೂರ ಆಗಬಹುದೇನೋ ಅನ್ನೋ ಆತಂಕವೇ ಅವಳಲ್ಲಿ ಬಲವಾಗಿ ಕಾಡುತ್ತಿತ್ತು..  ಹೀಗಿರುವಾಗಲೇ ಆಕೆಯ ಜನುಮದಿನ ಬಂದೇ ಬಿಟ್ಟಿತು. ಅವನು ಬರ‍್ತಾನೆ.. ಅವನ ಮನಸಲ್ಲಿ ಸ್ವಲ್ಪನಾದ್ರೂ ಪ್ರೀತಿ ಇದ್ರೆ ಇಂಥಾ ವಿಶೇಷ ಸಂದರ್ಭದಲ್ಲಿ ಹೇಳೇ ಹೇಳ್ತಾನೆ ಅನ್ನೋ ಆಶಾವಾದದಿಂದ ಆಕೆ ಕಾಯುತ್ತಿದ್ದಳು.  ಆಕೆ ಕಾಯುತ್ತಿದ್ದ ಆ ದಿನ ತಡ ಮಾಡದೇ ಬಂದೆರಗಿತು. ಆವತ್ತು ಅವಳ ಹುಟ್ಟು ಹಬ್ಬ. ಅವನು ಬರೋ ದಾರೀನೇ ಕಾಯ್ತಾ ಇದ್ಳು. ಆದ್ರೆ ಅವನು ಬರ‍್ಲೇ ಇಲ್ಲ. ಅವಳು ಎಷ್ಟೇ ಫೋನ್ ಮಾಡಿದ್ರು ಅವನು ಫೋನ್ ರಿಸೀವ್ ಮಾಡ್ಲಿಲ್ಲ. ಕೊನೆ ಪಕ್ಷ ಒಬ್ಬ ಸ್ನೇಹಿತನಾಗಿಯಾದ್ರೂ ಆತ ಬರಬಹುದಾಗಿತ್ತು. ಪ್ರೇಮಿಯಾಗಿದ್ರೆ ಖಂಡಿತ ಅವನು ಬಂದೇ ಬರ‍್ತಿದ್ದ. ಆದ್ರೆ ಆವತ್ತು ಅವನ ಸುಳಿವೇ ಇರಲಿಲ್ಲ..



ಕಾಲೇಜು, ಬಸ್ಟಾಪುಗಳು ಅವನಿಲ್ಲದೇ ಖಾಲಿ ಖಾಲಿ ಆಗಿದ್ದವು. ಆ ದಿನದ ಕೊನೆಯ ಸಮಯದಲ್ಲಾದ್ರೂ ಬಂದು ವಿಶ್ ಮಾಡ್ತಾನೆ ಅನ್ನೋ ಆಲೋಚನೆ ಆಕೆಯಲ್ಲಿತ್ತು. ಆದ್ರೆ ಆಕೆಯ ಕಲ್ಪನೆ ಕೇವಲ ಕಲ್ಪನೆಯಾಗೇ ಉಳಿದು ಬಿಟ್ಟಿತ್ತು. ಮನಸಲ್ಲಿ ಏನೋ ದುಃಖ.. ತಲೆಯಲ್ಲಿ ಒಂದೇ ಪ್ರೆಶ್ನೆ.. ಯಾಕೆ ಬರ‍್ಲಿಲ್ಲ? ಕಾಲೇಜಿನೊಳಗೆ ಪಾಠ ನಡೀತಿದ್ರೂ ಆಕೆಯ ಕೈ ಬೆರಳುಗಳು ಮಾತ್ರ ಅವನ ನಂಬರ್ ಅನ್ನು ಒತ್ತುತ್ತಲೇ ಇತ್ತು. ಆವತ್ತು ರಾತ್ರಿವರೆಗೂ ಕಾದಳು. ತನ್ನ ಆಲೋಚನೆ ಫಲಿಸದ ಕಾರಣ ಸುಮಾಳ ಮನದಾಸೆ ಛಿದ್ರ ಛಿದ್ರವಾಗಿ ಹೋಗಿತ್ತು. ಅವನು ಕೊಟ್ಟ ಗೊಂಬೆಗಳನ್ನು ನೋಡಿ ನೋಡಿ ಕಣ್ಣೀರಿಟ್ಟಳು. ನಿರ್ಜೀವ ಗೊಂಬೆಗಳಿಗೆ ಜೀವ ಏನಾದ್ರೂ ಇದ್ದಿದ್ರೆ ಖಂಡಿತ ಆ ನೋವಿಗೆ ಸ್ಪಂದಿಸುತ್ತಿದ್ದವೇನೋ ಗೊತ್ತಿಲ್ಲ. ಆದ್ರೆ ಅಷ್ಟೋಂದು ದುಃಖಕ್ಕೆ ಕಾರಣನಾದವನಿಗೆ ಇದ್ಯಾವುದೂ ಕಾಣಲೇ ಇಲ್ಲ. ಅವನ ನಿರೀಕ್ಷೆಯಲ್ಲೇ ಊದು ಕೊಂಡಿದ್ದ ಕಣ್ಣುಗಳಲ್ಲಿ ನೋವಿನ ಕಣ್ಣೀರು ಮತ್ತು ಈಡೇರಲಾರದ ನಿರಾಸೆಗಳೇ ತುಂಬಿ ಕೊಂಡಿತ್ತು..



ನಿದ್ದೆ ಇಲ್ಲದೇ, ಮೊಗವ ಕಾಣದೇ ಮಂಕಾಗಿದ್ದ ಸುಮ ಮಾರನೇ ದಿನ ಬೆಳಿಗ್ಗೆಯೇ ಬಸ್ಟಾಪ್ ಗೆ ಬಂದಳು. ಅದ್ಯಾಕೋ ಮನಸ್ಸು ಆಕೆಯನ್ನು ಬೆಳ್ಳಂ ಬೆಳಿಗ್ಗೆಯೇ ಅಲ್ಲಿಗೆ ಎಳೆದು ತಂದಿತ್ತು.. ಆದ್ರೆ ಆಗಲೂ ಕೂಡ ಸದಾನಂದನ ಸುಳಿವೇ ಇಲ್ಲ. ಸುತ್ತ ಮುತ್ತ ಸುಳಿದಾಡಿದ ಆಕೆಯ ಕಣ್ಣುಗಳು, ಎಲ್ಲೇ ಹೋದರೂ ಅವನನ್ನೆ ಹುಡುಕ್ತಾ ಇತ್ತು.. ಕಾಲೇಜಿಗೆ ಟೈಮ್ ಆಗಿದ್ರೂ ಅದ್ಯಾವುದೂ ಆಕೆಯ ಅರಿವಿಗೇ ಬರಲಿಲ್ಲ. ಆಕೆಗೆ ಅರಿವಾಗೋ ಅಷ್ಟರಲ್ಲಿ ಕಾಲೇಜು ಅರ್ಧ ಮುಗಿದೇ ಹೊಗಿತ್ತು. ಎದ್ದು ಬೇಸರದ ಮೊಗದಲ್ಲಿ ಮನೆಯ ಕಡೆಗೆ ಹೆಜ್ಜೆ ಹಾಕಲು ಮುಂದಾದಳು. ಎದುರಿಗೆ ಕಂಡದ್ದು ಅಚ್ಚರಿ. ನೋಡಿ ದಂಗಾಗಿ ಹೋದಳು. ಯಾಕಂದ್ರೆ ಎದುರಲ್ಲೇ ಬರ‍್ತಾ ಇದ್ದ ಸದಾನಂದ.. ಅವನನ್ನು ನೋಡಿ ಈಕೆಗಾದ ಆನಂದ ಅಷ್ಟಿಷ್ಟಲ್ಲ.. ಅವನು ಅವಳನ್ನು ಕಂಡು, ಮಾತಾಡೋ ಆಸೆಯಿಂದ ಬರ‍್ತಾ ಇದ್ದ. ಕೈಯಲ್ಲಿ ಮತ್ತದೇ ಗೊಂಬೆ ಇತ್ತು.. ಹುಟ್ಟು ಹಬ್ಬದ ದಿನ ಬರಲಿಲ್ಲ ಅನ್ನೋ ಕೋಪ ತುಂಬಾ ಇತ್ತು.. ಫೋನ್ ಕೂಡ ಮಾಡಿಲ್ಲ. ಒಂದು ಮೆಸೇಜ್ ಕೂಡ ಇಲ್ಲ ಅನ್ನೋ ಕೆಂಡದ ಕೋಪ ಬಹಳಷ್ಟಿತ್ತು.  ಆದ್ರೂ ಅವನನ್ನು ನೋಡಿದ ತಕ್ಷಣ ಅದೆಲ್ಲ ಮಾಯವಾಗಿತ್ತು.



ಇವತ್ತಾದ್ರೂ ಅವನು ಐ ಲವ್ ಯು ಅಂತಾನೆ ಅಂತ ಅವಳು ಕಾತರದಿಂದ ಇದ್ಳು. ಅವನು ಹತ್ತಿರ ಬಂದ.. ಅವನ ಕೈಯಲ್ಲಿದ್ದದ್ದು ಇಪ್ಪತ್ತೈದನೇ ಗೊಂಬೆ ಅದು.. ನಗು ಮೊಗದಲ್ಲಿ ಹತ್ತಿರಕ್ಕೆ ಬಂದ. ಆಕೆ ಏನನ್ನೂ ಮಾತಾಡದೇ ಮೌನಿಯಾಗಿದ್ದಳು. ಆದ್ರೆ ಅವನೂ ಕೂಡ ಏನನ್ನೂ ಮಾತಾಡಲಿಲ್ಲ. ಕೈಯಲ್ಲಿ ಗೊಂಬೆ ಇಟ್ಟು. ಹತ್ತಿರದಿಂದ ಸ್ಮೈಲ್ ಕೊಟ್ಟು ಹೊರಟು ಬಿಟ್ಟ. ಆಕೆಯ ದೃಷ್ಟಿ ಅವನತ್ತಲೇ ಇತ್ತು. ಈವತ್ತು ಅವನು ಒಬ್ಬ ಸ್ನೇಹಿತನಾಗಿಯೂ ಮಾತಾಡಿಸಲಿಲ್ಲ.. ಅವಳೂ ಕೂಡ ಏನೂ ಹೇಳಲಿಲ್ಲ.. ಅವನು ಕನಿಷ್ಟ ಪಕ್ಷ ಸ್ನೇಹಿತನಾಗಿಯೂ ಉಳಿದಿಲ್ಲ ಅನ್ನೋ ಆಲೋಚನೆ ಅವಳಲ್ಲಿ ಮೂಡಿತ್ತು.. ಅಲ್ಲಿನ ಸಂದರ್ಭ, ನಡೆದ ಸನ್ನಿವೇಶ ಅವಳಿಗೆ ಇದೆಲ್ಲವನ್ನು ಅರ್ಥ ಮಾಡಿಸುತಿತ್ತು.



ಅವಳ ದುಃಖ ಮತ್ತಷ್ಟು ಹೆಚ್ಚಾಗಿತ್ತು..  ಮನೆಗೆ ಓಡೋಡಿ ಬಂದಳು.. ಆದ್ರೆ ವಿಧಿ ಆಕೆಯ ಮನೆಯಲ್ಲಿ ಬಂದು ಕುಳಿತಿತ್ತು. ಇವಳಿಗೆ ತಿಳಿಯದಂತೆ, ಮನೆಯಲ್ಲಿ ನಿಶ್ಚಿತಾರ್ಥ ಕ್ಕೆ ತಯಾರು ಮಾಡಿದ್ರು. ಯಾರಿಗೆ ಏನು ಹೇಳಬೇಕೋ ತಿಳಿಲಿಲ್ಲ. ಅತ್ತ ಬಯಸಿದ ಪ್ರೀತಿ ಸಿಗಲಿಲ್ಲ. ಇತ್ತ ಅಪ್ಪ ಅಮ್ಮನ ವಿರೋಧ ಕಟ್ಟಿಕೊಳ್ಳೋದಕ್ಕೂ ಈಕೆಗೆ ಇಷ್ಟವಿಲ್ಲ. ಸದಾನಂದ ಸಿಗ್ತಾನೆ ಅಂದ್ರೆ ಅವಳು ತನ್ನ ಅಪ್ಪ ಅಮ್ಮನನ್ನು ಒಪ್ಪಿಸಿಯಾದ್ರೂ ಮದುವೆ ಆಗಬಹುದಿತ್ತು. ಆದ್ರೆ ಅವನಲ್ಲಿ ಆ ಪ್ರೀತಿಯೇ ಕಾಣಲಿಲ್ಲ ಈ ಮುಗ್ಧ ಮನಸಿನ ಹುಡುಗಿ. ಈಗ ನಿಶ್ಚಯ ಆದ ಹುಡುಗನನ್ನು ಯಾವ ಕಾರಣಕ್ಕೆ ಬೇಡ ಅಂತ ಹೇಳಬೇಕು..?? ತನ್ನ ಅಪ್ಪ ಅಮ್ಮರನ್ನು ಯಾವ ರೀತಿ ಮನ ಒಲಿಸಬೇಕು ಅನ್ನೋ ಚಿಂತೆಯಿಂದ ಗದ್ಗರಿತಳಾದಳು. ಕಣ್ಣೀರಿಗೂ ಆಕೆಗೂ ಅದೇನು ಬಂಧವೋ ಗೊತ್ತಿಲ್ಲ.. ಅವಳನ್ನು ಬಿಟ್ಟು ಹೋಗಲೇ ಇಲ್ಲ..



ರಾತ್ರಿಯೆಲ್ಲ ಕುಳಿತು ಅತ್ತಳು. ಅತ್ತು ಅತ್ತು, ಕೊನೆಗೊಂದು ನಿರ್ಧಾರ ಮಾಡಿದ್ಳು. ತನ್ನ ಪ್ರೀತಿ ಅವನಿಗೆ ಇಷ್ಟವಿಲ್ಲದಿದ್ದರೆ ಸದಾನಂದನ ಸ್ನೇಹ ದೂರಾಗಬಹುದು.. ಆದ್ರೆ ಬೇರೆಯವರನ್ನು ಮದುವೆಯಾದರೂ ಕೂಡ ಸದಾನಂದನ ಜೊತೆಗಿನ ಸ್ನೇಹ ಶಾಶ್ವತವಾಗಿ ಉಳಿಸಿಕೊಳ್ಳೋದಕ್ಕೆ ಅಗಲ್ಲ, ಯಾಕಂದ್ರೆ ಗಂಡನಾದವನು ಹೆಂಡತಿಗೆ ಮತ್ತು ಹೆಂಡತಿಯ ಸ್ನೇಹಕ್ಕೆ ಬೇಲಿ ಹಾಕೇ ಹಾಕ್ತಾನೆ.. ಅಕಸ್ಮಾತ್ ಸದಾನಂದ ಒಪ್ಪಿಕೊಂಡ್ರೆ ಜೀವನ ಪರ್ಯಂತ ಪ್ರೀತಿಸಿದವನ ಜೊತೆ ಪ್ರೀತಿಯಿಂದ ಇರಬಹುದು ಅಂತ ಆಲೋಚನೆ ಮಾಡಿದಳು.. ಈಗ ಆಕೆಗೆ ಇರೋದು ಎರಡೇ ದಾರಿ. ಒಂದು ಪ್ರೀತಿ ವಿಷಯ ಫೈನಲ್ ಮಾಡಿಕೊಳ್ಳೋದು, ಇಲ್ಲ ಪ್ರೀತಿ ಬಿಟ್ಟು ಅಪ್ಪ ಅಮ್ಮ ನೋಡಿದ ಹುಡುಗನ್ನ ಮದ್ವೆ ಆಗಿ ತಂದೆ ತಾಯಿಯರ ಖುಷಿಗೆ ಕಾರಣವಾಗೋದು. ಹೀಗಾಗಿ ಏನಾದ್ರೂ ಆಗ್ಲಿ ಕೊನೆಯದಾಗಿ ಹೇಳೇ ಬಿಡೋಣ ಅಂತ ಸಿದ್ಧಳಾದಳು.



ಫೋನ್ ಮಾಡಿ ಅವನನ್ನು ಮೀಟ್ ಮಾಡೋಕೆ ಕರೀಬೇಕು ಅಂತ ಪಕ್ಕದಲ್ಲೇ ಇದ್ದ ಟೇಬಲ್ ನಿಂದ ಫೋನ್ ಎತ್ತಿಕೊಂಡಳು. ಅಷ್ಟರಲ್ಲೇ ಅವಳ ಫೋನು ರಿಂಗಿಣಿಸಿತು. ಅದು ಬೇರೆ ಯಾರ‍್ದೂ ಅಲ್ಲ, ಸದಾನಂದನ ಫೋನು.. ಮಾತನಾಡದೇ ಹೋಗಿದ್ದ ಅವನು ಇದ್ದಕ್ಕಿದ್ದಂತೆ ಫೋನ್ ಮಾಡಿದ್ದು ಆಕೆಗೆ ಅಚ್ಚರಿ ತಂದಿತ್ತು. ಫೋನ್ ರಿಸೀವ್ ಮಾಡಿ ಹಲೋ ಅಂದಳು. ನಿನ್ನ ಹತ್ರ ಒಂದು ವಿಷಯ ಮಾಡಬೇಕು. ಸಿಗ್ತೀಯ ಅಂತ ಅವನೇ ಕೇಳಿ ಬಿಟ್ಟ ಆಕೆಗೆ ಒಂದೆಡೆ ಖುಷಿ. ಮತ್ತೊಂದೆಡೆ ಏನಿರಬಹುದು ಅನ್ನೋ ಕುತೂಹಲ..  ಹೂ ಸಿಗ್ತೀನಿ.. ನಾನೂ ನಿನಗೊಂದು ವಿಷಯ ಹೇಳ್ಬೇಕಾಗಿದೆ ಅಂತ ಹೇಳಿದಳು. ಸಂಜೆ ನಾಲ್ಕು ಗಂಟೆಗೆ ಊರಿನ ಹೊರವಲಯದ ನದೀ ತೀರಕ್ಕೆ ಕರೆದಳು. ಅವನು ಸರಿ ಅಂತ ಹೇಳಿದ.



ಸಂಜೆ ಇಬ್ಬರೂ ನಾಲ್ಕು ಗಂಟೆಗೆ ಸೀದಾ ನದಿ ದಂಡೆಯ ಹತ್ತಿರ ಬಂದ್ರು. ಅವನು ತುಂಬ ಬೇಜಾರಲ್ಲಿದ್ದ. ಮುಖ ಬಾಡಿ ಹೋಗಿತ್ತು. ಎಂದೂ ಅವನು ಹೀಗೆ ಕಂಡಿರಲಿಲ್ಲ. ಯಾಕೆ ಏನಾಯ್ತು? ಇಷ್ಟೊಂದು ಬೇಜಾರಲ್ಲಿ ಇದ್ಯ ಅಂತ ಕೇಳಿದಳು. ನಾನು ಒಂದ್ ಹುಡ್ಗೀನಾ ತುಂಬಾ ಪ್ರೀತಿಸ್ತಾ ಇದ್ದೀನಿ ಅಂದ ಇದನ್ನು ಕೇಳಿದ ಸುಮಗೆ ಸಿಡಿಲು ಬಡಿದಂತಾಯಿತು..  ಮುಂದುವರಿದು ಅವಳನ್ನೆ ಮದ್ವೆ ಆಗೋ ಆಸೆ ಇದೆ.. ಆದ್ರೆ ಏನ್ ಆಗುತ್ತೊ ಗೊತ್ತಿಲ್ಲ. ಎಲ್ಲರನ್ನು ಹೇಗೆ ಒಪ್ಪಿಸಬೇಕೋ ಗೊತ್ತಾಗ್ತಿಲ್ಲ ಅಂತ ಹೇಳಿದ... ತಾನು ಪ್ರೀತಿಸುವ ಹುಡುಗ ತನ್ನ ಹತ್ರಾನೇ ಬಂದು ಮತ್ತೊಂದು ಹುಡುಗಿಯನ್ನು ಪ್ರೀತಿಸ್ತೀನಿ ಅಂತ ಹೇಳಿದ್ರೆ ಆಕೆ ಏನುತಾನೆ ಮಾಡ್ತಾಳೆ..?? ತನ್ನ ಪ್ರೀತಿ ವಿಷಯ ಹೇಳಿ ಅವನ ಪ್ರೀತಿಗೆ ಅಡ್ಡಿ ಮಾಡಬಾರದು. ಅವನಾದ್ರೂ ಸುಖವಾಗಿ ಇರಲಿ ಅಂತ  ತನ್ನ ನಿರ್ಧಾರ ಬದಲಾಯಿಸಿ ಬಿಟ್ಟಳು.



ಸ್ನೇಹಿತೆಯಾಗಿ ಅವನನ್ನು ರಮಿಸಿದಳು.. ಅವನ ಪ್ರೀತಿಗೆ ದೈರ್ಯ ತುಂಬಿ ಆತ್ಮ ವಿಶ್ವಾಸ ಬಿತ್ತಿದಳು. ಎಲ್ಲಾ ಒಳ್ಳೇದೇ ಆಗುತ್ತೆ.. ನಿನ್ನನ್ನು ಪಡೆಯೋಕೆ ಅವಳು ನಿಜಕ್ಕೂ ಪುಣ್ಯ ಮಾಡಿರ‍್ತಾಳೆ ಅಂತ ದುಃಖದ ಮನಸಿನಲ್ಲಿ ಸುಖವನ್ನು ಹರಸಿದಳು.. ಅವಳನ್ನು ಬಿಟ್ಟು ಬದುಕೋ ಶಕ್ತಿ ನನಗಿಲ್ಲ ಸುಮಾ ಅಂತ ಕಣ್ಣೀರು ತುಂಬಿಕೊಂಡು ಕೇಳಿದ್ದ ಸದಾನಂದ. ಅವನ ಮೊಗದಲ್ಲಿ ಸದಾ ನಗುವನ್ನೇ ನೋಡಿದ್ದ ಆಕೆಗೆ ಅಳು ಕಂಡಿದ್ದು ಆವತ್ತೇ ಮೊದಲು. ಅವನಿಗೆ ಸಮಾಧಾನ ಮಾಡಿದಳು. ಆದ್ರೆ ಇತ್ತ ಸುಮಾಳ ಮನಸ್ಸು ಇನ್ನಷ್ಟು ಭಾರವಾಯಿತು. ತನ್ನ ನಲ್ಲ ತನ್ನಲ್ಲಿ ಇನ್ನು ಇಲ್ಲ ಅಂತ ಭಾವಿಸಿದಳಾಕೆ. ಮಾತೆಯಂತೆ ಸಮಾಧಾನ ಮಾಡಿದಳು. ಒಟ್ಟಿನಲ್ಲಿ ಅವನು ಖುಷಿಯಾಗಿರಬೇಕು ಅನ್ನೋದು ಆಕೆಯ ಮನದಾಳದ ಇಂಗಿತ. ಸ್ವಲ್ಪ ಸಮಯದ ನಂತರ ಅರೆ ನನ್ ವಿಷಯ ಬಿಡು.. ಏನೇನೋ ಹೇಳಿ ನಿನ್ನ ವಿಷಯಾನೇ ಮರೆತೋಯ್ತು. ಏನೋ ಹೇಳ್ಬೇಕು ಅಂತ ನನ್ನನ್ನು ಕರೆದಲ್ವಾ ಏನದು ಅಂತ ಕಣ್ಣೀರು ಒರೆಸಿಕೊಂಡು ಕೇಳಿದ.  ಎಂಥಾ ವಿಚಿತ್ರ ನೋಡಿ ಆಕೆಯದ್ದು,. ಇತರರ ನೋವಿಗೆ ಸಾಂತ್ವನ ಹೇಳುವ ಆಕೆಯ ಮನದ ತುಡಿತ ಅರ್ಥ ಮಾಡಿಕೊಳ್ಳುವವರು ಯಾರೂ ಇರಲಿಲ್ಲ.



ಬತ್ತಿ ಹೋದ ಗಂಟಲಿನಿಂದ ಮಾತುಗಳು ಹೊರಡದಿದ್ದರೂ, ಗದ್ಗರಿತ ಕಂಠದಿಂದ ತಡವರಿಸುತ್ತ  ನನ್ನ ಮನೆಯಲ್ಲಿ ಈವತ್ತು ನನಗೆ ನಿಶ್ಚಿತಾರ್ಥ ಮಾಡಿದ್ರು. ಅದನ್ನು ಹೇಳೋಣ ಅಂತ ಕರೆದೆ ಅಷ್ಟೇ. ಅಂತ ಹೇಳಿ ಕಣ್ ಮುಚ್ಚಿಬಿಟ್ಟಳು. ಆಗ ಕಣ್ಣೀರ ಹನಿಯೊಂದು  ಭೂದೇವೆಯ ಮಡಿಲಲ್ಲಿ ಸೇರಿ ಹೋಯ್ತು. ಪ್ರೀತಿಯ ಸಂದಿಗ್ಧತೆಯಲ್ಲಿ ಇದ್ದ ಅವನು ನಗು ನಗುತ್ತಲೇ ಆಕೆಗೆ ಶುಭ ಕೋರಿದ. ಬಹುಷ ನಿನ್ನ ಮದ್ವೆ ಆದ್ಮೇಲೆ ನಿನ್ನ ಹೆಂಡ್ತಿ ನನ್ನನ್ನು ನೋಡೋಕೆ ಬಿಡ್ತಾಳೋ ಇಲ್ವೋ ಅಥವ ನನ್ನ ಗಂಡ ಬಿಡ್ತಾನೋ ಇಲ್ವೋ ಗೊತ್ತಿಲ್ಲ. ಈವತ್ತೆ ಕೊನೆ ಅನ್ಸುತ್ತೆ ನಮ್ಮ ಭೇಟಿ ಅಂತ ಕಠೋರವಾಗಿ ಹೇಳಿದಳು ಸುಮ. ಕೊನೆಯ ಭೇಟಿ ಆಗಿದ್ದರಿಂದ ನಗ್ತಾ ನಗ್ತಾನೇ ಮತ್ತೆ ಒಂದು ಗೊಂಬೆ ಅವಳ ಕೈಗೆ ಕೊಟ್ಟು ಅವನು ಅಲ್ಲಿಂದ ಹೊರಟು ಹೋದ..



ನದಿಯ ಅಲೆಗಳು ದಡಕ್ಕೆ ಎರಗುತ್ತಿವೆ.. ಮನದಲ್ಲಿನ ನೋವಿನ ಅಲೆಗಳು ಸುನಾಮಿಯಂತೆ ಆಕೆಯೆದೆಗೆ ಎರಗುತ್ತಿವೆ.. ಸುನಾಮಿ ಅಲೆಗಳ ಹೊಡೆತವನು ತಾಳಲಾಗದೇ ಹೋದಳಾಕೆ.. ಅಳುತ್ತಲೇ ಮನೆಗೆ ಬಂದಳು.. ಮನೆ ಬಂತೇ ವಿನಃ ಆಕೆಯ ಅಳುವಿಗೆ ಕೊನೆ ಬರಲಿಲ್ಲ.. ಆಗಲೂ ಅಳ್ತಾನೇ ಇದ್ಳು. ನೊಂದ ನಿರಾಶೆಯ ನೋವಿನ ಕಣ್ಣುಗಳು ಅವನು ಕೊಟ್ಟ ಗೊಂಬೆಗಳ ಸಾಲುಗಳನ್ನೇ ನೋಡುತ್ತಿದ್ದವು. ಅದರ ಪಕ್ಕದಲ್ಲೆ ಮಾತ್ರೆಗಳ ಗೊಂಚಲು ಕಂಡಿತ್ತು.. ಅವು ದಿನಾಂಕ ಮುಗಿದ ಹಳೆಯ ಮಾತ್ರಗಳು.. ಹಿಂದೊಮ್ಮೆ ಟೈಫಾಯಿಡ್ ಬಂದಿದ್ದಾಗ ವೈದ್ಯರು ಕೊಟ್ಟಿದ್ದ ಮಾತ್ರಗಳವು.. ಬಿಸಾಡದೇ ಮೂಲೇಲಿ ಬಿದ್ದಿದ್ದ ಮಾತ್ರಗಳು ಆಕೆಯ ಕಣ್ಣಿಗೆ ಅಮೃತದಂತೆ ಕಂಡಿತ್ತು.. ತನ್ನ ಮನದ ನೋವಿಗೆ ಚುಚ್ಚು ಮದ್ದು ಅದೊಂದೇ ಅಂತ ನಿರ್ಧರಿಸಿದಳು.



ನನ್ನ ಪ್ರೀತಿಯಂತೂ ಸಿಗಲಿಲ್ಲ. ಪ್ರೀತಿಸಿದವನೊಂದಿಗೆ ಬಾಳದೇ, ಮೈ ಒಬ್ಬನಿಗೆ ಮನವೊಬ್ಬನಿಗೆ ಕೊಟ್ಟು ಹೇಗೆ ಬದುಕಲಿ.?? ಪ್ರೀತಿಸಿದವನೇ ಮನದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ, ಇನ್ನು ಬೇರೆಯವರು ಹೇಗೆ ತಾನೆ ಅರ್ಥ ಮಾಡಿಕೊಂಡು ತನ್ನ ಕನಸಿಗೆ ಬಣ್ಣ ತುಂಬಬಲ್ಲ ಎಂಬ ನಿರಾಶಾವಾದ ಮೂಡಿತು. ಹೀಗಾಗಿ ಬದುಕಿಯೂ ವ್ಯರ್ಥ ಅಂತ ಭಾವಿಸಿ ಬಿಟ್ಟಳು.. ಪ್ರೀತಿಯ ಅಲೆಗಳನ್ನು ಎದುರಿಸಲಾಗದೇ ಸಾವಿನ ಶೂಲಕ್ಕೆ ತಲೆಯೊಡ್ಡಲು ನಿರ್ಧಾರ ಮಾಡಿದಳು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆಕೆಗೆ. ಕೈಯಲ್ಲಿಯೂ ಶಕ್ತಿ ಇರಲಿಲ್ಲ, ಮಾತ್ರಗಳನ್ನು ತೆಗೆದುಕೊಳಲು ಕೈ ಮುಂದೆ ಚಾಚಿದ್ರೆ ಕೈಗಳು ಕೂಡ ನಿತ್ರಾಣವಿಲ್ಲದೇ ನಡುಗುತ್ತಿದ್ದವು., ಆದರೆ ಸಾವು ಆಕೆಯನ್ನು ಕೈಬೀಸಿ ಕರೆದಿತ್ತು ಅಂತ ಕಾಣುತ್ತೆ. ಅಂತೂ ಇಂತು ಆ ಮಾತ್ರ್ರೆಗಳು ಆಕೆಯ ಕೈಗೆಟಕಿದವು.. ಹಿಂದೂ ಮುಂದೆ ಯೋಚಿಸದೇ ಕಣ್ಮುಚ್ಚು ಎಲ್ಲಾ ಮಾತ್ರೆಗಳನ್ನು ಬಾಯೊಳಗೆ ಹಾಕಿಕೊಂಡು ಬಿಟ್ಳು. ಒಣಗಿದ ಗಂಟಲಿನಲ್ಲಿ ಮಾತ್ರಗಳು ಸಲೀಸಾಗಿ ಹೊಟ್ಟೆ ಸೇರಲಿಲ್ಲ.. ಟೇಬಲ್ ಮೇಲಿದ್ದ ನೀರಿನ ಬಾಟಲಿಯನ್ನು ಕೈಗೆತ್ತಿಕೊಳ್ಳೋಕೆ ಪ್ರಯತ್ನ ಮಾಡ್ತಾಳೆ. ಆದ್ರೆ ಅದರಲ್ಲಿ ಆಕೆಗೆ ಆದದ್ದು ವಿಫಲತೆ.. ಭೂಮಿಗೆ ಬಾಯ್ ಬಾಯ್ ಹೇಳಲೇ ಬೇಕು ಅಂತ ಗಟ್ಟಿ ನಿರ್ಧಾರ ಮಾಡಿದ್ದ ಆಕೆ ತನ್ನ ಕೈ ಬೆರಳುಗಳಿಂದ ಗಂಟಲಿಗೆ ಕೈ ಹಾಕಿ ಎಲ್ಲಾ ಮಾತ್ರೆಗಳನ್ನು ಜಠರಕ್ಕೆ ನೂಕುವಲ್ಲಿ ಸಫಲಳಾಗುತ್ತಾಳೆ..



ರೋಷಾವೇಷ, ಜಿಗುಪ್ಸೆಯಿಂದ ಅವನು ಕೊಟ್ಟಿದ್ದ ಎಲ್ಲಾ ಗೊಂಬೆಗಳನ್ನು ಕಿತ್ತು ಕಿತ್ತು ತನ್ನ ಹಾಸಿಗೆಯ ಮೇಲೆ ಬಿಸಾಕುತ್ತಾಳೆ.. ಆದ್ರೆ ಅವನು ಮೊದಲು ಕೊಟ್ಟಿದ್ದ ಗೊಂಬೆಯನ್ನು ನೋಡಿ ಆಕೆಗೆ ದುಃಖ ಇನ್ನಷ್ಟು ಹೆಚ್ಚಾಯಿತು.. ಸಾವಿನ ನೋವಿನಲ್ಲೂ ಪ್ರೀತಿಯ ಬಂಧನ ಹೆಚ್ಚಾಯಿತು.. ಕಣ್ಣೀರು ಹಾಕುತ್ತಲೇ ಅದನ್ನು ಗಟ್ಟಿಯಾಗಿ ತಬ್ಬಿಕೊಂಡಳು.. ಆಗ ಆಕೆಗೊಂದು ಅಚ್ಚರಿ ಎದುರಾಗಿತ್ತು.. ಬಿಗಿಯ ಅಪ್ಪುಗೆಯಲ್ಲಿ ಬಂಧಿಯಾದ ಆ ಗೊಂಬೆ  ಐ ಲವ್ ಯು ಐ ಲವ್ ಯು ಅಂತ ಕೂಗಿತು. ಜೀವ ಇರುವ ಪ್ರೀತಿ ಸಾವಿನೆಡೆಗೆ ಮುಖ ಮಾಡಿದೆ. ಆದ್ರೆ ಜೀವವಿಲ್ಲ ಗೊಂಬೆಗೆ ಜೀವ ಬಂದಿತೇ..?? ಅಂತ ಆಕೆಗೆ ಆಶ್ಚರ್ಯ ಆಯ್ತು. ಮತ್ತೊಮ್ಮೆ ಆ ಗೊಂಬೆಯನ್ನು ಜೋರಾಗಿ ತಬ್ಬಿಕೊಂಡಳು. ಆ ಗೊಂಬೆ ಮತ್ತೆ ಐ ಲವ್ ಯು ಐ ಲವ್ ಯು ಅಂತ ಕೂಗಿತು. ಕೋಪದಿಂದ ಹಾಸಿಗೆ ಸೇರಿದ ಗೊಂಬೆಗಳತ್ತ ಧಾವಿಸಿದಳು. ಅದರ ಮೇಲಿದ್ದ ಮತ್ತೊಂದು ಗೊಂಬೆಯನ್ನು ಕೈಗೆತ್ತಿಕೊಂಡಳು. ತನ್ನೆದೆಗೆ ಅಪ್ಪಿದಳು..



 ಮುದ್ದಾದ ಗೊಂಬೆಯ ಮನದಿಂದ ಮತ್ತದೇ ಪ್ರೀತಿಯ ಸಂದೇಶ ಬಂತು.. ಅವನು ಕೊಟ್ಟ ಎಲ್ಲಾ ಗೊಂಬೆಗಳನ್ನು ತಬ್ಬಿ ನೋಡಿದಳು ಅವೆಲ್ಲ ಐ ಲವ್ ಯು ಐ ಲವ್ ಯುಅಂತಾ  ಕೂಗ್ತಾ ಇದ್ವು.. ಇದರ ಅರ್ಥ ಸದಾನಂದ ಪ್ರೀತಿಸುತ್ತಿದ್ದ ಆ ಹುಡುಗಿ ಬೇರಾರೂ ಅಲ್ಲ, ಅದು ಇವಳೇ.. ಸುಮಾ ಇದನ್ನು ಆಕೆಯ ಎದುರಿಗೆ ಹೇಳಿಕೊಳ್ಳಲಾಗದೇ ಆ ಗೊಂಬೆಯ ಮೂಲಕ ಹೇಳಲು ಪ್ರಯತ್ನಿಸಿದ್ದ ಸದಾನಂದ.. ಆದ್ರೆ ಕೊಟ್ಟ ಗೊಂಬೆಯನ್ನು ಜೋಪಾನ ಮಾಡುವಲ್ಲಿಯೇ ಸುಮಾ ಕಾಲ ಕಳೆದಳೇ ಹೊರತು, ಅದರೊಳಗೆ ಅಡಗಿದ್ದ ಸದಾನಂದನ ಪ್ರೀತಿಯನ್ನು ಅರಿಯಲಿಲ್ಲ. ಅಷ್ಟಕ್ಕೂ ಇವಳಿಗೆ ಆ ವಿಷಯ ಪ್ರತ್ಕ್ಷವಾಗಿಯೋ, ಪರೋಕ್ಷವಾಗಿಯೋ ತಿಳಿದಿದ್ರೆ ಆಕೆಯೇ ಒಪ್ಪಿಕೊಳ್ತಿದ್ಳು. ಆದ್ರೆ ಅದೂ ಕೂಡ ಆಗಲೇ ಇಲ್ಲ. ಹೇಳೋಕೆ ಧೈರ್ಯವಿಲ್ಲದೇ ಪ್ರತಿ ದಿನಾ ಈ ಗೊಂಬೆ ಕೊಡ್ತಾ ಇದ್ದ ಅಂತ. ಕೊನೆ ಕ್ಷಣದಲ್ಲಿ ಇವಳಿಗೆ ಗೊತ್ತಾಯ್ತು. ಬದುಕುವ ಆಸೆ ಆಕೆಯಲ್ಲಿ ಮತ್ತೆ ಹುಟ್ಟಿತು.. ಖುಷಿ ಹೆಚ್ಚಾಯಿತು. ಅವನೊಂದಿಗೆ ಮಾತಾಡ್ಬೇಕು ಫೋನನ್ನು ಕೈಗೆತ್ತಿಕೊಂಡಳು. ಅಷ್ಟೋತ್‌ಇಗಾಗಲೇ ಆಕೆಯ ಕಣ್ಣುಗಳು ಮಂಜಾಗಲಾರಂಭಿಸಿದವು. ಅಂತೂ ಇಂತು ಅವನಿಗೆ ಫೋನ್ ಮಾಡಿದಳು.. ಆದ್ರೆ ಆರಂಭದಲ್ಲಿ ಫೋನ್ ರಿಸೀವ್ ಮಾಡಲಿಲ್ಲ. ಮತ್ತೆ ಫೋನ್ ಮಾಡಿದ್ಳು.. ಆದ್ರೆ ಅಷ್ಟರಲ್ಲಾಗಲೇ ಕಾಲ ಮುಗಿದು ಹೋಗಿತ್ತು.. ಜವರಾಯ ಮನೆಗೆ ಬಂದೆರಗಿದ್ದ.



ಸ್ವಲ್ಪ ಸಮಯದ ನಂತರ ಸದಾನಂದನ ಫೋನ್ ರಿಸೀವ್ ಆಯ್ತು.. ಆದ್ರೆ ಅದನ್ನು ರಿಸೀವ್ ಮಾಡಿದ್ದು ಅವರ ತಾಯಿ..!! ತಾಯಿಯ ಮನದಲ್ಲಿ ಅದೇನೋ ನೋವಿತ್ತು.. ಸಂಕಟ ಇತ್ತು.. ಅಮ್ಮಾ.. ಸದಾನಂದ ಇಲ್ವಾ? ಅಂತ ಸುಮಾ ಒಣಗಿದ ಗಂಟಲಲ್ಲೇ ತೊದಲುತ್ತ ಕೇಳಿದಳು.. ಅವರ ತಾಯಿ ಕ್ಷಣಾರ್ಧದಲ್ಲೇ ಅಳೋಕೆ ಶುರು ಮಾಡಿದಳು. ಯಾಕೆ ಅಂತ ಆಕಡೆಯಿಂದ ಕೇಳಿದಳಾಕೆ  ಆದ್ರೆ ಇತ್ತ ಬಂದ ಧ್ವನಿಯಲ್ಲಿ ಮತ್ತೊಂದು ಆಘಾತವಿತ್ತು. ನನ್ನ ಪ್ರೇಯಸಿಗೆ ಬೇರೆ ಮದುವೆ ಫಿಕ್ಸ್ ಆಗಿದೆ. ಅವಳನ್ನು ಬಿಟ್ಟು ಬದುಕೋಕೆ ನನ್ನಿಂದ ಆಗಲ್ಲ..ಕ್ಷಮಿಸಿ ಅಂತ ಒಂದು ಪತ್ರ ಬರೆದು ಸದಾ ಆನಂದದಿಂದಿದ್ದ ಸದಾನಂದ ಚಿರಶಾಂತಿಗೆ ಶರಣಾಗಿಬಿಟ್ಟಿದ್ದ. ಮನೆಗೆ ತೆರಳಿದ ಗೆಳೆಯ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ.. ಆ ಮಾತಿನ ಕೊನೆಯ ಪದ ಆಕೆಯ ಕಿವಿಗೆ ಬೀಳುವಷ್ಟರಲ್ಲೇ ಆಕೆಯ ಫೋನು ಕೈಯಿಂದ ಬಿದ್ದು ಬಿಟ್ಟಿತ್ತು.. ಕೈಯಲ್ಲಿ ಹಿಡಿದುಕೊಂಡಿದ್ದ ಗೊಂಬೆ ಕೂಡ ಆಕೆಯ ಕೈಯಿಂದ ಜಾರಿ ಕೆಳಗೆ ಬಿದ್ದಿತ್ತು.. ಅವಳು ಏಕಾಏಕಿ ತನ್ನ ಹಾಸಿಗೆಯ ಮೇಲೆ ಬಿದ್ದು ಬಿಟ್ಟಳು.. ಯಾಕಂದ್ರೆ ಅಷ್ಟರಲ್ಲಾಗಲೇ ಆಕೆ ಇಹ ಲೋಕ ತ್ಯಜಿಸಿದ್ದಳು.. ಜವರಾಯ ಆಕೆಯ ಜೀವವನ್ನು ಕದ್ದೊಯ್ದಿದ್ದ.. ಆಕೆ ಕುಸಿದು ಹಾಸಿಗೆಯ ಮೇಲೆ ಬಿದ್ದಾಗ.. ಆ ಎಲ್ಲಾ ಗೊಂಬೆಗಳೂ ಕೂಡ ಐ ಲವ್ ಯು ಐ ಲವ್ ಯು ಅಂತಾ ಕೂಗಿಕೊಳ್ತಾ ಇದ್ವು... ಆದ್ರೆ ಅದ್ಯಾವ ಕೂಗೂ ಆಕೆಗೆ ಶಾಶ್ವತವಾಗಿ ಕೇಳಿಸಲೇ ಇಲ್ಲ.. ಆಕೆಯ ಪ್ರಾಣ ಪಕ್ಷಿ ಅದಾಗಲೇ ಹಾರಿ ಹೋಗಿತ್ತು...



ನಿಮ್ಮ,



ಸವಿ ನೆನಪಿನ



ಶೇಖ್(ಸ್ಪಿಯ)ರ್








Отправить комментарий

0 Комментарии