
ಕಲ್ಪನಾರ ಶವವನ್ನು ಮೊದಲು ಸಂಕೇಶ್ವರಕ್ಕೆ ಶವ ಪರೀಕ್ಷೆಗಾಗಿ ತೆಗೆದು ಕೊಂಡು ಹೋಗಲಾಯಿತು. ಅಲ್ಲಿನ ವೈದ್ಯ ಈ ರಗಳೆ ಬೇಡ ಎಂದು ಪರಾರಿಯಾಗಿದ್ದ ಅವನಿಗೆ ಒಂದು ತಾಸು ಕಾದು ಹುಕ್ಕೇರಿ ದವಖಾನೆಗೆ ಪ್ರಯಾಣ ಬೆಳಸಲಾಯಿತು. ಅಲ್ಲೂ ಅದೇ ಕಥೆ, ಅಮ್ಮಣಗಿಯಲ್ಲೂ ವೈದ್ಯರು ಪರಾರಿಯಾದಾಗ, ಪೋಲೀಸರು ಅಲ್ಲಿಂದಲೇ ಬೆಳಗಾವಿ ಜಿಲ್ಲಾ ಎಸ್.ಪಿಯಾಗಿದ್ದ ಟಿ. ಮಡಿಯಾಳರನ್ನು ಸಂಪರ್ಕಿಸಿದರು. ಅವರು ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂಗೆ ವ್ಯವಸ್ಥೆ ಮಾಡಿದರು. ಪೋಸ್ಟ ಮಾರ್ಟಂ ಮುಗಿದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಶವವನ್ನು ಯಾರಿಗೆ ಒಪ್ಪಿಸ ಬೇಕು ತಿಳಿಯದೆ ಪೋಲೀಸರು ಕುಳಿತಿದ್ದರು. ಗುಡಗೇರಿ ಬಸವರಾಜ ಪರಾರಿಯಾಗಿದ್ದ. ಬೆಂಗಳೂರಿನಲ್ಲಿದ್ದ ಕಲ್ಪನಾಳ ಬಂಧುಗಳ್ಯಾರೂ ಶವ ಪಡೆಯಲು ಸಿದ್ದರಾಗಲಿಲ್ಲ. ರೇಡಿಯೋದಲ್ಲಿ ಪುಂಖಾನುಪುಂಖವಾಗಿ ಶೃದ್ದಾಂಜಲಿ ಸಂದೇಶಗಳು ಪ್ರಸಾರವಾಗುತ್ತಿದ್ದವು. ಆದರೆ ಶವದ ವಾರಸುದಾರರಾಗಲು ಯಾರೂ ಸಿದ್ದರಿರಲಿಲ್ಲ. ಸಂಜೆ ಏಳು ಗಂಟೆಯಾದರೂ ಕಲ್ಪನಾಳ ಶವ ಬೆಳಗಾವಿಯ ಶವಾಗಾರದಲ್ಲಿ ದಿಕ್ಕಿಲ್ಲದೆ ಬಿದ್ದಿತ್ತು. ಕೊನೆಗೆ ಮಡಿಯಾಳರು ಚಿತ್ರನಟ ಶ್ರೀನಾಥರನ್ನು ಸಂಪರ್ಕಿಸಿದರು. ಅವರು ವಿಷಯ ತಿಳಿದು ಪೇಚಾಡುತ್ತಾ ‘ಕೂಡಲೇ ಬೆಂಗಳೂರಿಗೆ ಕಳುಹಿಸಿ ಇಲ್ಲಿ ಏನಾದರೂ ವ್ಯವಸ್ಥೆ ಮಾಡೋಣ’ ಎಂದರು.
ಹೀಗೆ ಸಕಲ ಬಂಧನಗಳನ್ನೂ ಕಳಚಿ ಮಲಗಿದ್ದ ಕಲ್ಪನಾರ ದೇಹ ರಾತ್ರಿ ಎಂಟು ಗಂಟೆ ಸುಮಾರಿಗೆ ಬೆಂಗಳೂರಿಗೆ ಹೊರಟಿತು. ಬೆಂಗಳೂರಿನಲ್ಲೂ ಬೆರಳೆಣಿಕೆಯ ಜನ ಇದ್ದರು. ಕಲ್ಪನಾರ ದೀರ್ಘಕಾಲೀನ ಒಡನಾಡಿ ವಿಶ್ವನಾಥ್ ತಮ್ಮ ತೋಟದಲ್ಲಿ ಅಂತಿಮ ಸಂಸ್ಕಾರದ ವ್ಯವಸ್ಥೆ ಮಾಡಿದರು. ಅಲ್ಲಿಗೆ ಬೆಳ್ಳಿತೆರೆಯ ದುರಂತ ಅಧ್ಯಾಯ ಮುಕ್ತಾಯವಾಯಿತು.
ಪತ್ರಿಕೆಗಳಲ್ಲಿ ಕಲ್ಪನಾರದ್ದು ಆತ್ಮಹತ್ಯೆಯೋ ಕೊಲೆಯೂ ಎಂಬ ಬಗ್ಗೆ ವರ್ಣರಂಜಿತ ವರದಿಗಳು ಬರಲಾರಂಭಿಸಿದವು. ಒಂದು ಪತ್ರಿಕೆಯಂತೂ ‘ಕಲ್ಪನಾ ತನ್ನ ಉಂಗುರದಲ್ಲಿದ್ದ ವಜ್ರವನ್ನು ಅರೆದು ಪುಡಿ ಮಾಡಿ ಹಾಲಿ ಜೊತೆ ಕುಡಿದಿದ್ದಳು’ ಎಂದು ಬರೆದಿತ್ತು. ಇನ್ನೊಂದು ಗುಡಗೇರಿ ಬಸವರಾಜರೇ ಕಲ್ಪನಾಳ ಕುತ್ತಿಗೆ ಹಿಸುಕಿ ಸಾಯಿಸಿದರು ಎಂದು ಬರೆದಿತ್ತು. ಇನ್ನೂ ಕೆಲವು ಪತ್ರಿಕಗಳು ಹಣಕಾಸು ಸಮಸ್ಯೆ ಎಂದು ಬರೆದವು. ಸಾಯುವಾಗ ಕಲ್ಪನಾಳ ಬಳಿ ಕೇವಲ ಮುನ್ನೂರು ರೂಪಾಯಿಗಳು ಇದ್ದವು ಎಂದು ಒಂದು ಪತ್ರಿಕೆ ತಾನೇ ನೋಡಿದಂತೆ ಬರೆಯಿತು. ಆದರೆ ಪೋಸ್ಟ್ ಮಾರ್ಟಂ ವರದಿ ಬಿಚ್ಚಿಟ್ಟ ಸತ್ಯ ಬೇರೆಯಾಗಿತ್ತು. ಕಲ್ಪನಾ 26 ನಿದ್ದೆ ಮಾತ್ರೆಗಳನ್ನು ನುಂಗಿದ್ದರು. ಮಾನಸಿಕವಾಗಿ ವಿಚಲಿತರಾದಾಗಲೆಲ್ಲ ನಿದ್ದೆ ಮಾತ್ರೆ ನುಂಗುವ ಹವ್ಯಾಸ ಅವರಿಗಿತ್ತು. ಹಿಂದೆ ಎರಡು ಮೂರು ಬಾರಿ ಹೀಗೆ ಸಾವಿನ ಅಂಚನ್ನು ಮುಟ್ಟಿ ಬಂದಿದ್ದರು ಈ ಸಲ ನಿದ್ರಾ ಮಾತ್ರೆಗಳ ಪ್ರಮಾಣ ಅವರನ್ನು ಸೀದಾ ಯುಮಪುರಿಗೇ ಕರೆದುಕೊಂಡು ಹೋಗಿತ್ತು.
ಕಲ್ಪನಾ ಸಾವಿನ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಓಡಿಯನ್ನು ನೇಮಿಸಿತು. ದಿನಕರ್ ಇದರ ಅಧಿಕಾರಿಯಾಗಿದ್ದರು. ತನಿಖೆ ಸರಿಯಾದ ದಾರಿಯಲ್ಲಿ ನಡೆಯಲಿಲ್ಲ. ರಾಜಕೀಯ ಒತ್ತಡಗಳು ಕಾಡಿದವು. ಜಾತಿ ರಾಜಕೀಯವೂ ಬೆರತು ಹೋಯಿತು. ಕೊನೆಗೊಂದು ಕಾಟಾಚರದ ವರದಿ ನೀಡಿ ಸಿಓಡಿ ಕೈತೊಳೆದುಕೊಂಡಿತು. ಜನರೂ ಕಲ್ಪನಾರನ್ನು ಮರೆತು ಬಿಟ್ಟರು.
ಅಮೂರ್ತವಾಗಿ ಬದುಕಿದ ಕಲ್ಪನಾ ಸಾವಿನಲ್ಲೂ ರಹಸ್ಯವಾಗಿ ಹೋದರು.
0 Комментарии