Hot Posts

10/recent/ticker-posts

ಮೈಯನೆ ಹಿಂಡಿ ನೊಂದರು ಕಬ್ಬು, ಸಿಹಿಯ ಕೊಡುವುದು..??




ಇದೊಂದು ಕಾಲ್ಪನಿಕ ಕಥೆಯ ನೈಜ್ಯ ಚಿತ್ರಣ.
 
ಮೈಯನೆ ಹಿಂಡಿ ನೊಂದರು ಕಬ್ಬು, ಸಿಹಿಯ ಕೊಡುವುದು..
ತೇಯುತಲಿದ್ದರು ಗಂಧದ ಪರಿಮಳ, ತುಂಬಿ ಬರುವುದು.
ತಾನೇ ಉರಿದರು ದೀಪವು ಮನೆಗೆ, ಬೆಳಕ ತರುವುದು..


ಈ ಸಾಲುಗಳಲ್ಲಿರುವ ಅರ್ಥಕ್ಕೆ ದಂತ ಕಥೆಯಾಗಿ ಬದುಕುತ್ತಿರುವ ಜನರು ಈ ಪ್ರಪಂಚದಲ್ಲಿ ಹುಡುಕಿದರೆ ಸಿಗುವುದು ವಿರಳ. ಆದರೆ ಈ ಸಾಲುಗಳಿಗೆ ಸವತಿಯಂತೆ ಇದ್ದವಳು ಚೈತ್ರ..


ಚೈತ್ರ.. ಹಸನ್ಮುಖಿಯಾಗಿಯೇ ಜಗತ್ತಿಗೆ ಪರಿಚಿತಳಾದ ಸದ್ಗುಣ ಸಂಪನ್ನೆ.. ತುಂಬಿದ ಕೊಡ ತುಳುಕೋದಿಲ್ಲ ಎಂಬ ಮಾತಿನಂತೆ, ಕೋಟ್ಯಾಧೀಶರ ಏಕೈಕ ಮಗಳಾಗಿದ್ರೂ ಸ್ವಲ್ಪವೂ ಅಹಂಕಾರ ಮನೋಭಾವನೆಯನ್ನು ಮೈಗೂಡಿಸಿಕೊಳ್ಳದೇ, ಪಕ್ಕಾ ಸಂಪ್ರದಾಯವನ್ನು ಮೈಗೂಡಿಸಿಕೊಂಡು ಬೆಳೆದಾಕೆ..  ಸದಾ ನಗುಮುಖ.. ಶಾಲೆಗೆ ಹೋಗುತ್ತಿದ್ದಾಗ ಆಕೆಯ ನಗುವನ್ನು ನೋಡುತ್ತಲೇ ಶಿಕ್ಷಕರ ಕೋಪ ನಗುವಿಗೆ ತಿರುಗುತ್ತಿತ್ತುಮರದೊಂದಿಗೆ ಬಳ್ಳಿ ಬೆಳೆದಂತೆ, ಬಾಲ್ಯದಿಂದ ಸಹಾಯ ಗುಣವನ್ನು ತನ್ನೊಂದಿಗೆ ಬೆಳೆಸಿಕೊಂಡು ಬಂದವಳು ಈ ಚೈತ್ರ..
          ಶಾಲಾ ಜೀವನದಿಂದ ಕಾಲೇಜು ಜೀವನಕ್ಕೆ ಕಾಲಿಟ್ಟಾಗ, ಆರಂಭದಲ್ಲಿ ಕೆಲವರು ಆಕೆಯನ್ನು ರೇಗಿಸುತ್ತಿದ್ದುದ್ದೂ ಉಂಟು. ಆಕೆ ಹೂ ಎಂದರೆ ಆ ಪೋಲಿಗಳೆಲ್ಲ ಪೋಲೀಸರ ಲಾಟಿ ಏಟಿನ ರುಚಿ ನೋಡುವುದರಲ್ಲಿ ಎರಡು ಮಾತು ಇರಲಿಲ್ಲ.. ಅದೆಷ್ಟು ಒಳ್ಳೆಯತನ ಇತ್ತೆಂದರೆ, ಪೋಲಿ ಹುಡುಗರನ್ನು ಸ್ನೇಹದಿಂದ ಮಾತಾಡಿಸಿ ಅವರ ತಪ್ಪುಗಳನ್ನು ತಿಳಿ ಹೇಳಿದಳು.. ಅವರಿಗೆ ಬದುಕಿನಲ್ಲಿ ಛಲವನ್ನು ತುಂಬಿದಳು..  ಅಲ್ಲಿಯವರೆಗೂ ಎಲ್ಲರಿಂದಲೂ ಬೈಸಿಕೊಳ್ಳುತ್ತಿದ್ದ ಶಂಕರ‍್, ಮಹೇಶ, ಸುರೇಶ ಎಂಬುವವರು ಕಾಲೇಜಿನಲ್ಲಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗುವ ಮಟ್ಟಿಗೆ ಬದಲಾವಣೆ ಕಂಡರು. ಶಿಕ್ಷಕರಿಂದ ಮೆಚ್ಚುಗೆ ಪಡೆಯುವಾಗ ಆ ಮೂವರ ಕಣ್ಣಲ್ಲಿ ನೀರಿತ್ತು.. ಕೃತಜ್ಞತಾ ಮನೋಭಾವವಿತ್ತು.. ಯಾಕೆ ಅಂದ್ರೆ ಆ ಮಟ್ಟದ ಬದಲಾವಣೆ, ಮೆಚ್ಚುಗೆಯನ್ನು ಅವರು ಎಂದೂ ಕಂಡಿರಲಿಲ್ಲ.. ಅದೆಲ್ಲವನ್ನು ನೀಡಿದ್ದು ಚೈತ್ರ ಎಂಬ ಹಸನ್ಮುಖಿ ಸ್ನೇಹಿತೆ.. ಇವರ ಕಣ್ಣುಗಳಲ್ಲಿ ತುಂಬಿದ್ದ ನೀರನ್ನು ಕಂಡ ಚೈತ್ರ “ಯಾವತ್ತು ನಮ್ಮ ದುಃಖವನ್ನು ವ್ಯಕ್ತಪಡಿಸಬಾರದು. ಅದಕ್ಕೆ ಯಾರೂ ಬೆಲೆ ಕೊಡೋದಿಲ್ಲ. ಅದ್ರಲ್ಲೂ ನನ್ನ ಸ್ನೇಹಿತರು ನೀವು.. ನಿಮ್ಮ ಕಣ್ಣುಗಳಲ್ಲಿ ಎಂದೂ ನೀರು ಬರಬಾರದು.. ಯಾವಾಗಲೂ ನಗು ನಗುತ್ತ ಇರಬೇಕು. ನನ್ನ ಥರ” ಎಂದು ಹೇಳಿದಳು.  ಆ ಮಾತು ನಿಜ.. ಆಕೆ ಈವರೆಗೂ ಕಣ್ಣೀರಿನ ರುಚಿಯನ್ನೇ ಕಂಡಿರದ ಪುಣ್ಯವತಿ


          ಕಾಲೇಜು ಓದು ಶುರುವಾಗುತ್ತಿದ್ದಂತೆ ಚೈತ್ರ ಗೃಹಬಂಧನಕ್ಕೆ ಕಾಲಿಡುವ ಸಮಯ ಬಂದಾಗಿತ್ತು.. ಹೂವು ಅರಳುವಂತೆ,  ಮದುವೆಯ ಬಗ್ಗೆ ಹೆಣ್ಣಿಗೆ ಅದೆಷ್ಟೋ ಆಲೋಚನೆಗಳು ಮತ್ತು ಕನಸುಗಳನ್ನು ಅರಳುತ್ತವೆ. ಆದರೆ ಚೈತ್ರಗೆ ಅದ್ಯಾವುದೂ ಇರಲಿಲ್ಲ.. ವೈವಾಹಿಕ ಜೀವನದ ಅರಿವು ಮೂಡುವಷ್ಟರಲ್ಲೇ ಸೊಸೆಯಾಗಿ ಇನ್ನೊಂದು ಮನೆಯ ಪಾಲಾಗಿದ್ದಳು.. ಮದುವೆಯ ನಂತರ ಆಕೆ ದೆಹಲಿಯಲ್ಲಿ ನೆಲೆಸಿಬಿಟ್ಟಳು..
         
          ಮದುವೆಯಾದ ನಂತರ ಚೈತ್ರ ಬಳಿ ಫೋನು ಇರಲಿಲ್ಲ.. ಹೀಗಾಗಿ ಅವಳ ಸಂಪರ್ಕ ಸಾಧಯವಾಗಲೇ ಇಲ್ಲ.. ಆದರೆ ಸುರೇಶ, ಮಹೇಶ ಮತ್ತು ಶಂಕರ‍್ ಗೆ ತನ್ನ ಸ್ನೇಹಿತೆಯ ಮೇಲೆ ಅಪಾರ ಗೌರವ.. ಆಕೆಯ ನಗುಮುಖ ಪರಿವರ್ತನೆಗೆ ಹೊಸ ದಾರಿ ಎಂಬಂತೆ ಅವರು ತನ್ನ ಸ್ನೇಹಿತೆಯನ್ನು ವಿಶ್ವಾಸ ದಿಂದ ಕಾಣುತ್ತಿದ್ದರು.. ಈ ಮೂವರ ಓದಿನ ಪಾಟ ಮುಗಿಯುತ್ತಿದ್ದಂತೆ, ಇತ್ತ ಜೀವನದ ಆಟ ಶುರುವಾಗಿ ಹೋಯ್ತು.. ನಿರುದ್ಯೋಗ ಎಂಬ ಹಣೆಪಟ್ಟಿಯ ಜೊತೆಗೆ ಬಡತನ ಎಂಬ ಪೆಡಂಭೂತ ಈ ಮೂವರನ್ನೂ ಹೆಕ್ಕಿ ತಿನ್ನುತ್ತಿತ್ತು.. ನೆನೆದವರ ಮನದಲ್ಲಿ ಎಂಬಂತೆ ಒಂದಿನ, ಚೈತ್ರ ಇವರೆಲ್ಲರಿಗೂ ಫೋನು ಮಾಡಿದ್ದಳು.. “ಯಾಕೆ ಎಲ್ಲರೂ ಒಂಥರ ಇದ್ದೀರ..?? ಅಂದಾಗ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು. ಎಲ್ಲ ಸ್ನೇಹಿತರಿಗೂ ಸಾಂತ್ವನ ಹೇಳಿದಳು.. ಜೀವನವೇ ವ್ಯರ್ಥ ಎಂದು ಕೈಹೊತ್ತು ಕುಳಿತಿದ್ದ, ಬಾಡಿ ಹೋದ ಮುಖಗಳ ಮೇಲೆ ಚೈತನ್ಯದ ಚಿಲುಮೆಯನ್ನು ಹೊತ್ತಿಸಿದಳು. ಸ್ನೇಹಿತೆಯ ಆಶಯವೋ, ಶ್ರಮಕ್ಕೆ ಸಿಕ್ಕ ಪ್ರತಿಫಲವೋ ಗೊತ್ತಿಲ್ಲ, ಕೆಲವೇ ದಿನಗಳಲ್ಲಿ ಅವರೆಲ್ಲರಿಗೂ ಒಳ್ಳೆ ಕೆಲಸ ಸಿಕ್ಕಿತು... ಆ ಕೆಲಸ ಸಿಗೋದಕ್ಕೆ ಕಾರಣ ತಮ್ಮ ಸ್ನೇಹಿತೆ ಚೈತ್ರ ಎಂಬುದು ಅವರಿಗೆ ತಿಳಿಯಲು ಬಹಳ ದಿನ ಬೇಕಾಗಿರಲಿಲ್ಲ.. ಆದರೆ ಚೈತ್ರಗೆ ಕೃತಜ್ಞತೆಯನ್ನು ತಿಳಿಸಬೇಕು ಎಂದು ಪ್ರಯತ್ನ ಪಟ್ಟರು ಅದು ಪ್ರಯೋಜನವಾಗಲಿಲ್ಲ.. ಯಾಕೆ ಅಂದ್ರೆ ಮದುವೆಯಾದ ಮೇಲೆ ಅವಳ ಫೋನ್ ನಂಬರ‍್ ಯಾರಿಗೂ ಕೊಟ್ಟಿರಲಿಲ್ಲ..
         
 ಒಂದಿನ ಶಂಕರ‍್ ಚೈತ್ರಳ ತಂದೆ ತಾಯಿಗಳ ಮನೆಗೆ ಬಂದು ಚೈತ್ರ ಫೋನ್ ನಂಬರ‍್ ಮತ್ತು ಅಡ್ರಸ್ ತಗೊಂಡ.. ಫೊನು ಮಾಡಿದ.. ಆದರೆ ಚೈತ್ರ ಫೋನು ಸ್ವೀಕರಿಸಲಿಲ್ಲ.. ಮರುದಿನ ಚೈತ್ರ ವಾಪಸ್ ಶಂಕರ‍್ ಗೆ ಫೋನ್ ಮಾಡಿದಳು.. “ಹಾಯ್.. ನಾನು ಕೆಲಸದ ಮೇಲೆ ಅಮೇರಿಕಾಗೆ ಹೋಗಿದ್ದೆ. ಫೋನ್ ಮನೇಲೇ ಬಿಟ್ಟು ಹೋಗಿದ್ದೆ.. ಅದಿಕ್ಕೆ ನೆನ್ನೆ ರಿಸೀವ್ ಮಾಡಿಲ್ಲ.. ಈವತ್ತು ವಾಪಸ್ ದಿಲ್ಲಿಗೆ ಬಂದೆ. ಅದಕ್ಕೆ ನಿನ್ ಮಿಸ್ಡ್ ಕಾಲ್ ನೋಡಿ ವಾಪಸ್ ಫೋನ್ ಮಾಡಿದೆ” ಅಂತ ಹೇಳಿದಳು. ಸ್ನೇಹಿತೆಗೆ ಯಾವುದೋ ದೊಡ್ಡ ಕೆಲಸ ಸಿಕ್ಕಿದೆ ಅಂತ ಶಂಕರ‍್ ಗೆ ಖುಷಿ ಆಯ್ತು.. ಅದರ ಜೊತೆಗೆ ತಮ್ಮ ಮೂವರಿಗೆ ಕೆಲಸ ಕೊಡಿದಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸಿದ.. ಆಗಲೂ ಆ ಹಸನ್ಮುಖಿ ಹೇಳಿದ್ದಿಷ್ಟು.. “ನೀವೆಲ್ಲರೂ ಸದಾ ನಗ್ತಾ ಇರಬೇಕು.. ಅದೇ ನನ್ ಆಸೆ.. ಚಿಂತೆ ಮಾಡಬೇಡಿ.. ಎಲ್ಲರಿಗೂ ಒಳ್ಳೇದಾಗುತ್ತೆ.. ಆ ಸಾಯಿನಾಥ ಇದ್ದಾನೆ” ಅಂತ ಹೇಳಿದಳು.


          ಶಂಕರ‍್ ಗೆ ಸ್ನೇಹಿತೆಯ ಆ ನುಡಿ ಕೇಳಿ ಅಭಿಮಾನ ಉಕ್ಕಿ ಬಂತು. “ನಮ್ಮೆಲ್ಲರಿಗೂ ಇಷ್ಟೋಂದು ಸಹಾಯ ಮಾಡಿದ್ದೀಯ., ಪ್ರಪಂಚವೇ ಬೇಡ ಎಂದು ದೂರ ತಳ್ಳಿದ್ದ ನಮಗೆ ಪ್ರಪಂಚದಲ್ಲಿ ಒಳ್ಳೇ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದೀಯ.. ನಿನ್ನಂಥ ಸ್ನೇಹಿತೆ ನಾವು ಏನು ಕೊಡೋಕೆ ಸಾಧ್ಯ..?? ಎಂದು ಶಂಕರ‍್ ಕೇಳಿದಾಗ ಆಕೆಯಿಂದ ಬಂದ ಮಾತು “ನಗು.. ನೀವೆಲ್ಲರೂ ಸದಾ ಮನಸಾರೆ ನಗು ನಗುತ್ತ ಇದ್ದರೆ ಸಾಕು,, ಅದೇ ನೀವು ನನಗೆ ಮತ್ತು ನನ್ನ ಸ್ನೇಹಕ್ಕೆ ಕೊಡೊ ಬೆಲೆ” ಅಂದಳು..
          ತಾನು ಮಾತ್ರ ನಗುತ ಇರಬೇಕು ಅನ್ನೋ ಸ್ವಾರ್ಥ ಮನಸ್ಸು ಆಕೆಯದ್ದಾಗಿರಲಿಲ್ಲ.. ತನ್ನ ಸುತ್ತಮುತ್ತಲೂ ಇರುವ ಎಲ್ಲರೂ ನಗು ನಗುತ ಇರಬೇಕು ಎಂಬುವ ವಿಶಾಲ ಮನಸ್ಸು ಆಕೆಯದ್ದಾಗಿತ್ತು.. ಈ ಮೂವರು ಸ್ನೇಹಿತರಿಗೆ ತಮ್ಮ ಸ್ನೇಹಿತೆಯನ್ನು ನೋಡಬೇಕು ಎಂಬ ಆಸೆ ಹೆಚ್ಚಾಯಿತು.. ಆದರೆ “ನೀವು ನೋಡೋಕೆ ಬಂದರೆ, ನಾನು ನಿಮಗೆ ಸಿಗೋದಕ್ಕೆ ಆಗೋದಿಲ್ಲ.. ಯಾಕೆ ಅಂದ್ರೆ ಕೆಲಸದ ವಿಷಯವಾಗಿ ನಾನು ಮತ್ತು ನಮ್ಮ ಯಜಮಾನರು ವಿದೇಶಗಳಿಗೆ ಹೋಗ್ತಾ ಇರ‍್ತೀವಿ.. ನೀವು ಬಂದಾಗ ನಾನು ನಿಮಗೆ ಸಿಗದಿದ್ದರೆ ನಿಮಗೆ ನಿರಾಸೆಯಾಗುತ್ತೆ.. ನಾನೇ ಬೆಂಗಳೂರಿಗೆ ಬಂದಾಗ ನಿಮಗೆ ಸಿಗ್ತೀನಿ” ಅಂತ ಹೇಳಿದ್ರು..
          ಅವರ ಕೆಲಸಗಳಿಗೆ ತೊಂದರೆ ಕೊಡಬಾರದು. ಬೆಂಗಳೂರಿಗೆ ಬಂದಾಗ ನೋಡೋಣ ಎಂದು ಸಮಾಧಾನ ಮಾಡಿಕೊಂಡರು.


          ಒಂದು ದಿನ ಶಂಕರ‍್ ಕೆಲಸದ ವಿಷಯವಾಗಿ ದೆಹಲಿಗೆ ಹೋಗಬೇಕಾಯಿತು.. ದೆಹಲಿಯಲ್ಲಿ ಒಂದುವಾರ ಇರಬೇಕಾಗಿತ್ತು.. ಆಗ ಅವನಿಎ ತಕ್ಷಣ ನೆನಪಿಗೆ ಬಂದದ್ದು ತನ್ನ ಸ್ನೇಹಿತೆ ಚೈತ್ರಾಳನ್ನು ನೋಡಬೇಕು ಎಂದು. ಫೋನು ಮಾಡಿ ಬರ‍್ತೀನಿ ಅಂತ ಹೇಳಿದ್ರೆ ನನಗಾಗಿ ಏನಾದ್ರೂ ವಿಶೇಷವಾಗಿ ಅಡುಗೆ, ಪಾರ್ಟಿ ಅಂತ ಮಾಡ್ತಾರೆ.. ಅದಕ್ಕೆ ಸಡನ್ ಆಗಿ ಹೋದ್ರೆ ಥ್ರಿಲ್ ಇರುತ್ತೆ ಅಂತ ಆತ ಭಾವಿಸಿದ..  ಕಂಪೆನಿಯ ಕಾರಿನಲ್ಲಿ ಚೈತ್ರಾಳ ಮನೆಯ ಕಡೆಗೆ ಹೊರಟ.. ಅರ್ಧ ದಾರಿಗೆ ಹೋದ ನಂತರ “ನಾನು ನಮ್ಮ್ ಯಜಮಾನರು ಕೆಲಸದ ವಿಷಯವಾಗಿ ವಿದೇಶಗಳಿಗೆ ಹೋಗ್ತಾ ಇರ‍್ತೀವಿ” ಅಂತ ಚೈತ್ರ ಹೇಳಿದ್ದು ನೆನಪಿಗೆ ಬಂತು.. ಅಷ್ಟರಲ್ಲಾಗಲೇ ಮುಕ್ಕಾಲು ಭಾಗ ಬಂದಾಗಿತ್ತು.. “ಆದದ್ದು ಆಗಲಿ, ಮನೆಯಲ್ಲಿ ಎಲ್ಲರೂ ಇದ್ದರೆ ಎಲ್ಲರನ್ನೂ ಮಾತನಾಡಿದರಾಯ್ತು. ಇಲ್ಲದಿದ್ದರೆ ಅವರ ಮನೆ ನೋಡಿದಂತಾಗುತ್ತದೆ” ಎಂದು ನಿರ್ಧರಿಸಿ ಚೈತ್ರಾಳ ಮನೆಗೆ ಬಂದು ಬಿಟ್ಟ..
          ಚೈತ್ರಾಳ ಮನೆ ನಿಜಕ್ಕೂ ಅದ್ಭುತವಾದ ಬಂಗಲೆ..!! ಕೋಟ್ಯಾಧೀಶರ ಏಕೈಕ ಪುತ್ರಿ. ಅದಕ್ಕೆ ದೊಡ್ಡ ಮನೆಗೆ ಕೊಟ್ಟಿದ್ದಾರೆ,. ಅಂತ ಮನದಲ್ಲೇ ಖುಷಿ ಪಟ್ಟುಕೊಂಡ.. ಮನೆಯ ಬಾಗಿಲ ಬಳಿಗೆ ಬಂದು ಕಾಲಿಂಗ್ ಬೆಲ್ ಹೊಡೆದ..
          ಸ್ವಲ್ಪ ಸಮಯದ ನಂತರ ಬಾಗಿಲು ತೆರೆಯಿತು.. ಬಾಗಿಲು ತೆಗೆದಿದ್ದು ಆಪ್ತ ಸ್ನೇಹಿತೆ ಚೈತ್ರ.. ಆಕೆಯನ್ನು ನೋಡಿ ಶಂಕರ‍್ ಗೆ ಅಚ್ಚರಿಯಾಯ್ತು.. ಸಿರಿತನದ ವೈಭೋಗದಲ್ಲಿ ಕಂಡಿದ್ದ ಚೈತ್ರ ಅಲ್ಲಿ ಅಕ್ಷರಸಹಃ ಭಿಕ್ಷುಕಿಯ ಅವತಾರದಲ್ಲಿ ಕಂಡಳು.. ಶಂಕರ‍್ ನನ್ನು ನೋಡಿದ ಚೈತ್ರ ಮರು ಮಾತನಾಡದೇ ಇಲ್ಲಿಂದ ಹೋಗು.. ಮಧ್ಯಾಹ್ನ ನಾನೇ ಫೋನ್ ಮಾಡ್ತೀನಿ.. ಪ್ಲೀಸ್ ಅಂತ ಹೇಳು.. ಬೆಂಗಳೂರಿನಲ್ಲಿ ಇದ್ದಾಗ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವರನ್ನು ಮನೆಗೆ ಕರೆದುಕೊಂಡು ಹೋಗಿ ಊಟ ನೀಡುತ್ತಿದ್ದ ಆಕೆ ಈಗ ಮನೆಗೆ ಬಂದ ಆಪ್ತ ಸ್ನೇಹಿತನಿಗೆ ಬಾಗಿಲಿನಲ್ಲಿ ನಿಲ್ಲಿಸಿ ಹೋಗು ಇಲ್ಲಿಂದ ಎಂದು ಹೇಳಿದ್ದು ಕೇಳಿ ಅವನಿಗೆ ಅಚ್ಚರಿಯಾಯ್ತು.. ಮರು ಮಾತನಾಡದೇ ಅವನು ಕಣ್ಣೀರು ಹಾಕುತ್ತ ಅಲ್ಲಿಂದ ಹೊರಟು ಬಂದ..!! ಸ್ವಲ್ಪ ಸಮಯದಲ್ಲಿ ಅವನಿಗೆ ಒಂದು ಫೋನ್ ಬಂತು.. ಅದು ಚೈತ್ರಾ ಫೋನ್... ಅದನ್ನು ರಿಸೀವ್ ಮಾಡಿದ ತಕ್ಷಣ ಅವನಿಗೆ ಕೇಳಿದ್ದು ಚೈತ್ರಾಳ ದುಃಖ ಭರಿತ ಅಳು.. ಕಣ್ಣೀರು..


          ಸದಾ ಎಲ್ಲರನ್ನು ನಗಿಸುತ್ತ, ಎಲ್ಲರೊಂದಿಗೂ ನಗುತ್ತಲಿದ್ದ ಚೈತ್ರ ಈಗ ಅಳುತ್ತಿರುವುದು ಅತೀವವಾದ ದುಃಖ ತಂದಿತು.. “ಯಾಕೆ ಏನಾಯ್ತು ಚೈತ್ರ..??” ಅಂತ ಕೇಳಿದ್ರೂ ಉತ್ತರಿಸೋದಕ್ಕೆ ಆಗದೇ ಇರುವಷ್ಟು ದುಃಖ ಅವಳಲ್ಲಿ ಮೂಡಿ ಬಂತು.. “ಐ ಆಮ್ ಸಾರಿ ಶಂಕರ‍್.. ನನ್ನನ್ನು ನೀವು ಯಾರು ನೋಡಬಾರದು ಅನ್ನೋ ಕಾರಣಕ್ಕಾಗಿಯೇ, ನೀವು ನನ್ನ ನೋಡೋಕೆ ಬರ‍್ತೀವಿ ಅಂದಾಗಲೆಲ್ಲ ಕೆಲಸದ ಮೇಲೆ ವಿದೇಶಗಳಿಗೆ ಹೋಗ್ತೀವಿ” ಅಂತ ಸುಳ್ಳು ಹೇಳ್ತಾ ಇದ್ದೆ.. ನೀನು ಬೆಳಿಗ್ಗೆ ಮನೆಗೆ ಬಂದಾಗ ನಿನ್ನೊಂದಿಗೆ ಮಾತನಾಡಿಸೋದಕ್ಕೂ ನಮ್ಮ ಮನೆಯಲ್ಲಿ ಸ್ವಾತಂತ್ರ ಇಲ್ಲ ನನಗೆ.. ಅದಕ್ಕೆ ನನ್ನನ್ನು ನೋಡಬೇಕು ಅಂತ ದೂರದಿಂದ ಬಂದಿದ್ದ ನಿನ್ನನ್ನು ಸೌಜನ್ಯವಿಲ್ಲದೇ ಮಾತಾಡಿಸಿ, ಬಾಗಿಲಿನಿಂದಲೇ ಹೊರಗೆ ತಳ್ಳಿದ ಪಾಪಿ ನಾನು” ಅಂತ ಕಣ್ಣೀರು ಕಣ್ಣ ಬಿಟ್ಟು ಹರಿಯುತ್ತಿತ್ತ.,. ಬೇರೆಯವರ ಜೀವನಕ್ಕೆ ಬೆಳಕನ್ನು ನೀಡಿದ ಸ್ನೇಹಿತೆಯ ಬದುಕೇ ಕತ್ತಲಾಯಿತೇ ಎಂದು ದುಃಖಿತನಾದ.. ಸಮಾಧಾನ ಮಾಡಿದ..


          ಒಂದಿನ ಮಧ್ಯಾಹ್ನದ ಸಮಯದಲ್ಲಿ ತನ್ನ ಮನೆಗೆ ಬಾ ಅಂತ ಶಂಕರ‍್ ಗೆ ಹೇಳಿದಳು.. ಶಂಕರ‍್ ಚೈತ್ರ ಮನೆಗೆ ಹೋದ.. ಮನೆಯ ಮುಂದೆ ಮಾಡಿದ್ದ ಪುಟ್ಟ ತೋಟದಲ್ಲಿ ಹೂವಿನ ಗಿಡದ ಮರೆಯಲ್ಲಿ ಕುಳಿತು ಅಳುತ್ತಿದ್ದಳು..
          
ಸ್ನೇಹಿತ ಬಂದ ತಕ್ಷಣ, ತನ್ನ ಕಣ್ಣೀರನ್ನು ಒರೆಸಿಕೊಂಡು ಬಂದು ಮಾತನಾಡಿಸಿದಳು.. ತನ್ನ ಪರಿಸ್ಥಿತಿ ಎಲ್ಲವನ್ನೂ ಶಂಕರ‍್ ಗೆ ಹೇಳಿದಳು.. ಪತಿಯ ಕ್ರೂರತೆ, ಅತ್ತೆಯ ಅಟ್ಟಹಾಸ, ಆ ಮನೆಯಲ್ಲಿ ತುಂಬಿ ತುಳುಕುತ್ತಿತ್ತು.. ಆ ಮನೆ ಚೈತ್ರಾಳ ಪಾಲಿಗೆ ಅಕ್ಷರಸಹಃ ನರಕವೇ ಅಗಿ ಹೋಗಿತ್ತು.. ನೋವೇ ಕಾಣದ, ಮತ್ತು ಎಂದಿಗೂ, ಯಾರಿಗೂ ನೋವು ನೀಡದ ಜೀವಕ್ಕೆ, ನೋವು ಎಂಬುದು ಜೀವನದ ಹಾಸುಹೊಕ್ಕಾಗಿ ಬಿಟ್ಟಿತ್ತು.. ಬದುಕಿನ ಜೋಡಿಯಾಗಿತ್ತು..  ಕಣ್ಣೀರೇ ಕಾಣದ ಕಣ್ಣಿನಲ್ಲಿ ಕಣ್ಣೀರು ಸರಾಗವಾಗಿ ಹರಿದು ಬರುತ್ತಿತ್ತು,.. ಅದು ಆಕೆಯ ನಿತ್ಯ ಜೀವನ ಆಪ್ತ ಜೊತೆಗಾರನಾಗಿತ್ತು..


“ಆವತ್ತು ನೀನು ಮೊದಲನೆಯ ಸಲ ಫೋನ್ ಮಾಡಿದ್ದಾಗ ಮನೆಯಲ್ಲಿ ಎಲ್ಲರೂ ಇದ್ದರು. ಅದಕ್ಕೆ ಎತ್ತೋಕೆ ಆಗಲಿಲ್ಲ.. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ ನಿಮಗೆ ಮತ್ತು ನಮ್ಮ ಅಪ್ಪ ಅಮ್ಮನಿಗೆ ಫೋನ್ ಮಾಡ್ತೀನಿ ಅಷ್ಟೆ.. ನನ್ನ ಈ ಪರಿಸ್ಥಿತಿ ನಮ್ಮ ಅಪ್ಪ ಅಮ್ಮನಿಗೂ ಹೇಳಬೇಡ.. ಪ್ಲೀಸ್ ಅಂತ ಹೇಳಿದಳು.. 


          "ಇಷ್ಟೆಲ್ಲಾ ನೋವುಗಳನ್ನು ಮನಸ್ಸಿನಲ್ಲಿ ತುಂಬಿದ್ದರು ನಾವು ಚೆನ್ನಾಗಿ ಇರಬೇಕು ಅಂತ ನಮ್ಮೆಲ್ಲರಿಗೂ ಕೆಲಸ ಕೊಡಿಸಿದೆ.. ಮತ್ತೆ ಯಾವಾಗಲೂ ನೀವು ನಗು ನಗುತ ಇರಿ ಅಂತ ಹಿತವಚನ ಹೇಳ್ತಾ ಇದ್ದಲ್ವಾ..?? ಯಾಕೆ ಚೈತ್ರ..?? ನೀನು ಹೀಗೆ ನೋವಿನಲ್ಲಿ ಇರುವಾಗ ನಾವು ನಗುತಾ ಇರೋದಕ್ಕೆ ಸಾಧ್ಯ ಇದ್ಯಾ..?? ಅಂತ ಶಂಕರ‍್ ಕೇಳಿದ.. ಆಗ ಚೈತ್ರ ಹೇಳಿದ ಮಾತು ನಿಜಕ್ಕೂ ದೇವಾನು ದೇವತೆಗಳ ಕಣ್ಣಲ್ಲಿ ನೀರು ತರಿಸಿತ್ತು “ನಾನು ನೋವಿನಲ್ಲಿ ಇದ್ದೀನಿ.. ದುಃಖದಲ್ಲಿ ಇದ್ದೀನಿ.. ನಾನಂತೂ ನಗೋದಕ್ಕೆ ಅಗೋದಿಲ್ಲ.. ಅದಕ್ಕೆ ನನ್ನ ಸ್ನೇಹಿತರಾದ ನೀವೆಲ್ಲರೂ ನಗು ನಗುತ್ತ ಇದ್ರೆ ನಿಮ್ಮ ನಗುವಿನಲ್ಲಿ ನಾನು ಖುಷಿ ಕಾಣ್ತೀನಿ.. ಯಾಕಂದ್ರೆ ಆ ನಗುವಿನ ಬೆಲೆ ನನಗೆ ಗೊತ್ತಿದೆ.. ಆದ್ರೆ ನನಗೆ ಅದು ಕೇವಲ ಮರೀಚಿಕೆ ಅಷ್ಟೆ.. ಆ ನಗುವಿಗೂ ನನ್ನ ಮೇಲೆ ಕೋಪ ಅನಿಸುತ್ತೆ.. ಅದಿಕ್ಕೆ ಆ ನಗು ಕೂಡ ನನ್ನನ್ನು ಬಿಟ್ಟು ದೂರ ಹೋಗಿಬಿಟ್ಟಿದೆ.” ಅಂತ ನಗುಮುಖದಲ್ಲೇ ಹೇಳಿದಳು.. ಆದರೆ ಆ ನಗುವಿನ ಹಿಂದೆ ನಗಲಾರದಷ್ಟು ನೋವಿತ್ತು.. ಕಂಠದಲ್ಲಿ ಭಾರವಿತ್ತು..






ಚೈತ್ರಾಳ ನಗುವಿನ ಮೇಲೆ ದೇವರಿಗೆ ಅದೇನು ಅಸೂಯೆ ಇತ್ತೋ ಗೊತ್ತಿಲ್ಲ.. ಸ್ವಲ್ಪ ದುಃಖದ ಮೊಗದಲ್ಲಿ ಚೈತ್ರಾಳನ್ನು ನೋಡಬೇಕು ಅಂತ ಆ ದೇವರು ಬಯಸಿದ.. ಆದರೆ ದುಃಖವೇ ಜೀವನವಾಗಿ ಹೋದಾಗ ಆ ಪರಿಸ್ಥಿತಿ ನೋಡಿದ ದೇವರಿಗೂ ಹೃದಯ ಭಾರವಾಗಿ ನೋವು ತುಂಬಿತ್ತು.


ಇಷ್ಟೋಂದು ಚಿತ್ರ ಹಿಂಸೆ ಅನುಭವಿಸಿ ಬದುಕುವ ಬದಲು ದೂರ ಬಂದು ಬಾಳಬಹುದಲ್ವಾ..? ಅಂತ ಕೇಳಿದರೆ ಆಕೆಯ ಬಾಯಿಂದ ಮಾತು ಬಹುಶಃ ಇನ್ಯಾರಿಂದಲಾದರೂ ಬರುತ್ತೋ ಇಲ್ಲವೋ ಗೊತ್ತಿಲ್ಲ.. “ನನಗೆ ನೋವಾಗಿದೆ ಅಂತ ನಾನು ಮನೆಯನ್ನು ಬಿಟ್ಟು ಬರಬಹುದು.. ಆದರೆ ನಾವು ಮದುವೆ ಮಾಡಿದ್ದರಿಂದ ನನ್ನ ಮಗಳಿಗೆ ಈ ರೀತಿ ಆಯ್ತು.. ನಾವು ತಪ್ಪು ಮಾಡಿಬಿಟ್ಟೆವು ಅಂತ ಪ್ರತಿ ದಿನ ಪ್ರತಿ ಕ್ಷಣ ಅಪ್ಪ ಅಮ್ಮ ಕೊರಗುತ್ತಾರೆ.. ಆ ದುಃಖ ನನ್ನಿಂದ ತಡದುಕೊಳ್ಳೋಕೆ ಆಗೋದಿಲ್ಲ.. ನಮ್ಮನ್ನು ಹೆತ್ತೋರಿಗೆ ಕೊನೇ ಪಕ್ಷ ನಾವು ಏನು ನೀಡದಿದ್ದರೂ, ದುಃಖ ಮಾತ್ರ ಕೊಡೋದಿಲ್ಲ” ಅವರು ನಾನು ಕೇಳಿದ್ದು ಇದುವರೆಗೂ ಇಲ್ಲ ಅಂತ ಹೇಳದೇ ತಂದು ಕೊಟ್ಟಿದ್ದಾರೆ.,. ಆದರೆ ಈಗ ನಮ್ಮ ತಂದೆ ತಾಯಿ ಕೊಟ್ಟ ಈ ಜೀವನವನ್ನು ನಾನು ಬೇಡ ಅಂತ ಬಿಟ್ಟು ಬಂದರೆ ಈ ಸಮಾಜ ಒಪ್ಪುತ್ತಾ ಶಂಕರ‍್..?? ನಾನು ಭಾರತದ ನಾರಿ..!! ಪತಿ ಕುಡುಕನೋ, ಕೊಲೆಗಡುಕನೋ, ಅವನೊಂದಿಗೆ ಸಾಯುವವರೆಗೋ ಬದುಕಬೇಕಾಗಿರೋದು ನನ್ನ ಧರ್ಮ,.. ಇರ‍್ತೀನಿ.. ಆದ್ರೆ ನೀವೆಲ್ಲರೂ ಚೆನ್ನಾಗಿರಿ.. ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಿ.. ಮನೆಗೆ ಬಂದಾಗ ಕಾಫಿ ಕೊಡಲಿಲ್ಲ ಅಂತ ಬೇಜಾರು ಮಾಡಿಕೋ ಬೇಡ” ಅಂತ ಹೇಳಿದಳು.. 
ಅಷ್ಟರಲ್ಲಿ ಅವಳ ಮನೆಯ ಫೋನ್ ರಿಂಗಿಣಸಿತೊಡಗಿತು. ಅದನ್ನು ರಿಸೀವ್ ಮಾಡಲು ಎದ್ನೋ ಬಿದ್ನೋ ಅಂತ ಓಡಿ ಹೋದಳು.. ಫೋನ್ ರಿಸೀವ್ ಮಾಡಿದ ತಕ್ಷಣ ಆಕೆಯ ದೇಹ ಕಂಪಿಸತೊಡಗಿತು.. ಗಡ ಗಡನೆ ನಡುಕ ಶುರುವಾಗಿತ್ತು.. ಅದು ಆಕೆಯ ಪತಿಯ ಕರೆ ಇದ್ದಿರಬಹುದೆಂದು ಶಂಕರ‍್ ಭಾವಿಸಿದ.. ಕ್ಷಣ ಹೊತ್ತು ಮಾತನಾಡಿ, ಕಣ್ಣೀರು ಒರೆಸಿಕೊಳ್ಳುತ್ತ ವಾಪಸ್ ಬಂದಳು.. ಬೇರೆಯವರ ಬದುಕಿಗೆ ಆಧಾರವಾದ ಸ್ನೇಹಿತೆಯನ್ನು ಇಂಥಾ ಪರಿಸ್ಥಿತಿಯಲ್ಲಿ ಕಂಡ ಶಂಕರ‍್ ಗೆ  ಏನು ಮಾತನಾಡಬೇಕು ಅಂತ ಗೊತ್ತಾಗದೇ ಮೂಕ ಪ್ರೇಕ್ಷಕನಾಗಿಬಿಟ್ಟ..


“ಸರಿ ನೀನು ಹೋಗು.. ಅವರು ಬರೋ ಹೊತ್ತಾಯ್ತು” ಅಂತ ಹೇಳಿ ಅವಸರದಲ್ಲಿ ಶಂಕರ‍್ ನನ್ನು ಅಲ್ಲಿಂದ ಬಲವಂತವಾಗಿ ಅಲ್ಲಿಂದ ಕಳಿಸುವ ಯತ್ನ ನಡೀತು.. ಆಕೆಯ ಮೊಗದಲ್ಲಿದ್ದ ಭಯ, ಆತಂಕ, ಎಲ್ಲವೂ ಮನೆ ಮಾಡಿತ್ತು.. ಹಲವರಿಗೆ ಜೀವನದಲ್ಲಿ ಉತ್ಸಾಹ ತುಂಬಿದ್ದ ಆತ್ಮೀಯ ಗೆಳತಿಯ ಕಣ್ಣಲ್ಲಿ "ಜೀವನವೇ ಬೇಡ ಎಂಬ ನಿರುತ್ಸಾಹ" ಎದ್ದು ಕಾಣುತ್ತಿತ್ತು.. ಶಂಕರ‍್ ನನ್ನು ಗೇಟಿನಿಂದ ಹೊರಗೆ ಕಳಿಸಿದ ಚೈತ್ರ ಮತ್ತೆ ಆ ಹೂವಿನ ಗಿಡಗಳ ನಡುವೆ ಹೋಗಿ ಅಳೋದಕ್ಕೆ ಶುರು ಮಾಡಿದಳು.. 


ಸ್ನೇಹಿತೆಯ ಆ ಅಸಹನೀಯ ದುಃಖದ ಕಣ್ಣೀರಿಗೆ ಶಂಕರ‍್ ಕೇವಲ ಮೂಕ ಸಾಕ್ಷಿಯಾದನೇ ಹೊರತು, ಏನೂ ಮಾಡಲಾಗದ ಅಸಹಾಯಕನಾಗಿಬಿಟ್ಟ.. ಸಾಯಿನಾಥ ಎಲ್ಲರಿಗೂ ಒಳ್ಳೆದು ಮಾಡುತ್ತಾನೆ ಎಂದು ಸದಾ ಪೂಜಿಸುತ್ತಿದ್ದಳು.. ಆದರೆ ಆ ಸಾಯಿನಾಥನ ಕಣ್ಣಿಗೆ ಈ ಭಕ್ತೆಯ ಕಣ್ಣೀರು ಕಾಣಲೇ ಇಲ್ಲ.. "ನೀನೂ ನನ್ನಂತೆಯೇ ನೋವಿನ ಜೀವನ ಸಾಗಿಸು" ಎಂಬಂತೆ ಆ ಸಾಯಿನಾಥನೂ ಆಶೀರ್ವದಿಸಿದನೇನೋ ಎಂಬಂತೆ ಸ್ನೇಹಿತೆಯ ಬದುಕು ದುರಂತಕ್ಕೆ ತಲುಪಿತ್ತು.. 


ಚೈತ್ರಾ ಳ ಕಣ್ಣೀರು ಆ ಹೂವಿನ ಗಿಡದ ಮೇಲೆ ಬೀಳುತ್ತಿವೆ,, ಬಹುಷಃ ಆಕೆಯ ಕಣ್ಣೀರಿನ ಸಾರವನ್ನು ಹೀರಿಕೊಂಡ ಕಾರಣದಿಂದಲೋ ಏನೋ, ಉಳಿದ ಎಲ್ಲಾ ಹೂವಿನ ಗಿಡಗಳಿಗಿಂತ ಚೈತ್ರ ಅಳುತ್ತಿದ್ದ ಹೂವಿನ ಗಿಡ ಹೆಚ್ಚು ಹಸಿರಾಗಿ ಹೊಳೆಯುತ್ತಿತ್ತು.. 


“ದೀಪವು ತನ್ನನ್ನು ತಾನೇ ಸುಡುತ್ತಿದ್ದರೂ ಜಗತ್ತಿಗೆ ಬೆಳಕು ನೀಡುವಂತೆ, ಮನದಲ್ಲಿ ಅತೀವವಾದ ದುಃಖವಿದ್ದರೂ, ತನ್ನ ಕಣ್ಣೀರಿನ ಮೂಲಕ ಹೂವಿನ ಗಿಡವನ್ನು ಹಚ್ಚ ಹಸುರಾಗಿಸುತ್ತಿರುವಳೇನೋ ಎಂಬಂತಿತ್ತು  ಆ ದೃಶ್ಯ !! 

Отправить комментарий

0 Комментарии