Hot Posts

10/recent/ticker-posts

ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ..









ಭಗತ್ ಸಿಂಗ್ ಗೆ ಕೇವಲ 23 ವರ್ಷ ಮಾತ್ರ ಆಗಿತ್ತು.. ಅಷ್ಟರಲ್ಲೇ ಭಾರತದ ಅತಿದೊಡ್ಡ ಕ್ರಾಂತಿಕಾರಿಯಾಗಿ ಬೆಳೆದುಬಿಟ್ಟಿದ್ರು.. 1919 ಏಪ್ರಿಲ್ 13 ನೇ ತಾರೀಕು.. ಸಂಜೆ ಅದು ಸುಮಾರು 6 ಗಂಟೆಯ ಸಮಯ..  ಪಂಜಾಬ್‌ನ ಜಲಿಯನ್ ವಾಲಾಬಾಗ್ ನಲ್ಲಿ 20.000 ರೈತರು ಹೋರಾಟ ನಡೆಸುತ್ತಿದ್ದರು.. ಹೋರಾಟ ನಿರತ ರೈತರ ಮೇಲೆ ಬ್ರಿಟೀಷರು  ಯಾವುದೇ ಮುನ್ಸೂಚನೆ ಇಲ್ಲದೇ ಅಮಾನುಷವಾಗಿ ಗುಂಡು ಹಾರಿಸಿದ್ರು.. ಕೇವಲ 6 ನಿಮಿಷಗಳಲ್ಲಿ ಸುಮಾರು 3000 ಕ್ಕೂ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡರು.. ಪುಟ್ಟ ಹುಡುಗನಾಗಿದ್ದ ಭಗತ್ ಸಿಂಗ್ ಆ ಹತ್ಯಾಕಾಂಡಕ್ಕೆ ಮೂಕ ಸಾಕ್ಷಿಯಾಗಿದ್ರು.. ಮಾರನೆಯ ದಿನ ಶಾಲೆಗೆ ಹೋಗು ಅಂತ ಊಟದ ಬುತ್ತಿಯನ್ನು ನೀಡಿ ಕಳಿಸಿದ್ರೆ ಭಗತ್ ಸಿಂಗ್ ನೇರವಾಗಿ ಹತ್ಯಾಕಾಂಡದ ಕರಾಳ ಪ್ರದೇಶಕ್ಕೆ ಬಂದರು.. ಆ ನೆಲದಲ್ಲಿ ಬಿದ್ದ ರಕ್ತಸಿಕ್ತ ಮಣ್ಣನ್ನು ನೋಡಿ ಕೆಂಡಾಮಂಡಲವಾದ್ರು. ತನ್ನ ಊಟವನ್ನು ನೆಲದಲ್ಲಿ ಚೆಲ್ಲಿ ಆ ರಕ್ತಸಿಕ್ತ ಮಣ್ಣನ್ನು ಆ ಊಟದ ಡಬ್ಬದಲ್ಲಿ ಹಾಕಿಕೊಂಡು ಮನೆಗೆ ಬಂದು ದೇವರ ಮುಂದಿಟ್ಟು “ ನನ್ನ ದೇಶದ ಜನರ ರಕ್ತವನ್ನು ಹರಿಸಿದವರ ಜೀವ ತೆಗೆಯುವವರೆಗೂ  ನನಗೆ ಸಮಾಧಾನವಿಲ್ಲ ಎಂದು ಪ್ರತಿಜ್ಞೆ ಮಾಡಿದ್ರು.. ಆ ಕ್ರಾಂತಿಕಾರಿ ಭಾವನೆಗಳು ಭಗತ್ ಸಿಂಗ್ ರಲ್ಲಿ ಬೇರೂರಿದವು..
                            ಬ್ರಿಟೀಷ್ ಸೈನಿಕರ ರುಂಡಗಳನ್ನು ಚೆಂಡಾಡಿ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡಿದರು.. ಆದರೆ ಕೆಲವು ಕುತಂತ್ರಿಗಳಿಂದಾಗಿ ಭಗತ್ ಸಿಂಗ್ ಬ್ರಿಟೀಷರ ಸೆರೆಯಾದ್ರು.. ಅದು 1931 ರ ಮಾರ್ಚ 23 ನೇ ತಾರೀಕು.. ಭಗತ್ ಸಿಂಗ್ ರವರನ್ನು ನೇಣಿಗೆ ಹಾಕುವಾಗ “ನೀನು ಈ ಜನರಿಗಾಗಿ ಕಷ್ಟ ಪಟ್ಟೆ.. ಆದರೆ ಇಂದು ನಿನ್ನನ್ನು ನೇಣುಹಾಕುತ್ತಿದ್ದರೂ ಸುತ್ತಲೂ ನೋಡುತ್ತ ಇರುವರೇ ಹೊರತು ಯಾರೂ ನಿನ್ನನ್ನು ರಕ್ಷಿಸುತ್ತಿಲ್ಲ.. ಇಂಥವರಿಗಾಗಿ ನೀನು ಹೋರಾಟ ಮಾಡ್ತಿದ್ದೀಯಲ್ಲ.. ನೀನು ಸತ್ತರೆ ಮತ್ಯಾರೂ ಹೋರಾಟಗಾರರು ಹುಟ್ಟುವುದಿಲ್ಲ“ ಅಂತ ಬ್ರಿಟೀಷರು ಹೇಳಿದಾಗ ಭಗತ್ ಸಿಂಗ್ ಏನ್ ಹೇಳಿದ್ರು ಗೊತ್ತಾ..?? “ನಾನು ಸತ್ತರೆ ನನ್ನಂಥ ನೂರಾರು ಭಗತ್ ಸಿಂಗ್ ರು ನನ್ನ ತಾಯ್ನೆಲದಲ್ಲಿ ಹುಟ್ತಾರೆ.. ಅಂಥ ಶಕ್ತಿ ಭಾರತ ಮಾತೆಗೆ ಇದೆ.. ಅನ್ನೋ ಆಶಾವಾದವದೊಂದಿಗೆ, ನಗು ನಗುತ್ತಲೇ ನೇಣುಗಂಬಕ್ಕೆ ತಲೆ ನೀಡಿದರು.. ಅಂದು ಭಾರತದ ಆಶಾಕಿರಣ ಕಣ್ಮರೆಯಾಗಿಹೋಯ್ತು..




ಸುಭಾಷ್ ಚಂದ್ರಬೋಸ್- ಕ್ರಾಂತಿಕಾರಿ ಯೋಧನಾದ ಸುಭಾಷ್ ಚಂದ್ರಬೋಸ್ ದೇಶದ ಬಗ್ಗೆ ಅಪಾರ ಅಭಿಮಾನವನ್ನು ಬೆಳೆಸಿಕೊಂಡಿದ್ದ ಧೀಮಂತ.. ಪದವಿ ಓದುವ ಸಮಯದಲ್ಲಿ  ಪ್ರಾಧ್ಯಾಪಕರೊಬ್ಬರು ದೇಶದ ಬಗ್ಗೆ ಕೇವಲವಾಗಿ ಮಾತನಾಡಿದಾಗ ಸಿಡಿದೆದ್ದು ಅವರ ಮಾತುಗಳನ್ನು ವಿರೋಧಿಸಿದ ಸಿಂಹದ ಮರಿ..   ಪ್ರತಿಭಾನ್ವಿತರಾಗಿದ್ದ ಸುಭಾಷ್ ಚಂದ್ರಬೋಸ್ ಗೆ ಬ್ರಿಟೀಷರ ಅವಧಿಯಲ್ಲೇ IAS ಪದವಿ ದೊರೆತಾಗ “ಬ್ರಿಟೀಷರ ಕೆಳಗೆ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿ ಆ ಕೆಲಸವನ್ನೇ ತ್ಯಜಿಸಿ ಬಂದ ಕಿಚ್ಚಿನ ಸ್ವಾಭಿಮಾನಿ ಸುಭಾಷ್ ಚಂದ್ರಬೋಸ್
ಒಂದೊಮ್ಮೆ ವಿಶ್ವದ ಅಧ್ಯಕ್ಷರೆಲ್ಲರೂ ಸಾಲಾಗಿನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಸುಭಾಷ್ ಚಂದ್ರ ಬೋಸರು ಅವರೊಂದಿಗೆ ನಿಲ್ಲಲಿಲ್ಲವಂತೆ.. ಆಗ  ಅಧ್ಯಕ್ಷರೊಬ್ಬರು ಅವರನ್ನು ಕರೆದು ಕೇಳಿದರಂತೆ “ಬನ್ನಿ.. ಈ ಸಾಲಿನಲ್ಲಿ ನಮ್ಮೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಿ.. ಮುಜುಗರ ಪಡಬೇಡಿ ಅಂತ ಹೇಳಿದ್ರಂತೆ.. ಆಗ ಸುಭಾಷ್ ಚಂದ್ರಬೋಸ್ ಏನ್ ಹೇಳಿದ್ರು ಗೊತ್ತಾ..?? “ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ನನಗೆ ಅಭ್ಯಂತರವಿಲ್ಲ.. ಆದರೆ ನನ್ನೊಂದಿಗೆ ಸರಿಸಮನಾಗಿ ನಿಲ್ಲುವ ಅರ್ಹತೆ ನಿಮ್ಮಲ್ಲಿ ಯಾರಿಗೂ ಇಲ್ಲ.” ಎಂದು ಹೇಳಿದ್ರಂತೆ.. ಬ್ರಿಟೀಷರ ಅಧಿನದಿಂದ ಭಾರತವನ್ನು ಮುಕ್ತಗೊಳಿಸಬೇಕು ಅಂತ ಅವಿರತವಾಗ ಶ್ರಮಿಸಿ ರಕ್ತ ಹರಿಸಿದ ದಿಟ್ಟ ಸ್ವಾಭಿಮಾನಿ ಸುಭಾಷ್ ಚಂದ್ರಬೋಸ್..
ಭಾರತ ಮತ್ತು ಪಾಕಿಸ್ತಾನ ವಿಭಜಿತವಾದಾಗ ಪಾಕಿಸ್ತಾನದ ಮೊಹಮದ್ ಅಲಿ ಜಿನ್ನ ಹೇಳಿದ ಮಾತು ಸುಭಾಷ್ ಚಂದ್ರ ಬೋಸರ ಕಿಚ್ಚಿನ ಹೋರಾಟದ ಬಗ್ಗೆ ತಿಳಿಸುತ್ತದೆ.. ಜಿನ್ನ ಹೇಳ್ತಾರೆ “ ನಾನು ಗಾಂಧೀಜಿಯವರೊಂದಿಗೆ ಮಾತುಕತೆ ನಡೆಸಿದ್ದಕ್ಕಾಗಿ ನನಗೆ ಪಾಕಿಸ್ತಾನ ಸಿಕ್ಕಿತು.. ಆದ್ರೆ ಗಾಂಧೀಜಿಯವರ ಬದಲು ನಾನೇನಾದ್ರೂ ಸುಭಾಷ್ ಚಂದ್ರಬೋಸರೊಂದಿಗೆ ಮಾತುಕತೆಯನ್ನು ನಡೆಸಿದ್ರೆ ನಮಗೆ ಪಾಕಿಸ್ತಾನ ದಕ್ಕುತ್ತಿರಲಿಲ್ಲ” ಅಂತ.. ಈ ಮಾತು ಸುಭಾಷ್ ಚಂದ್ರಬೋಸರ ದೇಶಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದೆ..
ಸ್ವಾಭಿಮಾನಿಯಾದ ಸುಭಾಷ್ ಚಂದ್ರಬೋಸರು ಭಾರತದ ಸ್ವಾತಂತ್ರ್ಯಕ್ಕಾಗಿ ವಿದೇಶಗಳ ಬೆಂಬಲವನ್ನು ಪಡೆದು ದಿಟ್ಟ ಸೈನ್ಯವನ್ನು ಸಜ್ಜುಗೊಳಿಸಿದ್ರು. ಸಾಯುವವರೆಗೂ ಅವಿರತವಾಗಿ ಶ್ರಮಿಸಿದ್ರು.. ಕೊನೆಯ ಉಸಿರಿರುವರೆಗೂ ಬ್ರಿಟೀಷರಿಗೆ ತಲೆ ಬಾಗದೇ ತಲೆ ಎತ್ತಿ ಮೆರೆದ ಭಾರತದ ಕುಡಿ ಸುಭಾಷ್ ಚಂದ್ರಬೋಸ್..1945 ಆಗಸ್ಟ್ 18 ರಂದು ವಿಮಾನ ಪ್ರಯಾಣ  ಮಾಡುವಾಗ ವಿಮಾನ ಸ್ಪೋಟಗೊಂಡು ವಿಧಿವಶರಾದರೆಂದು ಹೇಳಲಾಗುತ್ತದೆ.. ಆದರೆ ಇದು ಎಷ್ಟು ಸತ್ಯವೋ, ಎಷ್ಟು ಸುಳ್ಳೋ ಯಾರಿಗು ತಿಳಿದಿಲ್ಲ.. ಕಡೆಗೂ ಸುಭಾಷ್ ಚಂದ್ರ ಬೋಸರ ಸಾವು ವಿಶ್ವಕ್ಕೆ ಒಂದು ನಿಗೂಢ ವಿಷಯವಾಗಿಯೇ ಉಳಿಯಿತು.. ಸುಭಾಷ್ ಚಂದ್ರಬೋಸ್ ಹುತಾತ್ಮರಾಗಿದ್ದಾರೆ ಎಂದು ಹೇಳಿದರೆ ಬ್ರಿಟೀಷರು ಅದನ್ನು ನಂಬಲೇ ಇಲ್ಲ.. ಯಾಕಂದ್ರೆ ಸುಭಾಷ್ ಅಷ್ಟು ಸುಲಭವಾಗಿ ಹುತಾತ್ಮರಾಗುವಂಥ ವ್ಯಕ್ತಿಯಲ್ಲ.. ಕ್ರಾಂತಿಯ ಕಿಡಿ ಎಂದು ಬ್ರಿಟೀಷ್ ಅಧಿಕಾರಿಯೊಬ್ಬರು ಹೇಳಿದ್ದರಂತೆ.. ಸುಭಾಷ್ ಹುತಾತ್ಮರಾಗಿದ್ದರೂ ಬ್ರೀಟೀಷರು ಮಾತ್ರ “ಸುಭಾಷ್ ತಮ್ಮ ಮೇಲೆ ಧಾಳಿ ಮಾಡಬಹುದು ಎಂಬ ಆತಂಕದಲ್ಲೇ ಬಹಳಷ್ಟು ದಿನ ಕಾಲ ಕಳೆದಿದ್ದರು ಎಂಬ ಸಂಗತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.






ಮಹಾತ್ಮಾ ಗಾಂಧೀಜಿ- ಸತ್ಯ ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರಯವನ್ನು ತಂದುಕೊಡುವಲ್ಲಿ ಶ್ರಮಿಸಿದ ಏಕೈಕ ವ್ಯಕ್ತಿ ಈ ಮಹಾತ್ಮ.. ಮಹಾತ್ಮಾ ಗಾಂಧೀಜಿಯವರು ವಕೀಲರಾಗಿದ್ದರು.. ಹೀಗಾಗಿ ಅವರು ಐಶಾರಾಮೀ ಜೀವನ ಮುಂದುವರಿಸಬಹುದಿತ್ತು.. ಆದರೆ ದೇಶದ ಬಗ್ಗೆ ಅವರಿಗಿದ್ದ ಕಾಳಜಿ, ಜನರ ಮೇಲೆ ಅವರಿಗಿದ್ದ ಮುತುವರ್ಜಿ ದೇಶದ ಸ್ವಾಂತಂತ್ರದಲ್ಲಿ ಧುಮುಕುವಂತೆ ಮಾಡಿತು. ಕೆಲವರು ಹೇಳೋ ಪ್ರಕಾರ “ಗಾಂಧೀಜಿಯವರು ಇಲ್ಲದಿದ್ದರೆ ಬೇಗನೇ ಸ್ವಾಂತಂತ್ರ್ಯ ಸಿಗ್ತಾ ಇತ್ತು.. ಅವರಿಂದಲೇ ದೇಶ ವಿಭಜನೆಯಾಯ್ತು” ಎಂಬ ಆರೋಪಗಳು ಕೇಳಿ ಬರುತ್ತವೆ. ಆದರೆ, ಇಂದು ನಮ್ಮದೇ ದೇಶದಲ್ಲಿ ನಮಗಾಗಿ ಇರುವ ಪ್ರಜಾಸತ್ತಾತ್ಮಕ ಸರ್ಕಾರದಲ್ಲಿ “ಜನಲೋಕಪಾಲ್” ಮಸೂದೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ.. ಹೀಗಿರುವಾಗ ಬ್ರಿಟೀಷರ ಅಡಿಯಾಳಾಗಿ ಇದ್ದ ನಮ್ಮನ್ನು ಬಂಧ ಮುಕ್ತಗೊಳಿಸಿದ್ದು ಸಾಧನೆಯಲ್ಲವೇ..??

 “1857 ರಲ್ಲಿ ಮಂಗಲ್ ಪಾಂಡೆಯಂಥ ಕ್ರಾಂತಿಕಾರಿ ಯೋಧ ಮತ್ತು ಯೋಧರ ದೊಡ್ಡ ಪಡೆಯೇ ಇತ್ತು.. ಆದರೆ ಸೂಕ್ತ ನಾಯಕತ್ವದ ಕೊರತೆ ಮತ್ತು ಆಂತರಿಕ ಕಚ್ಚಾಟದಿಂದ 1857 ರ ಸಿಪಾಯಿ ದಂಗೆ ವಿಫಲವಾಯ್ತು.. ಆಗ ಸೂಕ್ತ ನಾಯಕತ್ವ ಇದ್ದಿದ್ದರೆ ಅಂದೇ ಸ್ವಾತಂತ್ರ್ಯ ಸಿಗುತ್ತಿತ್ತು.. ಆದರೆ ನಂತರದ ದಿನಗಳಲ್ಲಿ ಅಂತಹ ದಿಟ್ಟ ನಾಯಕತ್ವವನ್ನು ನೀಡಿ ದೇಶವನ್ನು ಒಗ್ಗೂಡಿಸಿದವರು ಗಾಂಧೀಜಿಯವರು.. ಇವರ ನಾಯಕತ್ವ ದೇಶದಲ್ಲಿ ಪ್ರಮುಖ ಪಾತ್ರವಹಿಸಿತು.. ಒಬ್ಬ ನಾಯಕರಾಗಿ, ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಅಹಿಂಸಾ ಮಾರ್ಗದಿಂದಲೇ ಸ್ವಾತಂತ್ರವನ್ನು ಪಡೆಯಲು ಶ್ರಮಿಸಿದರು.. ಈ ನಾಯಕತ್ವದ ಗುಣ ಸ್ವಾತಂತ್ರ್ಯಕ್ಕೆ ಮುನ್ನುಡಿ ಎಂಬುದನ್ನು ನಾವು ಎಂದಿಗೂ ಮರೆಯಬಾರದು.. ಅಲ್ವಾ ಸ್ನೇಹಿತರೇ..??




ಲಾಲ್ ಬಹದ್ದೂರ್ ಶಾಸ್ತ್ರಿನೆಹರೂರವರು ದೇಶದ ಪ್ರಧಾನಿಯಾಗಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ಗೃಹಮಂತ್ರಿಯಾಗಿದ್ದರು.. ಅದೊಂದು ದಿನ ವಿಶ್ವದ ಗೃಹಮಂತ್ರಿಗಳೆಲ್ಲರೂ ಸೇರಿ ಒಂದು ವೇದಿಕ್ಕೆಯಲ್ಲಿ ಪ್ರತಿನಿಧಿಸಬೇಕಿತ್ತು..  ಆಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಾಸಿದ ಮತ್ತು ಸ್ವಲ್ಪ ಹರಿದ ಕೋಟನ್ನು ಹಾಕಿಕೊಂಡು ಹೊರಡಲು ಸಜ್ಜಾದರು. ಆಗ ಪ್ರಧಾನಿ ಜವಹಾರ್ ಲಾಲ್ ನೆಹರು ರವರು ಶಾಸ್ತ್ರಿಯವರನ್ನು ನೋಡಿ “ಈ ಹರಿದ ಕೋಟನ್ನು ಯಾಕೆ ಹಾಕಿಕೊಂಡು ಹೋಗುತ್ತಿದ್ದೀರಿ., ನೀವು ನಮ್ಮ ದೇಶವನ್ನು ಪ್ರತಿನಿಧಿಸಬೇಕಾದ ವ್ಯಕ್ತಿ.. ಹೀಗಾಗಿ ಬೇರೆ ಹೊಸ ಕೋಟನ್ನು ಹಾಕಿಕೊಳ್ಳಿ ಎಂದು ಹೇಳಿದರಂತೆ. ಆಗ ಲಾಲ್ ಬಹದ್ದೂರ್ ಶಾಸ್ತ್ರಿಯವರು “ನನ್ನ ಹತ್ತಿರ ಬೇರೆ ಯಾವ ಕೋಟೂ ಇಲ್ಲ” ಅಂತ ಹೇಳಿದ್ರು.. ಒಬ್ಬ ಗೃಹ ಮಂತ್ರಿಯ ಬಳಿ ಹಾಕೊಳ್ಳಲು ಕೋಟೂ ಕೂಡ ಇಲ್ಲ ಎಂದರೆ ಜನಸೇವೆಯ ಮಾದರಿ ಹೇಗಿತ್ತು ಎಂಬುದನ್ನು ನಾವು ಸ್ಮರಿಸಬಹುದಗಿದೆ.. ಜವಹರ್ ಲಾಲ್ ನೆಹರು ರವರು ಮುಂದುವರಿದು, “ನಾನು ನನ್ನ ಕೋಟನ್ನು ಕೊಡುತ್ತೇನೆ.. ಅದನ್ನು ಹಾಕಿಕೊಂಡು ಹೋಗಿ” ಎಂದು ಹೇಳಿದರಂತೆ.. ಆಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅದನ್ನು ನಿರಾಕರಿಸಿದರು “ನಾನು ಈ ಹರಿದ ಬಟ್ಟೆಯಲ್ಲಿ ಹೋದರೆ ಭಾರತ ಬಡ ದೇಶ.. ಭಾರತೀಯ ನಾಯಕನೂ ಬಡವ.. ಎಂದು ಭಾವಿಸುತ್ತಾರೆ.. ಆದರೆ ನಿಮ್ಮ ಕೋಟು ನನಗೆ ಉದ್ದವಾಗುತ್ತದೆ.. ಅದನ್ನು ನಾನು ಹಾಕಿಕೊಂಡು ಹೋದರೆ, ಭಾರತೀಯರು ಬೇರೆಯವರು ನೀಡಿದ ಬಟ್ಟೆಯನ್ನು ಹಾಕಿಕೊಳ್ಳುವ ಭಿಕ್ಷುಕರು ಎಂದು ತೋರಿಸಿದಂತಾಗುತ್ತದೆ. ಭಾರತೀಯರು ಬಡವರು ಎಂದೆನಿಸಿಕೊಂಡರೂ ಪರವಾಗಿಲ್ಲ. ಆದರೆ ಭಿಕ್ಷುಕರು ಅಂತ ಕರೆಯುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರಂತೆ..


          ಇದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನಪರ ಕಾಳಜಿ ಮತ್ತು ದೇಶಾಭಿಮಾನವನ್ನು ತೋರಿಸುತ್ತದೆ,,
ಲಾಲ್ ಬಹದ್ದೂರ್ ಶಾಸ್ತ್ರಿಯವರ ಮತ್ತೊಂದು ಸನ್ನಿವೇಶವನ್ನು ಈ ಸಂದರ್ಭದಲ್ಲಿ ನಿಮಗೆ ಹೇಳಲೇ ಬೇಕು... ಅದು ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಸಮಯ.. ಒಂದು ದಿನ ಶಾಸ್ತ್ರಿಯವರ ಮಗ ತಂದೆಯ ಬಳಿಗೆ ಬಂದು “ಅಪ್ಪ ನನಗೆ ಒಂದು ಬೈಕ್ ಕೊಡಿಸಿ” ಅಂತ ಕೇಳಿದ್ರಂತೆ.. ಆಗ ಶಾಸ್ತ್ರಿಯವರು ಹೇಳಿದ್ದು ಏನು ಗೊತ್ತಾ..?? “ಮಗನೇ ಜನರು ಕೊಡುವ ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದ್ದೀವಿ.,. ಹೀಗಿರುವಾಗ ನಿನಗೆ ಬೈಕ್ ಕೊಡಿಸುವಷ್ಟು ಹಣ ನನ್ನ ಹತ್ತಿರ ಇಲ್ಲ” ಎಂದು ಹೇಳಿದ್ರಂತೆ. ಆಗ ಬೇಜಾರ್ ಮಾಡಿಕೊಂಡು ಮಗ ತನ್ನ ತಾಯಿಗೆ ಆ ವಿಷಯವನ್ನು ತಿಳಿಸಿದನಂತೆ. ಆಗ ತಾಯಿ ತನ್ನ ಹಣದಿಂದ ಒಂದು ಬೈಕ್ ಕೊಡಿಸಿದಳು.  ಈ ವಿಚಾರವನ್ನು ಕಂಡು ಶಾಸ್ತ್ರಿಯವರಿಗೆ ಅಚ್ಚರಿಯಾಗಿ ತಮ್ಮ ಪತ್ನಿಗೆ ಕೇಳಿದರು “ನನ್ನ ಹತ್ತಿರ ಹಣವೇ ಇರಲಿಲ್ಲ. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತು” ಎಂದು ಕೇಳಿದ್ರಂತೆ.. ಆಗ ಶಾಸ್ತ್ರಿಯವರ ಪತ್ನಿ “ನೀವು ಮನೆಯ ಖರ್ಚಿಗಾಗಿ ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸುತ್ತಿದ್ದೆ.. ಆ ಹಣದಿಂದಲೇ ಮಗನಿಗೆ ಬೈಕ್ ಕೊಡಿಸಿದೆ. ಎಂದು ಹೇಳಿದರು. ಮರು ದಿನವೇ ಶಾಸ್ತ್ರಿಯವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು.. “ಸರ್ಕಾರ ನನಗೆ ನೀಡುತ್ತಿರುವ ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ. ದಯವಿಟ್ಟು ಆ ಹೆಚ್ಚಿನ ಹಣವನ್ನು ನನ್ನ ಸಂಬಳದಿಂದ ಕಡಿಮೆ ಮಾಡಿ. ಎಂದು ಆ ಪತ್ರದಲ್ಲಿ ತಿಳಿಸಿದ್ದರು..


ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಸ್ವಾತಂತ್ರಯವನ್ನು ತರಲು ಅದೆಷ್ಟೋ ಜನರು ರಕ್ತವನ್ನೇ ಹರಿಸಿದ್ದಾರೆ.. ಬ್ರಿಟೀಷರನ್ನು ಹೊಡೆದೋಡಿಸಬೇಕು ಎಂಬ ದೃಢ ಸಂಕಲ್ಪ ಮಾಡಿದ್ದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ “ನೆಪೋಲಿಯನ್ ಬೋನಾಪಾರ್ಟೆ”ಯ ಸಹಾಯ ಯಾಚಿಸಿ ಫ್ರಾನ್ಸಿಗೆ ಹೋಗಿದ್ದರು.. ವಿಪರ್ಯಾಸ ಅಂದ್ರೆ ಆ ಸಮಯದಲ್ಲಿ ಫ್ರಾನ್ಸಿನ ಸೈನ್ಯ ಆತಂಕದಲ್ಲಿದ್ದ ಕಾರಣ ನೆಪೋಲಿಯನ್ ಬರುವೆನೆಂದು ಮಾತುಕೊಟ್ಟು ನಂತರ ನಿರಾಕರಿಸಿದ್ರು... ಇದು ನಡೆದದ್ದು ಹದಿನೆಂಟನೆಯ ಶತಮಾನದಲ್ಲಿ.. ಬಹುಶಃ ಅಂದು ನೆಪೋಲಿಯನ್ ಬೋನಾಪಾರ್ಟೆ ಟಿಪ್ಪುವಿಗೆ ಸಹಾಯ ಹಸ್ತ ಚಾಚಿದ್ರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಮೊದಲೇ ಭಾರತ ಸ್ವಾತಂತ್ರ್ಯವನ್ನು ಪಡೆದಿರುತ್ತಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ. ಹಲಗಲಿಯ ಬೇಡರು, ಗೌರಿ ಬಿದನೂರಿನ ವಿದುರಾಶ್ವತ ದುರಂತ, ಅಂಕೋಲ ಸತ್ಯಾಗ್ರಹ, ಶಿವಪುರ ಧ್ವಜ ಸತ್ಯಾಗ್ರಹ, ಕಾನೂನುಭಂಗ ಚಳುವಳಿ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿ, ಹೀಗೆ ಲೆಕ್ಕವಿಲ್ಲದಷ್ಟು ಹೋರಾಟಗಳ ಫಲವಾಗಿ ಸಾವಿರಾರು ಧೀರ ಹೋರಾಟಗಾರರ ರಕ್ತದ ಹರಿವಿನಿಂದಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಆದರೆ ಇಂದು ನಾವು ಯಾರೂ ಆ ಮಹಾನ್ ವ್ಯಕ್ತಿಗಳನ್ನು ನೆನೆಯುತ್ತಿಲ್ಲ ಎಂಬುದು ದುರಂತವೇ ಸರಿ.. ಹಲಗಲಿಯ ಬೇಡರ ಹೋರಾಟದ ಸಮಯದಲ್ಲಿ 14 ವರ್ಷದ ಬಾಲಕ ಸಾವಿನ ಅಂಚಿನಲ್ಲಿದ್ದಾಗ ಪೋಲೀಸರು ನಿನ್ನ ಕೊನೆಯ ಆಸೆ ಏನು..?? ನಿನಗೆ ಎನು ಬೇಕು ಅಂತ ಕೇಳಿದಾಗ “ನನಗೆ ಸ್ವಾತಂತ್ರ್ಯ ಬೇಕು” ಎಂದು ಹೇಳಿ ಕೊನೆಯುಸಿರೆಳೆದ್ದು ನಿಜಕ್ಕೂ ದಯನೀಯ ವಿಷಯವಾಗಿದೆ.. ಪುಟ್ಟ ಮಕ್ಕಳಲ್ಲಿಯೂ ಸ್ವಾತಂತ್ರಯದ ಕಿಚ್ಚು ಹೊತ್ತಿಸಿದ್ದು ಅಂದಿನ ಕಾಲದ ಹೋರಾಟದ ತೀವ್ರತೆಯ ಬಗ್ಗೆ ತಿಳಿಸುತ್ತದೆ.


ಹೀಗೆ ಅತ್ಯಂತ ದೊಡ್ಡ ಹೋರಾಟಗಳು, ಕ್ರಾಂತಿಕಾರಿ ಚಟುವಟಿಕೆಗಳು, ಸ್ವಾಭಿಮಾನದ ಕಿಚ್ಚಿನ ದೃಢ ನಿರ್ಧಾರಗಳು, ಈ ಎಲ್ಲದರ ಪರಿಶ್ರಮ, ಮತ್ತು ದೇಶಕ್ಕಾಗಿ ಹೋರಾಟಗಾರರು ರಕ್ತ ಹರಿಸಿದ ರಕ್ತದ ಕೋಡಿಯ ಫಲವಾಗಿ ನಮಗೆ ಸ್ವಾತಂತ್ರ್ಯ ದಕ್ಕಿದೆ.. ದಯವಿಟ್ಟು ಈ ಸ್ವಾತಂತ್ರ್ಯವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಅವರ ಶ್ರಮ, ತ್ಯಾಗ ಬಲಿದಾನಕ್ಕೆ ಋಉಣಿಯಾಗಿರವುದು ನಮ್ಮ ಕರ್ತವ್ಯವಾಗಿದೆ,.. ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದು ಅಭಿವೃದ್ಧಿಯ ಪಥದತ್ತ ಸಾಗಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.. ಇಂಥಾ ಹೋರಾಟದ ನೆಲದಲ್ಲಿ ಹುಟ್ಟಿದ್ದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು.. ತಪ್ಪು ಮಾಡಿದ ಜನ ನಾಯಕರ ಸೊಕ್ಕು ಮುರಿದು ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿ ನಮಗೆ ಇದೆ.. ಆದರೆ ಹೋರಾಟದ ಮನೋಭಾವ ನಮ್ಮೆಲ್ಲರಲ್ಲಿ ಕುಗ್ಗಿ ಹೋಗಿ ಉತ್ತರ ಕುಮಾರನ ಪೌರುಷದಂತೆ ಮಾತಿನಲ್ಲಿ ಆಡಿ ತೋರಿಸುವ ಭಾವನೆಯೇ ಹೆಚ್ಚಾಗಿದೆ.. ಬಹುಶಃ ಈಗ ಇರುವಂಥ ಜನರು ಸ್ವಾತಂತ್ರೋತ್ಸವದ ಸಮಯದಲ್ಲಿ ಇದ್ದಿದ್ರೆ ಸ್ವಾತಂತ್ರಯೋತ್ಸವದ ಕನಸು ಬರೀ ಕನಸಾಗಿಯೇ ಉಳಿಯುತ್ತಿತ್ತೇನೋ ಅಂತ ಅನಿಸ್ತಾ ಇದೆ.. ಯಾಕಂದ್ರೆ, ನಮ್ಮಿಂದ “ಕೇವಲ ಒಂದು ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ.. ಹೀಗಿರುವಾಗ ಸ್ವಾತಂತ್ರ್ಯವನ್ನು ತರುತ್ತಿದ್ದೆವೆ..???? ಎಂಬುದು ನನ್ನ ಪ್ರೆಶ್ನೆ..!!


ಏನಾದ್ರೂ ತಪ್ಪಾಗಿ ಮಾತಾಡಿದ್ರೆ  ಕ್ಷಮಿಸಿ.. ಆದ್ರೆ ಜಾಗೃತರಾಗೋಣ.. ಬನ್ನಿ..

Отправить комментарий

0 Комментарии