Hot Posts

10/recent/ticker-posts

ಆ ನನ್ನ ಎರಡು ವರ್ಷಗಳು











2013 ರ ಆಗಸ್ಟ್ ತಿಂಗಳು. ಸರಿಯಾಗಿ ಸುಮಾರು ಎರಡು
ವರ್ಷಗಳ ಹಿಂದಿನ ಅನುಭವಗಳ ನೆನಪುಗಳನ್ನು ಮೆಲುಕು ಹಾಕಲೇಬೇಕಾದ ಅನಿವಾರ್ಯ ಸಮಯ. ಈ ಸಮಯ ಇಷ್ಟು
ಬೇಗ ಬರುತ್ತೆ ಅಂತ ನಾನೆಂದೂ ಅಂದುಕೊಂಡಿರಲಿಲ್ಲ. ಕುಂಬಾರ ಮಡಿಕೆ ಮಾಡಲು ಅದೆಷ್ಟು ಹರಸಾಹಸ
ಪಟ್ಟಿದ್ದನೋ ಅಷ್ಟು ಹರಸಾಹಸವನ್ನು ಪಟ್ಟಿದ್ದೆ ಈ ಬದುಕನ್ನು ರೂಪಿಸಿಕೊಳ್ಳಲು..





ಹೊಟ್ಟೆಪಾಡಿಗಾಗಿ ಯಾವುದೋ ಒಂದು
ಸಂಸ್ಥೆಯಲ್ಲಿ ಮೈ ಮುರಿದು ದುಡಿಯುತ್ತಿದ್ದ ದಿನಗಳವು.. ಕಣ್ಣಿಗೆ ನಿದ್ದೆ ಇಲ್ಲದೇ, ಹಸಿವಿನ
ಅರಿವೇ ಇಲ್ಲದೇ, ಕೆಲವೊಮ್ಮೆ ಹಸಿವಾದರೂ ಊಟ ಮಾಡುವಷ್ಟು ಸಮಯವೂ ಸಿಗದಷ್ಟು ಬಿಸಿ ದಿನಗಳು.. ನೀರಸ
ಬದುಕಿಗೆ ಅದು ಒಗ್ಗಿಹೋಗಿತ್ತು.. ಬದುಕಿನ ಆಸೆಗಳಿಗೆ ಒಂದಿಷ್ಟು ನೀರೆರೆಯುತ್ತಿದ್ದ ಸಮಯದಲ್ಲಿ ಬಂದಿದ್ದು
One7
communications ನ ಕರೆ..
 




ಯಸ್.. ನನಗಿನ್ನು ನೆನಪಿದೆ..
ನವೆಂಬರ್ 14 ನೇ ತಾರೀಕು ಇಂಟರ‍್ ವ್ಯೂ ವ್ ಗೆ ಬನ್ನಿ
 ಅಂತ
HR ಸಂಗೀತ
ಹೇಳಿದ್ರು. ಆದರೆ ವಿಪರ್ಯಾಸ ಅಂದ್ರೆ ಆ ದಿನ ಇಂಟರ‍್ ವ್ಯೂವ್ ಗೆ ಹೋಗಲಾಗದಷ್ಟು ಕಠಿಣ
ಪರಿಸ್ಥಿತಿಗಳು ನಿರ್ಮಾಣವಾಗಿಬಿಟ್ಟಿದ್ದವು. ಕೆಲಸದ ಬಿಗಿ ಒತ್ತಡ
,
ಉಸಿರು ಗಟ್ಟಿಸುವಂತಾದದ್ದು ಆ ದಿನವೇ..!! ವಿಧಿ ವಿಪರ್ಯಾಸವೋ ಏನೋ.. ಎಂದೂ ಇಲ್ಲದಂಥ ಕೆಲಸ..
ಜೊತೆಗೆ ಮೇಲಧಿಕಾರಿಗಳು “ಎಲ್ಲೂ ಹೋಗೋಹಾಗಿಲ್ಲ.. ಇಲ್ಲಿ ಕೆಲಸ ಸಾಕಾಗುವಷ್ಟು ಇದೆ” ಎಂದು ಹೇಳಿ
ಇಂಟರ‍್ ವ್ಯೂವ್ ಕನಸಿಗೆ ನಿದ್ರಾಭಂಗ ತಂದುಬಿಟ್ಟರು.


 




ಕೊಲ್ಲುವವನು
ಒಬ್ಬನಿದ್ದರೆ, ಕಾಯುವವನೂ ಒಬ್ಬನಿರುತ್ತಾನಂತೆ.
. ಇದು ನನಗೆ ಆ ಸಮಯದಲ್ಲಿ ಅನುಭವಕ್ಕೆ ಬಂತು..
ಮೇಲಧಿಕಾರಿಗಳು ಬೇಡವೆಂದರೂ, ಕೆಲಸಗಳು ಸಾವಿರವಿದ್ದರೂ, ಅದೆಲ್ಲದರಿಂದ ಮುಕ್ತಿ ನೀಡಿ “ನೀನು
ಇಂಟರ‍್ ವ್ಯೂವ್ ಗೆ ಹೋಗಿ ಬಾ.. ಎಲ್ಲಾ ನಾನು ಮ್ಯಾನೇಜ್ ಮಾಡ್ತೀನಿ” ಅಂತ ಹೇಳಿ ಹೊಸ ಬದುಕಿನ
ಸಸಿಗೆ ನೀರೆರೆದವರು “ಲೀ.ಕೆ.ಸರ‍್”. ಅವರು ಆಧ್ಯಾತ್ಮದ ಬಗ್ಗೆ ಅತಿ ಹೆಚ್ಚು ಒಲವುಳ್ಳ
ವ್ಯಕ್ತಿ.. ಇನ್ನೊಬ್ಬರ ಹಿತ ಕಾಯುವ ವ್ಯಕ್ತಿ.. ತಮ್ಮಿಂದಾಗಬಹುದಾದ ಗರಿಷ್ಟ ಸಹಾ
ಯ ಮತ್ತು ಸಹಕಾರವನ್ನು ಯಾವುದೇ ಸಮಯದಲ್ಲಿ
ಕೇಳಿದರೂ ಕ್ಷಣಮಾತ್ರದಲ್ಲಿ ಸ್ಪಂದಿಸುವ ವ್ಯಕ್ತಿತ್ವ ಅವರದ್ದು..
ಭಗವಂತ ನಿನ್ನಿಂದ
ಎಲ್ಲವನ್ನು ಕಸಿದುಕೊಳ್ಳಬಹುದು.. ಆದರೆ ನಿನ್ನ ಛಲವನ್ನಲ್ಲ.. ಭಗವಂತ ನಿನಗೆ ಎಷ್ಟೇ ಉಪವಾಸ
ಕೆಡವಿದರೂ ದಿನದ ಅಂತ್ಯದೊಳಗೆ ತುತ್ತು ಅನ್ನವನ್ನು ನಿನಗಾಗಿ ಕರುಣಿಸಿರುತ್ತಾನೆ.. ಹೊಟ್ಟಗೆ
ಒಂದಿಷ್ಟು ಆಹಾರವನ್ನು ದಿನದ ಅಂತ್ಯದಲ್ಲಾದರೂ ನೀಡುವ ಕರುಣಾಮಯಿ ಆ ಭಗವಂತ.. ಎಂದು ಆಧ್ಯಾತ್ಮ
ಜ್ಞಾನದ ಮೂಲಕ ಒಂದಿಷ್ಟು ಸನ್ಮಾರ್ಗದ ಬೋಧನೆ ಮಾಡಿದರು.. ಮುಂದೊಂದು ದಿನ ನೀನು ಉನ್ನತ
ಸ್ಥಾನಕ್ಕೆ ಹೋಗಬಹುದು.. ಆದರೆ ಕೆಳಗಿದ್ದವರನ್ನು ಮೇಲೆತ್ತುವ ಮಹತ್ತರ ಜವಾಬ್ದಾರಿ
ನಿನ್ನದಾಗಿರಬೇಕು.. ನೀನು ಮಾತ್ರ ಊಟ ಮಾಡಿದರೆ ಸಾಲದು, ಹಸಿದವರಿಗೆ ಅನ್ನ ನೀಡಬಲ್ಲವನಾಗಬೇಕು
ಎಂದು ಮುಂದಿನ
ಜವಾಬ್ದಾರಿಗಳ ಬಗ್ಗೆ ನನ್ನನ್ನು ಬಡಿದೆಚ್ಚರಿಸಿದರು..





ಆ ಜವಾಬ್ದಾರಿಯ ಮಾತುಗಳನ್ನು
ಈಡೇರಿಸಲು ಸದಾ ತವಕಿಸುತ್ತಿದ್ದೇನೆ.. ನನ್ನ ಬದುಕಿನ ಜೊತೆಗೆ ಇತರರ ಬದುಕು ಕಟ್ಟುವ ಶ್ರಮದಲ್ಲಿ
ಮಗ್ನನಾಗುತ್ತಲೇ ಇದ್ದೇನೆ.. (ನನ್ನಿಂದ ಸಾಧ್ಯವಾದಷ್ಟು)





ಲೀ.ಕೆ.ಸರ‍್ ಅವರ ಶುದ್ಧ ಮನಸ್ಸಿನ ಹಾರೈಕೆಯ
ಫಲವಾಗಿ ಅಂದು ನಾನು ಇಂಟರ‍್ ವ್ಯೂವ್ ಗೆ ಬಂದುಬಿಟ್ಟೆ. ಮೊಟ್ಟ ಮೊದಲನೆಯದಾಗಿ ನನ್ನನ್ನು
ಸಂದರ್ಶನಕ್ಕೆ ತೆಗೆದುಕೊಂಡವರು “ಮಾನಸ”. ಅವರೇ ಬೆಂಗಳೂರು ಸ್ಟೂಡಿಯೋ ಟೀಮಿನ ಮೇನ್ ಕ್ಯಾಪ್ಟನ್.
ಅದೆಷ್ಟೋ ಕಾಲ ಸ್ಕ್ರಿಪ್ಟ್ ರೈಟರ‍್ ಆಗಿ, ವಾಯ್ಸ್ ಓವರ‍್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಮಹನೀಯರು. 





ಅಂದು ಬೆಳಿಗ್ಗೆ ಬಂದ ತಕ್ಷಣ ನನಗೆ
ಒಂದಿಷ್ಟು ಬಿಳಿ ಹಾಳೆಗಳನ್ನು ನೀಡಿ “ಇಂಗ್ಲೀಷ್ ಟ್ರಾನ್ಸ್ ಲೇಷನ್” ಮಾಡೋದಕ್ಕೆ ಹೇಳಿದ್ರು.
ಜೊತೆಗೆ ಒಂದು ಪ್ರೇಮ ಕಥೆಯನ್ನು ಬಿಳಿ ಹಾಳೆಯ ಬಿತ್ತಲು ಅಜ್ಞಾಪಿಸಿದರು.. ಅರೆ ಇಂಗ್ಲೀಷ್
ಟ್ರಾನ್ಸ್ ಲೇಷನ್ ಬೇಕಾದ್ರೆ ತಕ್ಷಣದಲ್ಲಿ ಮಾಡಬಹುದು.. ಆದರೆ ತಕ್ಷಣದಲ್ಲೇ ಒಂದು ಪ್ರೇಮ
ಕಥೆಯನ್ನು ಹೇಗೆ ಸೃಷ್ಟಸೋದು? ಎಲ್ಲೋ ಓದಿದ ಅಥವ ಕಿವಿಗೆ ಬಿದ್ದ ಪ್ರೇಮ ಕಥೆಗಳನ್ನು
ಬರೆಯಬಹುದಾಗಿತ್ತು.. ಆದರೆ ಅದು ನನ್ನ ಮನಸ್ಸಿಗೆ ಇಷ್ಟವಾಗಲಿಲ್ಲ.. “ಕದ್ದ ಬರಹಗಾರ” ಎಂಬ
ಅಪಕೀರ್ತಿಗೆ ಒಳಗಾಗಲು ನನ್ನ ಸೂಪ್ತ ಮನಸ್ಸು ಒಪ್ಪಲಿಲ್ಲ.. “ಕ್ರಿಯೇಟಿವಿಟಿ ಇದ್ದವನಿಗೆ
ಮಾತ್ರವೇ ಈ ಕೆಲಸ ಲಭ್ಯವಾಗಬೇಕು.. ಅದು ನನಗೆ ಇದ್ದರೆ ಈ ಕೆಲಸ ನನಗೆ ಸಿಗುತ್ತದೆ..
ಇಲ್ಲವಾದಲ್ಲಿ ನನಗಿಂತಲೂ ಉತ್ತಮ ಬರಹಗಾರ ಆ ಹುದ್ದೆಯನ್ನು ಅಲಂಕರಿಸಲಿ” ಎಂಬ ಆಶಾಭಾವನೆಯೊಂದಿಗೆ
ಕೊಟ್ಟಿರುವ ಟ್ರಾನ್ಸ್ ಲೇಷನ್ ಮಾಡೋದಕ್ಕೆ ಮುಂದಾದೆ.. ಜೊತೆ ಜೊತೆಗೆ ಪ್ರೇಮ ಕಥೆಯ ಎಳೆಗಳನ್ನು
ಮೆಲುಕು ಹಾಕುತ್ತಾ ಟ್ರಾನ್ಸ್ ಲೇಷನ್ ಮುಗಿಯುವಷ್ಟರಲ್ಲೇ ಪ್ರೇಮಕಥೆಯ ಅದ್ಭುತ ಎಳೆಗಳನ್ನು ಎಳೆದು
ಅದಕ್ಕೊಂದು ಪರಿಪೂರ್ಣ ರೂಪ ಕೊಟ್ಟೆ.







ಆಗ ಬರೆದದ್ದೇ ಕರುಣಾಜನಕ ಪ್ರೇಮ ಕಥೆ. ಕೆಲವೇ ಕ್ಷಣಗಳಲ್ಲಿ ಹೊಸೆದ ಪ್ರೇಮ
ಕಾವ್ಯಕ್ಕೆ ತಕ್ಕ ಫಲ ಅಲ್ಲಿ ಸಿಕ್ಕಿತು. ಮೋಹನ್, ಮಾನಸ ಇಬ್ಬರಿಗೆ ಮಾತ್ರ ಅಲ್ಲಿ ಕನ್ನಡ
ಬರುತ್ತಿದ್ದಿದ್ದು. ಆ ಕಥೆಯ ಧಾಟಿ, ಹೆಣೆದಿರುವ ಶೈಲಿ ಮತ್ತು ಓದಿಸಿಕೊಂಡು ಹೋಗುವ ಗುಣ ಹಾಗೂ
ಅಂದುಕೊಳ್ಳಲಾಗದಂಥ ವಿಭಿನ್ನ ತಿರುವು ಅವರಿಗೆ ಇಷ್ಟವಾಗಿತ್ತು. ಸ್ವಲ್ಪ ದಿನಗಳ ನಂತರ ಅಂದರೆ
ನವೆಂಬರ‍್
19, 2011 ಕ್ಕೆ HR ಸಂಗೀತಾ ರಾಜೇಶ್ ಮತ್ತೆ
ಫೋನು ಮಾಡಿ “ನೀವು ಸೆಲೆಕ್ಟ್ ಆಗಿದ್ದೀರಿ. ಸೋಮವಾರದಿಂದ ಕೆಲಸಕ್ಕೆ ಬನ್ನಿ ಅಂದುಬಿಟ್ರು.
ಲೀ.ಕೆ.ಸರ‍್ ಆವತ್ತು ಇಂಟರ‍್ ವ್ಯೂವ್ ಗೆ ಹೋಗೋಕೆ ಬಿಡುವು ಮಾಡಿಕೊಟ್ಟಿದ್ದರಿಂದಲೇ ಇದೆಲ್ಲಾ
ಸಾರ್ಥಕವಾದದ್ದು ಅನ್ನೋದನ್ನ ನಾನು ಈಗಲೂ ನೆನೆಸಿಕೊಳ್ಳುತ್ತೇನೆ.











ನವೆಂಬರ‍್ 21, 2011 ಸೋಮವಾರ.. ನಾನು ಅಧಿಕೃತವಾಗಿ One97 communications ಗೆ
ಸೇರ್ಪಡೆಗೊಂಡ ದಿನ ಅದು. ಹೊಸ ಸಂಸ್ಥೆ, ಹೊಸ ಜನಗಳು, ಹೈಫೈ ಲೈಫು.. ಎಲ್ಲವೂ ಅಲ್ಲಿತ್ತು.
ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಒಂದು ವಿಷಯವನ್ನು ಎಷ್ಟು ಉದ್ದ ಬೇಕಾದರೂ ಬರೆದ
ಅಭ್ಯಾಸ ನಮಗಿತ್ತು.. ಆದರೆ ಇಲ್ಲಿ ಅದೆಲ್ಲದಕ್ಕೆ ತದ್ವಿರುದ್ದ... ಮ್ಯಾಕ್ರೋ ಸ್ಕ್ರಿಪ್ಟ್
ಬದಲಿಗೆ ಇಲ್ಲಿ ಮೈಕ್ರೋ ಸ್ಕ್ರಿಪ್ಟ್ ಗೆ ಬೇಡಿಕೆ ಇತ್ತು. ಅಂದರೆ ಅತಿ ಹೆಚ್ಚು ವಿಷಯವನ್ನು
ಕೆಲವೇ ಸಾಲುಗಳಲ್ಲಿ, ಆಕರ್ಷಕವಾಗಿ, ವಿಭಿನ್ನವಾಗಿ ಪ್ರಸ್ತುತಪಡಿಸುವ ಮಹತ್ತರವಾದ ಜವಾಬ್ದಾರಿ
ನೀಡಲಾಗಿತ್ತು ನನಗೆ. ಅರೆ ಅದು ಹೇಗೆ ಸಾಧ್ಯ? ಎಳೆದು ಎಳೆದು ಉದ್ದ ಮಾಡುವುದಷ್ಟೇ ನನಗೆ
ಗೊತ್ತಿತ್ತು.. ಒಂದು ವಿಷಯವನ್ನು ಗಂಟೆಗಟ್ಟಲೇ ಎಳೆದು ಹೇಳುವ ಚಾಣಾಕ್ಷತೆ ನನಗೆ ಲಭ್ಯವಾಗಿತ್ತು.
ಆದರೆ ಇಲ್ಲಿ ಗಂಟೆಗಟ್ಟೆಲೇ ಎಳೆಯುವಂತಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಅಥವ ನಿಮಿಷದಲ್ಲಿ ಮಹೋನ್ನತ
ವಿಚಾರಗಳನ್ನು ಸ್ಪಷ್ಟವಾಗಿ ಆಕರ್ಷಕವಾಗಿ ತಿಳಿಸಬೇಕಿತ್ತು..





ಕೆಲಸ ಸಿಕ್ಕಿದ ಖುಷಿಗಿಂತ ಆರಂಭದ ಆಘಾತಗಳು
ಕೆಲವೊಮ್ಮೆ ಆತಂಕ ತಂದಿಟ್ಟದ್ದೂ ಸತ್ಯ. ಆಗ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಹೇಗೆ
ಬರವಣಿಗೆಗಳನ್ನು ರೂಪಿಸಬೇಕು ಎಂದು ಹೇಳಿಕೊಟ್ಟದ್ದು ಮಾನಸ.. ಬಳ್ಳಿಗೆ ಆಸರೆಯ ಮರವಾಗಿ ನಿಂತರು.
ಹಾಗೋ ಹೀಗೋ ಮೊದಲ ದಿನ ಮುಕ್ತಾಯವಾಗುವ ಹಂತಕ್ಕೆ ಬಂದಿತ್ತು. ಇನ್ನೇನು ಮನೆಗೆ ಹೋಗಲು ಸಜ್ಜಾದೆ.
ಆಗ ಮೋಹನ್ ನನ್ನ ಹತ್ತಿರ ಬಂದು “ನೋಡಪ್ಪಾ... ನಾನು ನಿನಗೆ ಜಾಸ್ತಿ ದಿನ ಕೆಲಸ ಮಾಡು ಅಂತ
ಹೇಳಲ್ಲ.. ಕೊನೆ ಪಕ್ಷ ಮೂರು ತಿಂಗಳು ಈ ಕಂಪೆನಿನಲ್ಲಿ ಇದ್ದು ಹೋಗಪ್ಪಾ ಸಾಕು.. ಯಾಕಂದ್ರೆ
ಕಂಪೆನಿ ಶುರುವಾದಾಗಿನಿಂದ ಯಾವ ಸ್ಕ್ರಿಪ್ಟ್ ರೈಟರ‍್ ಕೂಡ ಪರಿಪೂರ್ಣವಾಗಿ ಒಂದು ತಿಂಗಳನ್ನೂ
ಪೂರೈಸಲಿಲ್ಲ. ಹೀಗಾಗಿ ಕೊನೆ ಪಕ್ಷ ನೀನಾದರೂ ಮೂರು ತಿಂಗಳು ಪೂರೈಸಿ ಸಾಧನೆ ಮಾಡು. ಅದೇ ನಿನಗೆ
ಸಾರ್ಥಕತೆ
” ಅಂದುಬಿಟ್ಟರು..





ಆಗಲೇ ಶುರುವಾಯ್ತು ಮತ್ತಷ್ಟು ಎದೆಬಡಿತದ ಅಬ್ಬರ..
ಅರೆ ಸಂಸ್ಥೆ ಶುರುವಾದಾಗಿನಿಂದ ಯಾರೊಬ್ಬರೂ ಒಂದು ತಿಂಗಳನ್ನು ಪೂರೈಸಲಿಲ್ಲವೇ? ಅಷ್ಟೋಂದು
ಕಷ್ಟವೇ ಇಲ್ಲಿ ಕೆಲಸ ಮಾಡೋದು? ಅಷ್ಟೋಂದು ಒತ್ತಡ ಇದ್ಯಾ ಈ ಸಂಸ್ಥೇಲಿ? ಅಷ್ಟೋಂದು ಟಾರ್ಚರ‍್
ಕೊಡ್ತಾರಾ ಇಲ್ಲಿನ ಸಿಬ್ಬಂದಿಗಳು..? ಅಬ್ಬಾ... ಆಗ ನನ್ನ ತಲೆಯಲ್ಲಿ ಧಾಳಿ ಇಟ್ಟ ಪ್ರೆಶ್ನೆಗಳಿಗೆ
ಲೆಕ್ಕವೇ ಇಲ್ಲ.. ಆದರೆ ದೃಢ ನಿರ್ಧಾರವಂತೂ ಮಾಡಿದ್ದೆ.. ಈ ಕೆಲಸ ಹೋದ್ರೆ ಇನ್ನೊಂದು..
ಹೆದರೋದ್ಯಾಕೆ ಅಂತ...!!!







ಹೌದು.. ಮೋಹನ್ ಹೇಳಿದ್ದು ಅಕ್ಷರಶಃ ನಿಜ...
 ಕಠಿಣ ಕೆಲಸವದು.. ಯಾವುದಾದರೂ ಒಂದು ವಿಷಯವನ್ನು
ಇಟ್ಟುಕೊಂಡು ಲೇಖನ ಬರೆಯಬಹುದು. ಆದರೆ ವಿಷಯವೇ ಇಲ್ಲದೇ ಹೊಸ ಲೇಖನವನ್ನು, ಹೊಸ ಕಥೆಗಳನ್ನು
ಸೃಷ್ಟಿಸುವ ಕೆಲಸವಿದೆಯಲ್ಲಾ... ಅದು ನಿಜಕ್ಕೂ ಕಷ್ಟದ ವಿಚಾರ.. ವಾರಗಳು ಉರುಳಿರಲಿಲ್ಲ..
ಅಷ್ಟರಲ್ಲಾಗಲೇ ಕೆಲಸ ಬೇಸರವೆನಿಸತೊಡಗಿತು. ಜೊತೆಗೆ ಅಲ್ಲಿನ ದಿವ್ಯಚೇತನಗಳೊಂದಿಗಿನ ಆರಂಭದ
ಹೊಂದಾಣಿಕೆಯ ಸಮಸ್ಯೆಗಳು ಇಕ್ಕಟ್ಟಿಗೆ ಸಿಲುಕಿಸಿದವು. ಈ ಎಲ್ಲಾ ಸಮಸ್ಯೆಗಳು ನನ್ನನ್ನು
ಹರನೂಕುತ್ತಿದ್ದವು.. ತಿಂಗಳಾಗುವುದರೊಳಗೆ ಮತ್ತೆ ಹೊಸ ಕೆಲಸ ಹುಡುಕುವುದರತ್ತ ಮುಖಮಾಡಿ ನಿಂತೆ..
ಒಂದೆರಡು ಕೆಲಸದ ಆಫರ‍್ ಗಳು ಸಿಕ್ಕವು.. ಆದರೆ ನಾನಿಲ್ಲಿ ನೆಲೆಯೂರಲು ಜಾಗ ಮಾಡಿಕೊಟ್ಟ ಮಾನಸ
ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಿತ್ತು. ಅವರಿಗೆ ಎಲ್ಲವನ್ನು ತಿಳಿಸಿ “ನನ್ನಿಂದ ಇಲ್ಲಿ
ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.. ನನಗೆ ಈ ವಾತಾವರಣ, ಇಲ್ಲಿನ ಜನಗಳ ಮನಸ್ಥಿತಿಗಳೊಂದಿಗಿನ
ಹೊಂದಾಣಿಕೆ ಕಷ್ಟವಾಗುತ್ತಿದೆ. ನಾನು ಬೇರೆಡೆಗೆ ಹೊರಡಬೇಕೆಂದು ನಿರ್ಧಾರ ಮಾಡಿದೀನಿ” ಅಂತ
ಹೇಳಿಯೇಬಿಟ್ಟೆ. ಆಗ ಅವರು ಹೇಳಿದ ಮಾತು ನನ್ನ ನಿರ್ಧಾರಗಳನ್ನೇ ತಲೆಕೆಳಗೆ ಮಾಡಿತ್ತು..





ಯಸ್... “ನೀವು ಇವರಿಗೆ ಹೆದರಿಕೊಂಡು
ಹೋಗ್ತಿದೀರ? ಧೈರ್ಯ ಇದ್ರೆ ಕೆಲಸ ಮಾಡಿ.. ಯಾರ‍್ ಯಾರಿಗೋ ಯಾಕೆ ಹೆದರ‍್ತೀರ ಶೇಖರ‍್..? ನಿಮ್ಮ
ಕೆಲಸ ಏನು ಅಂತ ಇದ್ದು ತೋರಿಸಿ.. ಇಲ್ಲದಿದ್ರೆ ಕೆಲಸ ಬರೋದಿಲ್ಲ ಅಂತ ಜನ ಆಡ್ಕೋತಾರೆ.. ಯೋಚನೆ
ಮಾಡಿ.. ಇದಕ್ಕಿಂತ ಉನ್ನತ ಸ್ಥಾನ ಸಿಕ್ಕರೆ ಹೋಗಿ.. ಅದುವರೆಗೂ ಇಲ್ಲೆ ಇರಿ” ಅಂತ ಅವರ
ಮನದಿಂಗಿತದ ಬುದ್ದಿಮಾತುಗಳನ್ನು ಹೇಳಿದರು. ಹೌದು.. ಅವರು ಹೇಳಿದ್ದು ನಿಜ.. ನಾನೇಕೆ ಹೆದರಿ
ಓಡಬೇಕು? ಇದ್ದು ತೋರಿಸುವೆ ನನ್ನ ಸಾಮರ್ಥ್ಯವನ್ನು ಎಂದು ಅಂದೇ ದೃಢ ನಿರ್ಧಾರ ಮಾಡಿಬಿಟ್ಟೆ..
ಕೆಲಸ ಬಿಡುವ ಇಂಗಿತವನ್ನೇ ಮರೆತುಬಿಟ್ಟೆ..





ದಿನ ದಿನಕ್ಕೂ ಹೊಸ ಹೊಸ ಕಥೆಗಳು.. ಚಿತ್ರ
ವಿಚಿತ್ರದ ಕಥಾ ಹಂದರಗಳು, ಹಾಸ್ಯದ ಹೊನಲಿನ ಹೂರಣಗಳು, ಪ್ರೇಮ ಕಥೆಗಳು, ಭಯಾನಕ ಕಥೆಗಳು, ತತ್ವ
ಕಥೆಗಳು, ದೈವೀಕ ಕಥೆಗಳು. ಮತ್ತು ಇತಿಹಾಸದ ಬುನಾದಿಯನ್ನು ಕೆದಕಿ ಬರೆದ ಕಥೆಗಳು... ಒಂದಲ್ಲಾ
ಎರಡಲ್ಲಾ ಎಲ್ಲಾ ಬಗೆಯ ಕಥೆಗಳಿಗೂ ವಿಭಿನ್ನ ರೂಪ ಕೊಡತೊಡಗಿದೆ.. ಜೊತೆ ಜೊತೆಗೆ ಹಿನ್ನೆಲೆ
ದನಿಯನ್ನೂ ಜೋಡಿಸತೊಡಗಿದೆ... 





ನಾನು ಬರುವುದಕ್ಕೆ ಮೊದಲು ಪವನ್ ಅವರ
ವಿಭಗದಲ್ಲಿ ಆದಾಯದ ಮಿತಿ ಋಣಾತ್ಮಕವಾಗಿದ್ದಿದ್ದು ಕೇವಲ ಹದಿನಾಲ್ಕೇ ದಿನಗಳಲ್ಲೇ ಧನಾತ್ಮಕವಾಗಿ
ತಿರುಗಿಬಿಟ್ಟಿತು.. ಸಾಕಷ್ಟು ಆದಾಯಗಳು ಆ ವಿಭಿನ್ನ ಬರಹಗಳ ಮೂಲಕ ಹರಿದುಬರತೊಡಗಿದವು..
ನನ್ನನ್ನು ಸೇರಿಸಿಕೊಂಡ ಸಂಸ್ಥೆಗೆ ಇದಕ್ಕಿಂತ ನಾನು ಇನ್ನೇನು ಮಾಡಲು ಸಾಧ್ಯ? ಸುಮಾರು ಎರಡು
ವರ್ಷಗಳ ಕಾಲ ಕ್ರಿಯೇಟಿವಿಟಿಗಾಗಿ ಬುದ್ದಿಯನ್ನು ಒರೆಗೆ ಹಚ್ಚಿ, ಹೊಸ ಹೊಸ ಐಡಿಯಾಗಳಿಂದ ಸಂಸ್ಥೆಯ
ದಿಕ್ಕನ್ನೇ ಬದಲಿಸಿಬಿಟ್ಟಿದ್ದೆವು. ದಕ್ಷಿಣ ಭಾರತದಲ್ಲಿ ಕನ್ನಡ ಸ್ಕ್ರಿಪ್ಟ್ ಗೆ ಅಪಾರ ಬೇಡಿಕೆ ಶುರುವಾಗಿತ್ತು.
ಅದಾಗಲೇ  ಬೇರೂರಿದ್ದ ತಮಿಳು, ತೆಲುಗು, ಮಲಯಾಳಂ
ಸೇರಿದಂತೆ ಇಂಗ್ಲೀಷ್ ನ ಘಟಾನುಘಟಿ ಸ್ಕ್ರಿಪ್ಟ್ ರೈಟರ‍್ ಗಳು ಕನ್ನಡವನ್ನು ತಮ್ಮ ತಮ್ಮ ಭಾಷೆಗೆ
ತರ್ಜುಮೆ ಮಾಡಿಕೊಳ್ಳಲಾರಂಭಿಸಿದರು.. ಇದು ಕನ್ನಡದ ಕ್ರಿಯೇಟಿವಿಟಿಗೆ ಸಂದ ಗೌರವ ಎಂದು ನಾನು
ಬಹಳಷ್ಟುಸಲ ಹೆಮ್ಮೆ ಪಟ್ಟಿದ್ದೇನೆ.. ಈಗಲೂ ಆ ಹೆಮ್ಮೆ ಇದೆ..





ಭಯಾನಕ ಭೂತದ ಕಥೆಗಳಿಗೆ ಹಿನ್ನೆಲೆ
ದನಿಯನ್ನು ನೀಡಿದಾಗ ದಕ್ಷಿಣ ಭಾರತದ ಬಹುತೇಕರು ಮೆಚ್ಚಿ “ವಾಹ್, ನೀನು ಇಷ್ಟೋಂದು ಸಖತ್ತಾಗಿ
ರೆಕಾರ್ಡ ಮಾಡ್ತೀಯ ಅಂತ ಅಂದುಕೊಂಡಿರಲಿಲ್ಲ.. ಸೂಪರ‍್ ಮಾಡಿಲೇಷನ್” ಅಂತ ಹೇಳಿ ಬೆನ್ನು
ತಟ್ಟಿದರು. ಅದೆಷ್ಟೋ ಹಾಸ್ಯ ಸಾಲುಗಳನ್ನು ಹುಟ್ಟಿ ಹಾಕಿದ್ದೆ.. ಅದೆಷ್ಟೋ ಕಥೆಗಳನ್ನು ಎಳೆ
ಎಳೆಯಾಗಿ ಜೋಡಿಸಿದ್ದೆ.. ಅದೆಷ್ಟೋ ಕಥೆಗಳಿಗೆ ದನಿಗೂಡಿಸಿದ್ದೆ.. ಆದರೆ ಒಂದು ವಿಷಯವನ್ನು ನಾನು
ಎದೆ ತಟ್ಟಿ ಹೇಳಬಲ್ಲೆ.. “ನಾನು ಎರಡು ವರ್ಷಗಳಲ್ಲಿ ಬರೆದ ಕಥೆಗಳಲ್ಲಿ, ಒಂದು ಕಥೆ ಕೂಡ
ಮತ್ತೊಮ್ಮೆ ಮರುಕಳಿಸಿಲ್ಲ.. ಒಂದು ಸ್ಕ್ರಿಪ್ಟ್ ಇನ್ನೊಂದನ್ನು ಹೋಲುವುದಿಲ್ಲ.. ಎಲ್ಲವೂ
ನವ-ನವೀನ.. ಒಂದೊಂದು ಕಥೆಯಲ್ಲೂ ಒಂದೊಂದು ರೀತಿಯ ತಿರುವುಗಳು.. ಒಂದೊಂದು ಸಾಲುಗಳು ಒಂದೊಂದು
ಶೈಲಿ.....





ಇತರೇ ಭಾಷೆಗಳ ಬರಹಗಾರರು ಯಾರೋ
ಬರೆದದ್ದನ್ನು ಕದ್ದು ಅದಕ್ಕೊಂದಿಷ್ಟು ಮಸಾಲೆ ಸೆರಿಸಿ ಬರೆಯುತ್ತಿದ್ದರು. ಆದರೆ “ಕಳ್ಳ”ನಾಗಲು
ನನ್ನ ಮನಸ್ಸ ಒಪ್ಪಲಿಲ್ಲ.. ಈ ಎರಡು ವರ್ಷಗಳಲ್ಲಿ ಬರೆದ ಪ್ರತಿಯೊಂದು ಸ್ಕ್ರಿಪ್ಟ್ ಕೂಡ
ಹೊಸತನದಿಂದ ಸೃಷ್ಟಿಸಿದ್ದು ಎಂದು ಎದೆ ತಟ್ಟಿ ಹೇಳುತ್ತೇನೆ.. ಅತ್ಯಂತ ಖುಷಿಯಿಂದ.. ಇಷ್ಟು ಸಾಕು
ನನ್ನ ಕೆಲಸ ಸಾಮರ್ಥ್ಯವನ್ನು ಅರಿಯಲು.. 





ಉಳಿದ ಭಾಷೆಯಲ್ಲಿ ಎಲ್ಲರೂ ಕಥೆಯನ್ನು
ಬರೆಯುತ್ತಾರೆ.. ಆದರೆ ನಾನು ಬರೆಯುತ್ತಿದ್ದ ಶೈಲಿ ವಿಭಿನ್ನವಾಗಿತ್ತು.. ಕುತೂಹಲವನ್ನು
ಕೊನೆಯವರೆಗೂ ಕೊಂಡೊಯ್ಯುವ ಚಾಣಾಕ್ಷತೆಯನ್ನು ಕಠಿಣ ಪರಿಶ್ರಮದ ಫಲದಿಂದ ಕರಗತ ಮಾಡಿಕೊಂಡಿದ್ದೆ..
ನಾನು ಬರೆದ ಬರಹಕ್ಕೆ ಮತ್ತಷ್ಟು ಜೀವ ತುಂಬುತ್ತಿದ್ದವರು ಇತರೇ ಹಿನ್ನೆಲೆ ದನಿ ಕಲಾವಿದರು..
ಮಾನಸ ಮತ್ತು ದಿವ್ಯಶ್ರೀ ಇಬ್ಬರೂ ನಮ್ಮ ಟೀಮಿನಲ್ಲಿದ್ದು ನನಗಿಂತ ಮೊದಲಿಂದ ಸಂಸ್ಥೆಗಾಗಿ
ಮಣ್ಣುಹೊತ್ತವರು.





ಆಡಾಡುತ ಎರಡು ವರ್ಷಗಳು ಕಳೆದವು.. ಆತ್ಮೀಯ
ಗೆಳೆಯ ಹರೀಶ್ ಶಿವಲಿಂಗಮ್ ಜೊತೆಯಾದಮೇಲಂತೂ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.. ಸದಾ
ಒಂದಿಲ್ಲೊಂದು ಕೀಟಲೆ ಮಾಡುತ್ತ ಹಾಸ್ಯಚಟಾಕಿಗಳಿಂದ ನಕ್ಕು ನಗಿಸಿ ಎಲ್ಲರನ್ನೂ ಗೋಳು
ಹೊಯ್ದುಕೊಳ್ಳುತ್ತಿದ್ದ. ಸಂಜೆ ಅವನ ಬೈಕಿನ ಹಿಂದಿನ ಸೀಟು ನನಗಾಗಿಯೇ ಮೀಸಲಿತ್ತು.. ನಿತ್ಯವೂ
ಶಿವಾಜಿನಗರದವರೆಗೆ ನನ್ನನ್ನು ಹೊತ್ತು ಬರುತ್ತಿತ್ತು ಆ “ಗಜಬೈಕು”.....  ವೈಶಾಲಿ, ಪ್ರಶಾಂತಿ, ಹೈದ್ರಾಬಾದಿ ಹೊಟೆಲ್ಲುಗಳಲ್ಲಿ
ಚಪ್ಪರಿಸಿಕೊಂಡು ಬಿರಿಯಾನಿ ತಿಂದಿದ್ದೇವೆ.. ಏನೂ ಇಲ್ಲದಿದ್ದಾಗ, ಇದ್ದದ್ದನ್ನು ಹಂಚಿಕೊಂಡು
ಒಂದೇ ತಟ್ಟೆಯಲ್ಲಿ ತಿಂದಿದ್ದೇವೆ. ಹರೀಶ್ ಜೊತೆಯಲ್ಲಿ ಇದ್ದಾಗ “ಅಯ್ಯೋ ಇವನು ಇದ್ದರೆ ಕೆಲಸ
ಮಾಡೋದಕ್ಕೆ ಆಗಲ್ಲಯ್ಯ” ಎಂದು ಬೈದುಕೊಂಡದ್ದು ಉಂಟು.. ಹಾಗೆಯೇ ಅವನು ಒಂದು ದಿನ ರಜೆ ಹಾಕಿದಾಗ
“ಅಯ್ಯೋ ಅವನೇಕೆ ಬರಲಿಲ್ಲ..?? ಎಂದು ಎಲ್ಲರ ಕಣ್ಣುಗಳು ಅವನಿಗಾಗಿ ಕಾದ ಉದಾಹರಣೆಗಳೂ ಉಂಟು..
ಮಾನವನ ದುರ್ಬುದ್ದಿ ಹೇಗಿದೆ ನೋಡಿ.. ಜೊತೆಗಿದ್ದಾಗ ಅವರ ಬೆಲೆ ಗೊತ್ತಾಗುವುದಿಲ್ಲ.. ದೂರ ಆದಾಗ
ಅವರ ಬೆಲೆ ಗೊತ್ತಾಗುತ್ತೆ.. ಜೊತೆಗೆ ಅವರ ನೆನಪುಗಳು ನಮ್ಮನ್ನು ಕಾಡೋಕೆ ಶುರು ಮಾಡುತ್ತೆ..
ಹಾಗೇ ಹರೀಶನ ನೆನಪುಗಳು ಅವನಿಲ್ಲದಿದ್ದಾಗ ಕಾಡಿದ್ದು ಮಾತ್ರ ಸುಳ್ಳಲ್ಲ..







ಪ್ರಶಾಂತ್ ಹೊಟೆಲ್ ನಲ್ಲಿ, ಹೈದ್ರಾಬಾದಿ
ಹೊಟೆಲ್ ಗಳಲ್ಲಿ ಬಿರಿಯಾನಿ ತಿಂದು ಬಿಲ್ಲುಕೊಡುವಾಗ ಬಿಲ್ಲು ಬರುವ ಮೊದಲೇ ಓಡಿ ಹೋಗಿದ್ದು
ತಮಾಶೆಯ ಸನ್ನಿವೇಷ. ಮಂದಣ್ಣ, ಕಾರ್ತಿಕ್, ಮೂವರೂ ನಮಗಾಗಿ ಹುಡುಕುತ್ತಿದ್ದರು.. ಹಣ ಕೊಡದೇ ನಾವು
ಅಲ್ಲಿಂದ ಕಾಲ್ಕಿತ್ತಿದ್ದೆವು.. ಅವರನ್ನು ಸಂಕಷ್ಟದಲ್ಲಿ ಸಿಲುಕಿಸಿ...





ಅವರ ಗೋಳಾಟ, ತಡಕಾಟವನ್ನು ನೋಡಿ ಖುಷಿ
ಪಟ್ಟು ನಂತರ ಹಣ ನೀಡಿ ಬಂದೆವು.. ಹೊರಗಡೆ ಹೊಟೆಲ್ಲಿಗೆ ಹೋದರೆ ನಾನು, ಹರೀಶ್, ಮೋಹನ್, ಮಂದಣ್ಣ,
ಕಾರ್ತಿಕ್ ಯಾವಾಗಲೂ ಜೊತೆಗೇ ಹೋಗುತ್ತಿದ್ದೆವು..
ಫೈವ್ ಸ್ಟಾರ‍್ ಊಟದಿಂದ ಹಿಡಿದು ಫುಟ್ ಪಾತ್ ಊಟದವರೆಗೂ ರುಚಿ ಕಂಡಿದ್ದೇವೆ. ಪ್ರತಿ ಬುಧವಾರವಂತೂ ವಿಶೇಷ ಭೋಜನಕ್ಕಾಗಿಯೇ
ಸಿದ್ಧವಿರುತ್ತಿದ್ದೆವು.. ಅದೆಷ್ಟು ಚಂದವಿತ್ತೋ ಹಂಚಿಕೊಂಡು ತಿಂದ ಆ ಹಸಿ ಹಸಿ ನೆನಪುಗಳು.!





ಹೊಸರುಚಿಗಾಗಿ ಬೈಕ್ ಸವಾರಿ ಮಾಡಿಕೊಂಡು, ಹುಡುಕಾಡಿ ಹೋದದ್ದು ನಾನು ಹರೀಶ್ ಮತ್ತು  ಮೋಹನ್. 25 ರೂಪಾಯಿಯ ದೋಸೆಗಾಗಿ 200 ರೂಪಾಯಿ ಪೆಟ್ರೋಲ್ ಖರ್ಚುಮಾಡಿಕೊಂಡು ಹೋಗಿದ್ದು ಹರೀಶ್ ಶಿವಲಿಂಗಮ್ ಗಾಗಿ.. ವಿದ್ಯಾರ್ಥಿಭವನಕ್ಕೆ ಹೋಗಿ ಕ್ಯೂನಲ್ಲಿ ನಿಂತು ದೋಸೆ ತಿಂದುಬಂದಿದ್ದೇವೆ. ಪವನ್ ಜೊತೆಗೆ ನಾನು ಮತ್ತು ಹರೀಶ್ ದಾವಣೆಗೆರೆ ಬೆಣ್ಣೆ ದೋಸೆಯ ರುಚಿಯನ್ನೂ ಒಮ್ಮೆ ಸವಿದಿದ್ದೇವೆ.. ಕೆಲಸದಲ್ಲಿ ಕಿತ್ತಾಡಿದ್ದೇವೆ..
ಬೈದಾಡಿದ್ದೇವೆ.. ಆದರೆ ಊಟಕ್ಕೆ ಮಾತ್ರ ಎಂದೂ ಒಂಟಿಯಾಗಿ ಹೋದ ಉದಾಹರಣೆಗಳಿಲ್ಲ.. ಕೆಲಸವನ್ನು
ಎಂದಿಗೂ ನಮ್ಮ ಸ್ನೇಹ ಬಂಧನದೊಳಕ್ಕೆ ನುಸುಳಲು ಬಿಟ್ಟಿಲ್ಲ.. ಬಹುಷಃ ಈ ಗುಣವೇ ನಮ್ಮನ್ನು
ಇನ್ನಷ್ಟು ಹತ್ತಿರಕ್ಕೆ ತಂದಿದ್ದು..




ಆದರೆ ಈ ಎಲ್ಲಾ ಬಂಧನಗಳನ್ನು ಬಿಟ್ಟು ಹೋಗುವ
ಪರಿಸ್ಥಿತಿ ಈಗ ನಿರ್ಮಾಣವಾಗಿಬಿಟ್ಟಿವೆ.. ಹೌದು.. “ಗೆಳೆಯ ಮೋಹನ್... ನಾನು ಇನ್ನು ಮುಂದೆ
ನಿಮ್ಮ ಜೊತೆಗಿನ ಬಿರಿಯಾನಿ ಊಟಕ್ಕೆ ಚಕ್ಕರ‍್ ಹಾಕುತ್ತಿದ್ದೇನೆ... ಹೇ ಪವನ್ ಇನ್ನುಮುಂದೆ ನಿನ್ನೊಂದಿಗೆ "ದಬೇಲಾ" ತಿನ್ನಲು ನಾನಿರುವುದಿಲ್ಲ. ಹರೀಶ್ ಶಿವಲಿಂಗಮ್,
ನಿನ್ನ “ಗಜಬೈಕಿ”ನ ಹಿಂದಿನ ಸೀಟು ಇನ್ನು ನನ್ನದಲ್ಲ.. ಅದು ಖಾಲಿಯಾಗಿಯೇ ಉಳಿಯಲಿದೆ.. ಯಸ್..
ನಾನು ಕೆಲಸಕ್ಕೆ ರಾಜಿನಾಮೆ ನೀಡಿದ್ದೇನೆ..
One97 communication ಸಂಸ್ಥೆಗೆ ಗುಡ್ ಬೈ
ಹೇಳಿದ್ದೇನೆ.. ಹೊಸ ಬದುಕನ್ನು ಕಟ್ಟಿಕೊಳ್ಳಲು, ಅನೇಕ ಕನಸುಗಳನ್ನು ಪೋಣಿಸಿಕೊಂಡು
One97 ನಿಂದ ಹೊರಬರುತ್ತಿದ್ದೇನೆ..





ಎರಡು ವರ್ಷಗಳ ಕಾಲ ನನ್ನ ಮಾತುಗಳನ್ನು ತನ್ನ
ಗಣಕಯಂಯತ್ರದ ಮಸ್ತಕದಲ್ಲಿ ಶೇಖರಿಸಿದ ಮೈಕ್ ಗಳಿಗೆ, ಸ್ಟೂಡಿಯೋಗಳಿಗೆ ಇನ್ನು ನನ್ನ ಕಿರಿ ಕಿರಿ
ಇರುವುದಿಲ್ಲ.. ನನ್ನ ಮಾತುಗಳನ್ನು ರೆಕಾರ್ಡ ಮಾಡಿ ಮಾಡಿ ಎರಡು ವರ್ಷಗಳಿಂದ ಬೇಸತ್ತ ಮೈಕುಗಳು
ಇನ್ನುಮುಂದೆ ನಿರಾಳಗೊಳ್ಳಲಿವೆ. ಹೊಸ ದನಿಯೊಂದಕ್ಕಾಗಿ ಕಾಯುತ್ತಲಿವೆ. ಹೇ ಮೈಕುಗಳೇ...
ಸ್ಟುಡಿಯೋ ಸಿಸ್ಟಂಗಳೇ.. ಇಷ್ಟುದಿನ ಸಹಕರಿಸಿದ್ದ, ನಿರ್ಜೀವ ವಸ್ತುಗಳಾಗಿ ಬದುಕಿನಲ್ಲಿ ಬೆರೆತ
ಯಂತ್ರೋಪಕರಣಗಳೇ.. ಗುಡ್ ಬೈ.. ನಾನಿನ್ನು ಹೋಗಿಬರುತ್ತೇನೆ..





ಈ ಸಮಯದಲ್ಲಿ ಪ್ರತ್ಯಕ್ಷವಾಗಿ,
ಪರೋಕ್ಷವಾಗಿ, ಆತ್ಮೀಯವಾಗಿ, ಕೋಪದಿಂದ, ಸ್ನೇಹದಿಂದ, ದ್ವೇಷದಿಂದ ನನ್ನನ್ನು ತಿದ್ದಿ ತೀಡಿ ಇಷ್ಟು
ದಿನ ನಿಮ್ಮೊಂದಿಗೆ ನನ್ನನ್ನು ಒಬ್ಬನಂತೆ ನೋಡಿಕೊಂಡಿದ್ದೀರಿ.. ಈ ನಿಮ್ಮ ಆತ್ಮೀಯತೆಯ ಆದರತೆಗೆ
ನಾನು ಮನಃಪೂರಕವಾಗಿ ಇಂದು ನಮಿಸುತ್ತಿದ್ದೇನೆ.





ಸದಾ ನಗು ಮುಖದ ಗೆಳೆಯ ಸೆಲ್ವ, ಯಾವುದೋ
ಲೋಕದಲ್ಲಿ ತೇಲುತ್ತಾ, ಏನನ್ನೋ ಯೋಚಿಸುತ್ತಾ ಕೆಲಸದ ಮೇಲೆ ಗಮನವನ್ನು ಕೆಂದ್ರೀಕರಿಸುವ ಒಡನಾಡಿ
ಸುನೀಲ್, ಮಂದಸ್ಮಿತರಾದ ಅರ್ಚನ, ಕೋಪ ತಾಪದಲ್ಲಿ ಬೆಂದರೂ, ಹಗಲೂ ರಾತ್ರಿ ಎಲ್ಲದೇ ಸಂಸ್ಥೆಗಾಗಿ “ಕೂಗಾಡಿ
ದುಡಿಯುವ” ಆತ್ಮೀಯ ಪವನ್, ಮೂಗಿನ ಮೇಲೊಂದು ಕನ್ನಡಕ ಹೊತ್ತು, ತನ್ನ ಆಳೆತ್ತರದ ವ್ಯಕ್ತಿತ್ವದಿಂದ
ಗುರ್ತಿಸಿಕೊಂಡ ಸೌಮ್ಯವಾದಿ ಮಹೇಂದ್ರನಾಥ್, ಎಲ್ಲಾ ಕೆಲಸಗಳಿಗೆ ಶ“ಭಾಷ್” ಎಂದು ಹೇಳಿ ಬೆನ್ನು
ತಟ್ಟುತ್ತಿದ್ದ ಭಾಷಾ, ಕರೆಯಲು ಒಂದು ಹೆಸರಿದ್ದರೂ “ಮಚ್ಚಿ ಮಚ್ಚಿ” ಎಂತಲೇ ಹೆಸರಾದ ಗಿರೀಶ್,
ಮಹಾಕಾಯದ ಆತ್ಮೀಯ ಮನಸಿನ ಗೆಳೆಯ ಭರತ್, ಅರ್ಥವಾಗದಂತೆ ಬಡಬಡಾಯಿಸುವ ಆತುರದ ಜವಾಬ್ದಾರಿಯುತ ಗೆಳೆಯ ಬೈಜು, ಎಲ್ಲರ ನೆನಪುಗಳು ಇದೀಗ ಹೆಚ್ಚು ಜೀವಂತವಾಗುತ್ತಿವೆ.
ನೆನಪುಗಳೊಂದಿಗಿನ ಬದುಕಿಗೆ ಮುಂದಿನ ದಿನಗಳಲ್ಲಿ ಹೆಜ್ಜೆ ಇಡುತ್ತಿದ್ದೇನೆ.. ಇದು ಅನಿವಾರ್ಯತೆಯ
ಬದುಕಿನ ತಿರುವು..





 ಸ್ಕ್ರಿಪ್ಟ್ ಗೆ ಹೊಸ ಜೀವ ನೀಡುತ್ತಿದ್ದ ಮತ್ತು ಬಗೆ
ಬಗೆಯ ಸೌಂಡ್ ಎಫೆಕ್ಟ್ ಮೂಲಕ ನನ್ನ ದನಿಗೆ ಹೊಸ ರೂಪ ನೀಡುತ್ತಿದ್ದ ನಿಕ್ಸನ್ ಜಾರ್ಜ,
ಮ್ಯೂಸಿಶಿಯನ್ ಕಾರ್ತಿಕ್, ಸದಾ ಮೌನಿಯಾಗಿ ಮನದಲ್ಲೇ “ದಿವ್ಯ”ವಾಣಿ ಹರಿಸುವ ಕಲಾವಿದೆ, “ಮಾನಸ”
ಸರೋವರದಷ್ಟು ಮಾರ್ಗದರ್ಶನ ನೀಡಿದ ಆಪ್ತರು, ಎಲ್ಲರನ್ನೂ ಬಿಟ್ಟು ಹೊರಡುತ್ತಿದ್ದೇನೆ.





ಕನ್ನಡ ಬಾರದಿದ್ದರೂ ಪೂರ್ಣಿಮೆಯಂತೆ ಬೆಳಕು
ನೀಡಿದ, ಸ್ನೇಹಿತೆಯ ಕಾಳಜಿಗೆ, ತಂತ್ರಗಾರಿಕೆಯಲ್ಲೇ ಕುತಂತ್ರಗಳನ್ನು ಬೆರೆಸಿ ಚತುರತೆ ಮೆರೆದ
ರಾಮನಲ್ಲದ ಕೃಷ್ಣಾವತಾರಿಗೆ, ಲತೆಯೆಂಬ ಹೆಸರಿಟ್ಟುಕೊಂಡು ಕೋಮಲತೆಯನ್ನು ಮೈಗೂಡಿಸಿಕೊಳ್ಳದ ಪಂಜರದ
ಗಿಳಿಗಳಿಗೆ, ಮಲಯಾಳಂ ನ ಅಪರಿಚಿತ ಹೊಸ ಬಾಲೆಗೆ, “ಕೆಲಸದ ವೇಗವನ್ನು ಮೆಚ್ಚಿ ರಿಜಿನಿಕಾಂತ್
ರೋಬೋಗೆ ಇಟ್ಟ ಹೆಸರನ್ನು ನನಗಿಟ್ಟು ’ಚಿಟ್ಟಿ ಬಾಯ್’ ಎಂದು ಮರು ನಾಮಕರಣ ಮಾಡಿದ ಅಶ್ವತಿಗೆ, ಸದಾ
ಕಾಡುವ ಗೆಳತಿಯಾಗಿ ನೆನಪಾಗುವ “ಭುವನದ ಒಡತಿ”ಗೆ,. ಎಲ್ಲರಿಗೂ ನಾನು ಬಿಟ್ಟು ಹೋಗುತ್ತಿರುವುದು
ಕ್ರಿಯೇಟಿವಿಟಿಯ ನೆನಪುಗಳು ಮಾತ್ರ.. ನಾ ಬರೆದ ಕಥೆಗಳು ಮತ್ತು ನನ್ನ ದನಿಯ ಆವೇಗಗಳು ಮಾತ್ರ.. 





ತಮಿಳು ಬರಹಗಾರರಾದ ಸರವಣನ್, ರಿಯಾಜ್,
ಮಲಯಾಳಂ ಬರಹಗಾರನಾದ ಜಿಮ್, ತೆಲುಗು ಬರಹಗಾರನಾದ ಸಾಯಿ ರಾಘವ ಪಿನ್ನೆಲ್ಲಿ, ದಿಲೀಪ್ ರೆಡ್ಡಿ,  
NGS, ನವೀದ್... ಇವರೆಲ್ಲರೊಂದಿಗೆ ನಾನು ಅಷ್ಟಾಗಿ
ಸಮಯ ಕಳೆದಿಲಿಲ್ಲ.. ಆದರೆ ಕಳೆದ ಕೆಲವೇ ಕ್ಷಣಗಳು ಅವರ ವ್ಯಕ್ತಿತ್ವದ ಪ್ರತೀಕವಾಗಿ ಬಿಂಬಿಸಿದ್ದು
ಮಾತ್ರ ನಿಜ..





ಹಿಂದಿಯಲ್ಲಿ “ಯೇ ಕ್ಯಾ ಹೈ... ಓ ಕ್ಯಾ ಹೈ”
ಅಂತ ಆಗಾಗ ಬಂದು ವಿಚಾರಿಸುತ್ತಿದ್ದ ಹರ್ಶಿತ್.. ಮತ್ತು ಏನಾದರೂ ಒಂದು ವಿಷಯದ ಬಗ್ಗೆ ಕೇಳಿದರೆ “
ಏ ಕ್ಯಾ ಹೈ ನಾ...?? ಹಮ್ ಪಹಲೇ
OBD ಚಲಾತೆ ಹೈ.. ಬಾದ್ ಮೇ costomer Subscription
ಕರ‍್ತಾ ಹೈ.. ತಬ್ ಎಂಡ್ ಮೇ ಥ್ಯಾಂಕ್ಯೂ ಬೋಲ್ನೇಕಾ... ಇಸ್ಕೇ ಲಿಯೇ ಏಕ್
ಥ್ಯಾಂಕ್ಯೂ ಸ್ಕ್ರಿಪ್ಟ್ ಚಾಹಿಯೇ” ಅಂತ ಒಂದು ಕೇಳಿದ್ದಕ್ಕೆ ನೂರೊಂದು ವಿಷಯ ಸೇರಿಸಿ
ಹೇಳುತ್ತಿದ್ದ ಸಜಿತ್ ಎಲ್ಲರ ಮಾತುಗಳು ಈಗ ನೆನಪುಗಳು ಮಾತ್ರ.. ಮತ್ತೆ ಎಂದಾದರೂ ಜೊತೆಯಲ್ಲಿ
ಕೆಲಸ ಮಾಡುವ ಕ್ಷಣಗಳು ಸಿಗುವುದೋ... ಇಲ್ಲವೋ.... ಉತ್ತರ ಸಿಗದ ಪ್ರೆಶ್ನೆ... ಯಾಕಂದ್ರೆ
One97 ನಲ್ಲಿ ಕೆಲಸ ಮಾಡುವವರು ಎಲ್ಲರೂ ವಿವಿಧ ಹಿನ್ನೆಲೆಯಿಂದ ಬಂದಂಥವರು.. ಎಲ್ಲರೂ
ಜರ್ನಲಿಸಂ ಓದಿದ್ರೆ ಇದಲ್ಲಾ ಇನ್ನೊಂದು ಮಾಧ್ಯಮದಲ್ಲಿ ಸಿಗುತ್ತಾರೆ ಅಂತ ಅಂದುಕೊಳ್ಳಬಹುದು..
ಆದ್ರೆ ಆ ಸಂಭವನೀಯತೆಗಳೇ ಇಲ್ಲಿ ಇಲ್ಲ... ಅಂದುಕೊಂಡರೂ ಅದು ಕೇವಲ ನೆನಪಾಗಿ ಕಾಡುವ ನೋವಿನ
ಅಲೆಯಾಗುತ್ತದೆಯೇ ಹೊರತು, ನನಸಾಗುವುದಿಲ್ಲ..





ಈ ಸಮಯದಲ್ಲಿ ಪ್ರಭಾ. ಅಭಿಶೇಖ್ ಮತ್ತು ಮಹಾದೇವ್ ಇವರನ್ನು ಮರೆಯಲು ಸಾಧ್ಯವಿಲ್ಲ.. ಹಸಿವಾದಾಗ “ಅಭಿ ಊಟ ತಗೊಂಡ್ ಬಾರಪ್ಪಾ” ಎಂದೊಡನೆ ಓಡೋಡಿ ಹೋಗಿ
ಊಟ ತಂದು ನಮ್ಮ ಹೊಟ್ಟೆ ತುಂಬಿಸಿದ ಅನ್ನದಾತ ಅಭಿಶೇಖ್... ದಿನಕ್ಕೆ ನಾಲ್ಕುಹೊತ್ತು ಟೀ ಕೊಟ್ಟು
ಬುದ್ದಿಯನ್ನು ಚುರುಕುಗೊಳಿಸಿದ ಪ್ರಭಾ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು... ನಿಮ್ಮ ಸೇವೆ
ನಿಜಕ್ಕೂ ಅಮೂಲ್ಯವಾಗಿತ್ತು.. ಇದಕ್ಕೆ ನಾನು ಆಭಾರಿಯಾಗಿದ್ದೇನೆ..





ಕೊನೆಯದಾಗಿ ಮೋಹನ್ ಗೆ ಒಂದು ಮಾತು
ಹೇಳಬೇಕಿದೆ.. “ಗೆಳೆಯ... ಆವತ್ತು ನೀನು ಮೂರು ತಿಂಗಳು ಇದ್ದು ಹೋಗು ಸಾಕು. ಅಂತ ಹೇಳಿದ್ದೆ..
ಎರಡು ವರ್ಷ ಇದ್ದು ನಿನ್ನ ಮಾತನ್ನು ಉಳಿಸಿದ್ದೀನಿ.. ನಿನ್ನ ಮಾತನ್ನು ಉಳಿಸಿದ ಖುಷಿ ಒಂದುಕಡೆ
ಇದೆ.. ಆದರೆ ಇನ್ನೊಂದು ಬೇಸರವೂ ಇದೆ.. ನೀನು ಹೇಳಿದಂತೆ ನಾನು ಮೂರು ತಿಂಗಳ ಒಳಗೇ ಬಿಟ್ಟು
ಹೋಗಿದ್ದರೆ ಚೆನ್ನಾಗಿರುತ್ತಿತ್ತು.. ಯಾಕೆಂದ್ರೆ ಆಗ ಸ್ನೇಹದ ಸಂಕೋಲೆಯಾಗಲೀ, ಬಾಂಧವ್ಯಗಳ
ಬಂಧನವಾಗಲೀ ಇರಲಿಲ್ಲ.. ಆದರೆ ಈಗ ಎರಡು ವರ್ಷಗಳು ಕಳೆದಿವೆ.. ಎರಡು ವರ್ಷದ ಬಿಗಿ ಬಂಧನವನ್ನು
ಬಿಟ್ಟು ಹೋಗಲು ಮನಸ್ಸು ತಳಮಳಿಸುತ್ತಿದೆ.. ಬಹುಷಃ ನಮ್ಮೆಲ್ಲರ ಸ್ನೇಹ ಪ್ರೀತಿಯ ಖುಷಿಯನ್ನು
ನೋಡಿ  ಆ ವಿಧಿಗೂ ಹೊಟ್ಟೆಕಿಚ್ಚು
ಬಂದಿರಬೇಕೇನೋ... ತನಗಿಲ್ಲದ ಖುಷಿ ನಮಗೇಕೆ ಎಂದು ನಮ್ಮನ್ನು ದುಃಖದ ಮಡುವಿನಲ್ಲಿ ನೂಕಲು ಹೊಂಚು
ಹಾಕಿ ಸಂಚು ರೂಪಿಸಿಬಿಟ್ಟಿದ್ದಾನೆ.. ಆ ವಿಧಿಯೇಕೆ ಇಷ್ಟು ಕಠೋರಮಯಿ..?? ನಮ್ಮ ಖುಷಿಯನ್ನೇಕೆ
ಕಿತ್ತುಕೊಂಡ??? ಮತ್ತೇ ಈ ಎಲ್ಲಾ ಖುಷಿಯ ಕ್ಷಣಗಳು ಸಿಗುತ್ತವೆಯೇ? ಎಲ್ಲರೂ ಒಟ್ಟಾಗಿ ಕೆಲಸ
ಮಾಡುವ ಕ್ಷಣಗಳು ಮುಂದೆ ಸಿಗುತ್ತವೆಯೇ? ಮತ್ತೆ ನಾವೆಲ್ಲರೂ ಸೇರಿ ಒಟ್ಟಿಗೆ ಪ್ರಶಾಂತ ಹೊಟೆಲ್
ಬಿರಿಯಾನಿ ತಿಂತೀವಾ..? ಈ ಎಲ್ಲಾ ಪ್ರೆಶ್ನೆಗಳು ನನ್ನ ಮನದಲ್ಲಿ ಪ್ರೆಶ್ನೆಗಳಾಗಿಯೇ
ಉಳಿದುಬಿಟ್ಟಿವೆ.. ಉತ್ತರ ಹುಡುಕುವ ಯತ್ನ ಇಂದಿಗೂ ಸಾಗುತ್ತಿದೆ.. 


 







ಇನ್ನೊಂದು ವಿಷಯ. ನಾನೊಬ್ಬನೇ ಈ
ಸಂಸ್ಥೆಯಿಂದ ನಿರ್ಗಮಿಸುತ್ತಿಲ್ಲ.. ಒಟ್ಟಿಗೇ ನಾನು, ಭಾಷಾ ಮತ್ತು ಮಹೇಂದ್ರನಾಥ್ ಮೂವರೂ
ನಿರ್ಗಮನದ ಹಾದಿ ತುಳಿದಿದ್ದೆವೆ. ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಬ್ಬ ಆಪ್ತರೊಬ್ಬರು ಸಂಸ್ಥೆಯಿಂದ
ನಿರ್ಗಮಿಸಲಿದ್ದಾರೆ. ಸ್ನೇಹ ಬಂಧನ ಕಳಚಿ ಬೀಳುತ್ತಿರುವಾಗ ಕೆಲಸ ಮಾಡಲಾದರೂ ಹೇಗೆ
ಮನಸ್ಸಾಗುತ್ತದೆ? ಸ್ನೇಹ ಸಂಕೋಲೆಗಳ ಅಲೆಯಲ್ಲಿ ಕೆಲಸದ ಹುಮ್ಮಸ್ಸು ತೇಲಿ ಬರುತ್ತಿತ್ತು.. ಆದರೀಗ
ಅದೆಲ್ಲವೂ ಶೂನ್ಯತೆಯೆಡೆಗೆ ಸಾಗುತ್ತಿದೆ..





ಕೊನೆಯದಾಗಿ ಒಂದು ಸಾಂಪ್ರದಾಯಿಕ ನುಡಿಯನ್ನು
ಹೇಳಿ ನನ್ನೀ ಬರಹಕ್ಕೆ ಮಂಗಳವನ್ನು ಹಾಡುತ್ತಿದ್ದೇನೆ.. ನನಗೆ ತಿಳಿದಿರುವಂತೆ ಪ್ರತ್ಯಕ್ಷವಾಗಿಯಾಗಲೀ ಅಥವ ಪರೋಕ್ಷವಾಗಲೀ ಇದುವರೆಗೂ ಯಾರ
ಮನಸ್ಸನ್ನು ನಾನು ನೋಯಿಸಿಲ್ಲ.. ಆದರೆ ನಮ್ಮ ಬೆನ್ನು ನಮಗೆ ಹೇಗೆ ಕಾಣುವುದಿಲ್ಲವೋ.. ಹಾಗೆಯೇ
ನಮ್ಮ ತಪ್ಪುಗಳೂ ನಮಗೆ ಕಾಣುವುದಿಲ್ಲ.. ಗೊತ್ತಿದ್ದೋ... ಗೊತ್ತಿಲ್ಲದೆಯೋ.. ಯಾರಿಗಾದರೂ, ಪ್ರತ್ಯಕ್ಷವಾಗಿ,
ಅಥವ ಪರೋಕ್ಷವಾಗಿ ಮನಸ್ಸು ನೋಯಿಸಿದರೆ ಬೇಜಾರು ಮಾಡಿಕೊಳ್ಳಬೇಡಿ ಬದಲಿಗೆ “ಇಂಥೋನೊಬ್ಬ ಇದ್ನಪ್ಪ
ಫ್ರೆಂಡು.. ಅಂತ ನೆನಪಿಸಿಕೊಳ್ಳಿ.. ಅಷ್ಟೇ ಸಾಕು.!




ಹಾ.. ಒಂದು ಮಾತು... ಇದುವರೆಗೂ ನಾನು ಹೇಳಿದ ಪ್ರತಿಯೊಂದು ಪದಗಳು ಎಲ್ಲರಲ್ಲೂ ಒಳ್ಳೆಯದ್ದನ್ನು ಹೆಕ್ಕಿ ತೆಕ್ಕೆದ ಪದಗಳು ಮಾತ್ರ.. ಆದರೆ ಕೆಟ್ಟತನವೂ ಮನುಷ್ಯನ ಅವಿಭಾಜ್ಯ ಅಂಗವಲ್ಲವೇ..? ಅದರ ಬಗ್ಗೆಯೂ ಅಂತಿಮವಾಗಿ ಕೊಂಚ ಹೇಳಲೇಬೇಕೆನಿಸುತ್ತಿದೆ.. "ನನಗೆ ಗೊತ್ತು.. ನಾನು ಈ One97 ಬಿಟ್ಟ ಮೇಲೆ ಇನ್ನೂ ಅನೇಕ ಗಾಸಿಪ್ ಗಳು ಸದ್ದಿಲ್ಲದೇ ಹರಿದಾಡಬಹುದು.. ಅದೂ ನಮ್ಮವರೇ ಇದನ್ನು ಸೃಷ್ಟಿಸಿ ತಮ್ಮ ಉಳಿವಿಗಾಗಿ ನನ್ನ ಅನುಪಸ್ಥಿತಿಯನ್ನು ಬಳಸಿಕೊಳ್ಳುವ ಸನ್ನಿವೇಷಗಳನ್ನೂ ನಾನು ತಳ್ಳಿ ಹಾಕಲಾರೆ.. ಆದರೆ ಅದೆಲ್ಲವೂ ಕೇವಲ ಗಾಸಿಪ್ ಗಳು ಮಾತ್ರವೇ ಆಗಿರಲಿವೆ.. ನೇರ ನುಡಿ, ನೇರ ನಡೆಯನ್ನು ಮೈಗೂಢಿಸಿಕೊಳ್ಳದವರಿಗೆ ನೇರವಾದ ದೃಷ್ಟಿಕೋನ ಎಲ್ಲಿಂದ ಬರುತ್ತದೆ? ದೃಷ್ಟಿ ಸರಿ ಇಲ್ಲದಿದ್ದರೂ ಪರವಾಗಿಲ್ಲ.. ಆದರೆ ದೃಷ್ಟಿಕೋನವಾದರೂ ಸರಿ ಇರಬೇಕು.. ಇದು ಬದುಕಿಗೆ ಬಹಳ ಮುಖ್ಯ. ಇಷ್ಟನ್ನು ಮಾತ್ರವೇ ನಾನು ಹೇಳಬಲ್ಲೆ.. ಆದರೆ ಆ ವ್ಯಾಘ್ರಮುಖಗಳನ್ನು ಇಲ್ಲಿ ಅನಾವರಣ ಮಾಡಲು ನನಗೆ ಮನಸ್ಸಿಲ್ಲ.. ಕೆಟ್ಟವರಲ್ಲಿಯೂ ಒಳ್ಳೆಯತನವನ್ನು ಅಗೆದು ತೆಗೆಯುವ ಬಯಕೆ ನನ್ನದು.. ಇನ್ನು ಮುಂದೆಯಾದರೂ ಸಾಧ್ಯವಾದಷ್ಟು ಅಂತಹ ಠಕ್ಕ ರೂಪದ ಕರಾಳತೆ ಕಡಿಮೆಯಾಗಲಿ ಎಂದು ಬಯಸುತ್ತೇನೆ.. ಜೊತೆಗಿದ್ದು, ಬೆನ್ನಿಗೆ ಚೂರಿ ಹಾಕಿದ ಮಹೋನ್ನತ ಹಿತಶತೃಗಳಿಗೂ ಕೂಡ ನನ್ನ ಕೊನೆಯ ಅನಂತಾನಂತ ನಮನಗಳು.. ನೀವು ಕಲಿಸಿದ್ದು ಬದುಕಿನ ಒಂದು ಹೊಸ ಪಾಠ.. ಈ ಪಾಠದ ಅನುಭವಗಳು ಮುಂದೆ ಕೂಡ ನನ್ನ ಬದುಕಿಗೆ ಮಾರ್ಗದರ್ಶನವಾಗಲಿದೆ..ಜೀವನದ ಪಾಠ ಕಲಿಸಿದವರಿಗೆ ಥ್ಯಾಂಕ್ಸ್... ಥ್ಯಾಂಕ್ಯೂ ವೆರಿ ಮಚ್..

 







ಇಂತಿ ನಿಮ್ಮವ


ನಿಮ್ಮ ಮನದಲ್ಲಿ ಹಸಿರಾಗಿ ಉಳಿದ ಹೆಸರಿನವ.


ಸವಿ ನೆನಪಿನ


ಶೇಖ್(ಸ್ಪಿಯ)ರ್


Отправить комментарий

0 Комментарии