Hot Posts

10/recent/ticker-posts

ಮಾರ್ಜಾಲ ಪ್ರೇಮ..















ಅವಳು... ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಪುಟ ಪುಟನೆ ಅನವರತವಾಗಿ ಅತ್ತಿತ್ತ ಓಡಾಡುವ
ಮನದೊಡತಿ.. ಅವನೋ.. ಸದಾ ಆರ್ಭಟಿಸಿ ಘರ್ಜಿಸುವ ಆಗಂತುಕ... ಅವಳು ಗರ್ಭಗುಡಿಯೊಳಗಿರುವ ಮೌನದೇವತೆ..
ಜಕಣಾಚಾರಿಯ ಕೆತ್ತನೆಯಲ್ಲಿ ಅರಳಿದ ಮೃದು ಶಿಲೆ.. ಅವನೋ ಭಕ್ತರೆದುರು ಅರ್ಥವಾಗದ
ಮಂತ್ರಗಳನ್ನುದುರಿಸೋ ಪೂಜಾರಿ.. ಬಯ್ಯುವನೋ.. ಪೂಜಿಸುವನೋ ಅರ್ಥವಾಗದು ಅವಳಿಗೆ.. ಅವಳ
ಮನಸಿಗೆ..!





ಅವನೋ.. ಹುರಿ ಮೀಸೆಯ ಸರದಾರ.. ತಿಳಿದಿಲ್ಲ ಅವನಿಗೆ.. ದಾನ ಧರ್ಮದ
ಉಪಕಾರ.. ದೇಹ ಬಲಿಯುವುದರೊಳಗೆ ಗೃಹಬಂಧನಕ್ಕೆ ಕಾಲಿಟ್ಟಳು.. ಮನೆಯವರ ಬಲವಂತಕ್ಕೆ... ಜಗದ ನಿಯಮದ ಕಟ್ಟಳಗೆ ತಲೆಬಾಗಿ.. ಯಾರಿಗೆ ಹೇಳಬೇಕವಳು ಕೂಗಿ..? ತನ್ನ ನೋವನ್ನು ಅರಿವವರು ಯಾರೂ ಇರಲಿಲ್ಲವಲ್ಲ..




ಶಿಲ್ಪಿಯ ಕೈಗೆ ಸಿಗಬೇಕಿದ್ದ ಶಿಲೆ.. ಕಟುಕನ ಕೈಗೆ ಸಿಕ್ಕಿತು... ಅವನದನು ಏತಕೆ ಬಳಸುವನು..? ಮಾಂಸ ಕತ್ತರಿಸಲು ಅನುವಾಗಲೆಂದು ಬುಡದಲ್ಲಿಟ್ಟ.. ಅದರ ಮೇಲೆ ಮಾಂಸವನಿಟ್ಟು ಮಚ್ಚಿನಿಂದ ಕೊಚ್ಚತೊಡಗಿದ.. ಏಟು ಬಿದ್ದಿದ್ದು ಶಿಲೆಯಾಗಬೇಕಿದ್ದ ಕಲ್ಲಿಗೆ ಹೆಚ್ಚು.. 



ನೋವನುಂಡರೂ ಬದುಕಲೇ ಬೇಕು.. ಪಾಪಿಯಾದರೂ ಪ್ರೀತಿಸಲೇಬೇಕು.. ಇದು ಅವಳಿಗೊಲಿದ ದೈವತ್ವ..! ಆದರೆ ಪಾಪಿಗೆ ತಿಳಿಯಲಿಲ್ಲ ಅವಳ ಅಂತರಾತ್ಮದ ಪ್ರೀತಿಯ ಮಹತ್ವ.. 



ಆದರೂ ಮರುಭೂಮಿಯಲ್ಲಿ ಜಲಪಾತ ಹುಡುಕುವ ತವಕ ಅವಳದು.. ಆದರೂ ಆ ಮರುಭೂಮಿ ಸುಡುವ ಬಿಸಿಲ ಬೇಗೆ ತಾಳಲಾಗದಾಕೆಗೆ.. ಅವನ ವರ್ತನೆಯಲ್ಲಿ ಪ್ರೀತಿ ಇಲ್ಲ.. ಮಾತಿನಲ್ಲಿ ಮೋಹವಿಲ್ಲ.. ಹೀಗಿರುವಾಗ ಹುಟ್ಟುದೇನು ಅವರಿಬ್ಬರ ಮಧ್ಯೆ..? ಪ್ರೀತಿಯಲ್ಲ.. ಭಯ.. 



ಅವನೆಂದರೆ ಆಕೆಗೆ ಭಯ.. ಎಲ್ಲಿ ತನ್ನ ಮೇಲೆ ಅಟ್ಟಹಾಸಗೈಯ್ಯುವನೋ.. ಹಸಿದ
ಹೆಬ್ಬುಲಿಯಂತೆ ತನ್ನ ಮೇಲೆರಗಿ, ತನ್ನ ಮೃದು ದೇಹವನ್ನು ಬೇಟೆಯಾಡಿ ಉಂಡುಬಿಡುವನೋ ಎಂಬ ಭೀತಿ..
ತನ್ನನ್ನು ತಾನು ಕಾಪಾಡಿಕೊಳ್ಳಲೇಬೇಕಾದ “ಅಬಲೆ”.. ಮನದೊಳಗೆ ನೂರಾರು ಚಿಂತೆಗಳು.. ಅಷ್ಟಿದ್ದರೂ
ಒಂದೇ ಮನೆಯಲ್ಲಿ ವಾಸಿಸುವ ಸೌಹಾರ್ದತೆಯ ಮನೋಭಾವ ಆಕೆಯ ಮನದೊಳಗೆ.. ಅದು ಆಕೆಯ ಮನದ ಇಂಗಿತವೂ
ಹೌದು.. ಅನಿವಾರ್ಯತೆಯೂ ಹೌದು..





ಮನೆಯೊಳಗಿನ ಅಮೃತವ ಸವಿಯದೇ, ಬೀದಿಯಲ್ಲಿ ಒದ್ದಾಡಿ.. ಅವರಿವರ ಜೊತೆಗೆ ಗುದ್ದಾಡಿ.. ಅಕ್ಕ ಪಕ್ಕದವರ
ಮನೆಯೊಳಗೆ ಕದ್ದು ಮುಚ್ಚಿ ಹೊಕ್ಕು, ತನ್ನ ಹಸಿವನ್ನು ತಣಿಸಿಕೊಳ್ಳುವ ಮನೋಧರ್ಮದವ ಅವನು..
ಉದಯಕಾಲದೊಳೆದ್ದು, ಅಹೋರಾತ್ರಿಯಲಿ ಬಚ್ಚಿಟ್ಟಿದ್ದನ್ನು ಕದ್ದು ಪಾನಮಾಡಿ, ಉದರದೊಳಗಿಳಿಸಿಕೊಂಡು ತನುವನ್ನು
ಬೆಚ್ಚಗಾಗಿಸಿಕೊಳ್ಳುವ ಚಟ ಅವನಿಗೆ.. ಮನೆ ಎಂಬ ಸಂಕೋಲೆಯಲ್ಲಿ... ಮನದೊಳಗಿನ ನೋವಿನ ಸಿಂಚನದಲ್ಲಿ
ಬದುಕಿನ ಕ್ರೂರತೆಯನ್ನು ಅರಗಿಸಿಕೊಂಡು ಮಂದಹಾಸವನ್ನು ತೋರ್ಪಡಿಸುವಾಕೆ ಅವಳು.. ಅವಳು ಮಾತ್ರ..





ಸಣ್ಣ ಪುಟ್ಟ ಕೀಟಲೆಗಳು ಅವರಿಬ್ಬರ ನಡುವಿನ ಪ್ರೇಮೋನ್ಮಾದತೆಗೆ
ಸಾಕ್ಷಿ.. ಹೊಡೆದರೂ... ಬಡಿದರೂ.. ಬಿಡದ ಬಂಧನವದು.. ಹಿರಿಯರು ಮಾಡಿದ ಆ ಮದುವೆಯಲ್ಲಿ ಹಿರಿಯರ ಆಶೀರ್ವಾದ ಮಾತ್ರ ಇರಲಿಲ್ಲ.. ಭಕ್ಷ ಭೋಜನದ ತರಾತುರಿಯಲ್ಲಿ ಆಶೀರ್ವಾದದ ಪದಗಳನ್ನೇ ಮರೆತುಬಿಟ್ಟಿದ್ದರೇನೋ..!




ಅವನೇನೆಂದರೂ ಅದರೊಳಗೆ ಪ್ರೇಮದ ಓಯಾಸಿಸ್ ಅನ್ನು ಹುಡುಕುವ ಹಂಬಲ ಬಿಡಲಿಲ್ಲ.. ಪಾಪಿ ಪತಿಯಲ್ಲೂ ಪ್ರೀತಿ ಹುಡುಕ ಹೊರಟಾಕೆಗೆ  ಪ್ರೀತಿಯ ಗಂಧವೂ ಸೋಕಲಿಲ್ಲ.,. ಪರ ಮನೆಗೆ
ಹೋಗಿ, ಪಾನಮತ್ತನಾಗಿ ಬಂದ ಅವನನ್ನು ಬಾಗಿಲ ಬಳಿಯೇ ನಿಂತು ದುರ್ಬಲ ಕಣ್ಣುಗಳಿಂದ ತೀಕ್ಷ್ಣವಾಗಿ
ನೋಡಿ, ಪ್ರೀತಿಯಿಂದ ಅವನನ್ನು ಆಹ್ವಾನಿಸುವಳು.. ಆದರೆ ಅವನನ್ನು ಮುಟ್ಟಲೊಲ್ಲಳು.... ಭಯ-ಆತಂಕ ಹತ್ತಿರವಿದ್ದಾಗ ಮಾತ್ರ.. ದೂರವಿದ್ದರೆ ಮತ್ತದೇ ಪ್ರೀತಿಯ ಮತ್ತು.. ಕುಡುಕನಾದರೂ ಆಕೆಗವನೇ ಸ್ವತ್ತು..







ಮಾರ್ಜಾಲ ನಡಿಗೆಯಲ್ಲಿ ಸದ್ದಿಲ್ಲದೇ ಒಳಗೆ ನುಗ್ಗಿದ ಆಗಂತುಕನಿಗೆ..
ಅವಳನ್ನು ಕಂಡೊಡನೆ ಪೌರುಷದ ಮತ್ತೇರಿತ್ತು..  ಅಚ್ಚರಿಯಿರಲಿಲ್ಲ.. ಅದು ಸಹಜ ಕೂಡ.. ಬಯಕೆ
ತಣಿಸಿಕೊಳ್ಳುವ ತವಕ ಅವನದು.. ಆಕೆ ಅಷ್ಟೇ ಸಂಭಾವಿತೆ.. ಚತುರೆ.. ಪರರ ಆಕ್ರಮಣದ
ಪರಾಕ್ರಮಕ್ಕೆ ಆಹುತಿಯಾಗದಂತೆ ಪಾರಾಗುವ
ಚಿನ್ಮಯಿ. ಅವನ ಕಳ್ಳ ಹೆಜ್ಜೆಗಳನ್ನು ಗ್ರಹಿಸುವ ಚಾಣಾಕ್ಷೆ.. ತನ್ನ ಮೇಲಣ ಆಕ್ರಮಣವನ್ನು ಅರಿತು
ಪುಷ್ಪಕ ವಿಮಾನದ ವೇಗದಲ್ಲಿ ಚಲಿಸಿ ತನ್ನ ಕೋಣೆ ಸೇರಿದಳಂದು..


ಅವನ ಹಸಿವಿನ ತವಕ ತಣಿಸಲು ಇರುವ ಏಕೈಕ ನೇರ ಮಾರ್ಗ.. ಆಕೆಯನ್ನು ಬೇಟೆಯಾಡುವುದು..
ರಕ್ತದ ಮಡುವಿನಲ್ಲಿ ಕೆಡವಿ, ಮನತುಂಬಿ ದೇಹವನ್ನು ಉಂಡುಬಿಡುವುದು ಮಾತ್ರ ಅವನ ಧ್ಯೇಯ.. ಜೀವನದ
ಬಗ್ಗೆಯಾಗಲಿ, ಇನ್ನೊಂದು ಜೀವದ ಬಗ್ಗೆಯಾಗಲಿ ಅವನಿಗೆ ಕನಿಕರವಿಲ್ಲ.. ಧಮನಿ
ಧಮನಿಯೊಳಗೆ ಬೆರೆತ ಪ್ರೇಮಕ್ಕೆ ಅರ್ಥವನ್ನೇ ಪರಿಗಣಿಸದ ಕ್ರೂರಿಯಾತ.. ಸಂಸಾರಿಯಾತ.... ಬೆಂದರೂ ಬೇಯದಿದ್ದರು ಹಸಿ ಮಾಂಸವನ್ನೇ ಜಗಿದು ತಿನ್ನಬೇಕೆಂಬ ಹಂಬಲ..


ಅವನ ಪಾಲಿಗೆ ಆಕೆ ಕೇವಲ
ತನ್ನ ಹಸಿವು ನೀಗಿಸುವ ಮಾಂಸದ ಮುದ್ದೆ.. 


 


ಮನೆಯೊಂದು.. ಮೂರು ಬಾಗಿಲು.. ಎತ್ತಲಿಂದ ಇಣುಕಿದರೂ ಅವನದೇ
ದರ್ಶನ... ಒಂದೆ ಮನೆಯೊಳಗೆ ಗುಪ್ತಗಾಮಿನಿಯಂತೆ ಇರಲು ಹೇಗೆ ಸಾಧ್ಯ..? ದಿನಕಳೆದಂತೆ ಪ್ರೀತಿ
ಕಳೆಗುಂದಿದರೂ, ವಿಧಿಯಿಲ್ಲದೇ ಜೊತೆಯಾಗಿ ಬದುಕಬೇಕಾದ ಅನಿರ್ವಾಯತೆ ಆ ಹೆಣ್ಣಲ್ಲಿ.. ಯವ್ವನ
ತುಂಬಿದ್ದ ಆ ಕಣ್ಣಲ್ಲಿ.. ಯಾರೊಂದಿಗೂ ಅವಳ ಮನದ ದುಃಖ ಹಂಚಿಕೊಳ್ಳಲಾಗದು.. ಹೀಗಿರುವಾಗ ಮಾಂಸದ ಮುದ್ದೆ ಎಂದು
ಪರಿಗಣಿಸುವ ಅವನೊಂದಿಗೆ ಸುಃಖವನ್ನೂ ಹಂಚಿಕೊಳ್ಳಲಾಗದು.. ಅಲ್ಲವೇ..?? 




ತನ್ನ ಹೆಣ್ತನದ ಬಯಕೆಯನ್ನು ಅರಿತು
ನಡೆವವನಿಗಾಗಿ ಆಕೆ ಅಂದು ಕಾದುಕುಳಿತಳು.. ಆದರೆ ಬಂದವನು ಮಾತ್ರ ಪಾನಮತ್ತ ಪತಿರಾಯ..! ವಿಧಿ ವಿಪರ್ಯಾಸವೋ ಏನೋ, ಮದುವೆಯ ಮನೆಯಿಂದ ಮಗಳು ಮಾವನ ಮನೆ ಸೇರಿದಳು.. ಕನ್ಯಾದಾನ ಮಾಡಿದ ಅಪ್ಪ ಮಸಣದ ಹಾದಿಯನ್ನು ತುಳಿದಿದ್ದ.. ಅತ್ತ ಅಪ್ಪನೂ
ಇಲ್ಲ.. ಹಡೆದ ಅಮ್ಮನಂತೂ ಎದೆ ಹಾಲನ್ನೂ ಕುಡಿಸಲಿಲ್ಲ.. ಎಲ್ಲವೂ ಹಣೆಬರಹದ ಕುರುಹು.. ಆಕೆಯ ಬದುಕೇ ಇತಿಹಾಸಕ್ಕೆ ತಿರುಗಿ
ಹೋಗಿತ್ತು..





ಮನೆಯ ಬಾಗಿಲೇ ಆಕೆಗೆ ಲಕ್ಷ್ಮಣ ರೇಖೆ.. ಬಾಗಿಲ ಹೊರಗೆ ಇಣುಕಿ ನೋಡಿದರೂ,
ಶಿರಚ್ಛೇದನ ಮಾಡುವ ಅಧಮನವನು.. ಅಂತರಂಗದ ಆಂತರ್ಯವನ್ನು ಬಿಚ್ಚಿಡಲಾಗದೇ ಗರ್ಭದೊಳಗೊಂದಿಷ್ಟು
ಪ್ರೀತಿಯನ್ನು ಹೊತ್ತು ನಡೆಯುತಿಹಳು ಕೆಟ್ಟ ಧೈರ್ಯದಲಿ..  ಆದರೆ ಹಸಿದ ನಾಯಿಗೆ ಅನ್ನದ ರುಚಿಯೇನು... ಹೇಸಿಗೆಯ ರುಚಿಯೇನು..?
ಎಂಬಂತೆ ಆಕೆಯ ಎದೆಯೊಳಗಿನ ಕಡಲಾಳದ ಪ್ರೀತಿಯನ್ನು ಅವನು ಅರಿಯಲಿಲ್ಲ.. ಕುರುಡನಿಗೆ ಮಾರ್ಗ
ಯಾವುದೋ... ಮಸಣ ಯಾವುದೋ..!!  ಹಾಗೆ ಅವಳಿಗೂ... ಮನೆಯಾವುದೋ... ಬಂದೀಖಾನೆ ಯಾವುದೋ..!! ದಿನ ಹುಟ್ಟುವ
ಸೂರ್ಯ ಕಿಟಕಿಯಲ್ಲೇ ಹುಟ್ಟಿ ಕಿಟಕಿಯಲ್ಲೇ ಮುಳುಗುವಷ್ಟೇ ಆಕೆಯ ಪ್ರಪಂಚ..





ಪತಿರಾಯನ ಪಾಪಗಳಿಗೆ ಲೆಕ್ಕವಿಲ್ಲ.. ಈಕೆಯ ದುಗುಡಕ್ಕೆ ಪಾರವೇ ಇಲ್ಲ..
ದುಗುಡದೊಳಗೂ ಧರ್ಮವ ತೋರಿದಳಾಕೆ.. ಪ್ರೀತಿಯ ಮಾಮರವ ನೆಟ್ಟು ಅಧಮನಿಂದ ಪನ್ನೀರ ಬಯಸಿದಳು.. ಪಾಪ ಆಕೆಗೇನು
ಗೊತ್ತು.. ಅವನ ಆಂತರ್ಯ..? 


ಕೂಡಿಸಿದ ಬಂಧುಗಳ ಮಾತಿಗೆ ಕಟ್ಟು ಬಿದ್ದು, ಎಲ್ಲವನ್ನೂ ಅನುಭವಿಸಲೇಬಾಕಾಗಿರುದು
ಆಕೆಗೆ ಅನಿವಾರ್ಯ... ಯಾವ ಸೋಗು ಇಲ್ಲದೇ ಯೋಗಿಯೊಂದಿಗೆ ಕೂಡಬೇಕೆಂದವಳು ಈಗ ಕೇವಲ ಭೋಗಿಯಾಗಿಬಿಟ್ಟಳು..
ಭೋಗದ ವಸ್ತುವಾಗಿಬಿಟ್ಟಳು..





ಆಕೆಯೇ ತುಟಿಯೊಡೆದು ಹೇಳಿಹಳು.. ತನ್ನ ದುಗುಡವನ್ನ.. ಸ್ಥಿತಿಯನ್ನ.. ತನ್ನ
ಜೀವನದ ವಿಕೃತಿಯನ್ನ..


“ಓ ಆತ್ಮೀಯರೇ.. ಏನೆಂದು ಹೇಳಲಿ... ನನ್ನ ವೇದನೆ.. ಕಿಂಚಿತ್ತೂ ದಯೆ
ತೋರಲಿಲ್ಲ ನನ್ನವನು.. ಮತ್ತು ನನ್ನವರು... ಯಾರೊಂದಿಗೆ ಹೇಳಿಕೊಳ್ಳಲಿ ಈ ನನ್ನ ನಿವೇದನೆ.. 


ಮನೆಯ ಮಾಲೀಕನಿಗೆ ನನ್ನ ಪತಿರಾಯನೆಂದರೆ ಔದಾರ್ಯ.. ನಾನೆಂದರೆ ಸಿಟ್ಟು.. ಕೊಲ್ಲಬೇಕೆಂಬ ಹುಚ್ಚು.. ಮನೆಯ ಮಾಲೀಕನ ಹೆಜ್ಜೆ ಸದ್ದಿಗೆ,
ನನ್ನ ಗೆಜ್ಜೆಯ ಸದ್ದು ಕೂಡ ಅಡಗಿ ಹೋಗುತಿತ್ತು.. ಮಾಲೀಕ ಗೃಹದೊಳಗೆ ಪ್ರವೇಶ ಮಾಡುವಷ್ಟರೊಳಗೆ
ನನ್ನ ಮತ್ತು ನನ್ನವನ ಪ್ರೇಮ ನಿನಾದ ನಿಲ್ಲಬೇಕಿತ್ತು.. ಗೂಡೊಳಗೆ ಹೊಕ್ಕು ಬಚ್ಚಿಟ್ಟುಕೊಳ್ಳಬೇಕಿತ್ತು..  ಸದ್ದು ಮಾಡಿದರೆ ನಾನೇ
ಬಲಿಪಶುವಾಗಿಹೋಗುತ್ತಿದ್ದೆ.. ಅವರು ಕೊಲ್ಲುವುದು ನನ್ನಂಥ ಹೆಣ್ಣನ್ನೇ ಹೊರತು, ಮೀಸೆ ಬಿಟ್ಟು ರಸ್ತೆಯಲ್ಲಿ
ತನ್ನ ಗಂಡಸ್ಥನವನ್ನು ಪ್ರದರ್ಶಿಸುವ ಪುರುಷನನ್ನಲ್ಲ.. 





ನನ್ನವನು ಹೇಗೆ ಇದ್ದರೂ ನನಗವನೇ ತೇಜೋವರ್ಧನ..! ಕುಣಿದಾಡುವ ಮನದ
ಕಾಮನೆಗಳನ್ನು ನನ್ನ ಪ್ರೇಮ ಕೀಚಕನೊಡನೇ ನಿವೇದನೆಯನ್ನು ಮಾಡಿಕೊಳ್ಳಬೇಕು ಅಲ್ಲವೇ.. ಅದೂ ಅಲ್ಲದೇ, ಅವನ ಹುಚ್ಚು ಆರ್ಭಟದ ಧಾಳಿಯನ್ನು ಎಷ್ಟು ದಿನ
ತಪ್ಪಿಸಿಕೊಳ್ಳಬಲ್ಲೇ...? ಅದಕ್ಕೆ
ನಾನು ಅವನಲ್ಲೇ
ನನ್ನೆದೆಯ
ಸ್ವರ್ಗವನು ಹುಡುಕುತ್ತ ಹೋದೆ..





ತಪ್ಪಿಸಿಕೊಂಡಷ್ಟು ಮದವೇರಿ ಬರುತ್ತಿದ್ದ... ಹೊಸ ಹೊಸ ಸಂಚು ಹೂಡಿ
ಬಲೆ ಹೆಣೆಯುತ್ತಿದ್ದ.. ಖದೀಮನ ಸಂಚಿಗೆ ನಾನಂದು ಸಿಲುಕಿಕೊಂಡೆ.. ಅದೊಂದು ದಿನ ಸ್ವಚ್ಛಂದವಾಗಿ
ಹಾರಾಡಬೇಕೆಂದು ಮನ ಬಯಸಿತು.. ನೋವಿನ ಹೊಡೆತಕ್ಕೆ... ಬಾಡಿದ ಜೀವಕೆ... ಸ್ವತಂತ್ರದ ದಾಹ
ಹೆಚ್ಚಾಯಿತು.. ಹೊರಗೆ ಯಾರೂ ಇರಲಿಲ್ಲ... ಕೋಣೆಯ ಬಾಗಿಲನ್ನು ತೆರೆದು ಹೊರ ಬಂದೆ..
ಸ್ವತಂತ್ರ ಅಂದ್ರೆ ಇದೇನಾ..? ಅಬ್ಬಾ..!! ಅದೆಷ್ಟು ವರ್ಷವಾಯಿತು ನಾನಿದನು ಅನುಭವಿಸಿ...?
ಆನಂದಿಸಿ..? ತನ್ಮಯಳಾಗಿ ತನುವನ್ನು ತೆರೆದಿಟ್ಟು ನಗತೊಡಗಿದೆ ಆ ಸ್ವತಂತ್ರದ ಮೋಹಕ್ಕೆ...
ತಿಳಿಯಲಿಲ್ಲ ಆಘಂತುಕನ ಅಂತರಾತ್ಮ... ಬಾಗಿಲ ಹಿಂದೆ ಅವಿತು ಕುಳಿತಿದ್ದ..





ಅವನೆಲ್ಲೋ ಹೊರ ಹೋಗಿದ್ದನೆಂಬ ಧೈರ್ಯನನ್ನೊಳಿತ್ತು.. ಅಷ್ಟು
ದಿನಗಳಿಂದ ಹಸಿದು ಕುಳಿತಿದ್ದ ಅವನು ಧಡಕ್ಕನೇ ಎನ್ನ ಮೇಲೆರಗಿದ.. ತಡೆಯಲಾಗಲಿಲ್ಲ ಆ ನೋವು..
ಸಹಿಸಲಾಗಲಿಲ್ಲ ಅವನ ಅಸಹ್ಯ ವರ್ತನೆ.. ಅರಿತೋ.. ಅರಿಯದೋ.. ನನ್ನ ನಾನೆ ಅವನಿಗೊಪ್ಪಿಸಿಕೊಂಡೆ.. ವಿಕೃತವಾಗಿ....





ಅಚ್ಚ ಹಸುರಿನ ನಡುವೆ ರೆಕ್ಕೆ ಬಿಚ್ಚಿ ಹಾರುತ್ತಿದ್ದ
ಗುಬ್ಬಚ್ಚಿಯನ್ನು ಹದ್ದು ಬಂದು ಹಿಡಿದೊಯ್ದಂತೆ... ಕಾಡಿನ ನಡುವಿನ ಹಸಿರೊಳಗೆ ಕೃಷ್ಣ ಮೃಗ ಹುಲ್ಲಿನ
ಸಿಹಿಯನ್ನು ಕಣ್ಮುಚ್ಚಿ ಆನಂದಿಸುವಾಗ.. ಹಸಿದ ಹೆಬ್ಬುಲಿ ಅಟ್ಟಹಾಸಗೈಯ್ಯುವಂತೆ... ನನ್ನ ಮೇಲೆ
ಎರಗಿದ.. ಮನಸು ಕೂಡ ಮೃದು... ಮೈ ಕೂಡ ಮೆದು... ಬಿಡಿಸಿಕೊಳ್ಳುವ ಸಾಮರ್ಥ್ಯ ಎನಗಿಲ್ಲ... ಆ ದೇವನೂ
ಅದನೆನಗೆ ನೀಡಲಿಲ್ಲ.. ನೀಡಿದ್ದು ಒಂದೇ.. ಗಂಡಸರನ್ನು ಕೆರಳಿಸೋ ಈ ಹೆಣ್ತನ.. ಅವನ ಆ ಕ್ರೂರ
ಧಾಳಿಗೆ ಕುಸಿದು ನೆಲಕ್ಕಚ್ಚಿದೆ.. ಅವನಿಗೋ ಎನ್ನ ಮಾಂಸದ ದಾಹ.. ನನಗೋ ಜೀವ ಉಳಿಸಿಕೊಳ್ಳುವ ಮೋಹ.. 








ಕೊನೆಗೆ ಗೆದ್ದಿದ್ದು,  ಅವನ ದಾಹ... ಅವನ ಹಸಿವು.. ಅವನ ಕ್ರೂರತೆ... ಅವನ ಆ
ಕ್ರೂರ ನಡತೆಗೆ ನೆಲಕ್ಕಚ್ಚಿ ಬಿದ್ದರೂ ಅವನಿಗೆ ಕರುಣೆ ಬಾರಲಿಲ್ಲ.. “ಕುರುಡು ಕಾಂಚಾಣ ಕುಣಿಯುತಲಿತ್ತು..
ಕಾಲಿಗೆ ಬಿದ್ದವರ ತುಳಿಯುತಲಿತ್ತು” ಎಂಬಂತೆ ನನ್ನ ಮೇಲೆರೆಗಿ ತನ್ನ ಕ್ರೌರ್ಯವನ್ನು ಇನ್ನಷ್ಟು
ವಿಕೃತಕ್ಕೆ ತಿರುಗಿಸಿದ.. ಅವನ ಕ್ರೂರತೆಗೆ ದೇಹವೇ ನಲುಗಿ ಹೋಗಿತ್ತು.. ಬಿಸಿ ರಕ್ತ ಛಲ್ಲನೇ ಹೊರ
ಚಿಮ್ಮಿತ್ತು.. ಆದರೆ ಅದ್ಯಾವುದು ಅವನಿಗೆ ಬೇಕಿರಲಿಲ್ಲ... ದೇಹ ಬಗೆದು ಹೊರ ಚಿಮ್ಮುತ್ತಿದ್ದ ರಕ್ತವನ್ನು
ಪರಿಗಣಿಸದೇ... ನನ್ನ ರೋದನಕ್ಕೂ ಕಿವಿಗೊಡದೇ.. ಇಂಚಿಂಚು ನನ್ನನ್ನು ಸಾವಿನ ಮನೆಯೊಳಗೆ
ಕೊಂಡೊಯ್ದ.. ಕಣ್ಣು ಮಂಜಾಯ್ತು.. ನೋವು ಹೆಚ್ಚಾಯ್ತು.. ರಕ್ತ ಪೂರ್ತಿ ಭೂದೇವಿಯ ಮಡಿಲ ಸೇರಿ
ಆಕೆಯ ದಾಹವನ್ನೂ ತೀರಿಸಿತ್ತು.. ಆ ಬೇಟೆಗಾರನ ಸಂಚಿಗೆ ನಾನು ಬಲಿಯಾಗಿ ಹೋಗಿದ್ದೆ.. 





ಒಂದೇ ಮನೆಯಲ್ಲಿದ್ದರೂ... ಪ್ರೀತಿಯಿಂದ ಅವನನ್ನು ಬದಲಾಯಿಸಲು
ಸಾಧ್ಯವಾಗಲಿಲ್ಲ.. ಅವನ ಚಟಗಳು.. ನನ್ನನ್ನು ಚಟ್ಟದ ಮೇಲೆ ಮಲಗಿಸಿತು.. ಅವನನ್ನು ಬದಲಾಯಿಸಲು ನಾನು
ಪಟ್ಟ ಅನವರತ ಶ್ರಮ... ಕೊನೆಯವರೆಗೂ ಸಾರ್ಥಕತೆ ಪಡೆಯಲಿಲ್ಲ.. ಬದಲಾವಣೆ ಕಾಣಲೇ ಇಲ್ಲ.. ಆದರೆ ಒಂದು
ವಿಧದಲ್ಲಿ ಕೊನೆಗೂ ಬದಲಾವಣೆಯನ್ನು ನಾ ಕಂಡೆ.. ಅವನಲ್ಲಲ್ಲ.. ನನ್ನಲ್ಲಿ.. ಕ್ರೂರಿಯನ್ನು
ಬದಲಾಯಿಸಲು ಹೋಗಿ ನಾನೇ ಕ್ರೂರವಾಗಿ ಅಂತ್ಯಗೊಂಡೆ...!!





ಅರೆ ಬರೆ ಮೈಯ್ಯುಂಡ ನನ್ನ ರಾಜ.. ನನ್ನನ್ನು ಹಾಗೆ ರಕ್ತದ ಮಡುವಿನಲ್ಲಿ ಬಿಟ್ಟು ಹೋದ.. ದೇಹ ಕೊಳೆಯಲಾರಂಭಿಸಿತು.. ಮನೆಯೊಡೆಯ ಸಿಕ್ಕ ಸಿಕ್ಕ ಜಾಗದಲ್ಲಿ ಏನು ವಾಸನೆ ಎಂದು ಹುಡುಕತೊಡಗಿದ.. ಅದೊಂದು ಬಿಲದೊಳಗಿಂದ ವಾಸನೆ ಘಪ್ಪನೆ ಮೂಗಿಗೊಡೆಯಿತು.. ಇಣುಕಿ ನೋಡಿದ.. ನಾನು ಸತ್ತು ಬಿದ್ದಿದ್ದೆ.. ಕಟ್ಟಿಗೆಯಿಂದ ನನ್ನನ್ನು ಹೊರಗೆಳೆದ.. ನನ್ನ ಬಾಲವನ್ನು ಹಿಡಿದು ಮೇಲೆತ್ತಿ ಕಸದ ಬುಟ್ಟಿಗೆ ಹಾಕಿದ... ಆದರೆ ನನ್ನನ್ನು ವಿಕೃತವಾಗಿ... ನಿರಂಕುಶವಾಗಿ ಕೊಂದ ಆ ಪಾಪಿ ಪತಿರಾಯನಿಗೆ ಹಾಲನ್ನು ಕೊಟ್ಟ ಮನೆ ಮಾಲೀಕ... ಅದು ನನ್ನನ್ನು ಕೊಂದಿದ್ದಕ್ಕೆ ಮಾಲೀಕ ನೀಡಿದ ಬಹುಮಾನ... 

ಹಾಲು ಕುಡಿದು ಅಲ್ಲೇ ನಿಧಾನಕ್ಕೆ ನಿದ್ದೆಗೆ ಜಾರಿದ ಹಂತಕ... ಮಾರನೆಯ ದಿನ ಕಾರ್ಪೋರೇಷನ್ ಗಾಡಿಯೊಳಗೆ ಬಿದ್ದ ನನ್ನ ದೇಹ.. ಮಂಡೂರಿನ ಕಸದೊಳಗೆ ಸೇರಿತು.. ಅಗ್ನಿ ದೇವನ ಸ್ಪರ್ಶದ ಪರಿಣಾಮ ಸುಟ್ಟು ಬೂದಿಯಾದೆ... ನನ್ನ ಹೆಸರೂ ಇಲ್ಲ... ನನ್ನ ಪ್ರೀತಿಯೂ ಉಳಿಯಲಿಲ್ಲ.. ಅರಿಯದ ಜನರ ಮಧ್ಯೆ.. ನನ್ನ ಪರಿಶುದ್ಧವಾದ ಪ್ರೀತಿ ಅಳಿದು ಹೋಯ್ತು... 



ಜೊತೆಗಿದ್ದ ಮಾತ್ರಕ್ಕೆ ಪ್ರೀತಿ ಇರುತ್ತೆ ಅಂತ ಹೇಳೋಕೆ ಆಗಲ್ಲ... ನಾವಿಬ್ಬರೂ ಇಬ್ಬರೂ ಒಂದೇ ಮನೆಯಲ್ಲಿದ್ದೆವು... ಅಲ್ಪ ಸ್ವಲ್ಪ ಕೀಟಲೆ.. ಮೌನ
ರಾಗದ ಸುತ್ತೋಲೆ... ನಮ್ಮನ್ನು ಪ್ರೇಮದಿಂದ ಬಂದಿಸಿತ್ತು.. ಒಪ್ಪುವೆ ನಾ.. ಕ್ರೂರಿ ಮಾರ್ಜಾಲ
ರಾಜನಿಗೂ... ಹೆದರಿ ಓಡುವ ನನ್ನಂಥ ಮೂಷಿಕ ರಾಣಿಗೂ ಪ್ರೇಮಾಂಕುರ ಸಲ್ಲದೆಂದು.. ಏನು ಮಾಡಲಿ... ಪ್ರೀತಿ ಕುರುಡು...
ಎಲ್ಲಿ ಹುಟ್ಟುವುದೋ... ಹೇಗೆ ಹುಟ್ಟುವುದೋ.. ಯಾಕೆ ಹುಟ್ಟುವುದೋ.. ಸ್ವತಃ ಪ್ರೀತಿಗೂ
ಗೊತ್ತಿಲ್ಲ.. ಇನ್ನು ಪ್ರೀತಿ ಮಾಡಿದವರಿಗೆ ಹೇಗೆ ಅರ್ಥವಾದೀತು..
ಅವ ನನ್ನನ್ನು ಬಗೆದು ತಿನ್ನುವ ಭಕ್ಷಕನೆಂದು ಕಂಡರೂ ನನ್ನಲ್ಲಿ ಪ್ರೇಮಾಂಕುರವಾದದ್ದು ನನ್ನ
ತಪ್ಪೇ..?? ಇದಕ್ಕೆ ಉತ್ತರವಿಲ್ಲ.. ಕೇವಲ ಪ್ರೆಶ್ನೆ ಮಾತ್ರ.. 





ಆದರೆ ಒಂದಂತೂ ಸತ್ಯ.. ಪ್ರೀತಿ ಪ್ರೇಮದ ಗಂಧವೇ ತಿಳಿಯದ ನನ್ನವನು
ನನ್ನನ್ನೇ ಬಗೆದು ತಿಂದು ತನ್ನ ಹಸಿವು ನೀಗಿಸಿಕೊಂಡ.. ಕೊಂದಿದ್ದು ನನ್ನವನಲ್ಲ.. ಮಾರ್ಜಾಲ
ರಾಜನೂ ಅಲ್ಲ.. ನನ್ನ ಪ್ರೀತಿ.. ನನ್ನ ಪ್ರೇಮ.. ನನ್ನ ಮನದಿಂಗಿತ.. ನನ್ನ ಪ್ರೇಮದಾಹ..
















ವಯಸ್ಸಿನ ದಾಹ ಎಲ್ಲರನ್ನೂ ಪ್ರೇಮದ ಮೋಹಕ್ಕೆ ದೂಡುವುದು ಸಹಜ.. ನಿಮ್ಮ
ಪ್ರೇಮ ನಿವೇದನೆಗೆ ಮೊದಲು ಒಮ್ಮೆ ಯೋಚಿಸಿ... ಅವನು ಅಥವ ಅವಳು ನಿಜವಾಗಿಯೂ ನಿಮ್ಮವಳೆ.. ಅಥವ
ನಿಮ್ಮವನೇ ಎಂದು..... ಭಾವನೆಗಳಿಗೆ ಬೆಲೆ ಕೊಡದ.. ಪ್ರೇಮಕ್ಕೆ  ಸ್ಪಂದಿಸದ ಸಂಗಾತಿಯೊಂದಿಗಿನ ಬದುಕು ನನ್ನ(ಇಲಿ) ಮತ್ತು ಮಾರ್ಜಾಲದೊಂದಿಗಿನ ಪ್ರೇಮದಂತಾಗುವುದು.. ಮರ್ಜಾಲ ಪ್ರೇಮಕ್ಕೆ ಬಲಿಯಾದ ಪ್ರೇಯಸಿ ಮೂಷಿಕರಾಣಿಯ ಮನದಾಳದ ಮಾತಿದು.. ನನ್ನಲ್ಲಿ ನಿಜ ಪ್ರೀತಿ
ಇರಬಹುದು.. ಆದರೆ ಅದನವನು ಎಂದಿಗೂ ಅರಿಯಲಿಲ್ಲ.. ಅವನಿಗೆ ಆ ಪರಿಶುದ್ಧ ಪ್ರೀತಿ ಅರ್ಥವಾಗಲೂ ಇಲ್ಲ.. ಬದುಕಿನ ಕೊನೆಯವರೆಗೂ...








ಇಂತಿ
ನಿಮ್ಮ
ಮೂಷಿಕ ರಾಣಿ..










Отправить комментарий

0 Комментарии