Hot Posts

10/recent/ticker-posts

ಮಗಳು ಸೂತ್ರಧಾರಿ – ತಾಯಿ ಪಾತ್ರಧಾರಿ..!










ಎಲ್ಲಾ ಬಂಧು-ಬಾಂಧವರೂ ಅಲ್ಲಿ ನೆರೆದಿದ್ದರು.. ಮನೆಯ ಮಾಳಿಗೆಯ ಮೇಲೆ ಟೆಂಟು... ಮನೆಯ
ಒಳಗಡೆ ರಾರಾಜಿಸುತ್ತಿದ್ದ ಕರೆಂಟು... ಇನ್ನೊಂದೆಡೆ ಹಬ್ಬದ ಅಡುಗೆಗಾಗಿ ಕೆಲವರು ತರಕಾರಿಗಳನ್ನು
ಕತ್ತರಿಸುತ್ತಿದ್ದರು.. ಸೌದೆ ಒಲೆಯ ಎದುರು ಗಂಟೆಗಟ್ಟಲೇ ಕೂತು ಚಪಾತಿ ಮಾಡುತ್ತಿದ್ದವರ ಮುಖವೆಲ್ಲಾ
ಬೆವರಿನಿಂದ ತೋಯ್ದು ಹೋಗಿತ್ತು…. ಸಂಭ್ರಮದ ಮನೆಯ ಎದುರಲ್ಲೊಂದು ಅಚ್ಚ ಹಸುರಿನ  ಬೇವಿನ ಮರ.. ಆ ಮರದಡಿಯಲ್ಲಿ ಕೆಲ ಜನರು ಗುಂಪಾಗಿ ನಿಂತಿದ್ದರು..
ಅಲ್ಲಿ
ಒಂದು ಹೆಣ್ಣಿನ ಆರ್ತ್ರನಾದನ ಕೇಳಿಬರುತಿತ್ತು.. ಮನದ ದುಗುಡವನ್ನು
ಬಚ್ಚಿಡಲಾಗದೇ ಕಣ್ಣೀರ
ಬಿಂದುಗಳ ಮೂಲಕ ತನ್ನ ನೋವನ್ನು ಹೊರ ಹಾಕುತ್ತಿದ್ದಳಾಕೆ.. ಹಸುವಿನ
ನೋವಿಗೆ ಕರುಗಳೂ ಕೂಡ
ಕೈಜೋಡಿಸಿದಂತೆ, ಆಕೆಯ ಇಬ್ಬರು ಮಕ್ಕಳು ಕೂಡ ತಾಯಿಯ ಕಣ್ಣೀರಿಗೆ
ಪ್ರತಿಯಾಗಿ
ಮೌನಭಾಷೆಯ ಮೊರೆ ಹೋಗಿದ್ದರು.. ಅಳುವಿನ ಆರ್ಭಟವಿದ್ದರೂ, ಅಲ್ಲಿ ನೀರವ
ಮೌನ ಕವಿದಿತ್ತು.. ಅಲ್ಲಿದ್ದ  ಸಂಬಂಧಿಕರು
ನಿಷ್ಟೂರವಾದಿಗಳಂತೆ ವರ್ತಿಸುತ್ತಿದ್ದರು.. ದೂರದಿಂದ ನೋಡುತ್ತಿರುವವರ ಮನವೇ ಮಿಡಿಯುವಂಥ
ದೃಶ್ಯ ಅಲ್ಲಿ
ಏರ್ಪಟ್ಟಿತ್ತು.. ಆಕೆಯ ಕಣ್ಣೀರನ್ನು ಒರೆಸುವ ಕನಿಷ್ಟ ಪ್ರಯತ್ನವೂ
ಅಲ್ಲಿ ನೆರೆದಿದ್ದ ಬಂಧು
ಬಾಂಧವರಿಂದ ನಡೆಯಲಿಲ್ಲ.. ಅದೇನೆಂದು ತಿಳಿಯುವ ಕುತೂಹಲದಿಂದಲೋ ಏನೋ...
ನನಗೆ ತಿಳಿಯದಂತೆ
ನನ್ನ ಪಾದಗಳು ಅತ್ತಕಡೆ ಹೆಜ್ಜೆ ಹಾಕಿದವು..


 


          ಹತ್ತಿರ ಹೋದಂತೆ ಆಕೆಯ ಅಸ್ಪಷ್ಟ ಮಾತುಗಳು
ನಿಧಾನವಾಗಿ ನನ್ನ ಕಿವಿಗೆ ಬೀಳುತ್ತಿದ್ದವು.. ತನ್ನ ಬಂಧುಬಾಂಧವರು ತನ್ನನ್ನು ದೂರ ಮಾಡಿ ಸಂಭ್ರಮಾಚರಣೆ
ಮಾಡುತ್ತಿದ್ದಾರೆ ಎಂಬುದು ಆಕೆಯ ದುಃಖ
..! ಅಬ್ಬಾ.. ನನಗೆ ನಿಜಕ್ಕೂ ಅಚ್ಚರಿಯಾಯಿತು.. ಮದುವೆ,
ಮತ್ತಿತರ ಕಾರ್ಯಕ್ರಮಗಳಿಗೆ ಕರೆದರೂ ಹೋಗದ ಜನರಿದ್ದಾರೆ.. ಆದರೆ ಬಂಧುಗಳು ಒಂದು ಚಿಕ್ಕ
ಸಮಾರಂಭಕ್ಕೆ ತನ್ನನ್ನು ಆಹ್ವಾನಿಸಿಲ್ಲ ಎಂದು ಈ ಪರಿಯಾಗಿ ಗೋಳಾಡುವವರೂ ಇದ್ದಾರಾ..?? ಆಕೆಯನ್ನು
ಕಂಡು ನಿಜಕ್ಕೂ ನನಗೆ ಅಚ್ಚರಿಯಾಗಿತ್ತು.. ಬಂಧುಗಳೆಂದರೆ ಆಕೆಗೆ ಅದೆಷ್ಟು ಪ್ರೀತಿ... ಆಪ್ತತೆ...
ಅಲ್ವಾ..!





ಆಗ ನನಗೆ ಮತ್ತೊಂದು ಮಾತು ಸ್ಪಷ್ಟವಾಯಿತು.. ಆಕೆಯ ರೋದನೆಗೆ ಕಾರಣ ’ಕೇವಲ
ಕಾರ್ಯಕ್ರಮದ ಆಹ್ವಾನ ನೀಡಿಲ್ಲದಿರುವುದಕ್ಕಲ್ಲ... ಬಂಧು ಬಾಂಧವರು ತನ್ನನ್ನು ದೂರ ಮಾಡಿದ್ದಾರೆ
ಎಂದು
.. ಬಂಧುಗಳೆದುರು ತಾಯಿಯನ್ನು ನೆನೆದು ಮತ್ತೆ ಅಳತೊಡಗಿದಳು.. ಎದೆಹಾಲುಣಿಸಿ,.. ಬದುಕನ್ನೇ
ಬಸಿದು ತನ್ನನ್ನು ಬೆಳೆಸಿ, ಒಂದೊಳ್ಳೇ ಜೀವನವನ್ನು ನೀಡಿದ್ದ ಆ ಹೆತ್ತ ಕರುಳಿನ ನೆನಪು
ಬಂಧುಗಳನ್ನು ಕಂಡೊಡನೆ ಉಕ್ಕಿಬಂತು..





ಆಕೆಯ ಮಾತುಗಳಲ್ಲಿ ದುಗುಡ ಹೆಚ್ಚಿತ್ತು.. ನೋವಿನೊಂದಿಗೆ ಹೊರಬರುತ್ತಿದ್ದ,
ಕರುಣಾಜನಕ ಪದಸಾಲುಗಳು ನನ್ನ ಕರ್ಣದೊಳಗೆ ನುಸುಳುತ್ತಿದ್ದವು
.. “ನನ್ನ ತಾಯಿಯ ಮುಖವನ್ನು ಕೊನೆಯ
ಬಾರಿಗೆ ನೋಡುವ ಅವಕಾಶ ನನಗೆ ಸಿಗಲಿಲ್ಲ.. ನನ್ನ ತಾಯಿ ಸತ್ತರೂ ಬಂಧುಬಾಂಧವರು ನನಗೆ ತಿಳಿಸಲಿಲ್ಲ”
ಎಂದು ರೋದಿಸುತ್ತಿದ್ದಳು ಆ ನೀರೆ.. ಈ ಮಾತನ್ನು ಕೇಳಿದರೆ ಯಾರಿಗೆತಾನೆ ದುಃಖ ಉಮ್ಮಳಿಸಿ ಬಾರದಿರಲು
ಸಾಧ್ಯ..?





ಹೆತ್ತ ತಾಯಿಯ ಸಾವಿನ ಸುದ್ದಿಯನ್ನು ಸ್ವಂತ ಮಗಳಿಗೇ ತಿಳಿಸಲಿಲ್ಲವೇ ಈ
ಬಂಧುಗಳು..?? ಛೆ.. ಇದೇಂಥಾ ನೀಚ ಕೃತ್ಯ..? ಬಂಧುಗಳೆಂದರೆ ನಿಜಕ್ಕೂ ಬೇಸರವಾಯಿತು... ಕಣ್ಣೀರನ್ನು
ಒರೆಸಿಕೊಂಡು ಎದುರಿಗಿದ್ದ ತನ್ನ ದೂರದ ಸಂಬಂಧಿಯೊಬ್ಬರನ್ನು ಕುರಿತು ಹೇಳಿದಳು “ಅಣ್ಣಾ.. ನನ್ನ
ತಾಯಿಯ ಮುಖವನ್ನು ಸಾಯುವ ಕ್ಷಣದಲ್ಲೂ ನನಗೆ ತೋರಿಸಲಿಲ್ಲ.. ಆದರೆ ನನಗೆ ಬೇಸರವಿಲ್ಲ..
ನೀವೆಲ್ಲರೂ ಮುಂದೆ ನಿಂತು ನನ್ನ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದೀರಿ.. ಆದರೆ ನಿಮ್ಮಲ್ಲಿ
ನನ್ನದೊಂದು ಕೋರಿಕೆ. ನನ್ನನ್ನು ನಿಮ್ಮ ಬಂಧುತ್ವದ ಸೆರೆಯಿಂದ ದೂರ ಮಾಡಬೇಡಿ. ನಿಮ್ಮೊಂದಿಗಿನ
ಬಂಧನ ನನಗೆ ಶ್ರೀರಕ್ಷೆ ಅಣ್ಣ”
ಎಂದಳು.. ಆದರೆ ಅಣ್ಣನ ಹೃದಯವಾಗಲಿ, ಅಲ್ಲಿ ನೆರೆದಿದ್ದ ಆಕೆಯ ದೊಡ್ಡಮ್ಮನ
ಹೃದಯವಾಗಲೀ ಕರಗಲಿಲ್ಲ... ತಾಯಿ ಈಗ ಬದುಕಿಲ್ಲ.. ಕನಿಷ್ಟಪಕ್ಷ ಬಂಧುಗಳೊಂದಿಗಾದರೂ
ಬಂಧುತ್ವವನ್ನು ಮುಂದುವರಿಸಬೇಕು ಅನ್ನೋ ಹಂಬಲ ಆಕೆಯದ್ದಾಗಿತ್ತು
.. ಸಂಬಂಧಿಕರ ಮೇಲಿನ ಆಕೆಯ
ಪ್ರೀತಿ.. ವಿಶ್ವಾಸ.. ನಿಜಕ್ಕೂ ಬೇರೆ ಯಾರಿಗೂ ಇರಲಿಕ್ಕಿಲ್ಲವೇನೋ ಎಂಬಂತಿತ್ತು ಅಲ್ಲಿನ ದೃಶ್ಯ





ಅಷ್ಟಕ್ಕೂ ಆಕೆ ಯಾರು ಅನ್ನೋದನ್ನು ಹೇಳೋದಕ್ಕೆ ಮೊದಲು ಒಂದು ಸಣ್ಣ
ಫ್ಲಾಶ್ ಬ್ಯಾಕ್ ಅನ್ನ ಹೇಳಲೇ ಬೇಕು.


ಆಕೆ ಚಿಕ್ಕಂದಿನಿಂದಲೂ ಬಂಧುಬಾಂಧವರೊಂದಿಗೆ ಪ್ರೀತಿ ವಿಶ್ವಾಸವನ್ನು
ಹಂಚಿಕೊಂಡು ಬೆಳೆದವಳು.. ಒಬ್ಬಳು ತಂಗಿ.. ಒಬ್ಬನೇ ತಮ್ಮ... ಪ್ರೀತಿಯ ತಾಯಿ.. ಇಷ್ಟೇ ಕುಟುಂಬ..
ತಾಯಿ ಬಡತನದ ಬೇಗೆಯಲ್ಲಿ ಬೆಂದರೂ ಮಕ್ಕಳಿಗೆ ಅದರ ಬಿಸಿ ತಾಗದಂತೆ ನೋಡಿಕೊಂಡಳು.. ತನ್ನ ಬದುಕಿಗೆ
ಸರಿ ಹೊಂದಲಿಲ್ಲವೆಂಬ ಕಾರಣಕ್ಕೆ ಪತಿರಾಯನೊಂದಿಗಿನ ಸಂಬಂಧವನ್ನು ಕಡಿದುಕೊಂಡು, ಮಕ್ಕಳ
ಭವಿಷ್ಯಕ್ಕಾಗಿ ನಗರ ಜೀವನದತ್ತ ನುಸುಳಿಬಂದಳು ಆ ಮಾತೆ.. ತನ್ನದೇ ಪುಟ್ಟ ಗೂಡನ್ನು ಕಟ್ಟಿಕೊಂಡ
ತಾಯಿ, ಹಿರಿಯ ಮಗಳಿಗೆ ಸೂಕ್ತ ವರನನ್ನು ಹುಡುಕಿ ಮದುವೆಯೂ ಮಾಡಿದರು.. ಕಿರಿಯ ಮಗಳಿಗೂ ಕನ್ಯಾದಾನ
ಮಾಡಿ, ತನ್ನ ಜವಾಬ್ದಾರಿಯನ್ನು ಯಾವುದೇ ಅಡೆತಡೆಗಳಿಲ್ಲದಂತೆ ಪೂರ್ಣಗೊಳಿಸಿದಳು.. ಕೊನೆಗೆ ಉಳಿದದ್ದು
ಒಬ್ಬನೇ ಗಂಡುಮಗ.. ಅವನು ಕಾರು ಚಾಲಕನಾಗಿ ತನ್ನ ಬದುಕು ಕಟ್ಟಿಕೊಂಡ.. ಜೀವನ ಸುಧಾರಿತು ಎಂಬ
ಸಂತೃಪ್ತಿ ಆಕೆಯ ಮೊಗದಲ್ಲಿ ಕಾಣುವಷ್ಟರಲ್ಲಿ ಸಣ್ಣದೊಂದು ಬಿರುಗಾಳಿ ಎದ್ದಿತು.. 





ಮೊದಲ ಮಗಳ ಪತಿರಾಯನಿಗೆ ಅದೇನೋ ಹಣದ ಮೋಹ..!! ಹೆಂಡತಿಯನ್ನ ಗೋಳಾಡಿಸಿ,
ಹೊಡೆದು ಬಡಿದು ಆಕೆಯನ್ನು ರಾತ್ರೋ ರಾತ್ರಿ ಹೊರದೂಡುತ್ತಿದ್ದ.. ಬಂಧು-ಬಾಂಧವರು ಹೋಗಿ ಸಮಾಧಾನ
ಮಾಡಿ, ಆಕೆಯ ಸಂಸಾರವನ್ನು ಒಂದುಗೂಡಿಸಿದ ಅದೆಷ್ಟೋ ಪ್ರಕರಣಗಳು ಇಂದಿಗೂ ನಿದರ್ಶನಗಳಾಗಿ ಉಳಿದಿವೆ..
ಹಿರಿಯರ ಫಲವೋ.. ತಾಯಿಯ ಆಶಯವೋ.. ಸ್ವಲ್ಪ ದಿನಗಳಲ್ಲೇ ಹಾಲುಜೇನಿನಂತಾಯ್ತು ಅವರ ಜೀವನ.. ಅಷ್ಟರಲ್ಲಿ
ಮತ್ತೊಂದು ಸುನಾಮಿ ಅಲೆ ಎರಗಿ ಬಂತು.. ಕಿರಿಯ ಮಗಳು ಹಳ್ಳಿಯಲ್ಲಿ ಜೀವನ ನಡೆಸಲಾಗದೆ... ಅತ್ತೆಯೊಂದಿಗೆ
ಹೊಂದಿಕೊಳ್ಳಲಾಗದೇ.. ತವರುಮನೆಗೆ ವಾಪಾಸಾದಳು.. ಎಷ್ಟೇ ಪ್ರಯತ್ನ ಪಟ್ಟರೂ ಒಡೆದ ಹೋದ ಬದುಕನ್ನು
ಒಂದುಗೂಡಿಸಲಾಗಲಿಲ್ಲ
.. ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ವಿಚ್ಛೇದನದ ಅರ್ಜಿ ಕೋರ್ಟಿನ
ಕಟಕಟೆಯಲ್ಲಿ ನಿಂತು, ಮದುವೆ ಬಂಧನದ ಮಧ್ಯೆ ದೊಡ್ಡ ಗೋಡೆಯಾಗಿ ಬೆಳೆಯಿತು.. ವಿಧಿಯ ವಿಚಿತ್ರಕ್ಕೆ
ಆಕೆತಾನೆ ಏನುಮಾಡಿಯಾಳು..? ಬೇರೆ ದಾರಿ “ನಿನ್ನಿಷ್ಟ ಬಂದಲ್ಲಿರು” ಎಂದು ಸುಮ್ಮನಾದಳು..





ಮಗಳು.. ಮಗ... ತಾಯಿ.... ಮೂವರೂ ಸ್ವತಂತ್ರ ಬದುಕಿನತ್ತ ಹೆಜ್ಜೆ ಹಾಕಲಾರಂಭಿಸಿದರು.. “ಮಗ
ಬೇರೆಯವರ ಕಾರು ಓಡಿಸಿ ಎಷ್ಟುತಾನೇ ದುಡಿದಾನು..? ಬರುವ ಕಾಸಿನಲ್ಲಿ ಒಂದು ಹೊತ್ತಿನ ಹೊಟ್ಟೆ
ತುಂಬಿಸಿಕೊಳ್ಳುವುದೂ ಕಷ್ಟಸಾಧ್ಯವಾಯಿತು”
. ಕೊನೆಗೆ ಅವರಿಗೆ ಹೊಳೆದದ್ದು, ಇದ್ದ ಜಮೀನು ಮಾರಿ
ಸ್ವಂತ ಕಾರನ್ನು ಖರೀದಿಸೋದು..





ನಿರ್ಧಾರಗಳು ಕೇವಲ ನಿರ್ಧಾರಗಳಾಗಲಿಲ್ಲ.. ಕೆಲ ದಿನಗಳಲ್ಲೇ ಮೊದಲ ಮಗಳ
ಪತಿ ಅಂದ್ರೆ ಹಿರಿಯ ಅಳಿಯನ ಸಹಾಯದಿಂದ ಕಾರನ್ನು ಕಂತಿನ ಮೇಲೆ ಖರೀದಿಸಿದರು.. ಲೋನ್ ಕೊಡೋದಕ್ಕೆ
ಭಾವನೇ ಶೂರಿಟಿ ಹಾಕಿದ್ದ.. ಅಳಿಯ ಹಣವಂತ.. ಖಾಸಗೀ ಸಂಸ್ಥೆಯಾದರೂ ಉತ್ತಮ ಹುದ್ದೆಯಲ್ಲಿದ್ದವ.. ಆತನ
ಮಧ್ಯಸ್ಥಿಕೆಯಲ್ಲಿ ಬದುಕು ಕಟ್ಟಿಕೊಂಡರು ಈ ಮೂವರು.. ಭಾವನ ಹೆಸರಿನಲ್ಲಿ ಕಾರು ಖರೀದಿಸಿದ್ದರೂ; ಈ
ಹುಡುಗ ಹಗಲು ರಾತ್ರಿ ಎನ್ನದೇ ದುಡಿದು ಕಾರಿನ ಕಂತು ಕಟ್ಟುತ್ತಿದ್ದ.. ಪ್ರತಿ ತಿಂಗಳು ಸಾವಿರಾರು
ರೂಪಾಯಿ ಗಳಿಸುತ್ತಿದ್ದ.. 





ತಾಮ್ರದ ಕಾಸು ತಾಯಿ ಮಕ್ಕಳನ್ನು ಅಗಲಿಸುತ್ತದೆ ಎಂಬ ಮಾತಿದೆ..
ಹೀಗಿರುವಾಗ ಅಕ್ಕ ಭಾವನಿಗೆ ಹಣದ ಮೋಹ ಹೆಚ್ಚಾಗಿದ್ದರಲ್ಲಿ ಅಚ್ಚರಿಯೇನಿಲ್ಲ.. ಕಾರು ಇಷ್ಟೋಂದು
ಹಣವನ್ನ ಗಳಿಕೆ ಮಾಡುತ್ತಿದೆ ಎಂದಾದರೆ, ತಾನೇಕೆ ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಾರದು ಎಂಬ
ಮನೋಧೋರಣೆ ಭಾವನಲ್ಲಿ ಮೂಡಿತು.. ಅಕ್ಕರೆಯ ಅಕ್ಕನೇ ಅದಕ್ಕೆ ತಂತ್ರ ರೂಪಿಸಿದಳು.. ಅದೊಂದು ದಿನ
ರಾತ್ರೋ ರಾತ್ರಿ ನಿಲ್ಲಿಸಿದ್ದ ಕಾರನ್ನು ಕದ್ದೊಯ್ದುಬಿಟ್ಟರು.. ಪೋಲೀಸರಿಗೆ ಕಂಪ್ಲೇಂಟು
ಕೊಟ್ಟರೂ ಎಳ್ಳಷ್ಟು ಪ್ರಯೋಜನವಾಗಲಿಲ್ಲ.. “ನನ್ನ ಕಾರು ನಾನು ತಗೊಂಡ್ ಹೋಗಿದ್ದೀನಿ..
ಅದ್ರಲ್ಲೇನಿದೆ..? ನೋಡಿ ಈ ದಾಖಲೆ ಪತ್ರಗಳನ್ನು”
ಅಂತ ಹೇಳಿ ಪ್ರಕರಣಕ್ಕೆ ತಿಲಾಂಜಲಿ ಇಟ್ಟ
ಕಿಲಾಡಿ ಭಾವ.. ಎಂಥಾ ಮೋಸವಿದು..?





ನಂಬಿಕೆ ಎಂಬ ಕನ್ನಡಿಯನ್ನು ಚೂರು ಚೂರು ಮಾಡಿದ್ದು ಮಾತ್ರವಲ್ಲ, ದುಡಿಯುವ
ಕೈಯನ್ನೇ ಕತ್ತರಿಸಿಬಿಟ್ಟರು ಒಡ ಹುಟ್ಟಿದವರು
.. ಬದುಕಿಗೆ ಆಧಾರವಾಗಿದ್ದ ಕಾರನ್ನು ಕಿತ್ತು
ನಿರ್ಗತಿಕರನ್ನಾಗಿ ಮಾಡಿದ್ದಕ್ಕೆ, ತಮ್ಮನಿಗೆ ಕೋಪ ಬಂದಿದ್ದರಲ್ಲಿ ಅಚ್ಚರಿಯೇನೂ ಇಲ್ಲ ಅಲ್ವಾ..?
ಅದೊಂದು ದಿನ ತನ್ನ ಬದುಕಿನ ಘೋರತೆಯನ್ನು ನೆನೆಸಿಕೊಂಡು ತನ್ನ ಭಾವನಿಗೆ ಫೋನಾಯಿಸಿ ಏನೋ ಎರಡು
ಮಾತು ಅಂದಿದ್ದಾನೆ
ಅಷ್ಟೆ.. ತಕ್ಷಣವೇ ಅಕ್ಕ ಅವನಿಗೆ ಫೋನಾಯಿಸಿ ಸಿಕ್ಕ ಸಿಕ್ಕಂಗೆ
ಬಯ್ಯತೊಡಗಿದಳು.. ಅಷ್ಟೇ ಆಗಿದ್ದರೆ ಮಾತು ಮುಗಿಯುತ್ತಿತ್ತೇನೋ.. ಹಣದ ಅಹಂಭಾವನೆ
ತಾರಕಕ್ಕೇರಿತ್ತು.. ಆಕೆಯ ಆಲೋಚನೆಗಾಗಲೀ... ಮಾತಿಗಾಗಲೀ ಎಲ್ಲೆಯೇ ಇರಲಿಲ್ಲ.. ಹಣವನ್ನು ಪುಡಾರಿ
ಹುಡುಗರಿಗೆ ಚೆಲ್ಲಿ ಸ್ವಂತ ತಮ್ಮನನ್ನೇ ಕೊಲ್ಲುವಂತೆ ಜನರನ್ನು ಛೂಬಿಟ್ಟದ್ದು ನಿಜಕ್ಕೂ ಆಕೆಯ ರೌದ್ರತೆಯನ್ನು
ಎತ್ತಿ ತೋರಿಸುತ್ತಿತ್ತು.. 





ಡ್ರೈವರ್ ಆಗಿ ಬೇರೆಯವರ ಕಾರನ್ನು ಓಡಿಸುತ್ತಿದ್ದ ಆ ಹುಡುಗನಿಗೆ ಬೆಳ್ಳಂಬೆಳಿಗ್ಗೆಯೇ
ಹಂತಕರ ಜಾಲ ಬೆನ್ನುಹತ್ತಿ ಬಂದಿತ್ತು.. ಸಂಜೆಯಾದರೂ ಬಲೆಗೆ ಬೀಳಲಿಲ್ಲ ಆ ಹುಡುಗ.. ಆದರೆ
ಬೆಳಿಗ್ಗೆಯಿಂದ ತನ್ನನ್ನು ಯಾರೋ ಫಾಲೋ ಮಾಡುತ್ತಿದ್ದಾರೆ ಎಂಬ ಅಂಶ ಮಾತ್ರ ಆತನ ಅರಿವಿಗೆ
ಬಂದಿತ್ತು. ಇದು ತನ್ನ ಅಕ್ಕನದ್ದೇ ಕಿತಾಪತಿ ಎಂದು ತಿಳಿಯಲು ತಡವಾಗಲಿಲ್ಲ..





ತಕ್ಷಣವೇ ತನ್ನ ಬಂಧು ಬಾಂಧವರಿಗೆ ಅಳುತ್ತಾ ಫೋನಾಯಿಸಿದ.. ತಾಯಿಗೂ
ವಿಷಯ ಮುಟ್ಟಿಸಿದ.. “ನಾನಿನ್ನು ಸಾವಿನ ಅಂಚಿನಲ್ಲಿದ್ದೇನೆ.. ಮನೆಗೆ ಬರುತ್ತೇನೋ ಇಲ್ಲವೋ
ಗೊತ್ತಿಲ್ಲ.
. ಎಂದು ಜೀವ ಭಯದಿಂದ ಅಳತೊಡಗಿದ. ವಿಧಿಯ ಬೆಲೆಯಲ್ಲಿ ಬಲಿಪಶುವಾಗಿ ಸಿಲುಕಿದ್ದ ಆ ಹುಡುಗನಿಗೆ
ಸಾವಿನ ಹಾದಿ ಎದುರಲ್ಲೇ ಕಾಣಿಸುತ್ತಿತ್ತು... ತಕ್ಷಣವೇ ಕೆಲ ಆಪ್ತ ಬಂಧುಗಳು ಅವನಿರುವ ಸ್ಥಳಕ್ಕೆ
ಹೋಗಿ ಅವನ ಬೆನ್ನಿಗೆ ನಿಂತರು.. ಜನರ ದಟ್ಟಣೆಯನ್ನು ಕಂಡ ಪುಡಾರಿಗಳು ಅಲ್ಲಿಂದ ಕಾಲ್ಕಿತ್ತರು.. ಬಂಧುಗಳೆಲ್ಲರೂ
ಆಕೆಗೆ ಫೋನಾಯಿಸಿ ಹಿಗ್ಗಾ ಮುಗ್ಗ ಬಯ್ದರು.. ಹಿಂದೊಮ್ಮೆ ಆಕೆ ಸಂಸಾರವನ್ನು ಒಂದು ಗೂಡಿಸಲು
ಶ್ರಮಿಸಿದ್ದ ಅದೇ ಬಂಧುಗಳು ಈಗ ಆಕೆಯೆದುರೇ ತಿರುಗಿಬಿದ್ದಿದ್ದರು.. ತನ್ನ ಸಂಸಾರವನ್ನು ಈ
ಮಟ್ಟಕ್ಕೆ ತಂದವರ ಬಗ್ಗೆ ಕಿಂಚಿತ್ತೂ ಗೌರವವಿಲ್ಲದೇ ಹಣದ ಮದದಿಂದ ಹುಚ್ಚಾಪಟ್ಟೇ ಮಾತುಗಳು
ಮಂತ್ರಗಳಂತೆ ಹೊರಬಂದವು. “ನನ್ನ ತಮ್ಮ ನನ್ನ ಗಂಡನಿಗೆ ಲೇ ಎಂದು ಮಾತನಾಡಿದ್ದಾನೆ. ಅವನನ್ನು
ಸುಮ್ಮನೆ ಬಿಡಬೇಕಾ..? ಎಂದು ಫೋನಿನಲ್ಲೇ ಘರ್ಜಿಸ ತೊಡಗಿದಳು.
ತಮ್ಮನ ಬದುಕನ್ನೇ ಕಿತ್ತುಕೊಂಡ
ಆಕೆಗೆ ಗಂಡನಿಗೆ ಬಯ್ದ ಬೈಗುಳವೇ ಹೆಚ್ಚಾಗಿತ್ತು.. ಒಡಹುಟ್ಟಿದ ತಮ್ಮ... ಹೆತ್ತ ತಾಯಿ.. ಸಂಸಾರ
ಉಳಿಸಿದ ಬಂಧುಗಳು ಆಕೆಗೆ ಆಗ ಲೆಕ್ಕವೇ ಇರಲಿಲ್ಲ..





ಆದರೆ ಹೆತ್ತ ತಾಯಿಗೆ ಮಗಳ ಮೇಲಿನ ಕೋಪ ಅಲ್ಪ ದಿನದವರೆಗೆ ಮಾತ್ರ
ಇತ್ತು.. ಮಗಳು ಏನೇ ತಪ್ಪು ಮಾಡಿದ್ದರು ಕರುಳುಬಳ್ಳಿಯ ಸಂಕೋಲೆ ಕಡಿಯುತ್ತದೆಯೇ..? ಚಿಕ್ಕ ಮಗಳು
ಮತ್ತು ಮಗ ಇಲ್ಲದ ಸಮಯದಲ್ಲಿ ದೊಡ್ಡ ಮಗಳ ಮನೆಗೆ ಹೋಗಿ ಎಳ್ಳು.. ಬೇಳೆಯನ್ನು ಅವರಿಗೆ ಕೊಟ್ಟು
ಬರಲು ಎರಡು ಮೂರು ಬಾರಿ ಹೋಗಿದ್ದಳು ಎಂದರೆ ಇದಕ್ಕಿಂತ ಉದಾಹರಣೆ ಇನ್ನೇನು ಬೇಕು ಹೇಳಿ.. ಆದರೆ
ಆಕೆಗೆ ಅಲ್ಲಿಯೂ ಅವಮಾನಗಳ ಸುರಿಮಳೆ ಬಿಟ್ಟರೆ ಬೇರೇನೂ ಸ್ವಾಗತಿಸಲಿಲ್ಲ. 





ದೊಡ್ಡ ಮಗಳ ವರ್ತನೆ.. ಮೋಸ... ಚಿಕ್ಕ ಮಗಳ ಬದುಕು ಹಾಗೂ ಮಗನ ಮುಂದಿನ
ಬದುಕು ಹೇಗೆ ಅನ್ನೋ ಚಿಂತೆ ಆಕೆಯ ಆಯಸ್ಸನ್ನು ತಿನ್ನಲಾರಂಭಿಸಿತು.. ತಾಯಿ ಹಾಸಿಗೆ ಹಿಡಿದಳು.. ದೊಡ್ಡ
ಮಗಳಂತೂ ಐಶಾರಾಮಿ ಬದುಕಿನಲ್ಲಿ ವಿಹರಿಸುತ್ತಿದ್ದಾಳೆ. ಆದರೆ ಉಳಿದಿಬ್ಬರ ಬದುಕಿನ ಗತಿ ಏನು ಎಂಬುದೇ
ಆ ಹೆತ್ತ ಕರುಳಿಗೆ ಚಿಂತೆಯಾಯಿತು. ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಆಸ್ಪತ್ರೆ ಹಿಡಿದಳು ಆ
ಹೆತ್ತ ತಾಯಿ.. 





ಇಷ್ಟೆಲ್ಲಾ ಆದರೂ ಮೊದಲ ಮಗಳ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ..
ಕರುಳು ನನ್ನದೇ.. ಕರುಳ ಬಳ್ಳಿಯೂ ನನ್ನದೆ ಎಂಬ ಭಾವನೆ ಆ ಹೆತ್ತಮ್ಮನಲ್ಲಿತ್ತು.. “ಕೊನೆಯದಾಗಿ
ನಾನು ನನ್ನ ಮೊದಲ ಮಗಳನ್ನು ನೋಡಬೇಕು ದಯವಿಟ್ಟು ಕರೀರಿ”
ಅಂತ ಅಲ್ಲಿದ್ದ ಸಂಬಂದಿಯೊಬ್ಬನಿಗೆ
ಹೇಳಿತ್ತು ಆ ಹಿರಿಯ ಜೀವ.. ಆಸ್ಪತ್ರೆಯ ಬೆಡ್ಡನಲ್ಲಿ ಬ್ರೆಡ್ ತಿನ್ನಲೂ ಸಾಧ್ಯವಾಗದ
ಸ್ಥಿತಿಯಲ್ಲಿ ಮಲಗಿದ್ದರೂ ತಾನು ಜೀವ ಕೊಟ್ಟ ಮಾಂಸದ ಮುದ್ದೆಯನ್ನೊಮ್ಮೆ ನೋಡಬೇಕೆಂಬ ತವಕ ಆಕೆಯದ್ದು..
ಕೊನೆ ಆಸೆಯನ್ನು ಈಡೇರಿಸೋಣ ಎಂದು ಬಂಧುಗಳು ಮೊದಲ ಮಗಳಿಗೆ ಕರೆ ಮಾಡಿ “ನಿನ್ನ ತಾಯಿ ಸಾವಿನ
ಅಂಚಿನಲ್ಲಿದ್ದಾರೆ.. ಒಮ್ಮೆ ಬಂದು ಹೋಗಮ್ಮ”
ಅಂತ ಹೇಳಿದರು. ಆದರೆ ಆಕೆ ಹೇಳಿದ ಮಾತೇನು
ಗೊತ್ತಾ..?? “ನೀವು ಸುಳ್ ಹೇಳ್ತಾ ಇದ್ದೀರ.. ನಮ್ ಅಮ್ಮನಿಗೇನಾಗಿದೆ ಧಾಡಿ.. ದಿನಕ್ ಮೂರ್
ಹೊತ್ತು ತಿನ್ಕೊಂಡು ಗಡತ್ತಾಗಿದ್ದಾರೆ. ನೀವೆಲ್ಲಾ ನನ್ನನ್ನು ನಿಮ್ ಹತ್ರ ಕರೆಸ್ಕೋಬೇಕು ಅಂತ ಐಡ್ಯಾ
ಮಾಡಿದ್ದೀರಿ.. ಅದಿಕ್ಕೆ ಹೀಗ್ ಹೇಳ್ತಿದ್ದೀರಿ.. ನಾನ್ ಬರಲ್ಲ”
ಅಂತ ಹೇಳಿ ಫೋನ್ ಇಟ್ಟಳು..





ಒಬ್ಬರ ಹಿಂದೆ ಒಬ್ಬರು ಸಂಬಂಧಿಗಳು ಆಕೆಗೆ ಕರೆಮಾಡಿ ವಾಸ್ತವೀಕತೆಯನ್ನು
ಬಿಚ್ಚಿಟ್ಟರು.. ಆಗ ಆಕೆ ಹೇಳಿದ್ದು “ಸಾಯುವ ಸ್ಥಿತಿಯಲ್ಲಿದ್ದರೆ ನಾನ್ ಬಂದು ಏನ್ ಮಾಡಲಿ..??
ನಾನೇನು ಡಾಕ್ಟರಾ..?? ಅಕಸ್ಮಾತ್ ಸತ್ರೆ ಮಣ್ಣಲ್ಲಿ ಹಾಕಿ ಮುಚ್ಚಿಬಿಡಿ.. ನಾನೇನೂ ಮಾಡೋಕ್ ಆಗಲ್ಲ”
ಅಂತ ಕಠೋರವಾಗಿ ಹೇಳಿಬಿಟ್ಟಳು..





ತನಗೆ ಜೀವ ಕೊಟ್ಟ ಜೀವ, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದುದನ್ನೂ
ಪರಿಗಣಿಸದೇ ಅಮಾನುಷವಾಗಿ ಮಾತಾಡಿದ್ದಳು ಆ ಮದವೇರಿದ ಮಗಳು.. ಫೋನಿನಲ್ಲಿನ ಆಕೆಯ ಆರ್ಭಟಕ್ಕೆ
ಇತ್ತ ಆಸ್ಪತ್ರೆಯಲ್ಲಿದ್ದ ತಾಯಿ ಬೆಚ್ಚಿಬಿದ್ದಳು.. ಉಸಿರಿನ ವೇಗ ಹೆಚ್ಚತೊಡಗಿತು.. ಬಾಯಿಯಿಂದ
ರಕ್ತ ಹರಿದುಬರಲಾರಂಭಿಸಿತು.. ನಾಗೇಂದ್ರ ಎಂಬ ಹುಡುಗ ಒಂದು ಕೈಯಲ್ಲಿ ಆ ತಾಯಿಯ ಬಾಯಿಂದ
ಬರುತ್ತಿದ್ದ ರಕ್ತವನ್ನು ಒತ್ತಿ ಹಿಡಿದು ಇನ್ನೊಂದು ಕೈಯಲ್ಲಿ ಫೋನ್ ಹಿಡಿದು ಜೋರಾಗಿ ಕೂಗಿದ “ಈಗ
ಬಂದರೆ ಕೊನೆ ಪಕ್ಷ ನಿಮ್ಮ ತಾಯಿಯ ಮುಖವನ್ನಾದರೂ ನೋಡಬಹುದು ಅವರು ಬದುಕೋದಿಲ್ಲ”
ಎಂದು ಹೇಳಿ
ಫೋನ್ ಕಟ್ ಮಾಡಿದ.. ಡಾಕ್ಟರನ್ನು ಕೂಗಿ ಕರೆದ.. ಬದುಕಿನ ಬೇಸರತೆಗೆ ಬೇಸತ್ತ ತಾಯಿ ಆ ವಿಧಿಗೆ
ಶರಣಾಗಿದ್ದಳು..  ವೈದ್ಯರು ಬರುವಷ್ಟರಲ್ಲಿ  ರಕ್ತದಿಂದ ಮುಖ ಮುಚ್ಚಿ ಹೋಗಿತ್ತು.. ದೇಹದೊಳಗಿನ ಆತ್ಮ
ದೇಹವನ್ನೇ ತ್ಯಜಿಸಿ ಹೋಗಿತ್ತು.. 





ಹೆತ್ತ ತಾಯಿಯ ಕೊನೆಯ ಆಸೆಯನ್ನೂ ಈಡೇರಿಸಲಿಲ್ಲ ಆ ನತದೃಷ್ಟ ಮಗಳು.. ತಾಯಿ
ಸತ್ತು ಅದೆಷ್ಟು ದಿನಗಳಾಯಿತೋ.. ಮಣ್ಣು ಮಾಡಿದವರೇ ಸಾವಿನ ನೋವನನ್ನು ಮರೆಯುವ ಸಮಯದಲ್ಲಿ ಆ
ಕ್ರೂರ ಮಗಳು ಬಂಧುಗಳೆದುರು ಪ್ರತ್ಯಕ್ಷವಾದಳು.. ಬಂಧುಗಳೊಬ್ಬರ ಜವಳಿ (ಮಕ್ಕಳ ಕೂದಲನ್ನು
ದೇವರಿಗೆ ಕೊಡುವ ಆಚರಣೆ) ಸಂಭ್ರಮದಲ್ಲಿ ಅಪರೂಪ ಎನ್ನುವಂತೆ ಪ್ರತ್ಯಕ್ಷಳಾದಳು.. ಬಂಧು ಬಾಂಧವರೆದುರು
ಆಕೆ ಅತ್ತು, ಕರೆದು, ಗೋಗರೆದಳು.. “ನನ್ನನ್ನು ಫಂಕ್ಷನ್ ಗೆ ಕರೆದಿದ್ರೆ ನಾನು ಬರ್ತಾ
ಇರಲಿಲ್ಲವಾ.? ನನ್ನನ್ನು ದೂರ ಮಾಡಿಬಿಟ್ರಾ..?”
ಅಂತ ತನ್ನ ನೋವನ್ನು ದುಃಖದಿಂದಲೇ ಹೊರ
ಚೆಲ್ಲಿದಳಾಕೆ.. 





ದೂರದ ಸಂಬಂಧಿಯ ಸಣ್ಣ ಸಂಭ್ರಮಕ್ಕೆ ಆಹ್ವಾನವೀಯಲಿಲ್ಲ ಎಂಬುದಕ್ಕೆ
ಇಷ್ಟೋಂದು ದುಃಖಿತಳಾದ ಆಕೆಗೆ, ಹೆತ್ತ ತಾಯಿಯ ಸಾವಿಗಿಂತ ಈ ಸಣ್ಣ ಸಂಭ್ರಮದ ಕ್ಷಣವೇ ಹೆಚ್ಚಾಗಿ
ಹೋಯಿತೇ..? ತಾಯಿ ಸಾವಿನಂಚಿನಲ್ಲಿದ್ದಾಳೆ ಕೊನೆ ಪಕ್ಷ ಬಂದು ಮುಖ ತೋರಿಸಿ ಹೋಗು.. ಇದು ನಿನ್ನ
ತಾಯಿಯ ಕೊನೆ ಆಸೆ ಎಂದು ಬಂಧುಬಾಂಧವರೆಲ್ಲಾ ಆಕೆಯನ್ನು ಕರೆದಾಗ “ಸಾಯುತ್ತಿದ್ದರೆ ನಾನೇನು
ಮಾಡಲಿ.. ಸಾಯುವವರನ್ನು ಬದುಕಿಸಲು ನಾನೇನು ಡಾಕ್ಟರಾ..? ಸತ್ತರೆ ಮಣ್ಣು ಮಾಡಿ” ಎಂದು
ಹೇಳಿದವಳಿಗೆ ಬಂಧುಗಳ ನೆನಪೇಕೆ..? ಅವರ ಸಂಭ್ರಮದ ಗೊಡವೆಯೇಕೆ..?







ನಮ್ಮ ಚಿಕ್ಕಬಳ್ಳಾಪುರದ ಪ್ರೋ.ಕೋಡಿ ರಂಗಪ್ಪನವರು ಒಂದು ಮಾತು
ಹೇಳ್ತಿದ್ರು.. “ಫ್ರೆಂಡ್ ಮದ್ವೆ ಇದೆ ಅಂತ ನೀವ್ ಯಾಕಯ್ಯಾ ರಜೆ ಹಾಕ್ತೀರ..? ನೀವ್ ಹೋಗ್ದೇ
ಇದ್ರೆ ಅವ್ರೇನು ಮದ್ವೇನೇ ಆಗೋದಿಲ್ವಾ..? ನೀವ್ ಹೋಗ್ ಏನ್ ಗನಂದಾರಿ ಕೆಲ್ಸ ಮಾಡ್ತೀರ..? ಅದರ
ಬದಲು ಯಾರಾದ್ರೂ ಆಸ್ಪತ್ರೇಲಿದ್ರೆ.. ಅಥವ ಸಾಯ್ತಾ ಇದ್ರೆ ಅವರ ಸೇವೆ ಮಾಡೋದಕ್ಕೆ ಹೋಗಿ..
ಅದಕ್ಕೆ ನನ್ ಅಭ್ಯಂತರ ಏನೂ ಇಲ್ಲ.. ಅದನ್ ಬಿಟ್ಟು ಯಾವ್ದೋ ಫಂಕ್ಷನ್ನು, ಹನಿಮೂನು ಅಂತ ಹೋದ್ರೆ ಏನಯ್ಯಾ
ಪ್ರಯೋಜನ..? ಅಂತ.. ಈ ಮಾತು ಅಕ್ಷರಸಹಃ ನನಗೆ ಆಗ ನೆನಪಿಗೆ ಬಂತು.. 





ಸಾವಿನಂಚಿನಲ್ಲಿದ್ದ ತಾಯಿಯ ಕೊನೆಯ ಆಸೆಯನ್ನು ಈಡೇರಿಸದ ಆ ಮಗಳಿಗೆ ಈ
ಬಂಧುಗಳ ಬಂಧನವೇಕೆ..? ಸಾವಿನ ಶೂಲದಲ್ಲಿದ್ದಾಗ ತಾಯಿಯನ್ನೇ ಸತ್ಕರಿಸದಾಕೆ ಇನ್ನು
ಬಂಧುಗಳನ್ನು ಹೇಗೆ ಸತ್ಕರಿಸಿಯಾಳು..? ಆಕೆ ಇಂದು ಹಾಕಿದ ಕಣ್ಣೀರಿಗಿಂತ ಅಂದು ಆ ಹೆತ್ತ ತಾಯಿ
ಆಸ್ಪತ್ರೆಯಲ್ಲಿ ಹಾಕಿದ ಕಣ್ಣೀರು, ಎದುರಿದ್ದು ನೋಡಿದವರಿಗೆ ಮಾತ್ರವೇ ಗೊತ್ತು.. ಮಗಳ ಇಂಥಾ ವರ್ತನೆಯೆ
ಆ ಹೆತ್ತ ತಾಯಿಯನ್ನು ಸಾವಿನ ಶೂಲಕ್ಕೆರಿಸಿತ್ತು ಎಂಬುದು ದುರಂತ ಸತ್ಯ.!
ಮಗಳ ಕಪಟ ನಾಟಕದ
ಸೂತ್ರಕ್ಕೆ ತಾಯಿಯ ಬದುಕೇ ಕಿತ್ತುಹೋಗಿತ್ತು..!














Отправить комментарий

0 Комментарии