Hot Posts

10/recent/ticker-posts

ದೂರದ ಹಳ್ಳಿಗಳೂ ಮತ್ತು ಇಲ್ಲಿನ ಎಫ್ ಎಂ ಕುಳಗಳು












ಅದು ಮಹಾರಾಷ್ಟ್ರ ಮತ್ತು  ಕರ್ನಾಟಕದ ಗಡಿ ಪ್ರದೇಶ.. ಅಲ್ಲೊಂದು ಪುಟ್ಟ ಗ್ರಾಮ..
ಬೆಳಗಾವಿ ಕರ್ನಾಟಕದ್ದಾಗಿದ್ದರೂ ಕನ್ನಡ ಮಾತಾಡದ ಜನರ ನೀಚ ಮನೋಭಾವಕ್ಕೆ ತದ್ವಿರುದ್ಧವಾಗಿದ್ದ
ಪುಟ್ಟ ಹಳ್ಳಿ ಅದು... ಕರ್ನಾಟಕ ಸರ್ಕಾರ ಆ ಹಳ್ಳಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸಿಲ್ಲ..
ಹಸಿವು ಎಂದಾದರೆ ಮಹಾರಾಷ್ಟ್ರಾದ ಸೋಲಾಪುರಕ್ಕೆ ಹೋಗಿ ತಮ್ಮ ಹಸಿವನ್ನು ನೀಗಿಸಿಕೊಳ್ಳಬೇಕಾದ
ಪರಿಸ್ಥಿತಿ ಅವರದ್ದು.. ಹುಷಾರಿಲ್ಲದಿದ್ದರೆ ಎತ್ತಿನ ಗಾಡಿಯಲ್ಲೋ.. ಮೋಟಾರು ಬೈಕಿನಲ್ಲೋ ಹೋಗಿ
ಔಷಧಿ ಪಡೆಯುವ ಅನಿವಾರ್ಯತೆ.. ಸರ್ಕಾರೀ ಬಸ್ಸನ್ನು ಅವರೆಂದೂ ನೋಡಿಯೇ ಇಲ್ಲ.. ಸರ್ಕಾರಿ ಬಸ್ ನ
ಬಣ್ಣನ್ನೂ ಅವರು ನೋಡಿಲ್ಲ..!! ಶಾಲೆ ಇದ್ದರೂ ಎಂದಿಗೂ ಅಕ್ಷರವನ್ನೇ ಕಾಣದ ಪರಿಸ್ಥಿತಿ
ಅವರದ್ದು.. ಅಂತೂ ಇಂತು ಒಂದು ದಿನ ಮೇಷ್ಟ್ರು ಬಂದರೆ ಮುಗೀತು.. ಮತ್ಯಾವಾಗ ಅವರ ದರ್ಶನ
ಭಾಗ್ಯವಾಗುತ್ತದೋ ಸ್ವತಃ ಅವರಿಗೇ ಗೊತ್ತಿಲ್ಲ.. ಪ್ರಾಥಮಿಕ ಚಿಕಿತ್ಸೆಗಾಗಿ ಒಂದು ಆಸ್ಪತ್ರೆ
ಇದೆ.. ಆದ್ರೆ ಅದೀಗ ದನದ ಕೊಟ್ಟಿಗೆಯಾಗಿದೆ..






https://blogger.googleusercontent.com/img/b/R29vZ2xl/AVvXsEhvqxVS0QxlR4l_WAP2FSt3wLrjni9C6zLzu50X4EpShSZCvLd9knlEs6JH0j83N06Zg9-9-Y449SqdcV4ujlqk7LYigI8VGgzjVoHFCj59Em2MA-ogP9I6K9PstbBAbpPaS-x6DTow4g/s1600/Indian+village+well.jpg

ಇಷ್ಟೆಲ್ಲಾ ಗಾಡಾಂಥಕಾರದಲ್ಲೇ ಬದುಕು
ಸಾಗಿಸುತ್ತಿರು ಈ ಪುಟ್ಟ ಹಳ್ಳಿಯ ಜನರ ಬಳಿಗೆ ನೀವು ಒಮ್ಮೆ ಹೋಗಿ  “ನೀವು ಕರ್ನಾಟಕದಲ್ಲಿ ಇರುತ್ತೀರೋ ಅಥವ
ಮಹಾರಾಷ್ಟ್ರಕ್ಕೆ ಸೇರಿಸಬೇಕೋ” ಎಂದು ಅವರನ್ನು ಕೇಳಿ ನೋಡಿ.. ಅವರು ಘಂಟಾಘೋಷವಾಗಿ, ಕಡ್ಡಿ
ಮುರಿದಂತೆ ಹೇಳುವ ಒಂದೇ ಒಂದು ಮಾತು “ನಾವು ಕನ್ನಡಿಗರು.. ನಾವು ಕರ್ನಾಟಕದ ಗಡಿಯಲ್ಲಿದ್ದ
ಮಾತ್ರಕ್ಕೆ ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹುನ್ನಾರ ಮಾಡಬೇಡಿ.. ಸರ್ಕಾರ ಇದುವರೆಗೆ
ನಮಗೆ ಏನೂ ಮಾಡಿಲ್ಲ.. ಆದರೆ ನಮ್ಮತನ ಎಂದೂ ನಮ್ಮಿಂದ ದೂರಾಗುವುದಿಲ್ಲ.. ತಾಯಿ ನಮಗೆ ಉಪವಾಸ
ಹಾಕಿದ್ದ ಮಾತ್ರಕ್ಕೆ ಹೆತ್ತ ತಾಯಿಯನ್ನು ತೊರೆದು ಹೋಗಲು ಸಾಧ್ಯವೇ..?? ತಾಯಿಯೇ ಅಲ್ಲ ಎಂದು
ಕರೆಯಲು ಸಾಧ್ಯವೇ..?? ಹಾಗೇಯೇ ನಮ್ಮ ಮನದಲ್ಲಿ ಹುದುಗಿರುವ ಕನ್ನಡ ಮಾತೆಯನ್ನು ನಾವು ಎಂದಿಗೂ
ಬಿಟ್ಟು ಕೊಡುವುದಿಲ್ಲ.. ಸರ್ಕಾರಕ್ಕೆ ನಾವೇನನ್ನೂ ಕೇಳುವುದಿಲ್ಲ.. ಕನಿಷ್ಟ ಪಕ್ಷ ನಮ್ಮ ಮಕ್ಕಳ
ಓದಿಗೆ ಒಂದು ಶಾಲೆ, ಪದವಿ ಪೂರ್ವ ಕಾಲೇಜು ಮಾಡಿಕೊಡಿ ಎಂದು ಮಾತ್ರವೇ ನಾವು ಕೇಳುತ್ತೇವೆ.. ಉಳ್ಳವರಂತೆ
ನಮ್ಮ ಮಕ್ಕಳು ವಿದ್ಯಾವಂತರಾಗಬೇಕು ಅನ್ನೋದು ನಮ್ಮ ಕಾಳಜಿ.,. ಇದನ್ನು ಬಿಟ್ಟು ಬೇರೆ ರಾಜ್ಯಕ್ಕೆ
ಸೇರಿಸುವುದು ಹುನ್ನಾರ ಯಾಕೆ ಮಾಡುತ್ತೀರಿ..???” ಎಂದು ದುಃಖದಿಂದಲೇ ಹೇಳಿದರು ಹಳ್ಳಿಯ
ವಯೋವೃದ್ದ ದೇವೇಂದ್ರಪ್ಪ..





ಇದು ಅವರೊಬ್ಬರ ಮಾತಲ್ಲ.. ಇಡೀ ಹಳ್ಳಿಯಲ್ಲಿ
ಇರುವ ಜನರ ಮಾತು.. ಈ ಕನ್ನಡ ಪ್ರೇಮಿಗಳು.. ಕನ್ನಡದ ಬಗ್ಗೆ ಅಪಾರ ಕಾಳಜಿ ಇರುವವರು ಅಷ್ಟೇನೂ
ಅಕ್ಷರಸ್ಥರಲ್ಲ.. ತಮ್ಮ ಹೆಸರನ್ನೂ ಬರೆಯಲು ಬಾರದ ಮುಗ್ಧ ಜನಗಳಿವರು.. ಇವರಿಗೆ ಕನ್ನಡಾಭಿಮಾನ
ಇದೆ.. ನಾವು ಕನ್ನಡಿಗರು ಎಂಬ ಹೆಮ್ಮೆ ಇದೆ.. 





ಆದರೆ ಬೆಂಗಳೂರಿನ ಮಧ್ಯಭಾಗದಲ್ಲಿ ಕೆಲವು
ಸಂಸ್ಥೆಗಳಿವೆ.. ಜನರಿಗೆ ಬುದ್ದಿ ಹೇಳಬೇಕಾದ ತಂಡಗಳಿವು.. ಜ್ಞಾನವಂತರ,, ಅಕ್ಷರಸ್ಥರ.. ಮೇಧಾವಿಗಳ
ಗುಂಪು ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದೆ… ತಮ್ಮ ಬರಹಗಳು ಮತ್ತು ಕಾರ್ಯಕ್ರಮಗಳ ಮೂಲಕ
ಕ್ರಾಂತಿಕಾರಿ ಬದಲಾವಣೆಗಳನ್ನೇ ತರಬಲ್ಲರು ಇವರು.. ಅವರೇ ಮಾಧ್ಯಮದವರು..
FM ರೇಡಿಯೋಗಳು ಕೂಡ
ಮಾಧ್ಯಮವೇ.. ಸುಮಾರು ಹತ್ತಕ್ಕೂ ಹೆಚ್ಚು ಮಾಧ್ಯಮಗಳು ಉದ್ಯಾನನಗರಿ ಬೆಂಗಳೂರಿನಲ್ಲಿವೆ..





ಸರ್ಕಾರ ಅವರಿಗೆ ಬೇಕಾದ ಎಲ್ಲಾ ರೀತಿಯ
ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.. ಕನ್ನಡದ ನೆಲದಲ್ಲಿದ್ದು, ಕನ್ನಡ ಗಂಧವನ್ನು ಎಲ್ಲೆಡೆ
ಪಸರಿಸಬೇಕಾಗಿದ್ದ ಮಾಧ್ಯಮದವರು ಹಿಂದಿ ಹಾಡುಗಳ ಬೆನ್ನತ್ತಿ ಹೋಗುತ್ತಿದ್ದಾರೆ.. ಏನೆಲ್ಲಾ
ಸೌಲಭ್ಯಗಳನ್ನು ಮಾಡಿಕೊಟ್ಟರು ಕನ್ನಡದ ಪರವಾಗಿ ದನಿ ಎತ್ತದೇ ಮೌನರಾಗ ಹಾಡುತ್ತಿವೆ..
ಹಿಂದಿಯನ್ನು ವೈಭವೀಕರಿಸಿ ತೋರಿಸುತ್ತಿವೆ.. ಇದಕ್ಕೆಲ್ಲಾ ಕಾರಣ ಶ್ರೋತೃಗಳ ಸಂಖ್ಯೆ
ಕಡಿಮೆಯಾಗುತ್ತಿದೆ ಎಂದು..





ಅಬ್ಬಬ್ಬಾ.. ಎಂಥಾ ಆಲೋಚನೆ..?? ಕನ್ನಡ ಬಾರದ
ಅರೆ ಬರೆ ಜನರನ್ನು ನಿರೂಪಕರಾಗಿ ನೇಮಿಸಿದಲ್ಲಿ ಇನ್ನೇನಾಗಲು ಸಾಧ್ಯ..?? ಎಲ್ಲರೂ ಹೀಗೆ
ಭಾವಿಸಿದರೆ ಕನ್ನಡತನ ಎಲ್ಲಿರುವುದು..?? ಇವರಂತೆಯೇ ಕರ್ನಾಟಕದ ಗಡಿ ಭಾಗದವರು “ಕರ್ನಾಟಕ
ಸರ್ಕಾರ” ನಮ್ಮನ್ನು ನಿರ್ಲಕ್ಷಿಸಿದೆ ನಾವು ಬೇರೆ ರಾಜ್ಯಕ್ಕೆ ಸೇರುತ್ತೇವೆ” ಎಂದರೆ ಕರ್ನಾಟಕ
ಉಳಿಯುವುದೇ..?? ಇನ್ನು ಕೆಲವೇ ದಿನಗಳಲ್ಲಿ ಇತಿಹಾಸದ ಪುಸ್ತಕದಲ್ಲಿ “ಕನ್ನಡ ಭಾಷೆಯೊಂದಿತ್ತು”
ಎಂಬ ಪಾಠವನ್ನು ಓದಿ ತಿಳಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ..  ಕನ್ನಡವನ್ನು ಶ್ರೇಷ್ಟೀಕರಿಸುವ ಛಲ ಇಲ್ಲದಿದ್ದವರು
ವೀಲೀನತೆಯ ಹಾದಿಯನ್ನು ಹುಡುಕುತ್ತಾರೆ.. ಕನ್ನಡದಲ್ಲೇ ಸಾಧಿಸಿ ತೋರಿಸುವ ಛಲ ಇದ್ದವರು ಕನ್ನಡವನ್ನೇ
ವಿಶ್ವ ಮಟ್ಟಕ್ಕೆ ಕೊಂಡೊಯ್ಯುವಂಥ ಕಾರ್ಯವನ್ನು ಮಾಡುತ್ತಾರೆ.. ಇಂಥಾ ಕಾರ್ಯವನ್ನು ಮಾಡುವಲ್ಲಿ
ಎಫ್.ಎಂ ಗಳು ಕಾರ್ಯತತ್ಪರವಾಗಬೇಕು.. ಕನ್ನಡದಲ್ಲೇ ಹೊಸ ಪ್ರಯೋಗಗಳನ್ನು ಮಾಡುವಂಥ ಕನಿಷ್ಟ ಕಾರ್ಯಗಳು
ಎಫ್.ಎಂ ಗಳಲ್ಲಿ ನಡೆಯಬೇಕಿದೆ.. ಕನ್ನಡ ವಿರೋಧಿ ಮಾಧ್ಯಮಗಳು ಮತ್ತು ಸುದ್ದಿಗಳಿಗೆ ಕಡಿವಾಣ
ಹಾಕುವ ಕೆಲಸ ಸರ್ಕಾರದಿಂದಲೂ ನಡೆಯಬೇಕು,, ಜನ ಪ್ರತಿನಿಧಿಗಳು ಕೇವಲ ತಮ್ಮ ಬೊಕ್ಕಸವನ್ನು
ತುಂಬಿಸಿಕೊಳ್ಳುವ ದೃಷ್ಟಿಯನ್ನು ಹೊಂದಿರುವುದು ಸೂಕ್ತವಲ್ಲ.. ಕನ್ನಡಿಗರಿಗೆ ಬಲವಂತವಗಿ
ಹಿಂದಿಯನ್ನು ಹೇರುವ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು.. ಡಬ್ಬಿಂಗ್ ಬೇಡವೆಂದು ಹೋರಾಟ ನಡೆದಂತೆ
ಕನ್ನಡ ವಿರೋಧಿ ಎಫ್ ಎಂ ಬೇಡ  ಎಂಬ ಹೋರಾಟ ಇದೀಗ
ಅನಿವಾರ್ಯ ಎಂಬಂತಿದೆ..  ಬುದ್ದಿ ಜೀವಿಗಳು ಇಂಥ
ಕಾರ್ಯಗಳನ್ನು ಬಹಿರಂಗವಾಗಿ ಖಂಡಿಸುವುದರ ಮೂಲಕ ಜನರನ್ನು ಸೆಳೆಯಬೇಕಾದ ಅನಿವಾರ್ಯತೆ ಇದೆ.. 





ಈಗಾಗಲೇ ನ್ಯಾಯಾಲಯ ರೇಡಿಯೋ ಒನ್. ರೆಡ್
ಎಫ್.ಎಂ,  ರೇಡಿಯೋ ಇಂಡಿಗೋ, ರೆಡಿಯೋ ಫೀವರ‍್ ಗಳಂಥ ಹಲವು ಎಫ್ ಎಂ ಗಳ ವಿರುದ್ಧ ನೋಟೀಸು ಜಾರಿ
ಮಾಡಿದ್ದರೂ ಕ್ಯಾರೇ ಎನ್ನದೇ ತಮ್ಮ ಕಾರ್ಯವನ್ನು ಮುಂದುವರಿಸುತ್ತಿರುವುದು ನ್ಯಾಯಾಲಯ
ನಿಂದನೆಯಾಗುತ್ತದೆ..  ಈ ಬಗ್ಗೆ ಸರ್ಕಾರ ಕೂಡ ಗಮನ
ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ..


ಕನ್ನಡ ನೆಲದಲ್ಲಿದ್ದು, ಕರ್ನಾಟಕದಿಂದ
ಐಶಾರಾಮಿ ಸೌಲಭ್ಯಗಳನ್ನು ಪಡೆದು “ಹಿಂದಿಯ ಚಾಕರಿ” ಮಾಡುತ್ತಿರುವುದು ನಿಜಕ್ಕೂ ಖಂಡನೀಯ.. ಇಂಥ
ಬುದ್ದಿಜೀವಿಗಳ ಮಧ್ಯೆ ಏನನ್ನೂ ಬಯಸದೇ ನಾವು ಕನ್ನಡಿಗರು, ಕರ್ನಾಟಕದಲ್ಲೇ ಇರುತ್ತೇವೆ ಎಂದು ಘರ್ಜಿಸುವ,,  ಅಕ್ಷರವನ್ನೇ ಅರಿಯದ ಸಿದ್ದಾಪುರದ ಆ ಮುಗ್ಧ ಜೀವಿಗಳು
ನಿಜವಾದ ಕನ್ನಡಿಗರು.. ಎಂದು ನಾನು ಗರ್ವದಿಂದ ಹೇಳುತ್ತೇನೆ





ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ  












Отправить комментарий

0 Комментарии