“LET NOBEL THOUGHTS COME TO US FROM EVERY SIDE”
ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯ
ಚಿತ್ರಾವತಿ. ಚಿಕ್ಕಬಳ್ಳಾಪುರ-562101
ವಿಷಯ
ನನ್ನ ಬಿ.ಎಡ್ ಪ್ರವಾಸ ಕಥೆ.
2009-2010
27-ಅಕ್ಟೋಬರ್-2010 ಬುಧವಾರ ಮಧ್ಯಾಹ್ನ 2.30
ಇಂದ 02- ನವೆಂಬರ್ 2010 ಮಂಗಳವಾರ 10.30
ಪ್ರಶಿಕ್ಷಣಾರ್ಥಿ
ಶೇಖರ್.ಎಂ
09EUD05043
ಕ್ರಿಯೇಟಿವ್ ಬರಹಗಾರ
ಕಾಮಿಡಿ ಕಿಂಗ್
ವಿಭಿನ್ನ ಚಿಂತಕ
ವಿರೋಧ ಪಕ್ಷದ ನಾಯಕ
ನಿಮ್ಮ
ಶೇಖರ್ ಪೂಜಾರಿ.
9980868898
ಪ್ರವಾಸದ ಸ್ಥಳಗಳು
1. ಹೊಸೂರು
2. ಭವಾನಿ
3. ಮಲಪುಜಾ ಡ್ಯಾಂ
4. ಗುರುವಾಯುರು
5. ಕಾಲಡಿ
6. ಕೊಚ್ಚಿನ್
7. ತ್ರಿವೇಂಡ್ರಂ
8. ಕೊವಲಂ ಬೀಚ್
9. ಕನ್ಯಾ ಕುಮಾರಿ
a. ವಿವೇಕಾನಂದ ಬಂಡೆ
b. ತಿರುವಳ್ಳುವರ್ ಪ್ರತಿಮೆ
10. ಮಧುರೈ
11. ಕೊಡೈಕೆನಾಲ್
12. ಫಳನಿ
ಪ್ರವಾಸದ ಯೋಜನೆ
ಬಿ.ಎಡ್.ನ ಒಂದು ವರ್ಷದ ಅವಧಿಯಲ್ಲಿ ಶೈಕ್ಷಣಿಕ ಪ್ರವಾಸ ಮತ್ತು ಶಿಬಿರ (ಸಹಬಾಳ್ವೆ
ಶಿಬಿರ/ಕ್ಯಾಂಪ್) ಗಳು ಕಡ್ಡಾಯ ಚಟುವಟಿಕೆಗಳು.. ಆದ್ದರಿಂದ ಬಿ.ಎಡ್.ನ ಮೊದಲ
ಸೆಮಿಸ್ಟರ್ ನಲ್ಲಿ ಶಾಂತಿಯುತ ಸಹಬಾಳ್ವೆ ಶಿಬಿರ ನಡೆಸಲಾಯಿತು. 4 ದಿನಗಳ ಅವಧಿ ನೂರು ಜನ
ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ಹಗಲು ರಾತ್ರಿ ಜೊತೆಗಿದ್ದೆವು. ಚಿಕ್ಕಬಳ್ಳಾಪುರದ ಮಂಚನಬೆಲೆಯಲ್ಲಿ ಅಂತೂ ಇಂತು ಹಾಸ್ಯದ ಹೊನಲಿನಲ್ಲಿ, ಖುಷಿಯ ಕಡಲಿನಲ್ಲಿ, ಶಿಬಿರ ಮುಗಿಯಿತು.
2 ನೇ ಸೆಮಿಸ್ಟರ್ ನಲ್ಲಿ ಶೈಕ್ಷಣಿಕ ಪ್ರವಾಸ ಇರುತ್ತೆ ಎಂಬುದು ನಮಗೆ ಖಚಿತವಾಗಿತ್ತು.
ದಿನಾಂಕ 04-10-2010 ರಿಂದ 10-10-2010 ರ ವರೆಗೆ ಈ ಪ್ರವಾಸ ಎಂದು ನಮ್ಮ ಗುರುಗಳಾದ
ಜಿ.ಪಿ.ಬಾಹುಬಲಿಯವರು ನಮಗೆ ತಿಳಿಸಿದ್ದರು. ನಾವೆಲ್ಲರು ಸಕಲ ಸಿದ್ಧತೆಗೆ
ಸನ್ನದ್ಧರಾದೆವು. ಆದರೆ ಶ್ರೀರಾಮಜನ್ಮಭೂಮಿ ವಿವಾದದ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಗಲಭೆಗಳಾಗಬಹುದು ಎಂಬ ಕಾರಣಕ್ಕಾಗಿ ಆ ಅವಧಿಯ ಸಂಧರ್ಭದಲ್ಲಿ ಆಯೋಜಿಸಲಾಗಿದ್ದ ಪ್ರವಾಸ ಮುಂದೂಡಲಾಯಿತು. ವಿಧ್ಯಾರ್ಥಿಗಳೆಲ್ಲರ ಉತ್ಸಾಹ ಒಂದೇ ಸಮನೆ ನೆಲಕ್ಕೆ ಬಿತ್ತು.
ಅಂತೂ ಇಂತೂ ಪ್ರವಾಸದ ಆಸೆಯನ್ನೇ ಬಿಟ್ಟಿದ್ದ ನಮಗೆಲ್ಲರ ಮೊಗದಲ್ಲಿ ಮತ್ತೊಮ್ಮೆ ಸಂತೋಷ
ತರಿಸಿದ್ದು ಅದೇ ನಮ್ಮ ಗುರುಗಳು. 27-10-2010 ರಿಂದ 02-11-2010 ರ ವರೆಗೆ ಇರುತ್ತದೆ ಈ
ಬಾರಿ ಯಾವುದೇ ಬದಲಾವಣೆ ಇಲ್ಲ ಎಂದು ಖಚಿತವಾಗಿ ತಿಳಿಸಿದರು.
ಪ್ರೊ!!
ಕೋಡಿರಂಗಪ್ಪ , ಪ್ರೊ!! ಕೆ.ಶಿವರಾಮ್ ರೆಡ್ಡಿ, ಪ್ರೊ!! ಸಿ.ಎಂ.ಲೀಲಾವತಿ, ಪ್ರೊ!!
ಜಿ.ಪಿ, ಬಾಹುಬಲಿ, ಪ್ರೊ!! ಎನ್, ಲೋಕನಾಥ, ಪ್ರೊ!! ವಿ. ನಾರಾಯಣಸ್ವಾಮಿ ಎಲ್ಲಾ ಉಪನ್ಯಾಸಕರೂ ಸೇರಿದಂತೆ ಪ್ರಂಶುಪಾಲರಾದ ಪ್ರೊ!! ಎ. ಅಜಿತ್ ಪ್ರಸಾದ್ ರವರೂ ಪ್ರವಾಸದ ಬಗ್ಗೆ ತುಣುಕು ಮಾಹಿತಿ ನೀಡಿದರು.
ಐರಾವತ ಬಸ್ |
ವಿಧ್ಯಾರ್ಥಿಗಳನ್ನು ಐರಾವತ ಮತ್ತು ರಾಜಹಂಸ ಎಂದು ಎರಡು ಗುಂಪುಗಳಾಗಿ ಮಾಡಿ 100 ಜನ ವಿಧ್ಯಾರ್ಥಿಗಳನ್ನು 50 ಜನರನ್ನಾಗಿ ಎರಡು ಗುಂಪುಗಳಾಗಿ ವಿಭಾಗಿಸಲಾಯಿತು.
ನಾನು
ಯಾವ ಗುಂಪಿನಲ್ಲೂ ಸೇರಲಿಲ್ಲ. ಏಕೆಂದರೆ ನಾನು ಯಾವ ಗುಂಪಿಗೆ ಹೆಚ್ಚು ಬೇಡಿಕೆ ಇದ್ದೆನೆ
ಎಂಬುದನ್ನು ತಿಳಿಯಬೇಕಿತ್ತು. ವಿಚಿತ್ರ ಅಂದ್ರೆ ಯಾವ ಗುಂಪಿನವರೂ ನನ್ನನ್ನು
ಕರೆಯಲಿಲ್ಲ..! ಆಗ ನಮ್ಮ ಗುರುಗಳಾದ ಬಾಹುಬಲಿಯವರು ಐರಾವತ ಗುಂಪಿನಲ್ಲಿ ನನ್ನನ್ನು ಸೇರಿಸಿದರು. ಆದರೆ ಮನರಂಜನೆಗೆ ಸಹಕರಿಸುವ ನನ್ನ ಎಲ್ಲಾ ಸ್ನೆಹಿತರು ರಾಜಹಂಸ ಬಸ್ಸ್ ನಲ್ಲಿ ಇದ್ದ ಕಾರಣ ಮರುದಿನ ಹಠ ಮಾಡಿ ರಾಜಹಂಸ ಬಸ್ಸಿಗೆ ವರ್ಗಾಯಿಸಿಕೊಂಡೆ.
25-10-2010 ಸೊಮವಾರ ಮಧ್ಯಾಹ್ನದ ನಂತರ ಪ್ರೊ!! ಬಾಹುಬಲಿ ಮತ್ತು ಪ್ರಂಶುಪಾಲರಾದ ಅಜಿತ್ ಪ್ರಸಾದ್ ಅವರು ಮತ್ತೆ ಪ್ರವಾಸದ ಬಗ್ಗೆ ಸೂಚನೆ ಮತ್ತು ಮಾರ್ಗದರ್ಶನ ನೀಡಿದರು. ಏಕೆಂದರೆ ಪ್ರವಾಸದ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿತ್ತು. ಸೂಚನೆ ನೀಡುವ ಸಂದರ್ಭದಲ್ಲಿ ಉಳಿದ ಉಪನ್ಯಾಸಕರೂ ಉಪಸ್ಥಿತರಿದ್ದರು.
26-10-2010 ಮಂಗಳವಾರ ಕಾಲೇಜಿಗೆ ರಜೆಯನ್ನು ಘೋಷಿಸಲಾಗಿತ್ತು. ಮತ್ತು ಪ್ರವಾಸಕ್ಕೆ ಬೇಕಾದ ಸಕಲ ಸಿದ್ಧತೆಗೆ ಮಂಗಳವಾರವೇ ಮುಹೂರ್ತ ನಿಗಧಿಪಡಿಸಿದಂತಾಯಿತು.
ನಾನು
ಪ್ರವಾಸದಲ್ಲಿ ತಿನ್ನಲು ಏನನ್ನು ತಯಾರಿಸಲಿಲ್ಲ. ಬದಲಾಗಿ ನಾವು ಹೊರಡುವ ಪ್ರವಾಸೀ
ತಾಣಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಮತ್ತು ಮಹತ್ವಗಳ ಪರಿಚಯ ಮಾಡಿಕೊಂಡೆ. ಪ್ರವಾಸ
ಬೇಸರವಾಗದಿರಲಿ ಎಂಬ ಕಾರಣಕ್ಕಾಗಿ ಕೆಲವು ಇಂಪಾದ ಹಾಡುಗಳ ಸಿ.ಡಿ.ಯನ್ನು ತಯಾರಿಸಿದ್ದೆ.
ಉಳಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡೆ. ಉಡುಪು, ಬ್ಯಾಗು, ತಟ್ಟೆ, ಪುಸ್ತಕ, ಹಲ್ಲು ಉಜ್ಜುವ ಬ್ರಶ್, ಹೀಗೆ ಎಲ್ಲವನ್ನೂ ಸಿಧ್ದವಾಗಿ ಇಟ್ಟುಕೊಂಡು ಈ ಪುಸ್ತಕದ ಶೀರ್ಷಿಕೆ ಮತ್ತು ಸಿದ್ಧತೆಯ ಬಗ್ಗೆ ಬರೆಯುತ್ತಿದ್ದೆ. ಆದರೆ ಅಷ್ಟರಲ್ಲಾಗಲೇ ನಿಧಾನವಾಗಿ ನಿದ್ರಾ ದೇವತೆ ನನ್ನನ್ನು ಕೈಬೀಸಿ ಕರೆಯುತ್ತಿದ್ದಿದ್ದು ನನ್ನ ಅರಿವಿಗೆ ಬಂತು.
ಹೀಗಾಗಿ, ಬರವಣಿಗೆಯನ್ನು ನಿಲ್ಲಿಸಿ 27-10-2010 ದಿನ (ಮಾರನೆಯ ದಿನ)ದ ಕಾರ್ಯ ಮತ್ತು
ಪ್ರಯಾಣದ ಬಗ್ಗೆ ನೆನೆಯುತ್ತಾ ನಿದ್ರಾ ದೇವತೆಯ ಮಡಿಲಲ್ಲಿ ನಾನೂ ಮಗುವಾಗಿ ಮಲಗಿದೆ.
ಆದರೆ ನನ್ನ ಸ್ನೇಹಿತೆ ಲಕ್ಷ್ಮಿ ಮಾತ್ರ ಚಕ್ಕುಲಿ, ನಿಪ್ಪೊಟ್ಟು, ತಯಾರು ಮಾಡುವುದರಲ್ಲಿ ಮಗ್ನರಾಗಿದ್ದರು… ಎಲ್ಲಾ ನಮಗಾಗಿ..
ಅಂತೂ ಇಂತೂ “ಪ್ರವಾಸದ ದಿನ ಬಂತು”
ಬೆಳಗಾಯಿತು.. ಪ್ರವಾಸದ ದಿನ ಬಂದೇ ಬಿಟ್ಟಿತು. ನಾನು ಎಲ್ಲವನ್ನೂ ಸಜ್ಜುಗೊಳಿಸಿಕೊಂಡೇ ಕುಳಿತಿದ್ದೆ. ನನ್ನದು ಯಲಹಂಕ ಆದುದ್ದರಿಂದ ಪ್ರವಾಸದ ರೈಲು ಚಿಕ್ಕಬಳ್ಳಾಪುರದಿಂದ ಯಲಹಂಕ ಮಾರ್ಗವಾಗಿ ಬೆಂಗಳೂರು, ಹೊಸೂರು, ಧರ್ಮಾವರಂ ತಲುಪುತ್ತದೆ.
ಹೀಗಾಗಿ ನಾನು ದಾರಿ ಮಧ್ಯೆ ಅವರೊಂದಿಗೆ ಸೇರುವ ಮುನ್ಸೂಚನೆ ನೀಡಿದ್ದೆ. ಸಂಜೆ ೪
ಗಂಟೆಗೆ ಚಿಕ್ಕಬಳ್ಳಾಪುರದಿಂದ ರೈಲು ಹೊರಟಿತು. ಶಿಕ್ಷಕ ವೃಂದ ಮತ್ತು
ಪ್ರಶಿಕ್ಷಣಾರ್ಥಿಗಳು ಜೊತೆ-ಜೊತೆಯಾಗಿ ಬಂದರು. ಆದರೆ ಅವರ ಜೊತೆ ನಮ್ಮ ಕಾಲೇಜಿನ ಒಬ್ಬನೇ
ಒಬ್ಬ ವಿದ್ಯಾರ್ಥಿ, ಆತ್ಮೀಯ ಸ್ನೇಹಿತ ತನ್ವೀಜ್ ಮಾತ್ರ ಪ್ರವಾಸಕ್ಕೆ ಬರಲಿಲ್ಲ.. ಇದಕ್ಕೆ ಕಾರಣಗಳು ಇನ್ನು ಕೂಡ ನಿಘೂಡ.!!
ರೈಲು ಪ್ರಯಾಣ ಶುರುವಾಯಿತು. ಚಿಕ್ಕಬಳ್ಳಾಪುರದಿಂದ ಯಲಹಂಕಗೆ ಸುಮಾರು ಒಂದು ಗಂಟೆಗಳ ಪ್ರಯಾಣ. ನಾನು ಯಲಹಂಕದಲ್ಲಿ ರೈಲಿಗಾಗಿ ಕಾಯುತ್ತಾ ಕುಳಿತಿದ್ದೆ. ಪ್ರಾಂಶುಪಾಲರಾದ ಪ್ರೊ! ಅಜಿತ್ ಪ್ರಸಾದ್ ರವರದು ಬೆಂಗಳೂರಿನ ವಿದ್ಯಾರಣ್ಯಪುರ. ಹೀಗಾಗಿ ಅವರು ನಮ್ಮೆಲ್ಲರನ್ನೂ ಆತ್ಮೀಯವಾಗಿ ಬೀಳ್ಕೊಡಲು ಯಲಹಂಕಾ ರೈಲು ನಿಲ್ದಾಣಕ್ಕೆ ಬಂದಿದ್ದರು. ಸಮಯ
ಸಂಜೆ.5.15ಕ್ಕೆ ಸರಿಯಾಗಿ ರೈಲು ಯಲಹಂಕಾಗೆ ಬಂತು.. ನನ್ನ ಸ್ನೇಹಿತರೆಲ್ಲಾ
ಹರ್ಷೊಧ್ಘಾರ, ಉತ್ಸಾಹದೊಂದಿಗೆ ನನ್ನನ್ನು ಆಹ್ವಾನಿಸಿ ಬರಮಾಡಿಕೊಂಡರು. ಎಲ್ಲರೂ ನನ್ನ
ಆಹ್ವಾನಕ್ಕಾಗಿಯೇ ಕಾಯುತ್ತಿದ್ದರೇನೋ..? ನಾನು ಬಂದ ಕೂಡಲೇ ಎಲ್ಲರಲ್ಲೂ ಸಂತೋಷ…
ಪ್ರವಾಸ ಇನ್ನೂ ಸಂತೋಷದಿಂದ ಕೂಡಿರಲೆಂದೇ ನಾನು ಸಿ.ಡಿ.ಯಲ್ಲಿ ಹಾಡುಗಳನ್ನು ಭರ್ತಿ
ಮಾಡಿಕೊಂಡು ಬಂದಿದ್ದೆ. ಯಲಹಂಕದಿಂದ ಮತ್ತೆ ರೈಲು ಮುಂದಕ್ಕೆ ಚಲಿಸತೊಡಗಿತು…
ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ಮೂಲಕ ಹಾದು ಬೆಂಗಳೂರು ತಲುಪಿತು… ಬೆಂಗಳೂರು ನಿಲ್ದಾಣದಲ್ಲಿ ನಮ್ಮ ಬಿ.ಎಡ್ ವಿದ್ಯಾರ್ಥಿನಿ ವಿದ್ಯುಲ್ಲತ ನಮ್ಮ ತಂಡ ಸೇರಿದರು.. ಆಕೆಯನ್ನು ಬೀಳ್ಕೊಡಲು ಆಕೆಯ ಬಂಧುಗಳು ಅಲ್ಲಿಗೆ ಬಂದಿದ್ದರು..
ಆಲ್ಲಿಂದ ನಮ್ಮೆಲ್ಲರ ಪಯಣ ಹೊಸೂರಿನೆಡೆಗೆ ಸಾಗಿತ್ತು. ರೈಲಿನಲ್ಲಿ ಮಾತನಾಡುತ್ತಾ, ಹರಟೆ ಹೊಡೆಯುತ್ತಾ, ಸಂತೋಷದಿಂದ ಕುಳಿತಿದ್ದೆವು.
1.ಹೊಸೂರು ತಲುಪಿದೆವು..
ಉಲ್ಲಾಸ ಉತ್ಸಾಹದೊಂದಿಗೆ….
ಸುಮಾರು
4 ಗಂಟೆಗಳ ಪ್ರಯಾಣದ ನಂತರ ರಾತ್ರಿ 8.10ಕ್ಕೆ ಹೊಸೂರು ರೈಲ್ವೇ ನಿಲ್ದಾಣ ಸೇರಿದೆವು.
ಸ್ವಲ್ಪ ಹೊತ್ತು ಅಲ್ಲೇ ಓಡಾಡಿ ವಿಶ್ರಮಿಸಿದೆವು. ಆ ಸಮಯದಲ್ಲಿ ನಮ್ಮ ಗುರುಗಳು ಪ್ರೊ!.ಸಿ.ಎಂ.ಲೀಲಾವತಿ ಮೇಡಂ ಹೇಳಿದ ಮಾತು ನನಗೆ ಇನ್ನೂ ನೆನಪಿದೆ. ಮದುವೆಯ ವಿಷಯದಲ್ಲಿ ಈಗಿನವರು ತಪ್ಪು ತಿಳಿದುಕೊಂಡು ಆತುರ ಪಟ್ಟು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. “ಈ ವಯಸ್ಸಿನ ಪ್ರೀತಿ, ಒಂದು ಸುಂದರವಾದ ಕಟ್ಟಡದ ಬಣ್ಣಕ್ಕೆ ಮಾರು ಹೋಗಿ ಮನೆಯನ್ನು ಖರೀದಿಸಿದಂತೆ. ಹೀಗಾಗ ಬಾರದು.” ಎಂದಿದ್ದರು. ಎಂಥಾ ಅಮೂಲ್ಯವಾದ ನುಡಿ ಅಲ್ವಾ…? ನಾನು ನನ್ನ ಜೀವನ ಪರ್ಯಂತ ಮರೆಯಲು ಸಾಧ್ಯವೇ ಇಲ್ಲಾ ಈ ಮಾತು…
ನಾವು
ಮೇಡಂ ರೊಂದಿಗೆ ಮಾತನಾಡುತ್ತಿದ್ದಂತೆಯೇ ನಮ್ಮೊಂದಿಗೆ ಬಂದಿದ್ದ ಅಡುಗೆ ವ್ಯವಸ್ಥಾಪಕರು
ಅಲ್ಲೇ ರೈಲು ನಿಲ್ದಾಣದಲ್ಲಿ ಗ್ಯಾಸು, ಸಿಲಿಂಡರ‍್ ಇಟ್ಟು ನಮಗಾಗಿ ಊಟದ ವ್ಯವಸ್ಥೆ
ಮಾಡಿಬಿಟ್ಟರು.. ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವನ್ನೂ ವೆಂಕಟೇಶ್ ಎಂಬ ವ್ಯಕ್ತಿಗೆ ಗುತ್ತಿಗೆ ನೀಡಲಾಗಿತ್ತು. ರಾತ್ರಿ ಸುಮಾರು 9 ಗಂಟೆಗೆ “ಬದನೇಕಾಯಿ ಬಾತ್(ವಾಂಗೀಬಾತ್)” ಊಟ ಮಾಡಿದೆವು. ಪ್ರೊ! ಕೋಡಿ ರಂಗಪ್ಪನವರು ಕೆಲವರಿಗೆ ಮಾಂಸದ ಅಡುಗೆಯನ್ನು ತರಲು ಹೇಳಿದ್ದರು. ಸ್ನೇಹಿತೆ ಅರ್ಚನ, ಚೈತ್ರ, ಗಾಯತ್ರಿ ಯವರು ಈ ಮಾಂಸದ ಅಡುಗೆಯ ನಿರ್ಮಾತೃಗಳು… ಆ ಮಾಂಸದ ಅಡುಗೆಯಲ್ಲಿ ನಾವೂ ಸಹ ಕೈ ಜೋಡಿಸಿದೆವು.
ನಾನೆಂದರೆ ಪ್ರೊ! ಕೋಡಿ ರಂಗಪ್ಪನವರಿಗೆ ಅದೆಷ್ಟು ಪ್ರೀತಿಯೋ, ಅದೆಷ್ಟು ಅಭಿಮಾನವೋ.. ನಾನು ವಾಂಗಿ ಬಾತ್ ತಿನ್ನುತ್ತಿರುವಾಗ
"ಶೇಕ್ರಾ.. ಬಾ ಇಲ್ಲಿ.. ತಗೋ ಉಪ್ಪಿನಕಾಯಿ" ಅಂತ ಎರಡು ಪೀಸ್ ಕೊಟ್ಟರು..
"ಊಟ ಮುಗಿದಿದೆ ಸರ‍್ ನಂದು" ಅಂತ ಹೇಳಿದ್ರೂ ಅವರು ಬಿಡಲಿಲ್ಲ.. "ಊಟ ಮುಗಿದ್ಮೇಲೂ ಉಪ್ಪಿನಕಾಯಿ ತಿನ್ಬೋದು ಏನೂ ಆಗಲ್ಲ ತಿನ್ನಯ್ಯ" ಅಂತ ಬಲವಂತವಾಗಿ ನನ್ನ ತಟ್ಟೆಗೆ ಉಪ್ಪಿನಕಾಯಿ ಪೀಸ್ ಗಳನ್ನ ಹಾಕಿದರು..
ಚಂದ್ರನ ಬೆಳಕಿನಲ್ಲಿ ಊಟ ಮಾಡುತ್ತಿದ್ದ ನಮಗೆ "ಫುಟ್ಪಾತ್ ನಲ್ಲೇ ಮೂನ್ ಲೈಟ್ ಡಿನ್ನರ‍್"ವ್ಯವಸ್ಥೆ ಆದಂತಿತ್ತು.. ಮೇಷ್ಟ್ರು ಕೊಟ್ಟ ಉಪ್ಪಿನಕಾಯಿಯನ್ನು ಬಾಯಿಗೆ ಇಟ್ಟುಕೊಂಡೆ.. ಅರೆ.. ಅದು ಉಪ್ಪಿನಕಾಯಿಯಲ್ಲ.. ಚಿಕನ್ ಪೀಸುಗಳು...!!
ಚಿಕನ್ ಅಂದ್ರೆ ಉಳಿದವರು ಬೇಜಾರ‍್ ಮಾಡ್ಕೋತರೆ ಅಂತ ಉಪ್ಪಿನಕಾಯಿ ಹೆಸರಲ್ಲಿ ಚಿಕನ್ ತಿನ್ನಿಸಿಬಿಟ್ರು ಗುರುಗಳು.
ಊಟ ಮುಗಿದ ನಂತರ ಸ್ವಲ್ಪ ಕಾಲ ವಿಶ್ರಮಿಸಿದ ನಂತರ ಅಲ್ಲಿಗೆ 2 ಬಸ್ಸುಗಳು ಬಂದವು. ನಾವು ಸುಮಾರು 5 ದಿನಗಳ ಕಾಲ ಚಲಿಸಬೇಕಿದ್ದ ಬಸ್ಸುಗಳು ಅವು…10 ಗಂಟೆಗೆ ಹೊಸೂರಿನಿಂದ “ಭವಾನಿ” ಊರಿನ ಕಡೆಗೆ ನಮ್ಮ ಎರಡೂ ಬಸ್ಸುಗಳು ಚಲಿಸಿದವು.
ಬಸ್ಸು ಹೊರಡುವ ಮುನ್ನ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯಿತು…!!! ನಿಂಬೆ ಹಣ್ಣು
ಬಸ್ಸಿನ ಚಕ್ರದ ಕೆಳಗೆ ಇಟ್ಟು ಬಸ್ಸನ್ನು ಮುಂದಕ್ಕೆ ಚಲಿಸಲಾಯಿತು… ಅಲ್ಲಿಂದ
ಶುರುವಾಯಿತು ನಮ್ಮ ಪ್ರವಾಸದ ಅಸಲಿ ಪಯಣ…
2.ಬೆಳಗಿನ “ಭವಾನಿ”
(28-10-2010)
ಹೊಸೂರು
ರೈಲ್ವೇ ನಿಲ್ದಾಣದಿಂದ ಸುಮಾರು ೬ ಗಂಟೆಗಳ ಸುದೀರ್ಘ ಪಯಣ.. ರಾತ್ರಿ ೧೦ ಗಂಟೆಗೆ
ಆರಂಅಭವಾದ ನಮ್ಮ ಪ್ರಯಾಣ ಬೆಳಿಗ್ಗೆ ೪ ಗಂಟೆಗೆ (28-10-2010) ಭವಾನಿ ತಲುಪಿದೆವು. ದಾರಿಯುದ್ದಕ್ಕೂ ಹಾಡು, ಡ್ಯಾನ್ಸುಗಳ ಭರ್ಜರೀ ಕುಣಿತ. ಉಲ್ಲಾಸ-ಉತ್ಸಾಹದಲ್ಲಿದ್ದ ಎಲ್ಲರೂ ಕುಣಿತಕ್ಕೆ ಹೆಜ್ಜೆ ಹಾಕಿದರು.
ಏಕೆಂದರೆ ಹಾಡುಗಳೂ ರೋಮಾಂಚನಕಾರಿಯಾಗಿಯೇ ಇದ್ದವು. ಈ ಕಾರಣಕ್ಕಾಗಿಯೇ ಏನೋ ಹೊಸೂರಿನಿಂದ
ಭವಾನಿಯ ವರೆಗಿನ 6 ಗಂಟೆಗಳ ಪ್ರಯಾಣ ನಿರಾಯಾಸವಾಗಿ ಮುಗಿಯಿತು. ಕುಣಿತಕ್ಕೆ ಹೆಪ್ಪೆ
ಹಾಕಿದವರಲ್ಲಿ ನಾವೇ ಮೊದಲಿಗರು. “ರಾಜಹಂಸ” ತಂಡಕ್ಕೆ ಹಾಸ್ಯಮಯವಾಗಿ ಮತ್ತು ಮನರಂಜನೆ ನೀಡುವ ಉದ್ದೇಶದಿಂದಲೇ ನಾವೂ ತಯಾರಾಗಿಯೇ ಬಂದಿದ್ದೆವು. ಬಹುಶಃ ಇದೇ ಕಾರಣಕ್ಕಾಗಿಯೇ ಇರಬೇಕು ನಮ್ಮ ಆಹ್ವಾನಕ್ಕಾಗಿ ಸ್ನೇಹಿತರು ಕಾಯುತ್ತಿದ್ದಿದ್ದು…
ಬೆಳಿಗ್ಗೆ
4 ಗಂಟೆಗೆ ಭವಾನಿ ತಲುಪಿದೆವು. ಸ್ನಾನಕ್ಕಾಗಿ ಒಂದು ವ್ಯವಸ್ಥೆ ಮಾಡಿದ್ದರು. ಆದರೆ
ಆಲ್ಲಿ ಶುಚಿತ್ವವಿರದ ಕಾರಣ ಸ್ನಾನ ಪರಿಪೂರ್ಣವಾಗಲಿಲ್ಲ. ಸ್ನಾನದ ನಂತರ ಪಕ್ಕದಲ್ಲಿಯೇ
ಇದ್ದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಬೆಳಿಗ್ಗೆ
ಹೋದೆವು. ಆಗ ಬೆಳಿಗ್ಗೆ 5 ಗಂಟೆ. ಅದೊಂದು ದೊಡ್ಡ ದೇವಸ್ಥಾನ…. ಸುಂದರ ಪರಿಸರದ ನಡುವೆ
ಅದ್ಭುತ ಶಿಲೆಗಳಿಂದ ನಿರ್ಮಿಸಲಾದ ದ್ರಾವಿಡ ಶೈಲಿಯ ಕಟ್ಟಡ… ದೇವಸ್ಥಾನದ ಒಳಗೆ, ಹೊರಗೆ
ಓಡಡಿದೆವು. ಪೂಜೆ ಮಾಡಿ ದೇವರ ಆಶೀರ್ವಾದ ಪಡೆದೆವು. ಆ ದೇವಸ್ಥಾನದ ಪಕ್ಕದಲ್ಲಿಯೇ ನಮ್ಮ
ಕನ್ನಡ ನಾಡಿನ ಕಾವೇರಿ ನದಿ ಹರಿಯುತ್ತಿದೆ. ಆ
ಸೌಂದರ್ಯವನ್ನು ಮತ್ತು ದೇವಾಲಯದ ಆದ್ಭುತ ಕಲಾಕೃತಿಯನ್ನು ಕಣ್ಣಲ್ಲಿ ತುಂಬಿಕೊಳ್ಳುತಾ
ಕೆಲ ಸ್ಥಿರ ಚಿತ್ರ(ಫೋಟೊ)ಗಳನ್ನು ಸೆರೆ ಹಿಡಿದುಕೊಂಡೆವು. ನಂತರ ಹೊರಗೆ ಬಂದು ಚಹ
ಸೇವಿಸಿ ನಮ್ಮ ಪಯಣ ಮುಂದುವರಿಸಿದೆವು….
3. ಮಲಪುಜಾ ಡ್ಯಾಂ..
ಕಟ್ಟಿದ ಇಂಜಿನಿಯರ್ ಗೆ ಸಲಾಂ…!
ಭವಾನಿಯಿಂದ
6 ಗಂಟೆಗೆ ನಮ್ಮ ಪಯಣ ಆರಂಭಿಸಿದೆವು. ಸುಮಾರು 2.1/2 ಗಂಟೆಗಳ ಪಯಣದ ನಂತರ ಬೆಳಿಗ್ಗೆ
8.30ಕ್ಕೆ ದಾರಿಯ ಮಧ್ಯೆ ಒಂದು ಸುಂದರವಾದ ಪರಿಸರದಲ್ಲಿ ಬಸ್ಸು ನಿಲ್ಲಿಸಿದರು. ಶಿವ, ಬಸವ, ನಂದಿ, ಮೊದಲಾದ ಮೂರ್ತಿಗಳು ಅಲ್ಲಿದ್ದವು. ಸುತ್ತಮುತ್ತಲೂ ಹೊಲ-ಗದ್ದೆಗಳು. ಅಲ್ಲೇ ಕುಳಿತುಕೊಂಡು ಬೆಳಗಿನ ಉಪಹಾರ ಮುಗಿಸಿದೆವು… ಎಲ್ಲರೂ ತಟ್ಟೆಗಳನ್ನು ತಂದಿದ್ದರೆ ನಮ್ಮ ಮುರುಳಿ “ಪ್ಲಾಸ್ಟಿಕ್ ಬಾಳೆ ಎಲೆ”ಯನ್ನು ತಂದಿದ್ದ. ತೊಳೆಯಲೂ ಸುಲಭ. ಮಡಿಚಿ ಇಡಲೂ ಸುಲಭ ಎಂಬುದು ಅವನ ತಾತ್ಪರ್ಯ( ಐಡಿಯಾ.)….
ಕೇಸರೀ ಬಾತ್, ಮತ್ತು ಉಪ್ಪಿಟ್ಟು ಅಂದಿನ ಸ್ಪೆಷಲ್ ಆಗಿತ್ತು. ಉಪಹಾರ ಮುಗಿಸಿ ಆಲ್ಲಿಂದ ಕಾಲ್ಕಿತ್ತೆವು… ಕೇರಳ, ತಮಿಳುನಾಡಿನ ಪರಿಸರ, ಆಲ್ಲಿನ ಸೌಂದರ್ಯ, ಕಟ್ಟಡಗಳು, ಹೊಲಗಳು ಎಲ್ಲವನ್ನೂ ಗಮನಿಸುತ್ತಾ ಪಯಣ ಮುಂದುವರಿಸಿದೆವು.
ಮಧ್ಯಾಹ್ನ 1.15ಕ್ಕೆಸರಿಯಾಗಿ ನಾವು “ಮಲಪುಜಾ ಡ್ಯಾಂ” ತಲುಪಿದೆವು. ಮೊದಲಿಗೆ ಊಟ ಮುಗಿಸಿ ನಂತರ ಆಲ್ಲಿನ ಉದ್ಯಾನವನ ವೀಕ್ಷಣೆಗೆ ತೆರಳಿದೆವು…
ನಿಜಕ್ಕೂ
ಅದ್ಭುತವಾದ ಬೃಹತ್ ಅಣೆಕಟ್ಟನ್ನು ಕಟ್ಟಿದ್ದಾರೆ. ಅದರ ಮಧ್ಯೆ ನಾಲ್ಕು
ಕಾಲುವೆಗಳಿದ್ದು, ಅದರಿಂದ ನೀರು ಹರಿದು ಹೊರ ಬರುತ್ತದೆ. ಸುಂದರ ವಾತಾವರಣದ ಮಧ್ಯೆ ಆ
ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಮುಂಭಾಗ ಉದ್ಯಾನವನ ಇದೆ. ಅಲ್ಲಿ ಚಿಕ್ಕ ಸೇತುವೆ
ಇದೆ. “ರೋಪ್ ಕಾರು”ಗಳು ಇವೆ. ಆ ರೊಪ್ ಕಾರುಗಳ ಒಳಗೆ
ಕುಳಿತರೆ ಸಾಕು ವಿಮಾನದಂತೆ ಆಕಾಶದಲ್ಲಿ ಹಾರಾಡುತ್ತಾ ಉದ್ಯಾನವನವನ್ನು ಸಂಪೂರ್ಣವಾಗಿ
ಒಂದು ಸುತ್ತು ಹಾಕಿಕೊಂಡು ಮತ್ತೇ ಆದೇ ಜಾಗಕ್ಕೆ ಬಂದು ನಿಲ್ಲುತ್ತದೆ. ಆದಕ್ಕಾಗಿ ನಾವು
40 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಿದೆ ಅಷ್ಟೆ….ಆದರೆ ನಾವು ಉದ್ಯಾನವನವನ್ನು
ಸುತ್ತಿ-ಸುತ್ತಿ ಸುಸ್ತಾದೆವು. ಉಮೇಶ ಮತ್ತು ನಾನು ಆಲ್ಲಿಯೇ ಇದ್ದ ಐಸ್ ಕ್ರೀಂ ಅಂಗಡಿಗೆ ಹೋಗಿ ಐಸ್ ಕ್ರೀಂ ತಿಂದೆವು.
ಆಣೆಕಟ್ಟಿನ ಮೇಲೆ ನಿಂತು ನೆನಪಿನ ಕಾಣಿಕೆಯಂತೆ ಚಿತ್ರಗಳನ್ನು ಕ್ಲಿಕ್ಕಿಸಿದೆವು…
ಸುಮಾರು 2.1/2 ಗಂಟೆಗಳ ಕಾಲ ಸುತ್ತಾಡಿದೆವು. ಮತ್ತೆ ಆಲ್ಲಿಂದ ಸಂಜೆ ಸುಮಾರು 4 ಗಂಟೆಗೆ
ನಮ್ಮ ಪಯಣ ಆರಂಭವಾಯಿತು…..
4.ಅಧ್ಭುತ “ಗುರು”ವಾಯುರು
ಕೈಲಾಸವೇ ಕಣ್ಮುಂದೆ…..!
ಮಲಪುಜಾ ಡ್ಯಾಂ ನಿಂದ ಆರಂಭವಾದ ನಮ್ಮ ಪಯಣ ನಂತರ ತಲುಪಿದ್ದು ಕೇರಳದ ಆಧ್ಭುತ ಪ್ರದೇಶ, ಕೇರಳದ ಕೈಲಾಸ ಎಂದೇ ಕರೆಯಬಹುದಾದ “ಗುರುವಾಯುರು” ಪ್ರದೇಶಕ್ಕೆ. ಸಂಜೆ 4 ರಿಂದ 8 ಗಂಟೆಗೆಯವರೆಗೆ ಪ್ರಯಾಣಿಸಿದೆವು. ರಾತ್ರಿ 8.00 ಗಂಟೆಗೆ ಗುರುವಾಯುರು ತಲುಪಿದೆವು. ಆಲ್ಲಿನ ಬಾಬು ಲಾಡ್ಜ್ ನಲ್ಲಿ ನಮಗೆ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.
ಸುದೀರ್ಘ ಪ್ರಯಾಣ, ಓಡಾಟ, ಕುಣಿದಾಟ ಮಾಡಿದ್ದ ನಮಗೆ ಸಹಜವಾಗಿಯೇ ದಣಿವಾಗಿತ್ತು.
ಹೀಗಾಗಿ ರಾತ್ರಿ 8.00ಗಂಟೆಗೆ ಲಾಡ್ಜ್ ತಲುಪಿದಾಕ್ಷಣ ನಾವು ಮಲಗಿಬಿಟ್ಟೆವು. ಊಟ ಕೂಡ
ಮಾಡಲಿಲ್ಲ. ಆದರೆ 10.30ಕ್ಕೆ ರಾತ್ರಿಯ ಊಟವನ್ನು ತಯಾರಿಸಿ ಎಲ್ಲರನ್ನೂ ಕರೆದರು. ನಾನು
ನಿದ್ರೆಯ ಗುಂಗಿನಲ್ಲಿದ್ದರೂ ನನ್ನ ಸ್ನೇಹಿತರಾದ ಮುರುಳಿ, ಉಮೇಶ ನನ್ನನ್ನು ಬಿಡಲಿಲ್ಲ.
ನನ್ನನ್ನು ಎಳೆದೊಯ್ದು ಊಟ ಮಾಡಿಸಿದರು. ನಿದ್ರೆಯ ಮಧ್ಯೆ ಎದ್ದು ಪಿಶಾಚಿಯಂತೆ ರಾತ್ರಿ ಊಟ ಮಾಡಿದಂಥ ಆನುಭವ ನನ್ನದಾಗಿತ್ತು..
ಊಟ ಮುಗಿಸಿದ ತಕ್ಷಣ ಕೋಣೆಗೆ ಹೋಗಿ ಮತ್ತೆ ಮಲಗಿದೆ. ಬೆಳಿಗ್ಗೆ 4ಗಂಟೆಗೆ ಎದ್ದೇಳಿ
ದೇವಸ್ಥಾನಕ್ಕೆ ಹೋಗಬೇಕು ಎಂದು ನಮ್ಮ ಗುರುಗಳು ಹೇಳಿದ್ದರು. ಆದರೆ ನಾನು 4.30 ರವರೆಗೆ
ಮಲಗಿದ್ದೆ ಏಕೆಂದರೆ ಕುಣಿದು-ಕುಣಿದು ದಣಿವಾಗಿತ್ತು.
29-10-2010ರ ಬೆಳಿಗ್ಗೆ 4.30ಕ್ಕೆ ಎದ್ದು ಸ್ನಾನ ಮಾಡಿ ಪಂಚೆಯನ್ನು ತೊಟ್ಟು ಭಕ್ತ ಮಾರ್ಕಾಂಡೆಯನಂತೆ ದೇವಸ್ಥಾನಕ್ಕೆ ಹೊರಟೆವು.
ದೇವಸ್ಥಾನದ ನಿಯಮಗಳು
ಗುರುವಾಯುರು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುವುದು ಅಷ್ಟು ಸುಲಭವಲ್ಲ. ಅದಕ್ಕೆಂದೇ ಕೆಲವು ನೀತಿ ನಿಯಮಗಳಿವೆ. ಕಟ್ಟುಪಾಡುಗಳಿವೆ.
೧.ಗಂಡಸರು ಲುಂಗಿ ಅಥವ ಪಂಚೆಯನ್ನು ಮಾತ್ರ ಧರಿಸಬೇಕು. ಅಂಗಿ, ಬನಿಯನ್, ಪ್ಯಾಂಟು, ಇದಾವುದನ್ನೂ ಧರಿಸುವಂತಿಲ್ಲ..
೨.ಮಹಿಳೆಯರು ಕಡ್ಡಾಯವಾಗಿ ಸೀರೆ ಮಾತ್ರ ಧರಿಸಬೇಕು.
೩. ಕ್ಯಮೆರಾ, ಮೊಬೈಲ್, ಮುಂತಾದ ವಸ್ತುಗಳನ್ನು ಕೊಂಡೊಯ್ಯುವಂತಿರಲಿಲ್ಲ. ಮತ್ತು ಬಳಸುವಂತಿಲ್ಲ.
ಪ್ರವೇಶ ದ್ವಾರದಲ್ಲಿ ಬಿಗಿ ಪೋಲೀಸ್ ಭದ್ರತೆ ಇರುತ್ತದೆ.
ಅವರ ಜೊತೆಗೆ ದೇವಸ್ಥಾನದ ಕಾರ್ಯಕರ್ತರೂ ಇರುತ್ತಾರೆ. ನಿಯಮ ಉಲ್ಲಂಘಿಸಿದವರನ್ನು
ದೇವಸ್ಥಾನದ ಒಳಗೆ ಪ್ರವೇಶ ನೀಡುವುದಿಲ್ಲ. ಹಲವು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು
ಕಾದು ಕಾದು ಸುಸ್ತಾಗಿತ್ತು. ಆದರೂ ಬೆಂಬಿಡದ ಬೇತಾಳನಂತೆ ದೇವರ ದರ್ಶನ ಮಾಡಲೇ ಬೇಕೆಂಬ ಹಠದಿಂದ ಕಷ್ಟವಾದರೂ ಅದೇ ಸಾಲುಗಳಲ್ಲಿ ಮುಂದುವರಿದೆವು.
ದೇವಸ್ಥಾನದ ಒಳಗೆ ಪ್ರವೇಶಿಸಿದ ಕೂಡಲೇ ಮಂಗಳ ವಾದ್ಯಗಳು ಮೊಳಗುತ್ತಿದ್ದವು. ಕೈಲಾಸದಲ್ಲಿ ಆ ಪರಶಿವನ ಎದುರು ಮೊಳಗುತ್ತಿದ್ದಂಥ ಎಲ್ಲಾ ವಾದ್ಯಗಳೂ ಈ ಗುರುವಾಯೂರು ದೇವಸ್ಥಾನದಲ್ಲಿ ಮೊಳಗುತ್ತಿದ್ದವು.
ಸುಮಾರು 50ಕ್ಕೂ ಹೆಚ್ಚಿನ ವಾದ್ಯಗಾರರು ಅಲ್ಲಿ ಕಂಡುಬಂದರು. ದೇವಸ್ಥಾನದಲ್ಲಿ 3
ಗಜಪಡೆಗಳೂ ಇದ್ದು, ಅದರ ಮೇಲೆ ತಲಾ 3 ಜನರು ಕುಳಿತಿದ್ದರು. ಮಧ್ಯದ ಗಜ(ಆನೆ)ದ ಮೇಲೆ ಶ್ರೀ ಕೃಷ್ಣನ ವಿಗ್ರಹ ನಿಲ್ಲಿಸಲಾಗಿತ್ತು.
ಮಂಗಳ ವಾದ್ಯಗಳು ತಾಳಕ್ಕೆ ತಕ್ಕಂತೆ ಲಯಬದ್ಧವಾಗಿ ಮೊಳಗುತ್ತಿದ್ದವು. ಎಷ್ಟು ಕೇಳಿದರೂ
ಕೇಳಬೇಕು, ಏಷ್ಟು ನೋಡಿದರೂ ನೋಡಬೇಕು ಎಂಬ ಆಸೆ. ಈ ಕಣ್ ಮನಗಳಿಗೆ ತೃಪ್ತಿಯೇ
ಸಿಗುತ್ತಿಲ್ಲ ಎಂಬ ಭಾವನೆ. ಅಂತಹ ವಾದ್ಯಗಳ ಝೇಂಕಾರ ಕೈಲಾಸಕ್ಕೆ ಕೇಳಿದರೆ, ದೇವಾನು
ದೇವತೆಗಳೂ ಕ್ಷಣ ಮಾತ್ರದಲ್ಲಿ ಧರೆಗಿಳಿದು ನೃತ್ಯ ಮಾಡುತ್ತಾರೆ.
ಈ ವಾದ್ಯಗಳ ನಾದ ಕೇಳಿದರೆ “ ನಾನು ಧರೆಗಿಳಿದು ಆಲ್ಲಿಯೇ ನೆಲೆಸಿಬಿಡುತ್ತೇನೋ ಮಾನವರು
ನನ್ನಿಂದ ಎಂತಹ ವರವನ್ನು ಕೇಳಿ ನನ್ನನ್ನೇ ಸಿಲುಕಿಸುತ್ತಾರೋ ” ಎಂಬ ಭಯದಿಂದದ್ಲೋ ಏನೋ ಆ ಭಗವಂತ ಧರೆಗಿಳಿಯುವ ಮನಸ್ಸಿದ್ದರೂ ಸುಮ್ಮನಿರುವಂತೆ ಕಾಣಿಸುತ್ತಿದೆ. ನಿಜವಾಗಿಯೂ ಆ ದೇವರುಗಳನ್ನು ಧರೆಗೆ ಕರೆತರುವ ಆಧ್ಭುತ ಶಕ್ತಿ ಆ ವಾದ್ಯಗಳಿಂದ ಹೊರಡುತ್ತಿದ್ದ ನಾದಕ್ಕಿದೆ ಎಂಬುದು ನನ್ನ ಬಲವಾದ ನಂಬಿಕೆ…
ದೇವಸ್ಥಾನದ ಎದುರಿನ ಗರುಡಗಂಬದ ಬಳಿ ಈ ವಾದ್ಯಗಾರರು ನಾದ ಸ್ವರ, ಡೋಲು,
ಮೊದಲಾದವುಗಳನ್ನು ನುಡಿಸುತ್ತಿದ್ದರು. ನಂತರ ಅಲ್ಲಿಂದ ಮುಂದೆ ಹೋದಂತೆ ಗಣಪತಿ, ಕೃಷ್ಣ,
ಗುರುವಾಯುರಪ್ಪ, ಮೊದಲಾದ ದೇವರುಗಳ ದರ್ಶನ ಪಡೆದುಕೊಂಡೆವು. ಹಾಗೆಯೇ ಆಲ್ಲಿನ ದೇವಸ್ಥಾನದ
ವಾಸ್ತುಶಿಲ್ಪ, ಕಟ್ಟಡದ ಮಾದರಿ, ಕಟ್ಟಡದ ಶೈಲಿಯನ್ನು ಗಮನಿಸುತ್ತಾ ಮುಂದೆ ಸಾಗಿದೆವು…
ನಿಜವಾಗಲೂ ಅದೊಂದು ಆಧ್ಭುತ ದೇವಸ್ಥಾನ. ಮತ್ತು ಕಲೆಯ ಕಟ್ಟಡ, ಈಗಿನ ಕಾಲದಲ್ಲಿ ಎಂತಹ
ತಂತ್ರಜ್ನಾನಗಳಿದ್ದರೂ ಇಂತಹ ಕಟ್ಟಡ ಕಟ್ಟುವುದು ಅಸಾಧ್ಯವೆಂದೇ ಹೇಳಬಹುದು… ಪೂಜೆಯ
ನಂತರ 60ರೂಪಾಯಿಗಳ ಪ್ರಸಾದವನ್ನು ಪಡೆದು ಹೊರಬಂದೆವು. ಹೊರ ಬಂದು ಫೋಟೋಗಳನ್ನು
ಕ್ಲಿಕ್ಕಿಸಿಕೊಂಡೆವು. ಅಷ್ಟೊತ್ತಿಗಾಗಲೇ 7ಗಂಟೆ 30 ನಿಮಿಷ ಆಗಿತ್ತು.ಮರಳಿ ಬಾಬು
ಲಾಡ್ಜ್ ಗೆ ಬಂದೆವು. ಬೆಳಗಿನ ತಿಂಡಿ ತಿಂದೆವು. ಆದರೆ ಅದೇ ಪಂಚೆಯೊಂದಿಗೆ ಹಾಗೆ ನಮ್ಮ
ಪ್ರಯಾಣ ಮುಂದುವರಿಸಿದೆವು. ಬೆಳಿಗ್ಗೆ 8.30 ರ ಸುಮಾರಿಗೆ ಗುರುವಾಯುರು ಬಿಟ್ಟು ಹೊರಟೆವು. ಆದರೂ ಬಿಡದಂಥ ಸೆಳೆತ ನಮ್ಮನ್ನು ಸೆಳೆಯುತ್ತಿದ್ದಿದ್ದಂತೂ ಸತ್ಯ….
ಸುಮಾರು 11.00 ಗಂಟೆಗೆ ಶ್ರೀ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ತಲುಪುವ ಸೂಚನೆ ಇತ್ತು….
5. ಶಂಕರಾಚಾರ್ಯರ “ಕಾಲಡಿ”ಯಲ್ಲಿ..
(29-10-2010)
ಗುರುವಾಯೂರಿನಲ್ಲಿ ದರ್ಶನ ಪಡೆದು ಬೆಳಿಗ್ಗೆ 8.30 (29-10-2010)ಕ್ಕೆ ಉಪಹಾರ ಮುಗಿಸಿ ಅಲ್ಲಿಂದ ಹೊರಟೆವು.. ಗುರುವಾಯೂರು ದೇವಸ್ಥಾನಕ್ಕೆ ಪಂಚೆಯಲ್ಲಿ ಮತ್ತು ಹುಡುಗಿಯರು ಸೀರೆಯಲ್ಲಿಯೇ
ಹೋಗಿದ್ದರಿಂದ ಯಾರೂ ಬಟ್ಟೆ ಬದಲಾಯಿಸಬೇಡಿ ಹಾಗೇ ಇಂದಿನ ಪಯಣ ಸಾಗಲಿ ಎಂದು
ಎನ್.ಎಸ್.ಆರ್.ಸರ್ ಹೇಳಿದ್ದರು. ನಾವು ಅದೇ ವೇಷದಲ್ಲಿ ಹೊರಟೆವು. ಬೆಳಿಗ್ಗೆ 11.40ಕ್ಕೆ
ಸರಿಯಾಗಿ “ಅದ್ವೈತ ಸಿದ್ಧಾಂತ”ದ ಪ್ರತಿಪಾದಕ ಶ್ರೀ ಶಂಕರಾಚಾರ್ಯರ ಜನ್ಮಸ್ಥಳವಾದ ಕೇರಳದ ಕಾಲಡಿಯನ್ನು ತಲುಪಿದೆವು. ಆಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಮಠ ಇದೆ. ಸುಮಾರು ೧೪೫ ಅಡಿ ಎತ್ತರವಿರುವ ಕಟ್ಟಡದಲ್ಲಿ
ಶಂಕರಾಚಾರ್ಯರ ಜೀವನದ ಘಟನೆಗಳ ಸನ್ನಿವೇಶವನ್ನು ಗೋಡೆಯ ಮೇಲೆ ರೂಪಿಸಲಾಗಿದೆ.
ಕಟ್ಟಡವನ್ನು ಹತ್ತುವಾಗ ಅವೆಲ್ಲವನ್ನೂ ನೋಡುತ್ತಾ-ನೋಡುತ್ತಾ ಹತ್ತಬೇಕು. ಕಟ್ಟಡದ ತುದಿಯನ್ನು ತಲುಪುವವರೆಗೂ ಈ ಅಮೋಘ ಚಿತ್ರಗಳನ್ನು ಕಾಣಬಹುದು. ಕಟ್ಟಡವು ಗೋಲಾಕಾರವಾಗಿದ್ದು, ಕೆಂಪು ಬಣ್ಣದಿಂದ ಕೂಡಿದೆ. ಅಲ್ಲಿ ಕೆಲ ಫೋಟೊಗಳನ್ನು ಕ್ಲಿಕ್ಕಿಸಿದ ನಂತರ 12.20ಕ್ಕೆ ಮತ್ತೆ ನಮ್ಮ ಅಲೆಮಾರಿ ಪಯಣ ಆರಂಭಿಸಿದೆವು.
ಸಿಹಿ ಹಂಚಿದ ರಾಂಕ್ ಸ್ಟೂಡೆಂಟ್ಸ್ ಗಳು
ನಮ್ಮ
ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮ ಸ್ಥಾನ ಗಳಿಸಿದ ಚೇತನ್, ಚಿಕ್ಕಪ್ಪ,
ರೂಹಿ ಸುಲ್ತಾನ್ ಮೂವರು ಕ್ರಮವಾಗಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದರು. ಹೀಗಾಗಿ
ಅದಕ್ಕೆ ಅವರು ಬಸ್ಸಿನಲ್ಲಿಯೇ ಸಿಹಿ ಹಂಚಿದರು.
ಪಂಚೆ ಬಾಯ್ಸ್
V/S
ಚೂಡಿ ಗರ್ಲ್ಸ್ ಪಂದ್ಯ.
ಕಾಲಡಿಯಿಂದ ಕೊಚಿನ್ ಬೀಚ್ ಕಡೆಗೆ ನಮ್ಮ ಪಯಣ ಸಾಗಿತ್ತು. ಆಗ ನಮ್ಮ ಎನ್.ಎಸ್.ಆರ್. ಸರ್
ಒಂದು ವಿಭಿನ್ನ ಸ್ಪರ್ಧೆಯನ್ನು ಏರ್ಪಡಿಸಿದರು. ಆ ಪಂದ್ಯಕ್ಕಾಗಿ ಪ್ರತಿಯೊಬ್ಬರಿಂದಲೂ ೫
ರೂಪಾಯಿಯನ್ನು ಪಡೆಯಲಾಯಿತು. ಅಂತ್ಯಾಕ್ಷರಿಯ ಹಾಗೆ ಇದು ಆರಂಭಾಕ್ಷರಿ ಪಂದ್ಯ. ಒಂದು ಪದವನ್ನು ನೀಡುತ್ತಾರೆ. ಅದನ್ನು ಆಧರಿಸಿ ಹಾಡುಗಳನ್ನುಹಾಡಬೇಕು. ಹುಡುಗಿಯರಿಗೂ ನಮಗೂ ಪಂದ್ಯ ಆರಂಭವಾಯಿತು. ನಮ್ ಮಹಿಳಾ ಮಣಿಗಳು ಸಕಲ ಕಲಾ ವಲ್ಲಭರು ಹಿಂದಿ ಹಾಡು ಹಾಡಲು ಶಬಾನಾ ತಾಜ್, ರೂಹಿ ಸುಲ್ತಾನ್ ಮೊದಲಾದವರಿದ್ದರು. ತೆಲುಗು ಹಾಡುಗಳಲ್ಲಿ ಗಾಯತ್ರಿ, ಅರ್ಚನ,ಚೈತ್ರಾರನ್ನು ಮೀರಿಸುವವರು ಇರಲಿಲ್ಲ. ಆದರೆ ನಮ್ ಹುಡುಗರು ವೀರ ಕನ್ನಡಿಗರು. ಕೇವಲ ಕನ್ನಡ ಹಾಡುಗಳು ಬಿಟ್ಟರೆ ಬೇರೆ ಭಾಷೆಯ ಹಾಡುಗಳು ಬರೋದೇ ಇಲ್ಲ… ಇದೆಲ್ಲವನ್ನು ಅರಿತ ನಮಗೆ ಪಂದ್ಯದಲ್ಲಿನಾವು ಸೋಲುತ್ತೇವೆ ಎಂಬುದು ಅರಿವಾಯಿತು. ಆದರೆ ಛತ್ರಿ ಹುಡುಗರು ನಾವು ಅಂತಾ ನಿಮಗೆ ಗೊತ್ತಲ್ವಾ…!! ಗೆಲ್ಲೋಕೆ ನಾವು ವಾಮ ಮಾರ್ಗವನ್ನು ಅನುಸರಿಸಿದೆವು. ಅದೇನೆಂದರೆ ನಾವು ನಾಲ್ಕು ಜನ ಸೇರಿ ತತಕ್ಷಣದಲ್ಲಿ 2 ಸಾಲುಗಳ ಹಾಡನ್ನು ನಾವೇ ರಚನೆ ಮಾಡಿ ಗುಂಪಿನಲ್ಲಿ ಹಾಡುತ್ತಿದ್ದೆವು. ಅವರಿಗೆ ಇದು ಸಿನೆಮಾ ಹಾಡು ಅಲ್ಲ ಎಂದು ತಿಳಿದಾಗ “ಇದು ಹೊಸ ಸಿನೆಮಾ ಹಾಡು ಇನ್ನೂ ಬಿಡುಗಡೆಯಾಗಿಲ್ಲ. ಬೇಕಿದ್ರೆ ಟ್ರಿಪ್ ಮುಗಿದ ಮೇಲೆ ಹುಡುಕಿ ನೋಡಿ” ಅಂತಾ ಅವಾಜ್ ಬೇರೆ ಹಾಕುತ್ತಾ ಇದ್ದೆವು.
ಪಾಪ ನಮ್ಮ ಮಾತುಗಳಿಗೆ ಎದುರಾಡಲು ಸಾಧ್ಯವಾಗದೆ ಇದ್ದರೂ ಇರಬಹುದು ಎಂದು
ತೆಪ್ಪಗಾಗುತ್ತಿದ್ದರು. ಆದರೆ ಪಂದ್ಯದಲ್ಲಿ ಯಾರೂ ಸೋಲಲಿಲ್ಲ. ಯಾರೂ ಗೆಲ್ಲಲಿಲ್ಲ. ಯಾಕೆ
ಗೊತ್ತಾ..? ಅಷ್ಟರಲ್ಲಾಗಲೇ ಕೊಚ್ಚಿನ್ ಬೀಚ್ ತಲುಪಿದ್ದೆವು. ಹಾಗಾದರೆ ನಾವು ಕೊಟ್ಟಿದ್ದ ಪಂದ್ಯದ ಹಣ ಯಾರಿಗೆ ಸಿಗುತ್ತೆ…? ಇದು ನಿಗೂಢ ಸಂಗತಿ…!!
6.ಕೊಚ್ಚಿನ್ ಬೀಚ್ ನಲ್ಲಿ
ಮಸ್ತ್ ಬೋಟಿಂಗ್…….
ಶಂಕರಾಚಾರ್ಯರ
ಜನ್ಮ ಸ್ಥಳ “ಕಾಲಡಿ”ಯನ್ನು ನೋಡಿಕೊಂಡು 12.20ಕ್ಕೆ ಅಲ್ಲಿಂದ ಹೊರಟೆವು.. ಮಧ್ಯಾಹ್ನ
ಸುಮಾರು 1.30ಕ್ಕೆ ಸರಿಯಾಗಿ ನಾವು ಕೊಚ್ಚಿನ್ ಬೀಚ್ ತಲುಪಿದೆವು. ಏನೇ ಮಾಡಲು ದೇಹಕ್ಕೆ
ಶಕ್ತಿ ಬೇಕಲ್ವಾ..? ಅದಕ್ಕಾಗಿ ಮೊದಲು ಊಟ ಮುಗಿಸಿ ನಂತರ ಬೋಟಿಂಗ್ ಗೆ ಹೊರಟೆವು. 99ಜನ
ಪ್ರಶಿಕ್ಷಣಾರ್ಥಿಗಳ ಜೊತೆ 6 ಜನ ಶಿಕ್ಷಕರು ಒಂದೇ ಬೋಟಿಂಗ್ ನಲ್ಲಿ ಹೊರಟೆವು. ಆದರೆ
ಅಷ್ಟು ದಿನ ಬೋಟಿಂಗ್ ನಲ್ಲಿ ಬರಲು ನಿರಾಕರಿಸುತ್ತಿದ್ದ ನಮ್ಮ ಗುರುಗಳಾದ ವಿ. ನಾರಾಯಣಸ್ವಾಮಿಯವರೂ ಅಂದು ಬೋಟಿಂಗ್ ಗೆ ಬಂದಿದ್ದು ವಿಶೇಷ.
ಎರಡು
ಮಹಡಿಗಳ ಬೃಹತ್ ಬೋಟ್ ಅದಾಗಿತ್ತು. 50ಜನ ಕೆಳ ಮಹಡಿಯಲ್ಲಿ ಇನ್ನುಳಿದ 49 ಜನ ಮೇಲಿನ
ಮಹಡಿಯಲ್ಲಿ ಕುಳಿತರು. ನಾನು, ಕಿಶೋರ ಮೊದಲಾದವರು ಆರಂಭದಲ್ಲಿ ಮೇಲಿನ ಮಹಡಿಯಲ್ಲಿ
ಕುಳಿತೆವು. ಆದರೆ ಮೇಲೆ ನೃತ್ಯ ಮಾಡುವ ಹಾಗಿಲ್ಲ ಎಂದು ಅಲ್ಲಿನ ಬೋಟ್ ಸಿಬ್ಬಂದಿಗಳು
ಸೂಚಿಸಿದರು. ಅದಕ್ಕಾಗಿ ನಾವು ಕೆಳಗೆ ಹೋದೆವು. ಅಷ್ಟರಲ್ಲಿ ಆಗಲೇ ಕೆಳ ಮಹಡಿಯಲ್ಲಿ
ನೃತ್ಯದ ವೈಭವ ರಂಗೇರಿತ್ತು.ಈಗಾಗಲೇ ಐರಾವತ ಬಸ್ಸಿನ ನಾಯಕಿ ಅಂತಲೇ ಗುರುತಿಸಿಕೊಂಡಿದ್ದ ನಮ್ಮ ಪವಿತ್ರ ಅಕ್ಕನವರಿಂದ ಭರ್ಜರೀ ನೃತ್ಯ ವೈಭವ ನಡೆಯುತ್ತಿತ್ತು. ಆದರೆ ನಾವೇನು ಕಮ್ಮಿನಾ…? ನಮ್ಮ “ರಾಜ”ರ ಮರ್ಯಾದೆ ಉಳಿಸುವ ಸಲುವಾಗಿ ನಾನೂ ನಾಗೇಶ್(ನಾಗವಲ್ಲಿ) ಇಬ್ಬರೂ ಸೇರಿ ಹಿಂದಿಯ “ಧೂಂ” ಚಿತ್ರದ ಶಿರ್ಷಿಕೆ ಗೀತೆ “ಧೂಮಚಾಲೆ”ಗೆ ನೃತ್ಯ ಮಾಡಿದೆವು. ಕಿತ್ತೋದ ಕಿಶೋರ ನಮ್ಮ ನೃತ್ಯವನ್ನು ಮುನಿಸ್ವಾಮಿಯ ಕಿತ್ತೋದ ಮೊಬೈಲ್ ನಲ್ಲಿ ರೆಕಾರ್ಡ್ ಮಾಡ್ತಾಇದ್ದ…. ನೃತ್ಯ
ಚೆನ್ನಾಗಿತ್ತೋ ಅಥವ ಚೆನ್ನಾಗಿ ಇರಲಿಲ್ಲ್ವೋ ಗೊತ್ತಿಲ್ಲ. ಆದರೆ ಭರ್ಜರೀ ಚಪ್ಪಾಳೆಗಳು
ಮಾತ್ರ ಸಿಕ್ಕವು. ಎನ್.ಎಸ್.ಆರ್, ಲೀಲಾವತಿ ಮೇಡಂ, ಮೊದಲದ ಶಿಕ್ಷಕರಿಂದ ಉತ್ತಮ ಪ್ರಶಂಸೆ
ಕೂಡ ವ್ಯಕ್ತವಾಯಿತು. ಆದರೆ ನಮ್ಮ ಪವಿತ್ರ ಅಕ್ಕನವರ ನೃತ್ಯ ನಿಜಕ್ಕೂ ನಮ್ಮ
ನೃತ್ಯಕ್ಕಿಂತ ಸುಂದರವಾಗಿತ್ತು.
ಬೋಟ್
ಸಮುದ್ರದಲ್ಲಿ ಮುಂದಕ್ಕೆ ಚಲಿಸಿದಂತೆ ನಾವು ನೃತ್ಯವನ್ನು ನಿಲ್ಲಿಸಿದೆವು. ಏಕೆಂದರೆ
ಅಲ್ಲಿ ಹೊರಗಡೆ ದೊಡ್ಡ-ದೊಡ್ಡ ಬೋಟ್ ಗಳು, ಸಮುದ್ರ ತೀರದಲ್ಲಿ ಕಟ್ಟಿದ ಬೃಹತ್
ಕಟ್ಟಡಗಳು, ಸಿ.ಆರ್.ಪಿ.ಎಫ್. ಪೋಲೀಸರ ವಿಶೇಷ ಹಡಗುಗಳು ಅಲ್ಲಿ ಕಂಡು ಬಂದವು.
ದೈತ್ಯಾಕಾರದ ಹಡಗುಗಳನ್ನು ಕಂಡು ನಮಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಮೂಡಿತ್ತು.
ಬೀಚನ್ನು ಒಂದು ಸುತ್ತು ಹಾಕಿದೆವು. ಕೊಚ್ಚಿನ್ ನ ಆ ಬೀಚ್ ಅರಬ್ಬೀ ಸಮುದ್ರದ ತೀರವಾಗಿದೆ. ಅರಬ್ಬೀ ಸಮುದ್ರದ ನೀರಿನಲ್ಲಿ ಬೋಟಿಂಗ್ ಹೋದ ಖುಷಿ ನಮ್ಮದು. ಅಲ್ಲಿಂದ ಬಂದು ದಡ ಸೇರಿದೆವು.. ಖುಷಿ ಸಂತೋಷ ಎಲ್ಲವೂ ಮನ ತುಂಬಿತ್ತು. ದಡದಲ್ಲಿ ನಿಂತು ಆ ಸಮುದ್ರ ವನ್ನು ಒಮ್ಮೆ ನೋಡಿದೆ. ಆಗ ಸ್ವಲ್ಪ ಭಯವೂ ಮೂಡಿತು. ನಾವು ಸಮುದ್ರದಲ್ಲಿ ವಿಹರಿಸುತ್ತಿರುವಾಗ ಸುನಾಮಿ ಬಂದಿದ್ದರೆ……? ಅಬ್ಬಾ… ಕಲ್ಪನೆಯೇ ಎಷ್ಟೊಂದು ಭಯ ಹುಟ್ತಿಸುತ್ತದೆ ಆಲ್ವಾ…?
ನಂತರ ಅಲ್ಲೇ ದಡದಲ್ಲಿ ಓಡಡುತ್ತಿದ್ದಾಗ “ಒಬ್ಬ ಆದ್ಭುತ ಕಲಾವಿದ” ನಮ್ಮ ಕಣ್ಣಿಗೆ ಬಿದ್ದ. ದಡದ ಕಾಂಪೌಂಡ್ ಗೋಡೆಯ ಮೇಲೆ ವಿವಿಧ ಬಣ್ಣದ ಸೇಮೆಸುಣ್ಣದಿಂದ ಅಧ್ಭುತ ಚಿತ್ರಗಳನ್ನು ಕ್ಷಣ ಮಾತ್ರದಲ್ಲಿ ಬಿಡಿಸುತ್ತಿದ್ದ. ಸೇತುವೆಯ
ಮೇಲೆ ಹೋಗುತ್ತಿದ್ದ ರೈಲು ಅಪಘಾತವಾಗಿ ಸಮುದ್ರದಲ್ಲಿ ಮುಗುಚಿಕೊಂಡು ಸಮುದ್ರದೊಳಗೆ
ಬಿದ್ದ ಚಿತ್ರ, ಹಳ್ಳಿಗಾಡಿನ ರಸ್ತೆಯಲ್ಲಿ ಬಸ್ಸು ಬರುತ್ತಿದ್ದ ದೃಶ್ಯ ಮತ್ತು ಆ
ಬಸ್ಸಿಗಾಗಿ ಇಬ್ಬರು ಮಹಿಳೆಯರು ಅದಕ್ಕಾಗಿ ಕಾಯುತ್ತಿರುವ ದೃಶ್ಯಗಳನ್ನು ಬಣ್ಣದ
ಸೀಮೆಸುಣ್ಣದಿಂದ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದ… ಆದರೆ
ಹೊಟ್ಟೆಪಾಡಿಗಾಗಿ ಆ ಚಿತ್ರಕಾರ ಹೀಗೆ ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿದ ಎಂಬುದನ್ನು
ಕೇಳಿದ ನಂತರ ಕಣ್ಣಲ್ಲಿ ನೀರು ಬಂದಿತು. ಯಾಕೆಂದರೆ ಆತ ಒಬ್ಬ ಆದ್ಭುತ ಕಲಾವಿದ.ಅಂಥಾ
ಆದ್ಭುತ ಕಲಾಕಾರನಿಗೆ ಬೆಲೆಯೇ ಇಲ್ಲವೆ..? ದೇಶ
ವಿದೇಶಗಳಲ್ಲಿ ಕೋಟಿ ಕೋಟಿ ವ್ಯವಹಾರ ವ್ಯವಹರಿಸುವ ಮತ್ತು ಕೆಟ್ಟ ಕೆಟ್ಟ ಸಿನೆಮಾಗಳಿಗೆ
ಕೋಟಿ ಕೋಟಿ ಹಣ ಹಾಕಿ ಮೋಸ ಹೋಗುವ ಚಿತ್ರ ನಿರ್ಮಾಪಕರಿಗೆ, ವ್ಯಾಪಾರಸ್ಥರಿಗೆ ಇಂಥಾ “ಫುಟ್ ಪಾತ್ ಕಲಾಕಾರ ಕಾಣಲೇ ಇಲ್ಲ.” ಆ ಬಡ ಕಲಾಕಾರ ನನ್ನಂತೆಯೇ ತೆಳ್ಳಗಿದ್ದ. ಮುಖದಲ್ಲಿ ನಿರುತ್ಸಾಹ,. ಹೊಟ್ಟೆಪಾಡಿಗಾಗಿ ಆತ ಪಡುವ ಸಂಕಟ ಎಲ್ಲವೂ ಕಂಡು ನನ್ನ ಕಣ್ಣಲ್ಲಿ ನೀರು ತುಂಬಿ ಬಂತು. ಆದರೆ ಆತನಿಗೆ ನನ್ನಿಂದ ಮಾಡಬಹುದಾದ ಸಹಾಯವಾದ್ರೂ ಏನು….? ಕೇವಲ ಧನ ಸಹಾಯ ಮಾತ್ರ. ತತಕ್ಷಣದಲ್ಲಿ ಹಣನೀಡಿದೆ. ಆದರೆ ಆತನ ಜೀವನ ಸುಧಾರಿಸುವ ಆಸೆ ನನ್ನದಾಗಿತ್ತು...
ಆದರೆ ನನ್ನ ಜೀವನವೇ ಸುಧಾರಿಸಿಲ್ಲ. ಇನ್ನು ಇತರರ ಜೀವನ ಸುಧಾರಿಸುವ ಶಕ್ತಿ ನನ್ನಲ್ಲಿ
ಇಲ್ಲವೆಂದು ಆರಿತು ಸುಮ್ಮನಾದೆ. ಮುಂದೊಂದು ದಿನ ನನಗೆ ಅಂಥಾ ಶಕ್ತಿ ಬಂದರೆ, ನನ್ನಲ್ಲಿ
ಹಣ, ಅಧಿಕಾರ ಬಂದರೆ, ಬಡ ಪ್ರತಿಭೆಗಳನನ್ನು ಹೊರತಂದು ಸೂಕ್ತ ಗೌರವದ ಸ್ಥಾನಮಾನ
ನೀಡುತ್ತೇನೆ. ಆದರೆ ಆಲ್ಲಿಯವರೆಗೂ ಆ ಬಡ ಕಲಾವಿದ ಇರುವನೆ…? ಎಂಬ ಪ್ರೆಶ್ನೆಯೊದಿಗೆ ನಾನು ಬಸ್ಸು ಹತ್ತಿದೆ. ಬಸ್ಸಿನಲ್ಲಿ ಕುಳಿತಿದ್ದರೂ ಆ ಬಡ ಕಲಾವಿದನ ಚಿತ್ರಗಳು ನನ್ನ ಕಣ್ಮುಂದೆಯೇ ಕಾಣುತ್ತಿದ್ದವು.
7.ತ್ರಿವೆಂಡ್ರಂನಲ್ಲಿ “ಶಿವರಾತ್ರಿ ಜಾಗರಣೆ”…!
ರೂಂ ಗಾಗಿ ಪರದಾಟ. ರಾತ್ರಿಯೆಲ್ಲಾ ಸೊಳ್ಳೆ ಕಾಟ……!!
ಕೊಚ್ಚಿನ್
ಬೀಚ್ ನಲ್ಲಿ ಬೋಟಿಂಗ್ ಮಾಡಿದ ನಂತರ ಮಧ್ಯಾಹ್ನ ಸುಮಾರು 3.30ಕ್ಕೆ ಅಲ್ಲಿಂದ
ತ್ರಿವೆಂಡ್ರಂಗೆ ಹೊರಟೆವು. ಮಾಮೂಲಿ ಹಾಡು, ನೃತ್ಯಗಳೊಂದಿಗೆ ನಮ್ಮ ಪಯಣ ಸಾಗಿತ್ತು.
ಆದರೆ ನನಗೆ ಆ ಕಲಾವಿದನ ನೆನಪಾಗಿ ಆ ನೃತ್ಯದಲ್ಲಿ ನಾನು ಭಾಗವಹಿಸದೇ ಸುಮ್ಮನೇ
ಕುಳಿತಿದ್ದೆ. ಸ್ನೇಹಿತರ ಒತ್ತಾಯದ ಮೇರೆಗೆ ಮತ್ತೆ ನೃತ್ಯದಲ್ಲಿ ತಲ್ಲೀನನಾದೆ. ಸಂಜೆ
7.30ರ ಸಮಯ. ಆಡುಗೆ ಕಾಂಟ್ರ್ಯಾಕ್ಟರ್ ಮತ್ತು ಅವರ ತಂಡದವರು ಮಧ್ಯ ದಾರಿಯಲ್ಲಿ
ಬಸ್ಸುಗಳನ್ನು ನಿಲ್ಲಿಸಿ, ರಸ್ತೆಯ ಬದಿಯಲ್ಲಿಯೇ ಅಡುಗೆ ಮಾಡಲು ಸಿದ್ಧರಾದರು. ಏಕೆಂದರೆ, ನಾವು ತ್ರಿವೆಂಡ್ರಂ ತಲುಪುವುದು ಮಧ್ಯರಾತ್ರಿಯಾಗುತ್ತದೆ ಎಂದು ತಿಳಿದಿತ್ತು.
“ಅಂಬಲ ಪುಜಾ” ಎಂಬ ಪ್ರದೇಶದಲ್ಲಿ ರಾತ್ರಿ ಊಟಕ್ಕಾಗಿ ತಯಾರಿ ಮಾಡುತ್ತಿದ್ದೆವು.
ನಾವು ಬಸ್ಸಿನಿಂದ ಕೆಳಗಿಳಿದು ಓಡಾಡಿಕೊಂಡು ಊರು ಸುತ್ತಿದೆವು. ರಾತ್ರಿಯಾಗಿದ್ದರಿಂದ
ಏನೂ ಕಾಣಿಸುತ್ತಿರಲಿಲ್ಲ.ಆಲ್ಲಿನ ಕತ್ತಲೆ ಹೇಗಿತ್ತು ಅಂದ್ರೆ, ನಾವು ಬಸ್ಸು ಇಳಿದ ಜಾಗ
ಶಿವನ ದೇವಸ್ಥಾನದ ಮಹಾ ದ್ವಾರವಾಗಿತ್ತು. ಆ ದ್ವಾರದ ಮೇಲೆ ಈಶ್ವರ ವಿಗ್ರಹ ಇತ್ತು ಎಂಬುದು ಒಂದು ಗಂಟೆ ತಡವಾಗಿ ನಮಗೆ ಗೋಚರಿಸಿತು ಎಂದರೆ ಅಲ್ಲಿನ ಕಗ್ಗತ್ತಲೆಯ ಬಗ್ಗೆ ನೀವೇ ಊಹಿಸಿಕೊಳ್ಳಿ. ರಾತ್ರಿಯಾಗಿದ್ದರಿಂದ ದೇವಸ್ಥಾನದ ಪ್ರವೇಶದ ಸಾಹಸ ಮಾಡಲಿಲ್ಲ. ಏಕೆಂದರೆ ಅಲ್ಲಿ ಸುತ್ತಮುತ್ತಲೂ ಹುಲ್ಲು, ಪೊದೆಗಳು, ಕಲುಷಿತಗೊಂಡಿದ್ದ ಪುಟ್ಟ ಕಲ್ಯಾಣಿ(ನೀರಿನ ತಾಣ) ಅಲ್ಲಿತ್ತು… ಹೀಗಾಗಿ ರಾತ್ರಿ ಓಡಾಡುವುದು ಸೂಕ್ತವಲ್ಲ ಎಂದು ಪರಿಗಣಿಸಿ ಸುಮ್ಮನಾದೆವು. ಅಲ್ಲಿ
ಕಗ್ಗತ್ತಲು ಇತ್ತು ಅಂತಾ ಹೇಳಿದ್ದೆ. ಆದರೆ ಆಲ್ಲಿ ಕಲ್ಯಾಣಿ ಇದ್ದದ್ದು ಹೇಗೆ
ತಿಳಿಯಿತು…? ಎಂಬ ಅನುಮಾನ ನಿಮ್ಮನ್ನು ಕಾಡುತ್ತಿರಬಹುದು… ನಿಜಾ.. ಅಲ್ಲಿನ ಕಲುಷಿತ ಕಲ್ಯಾಣಿ ನೀರಿನಿಂದ ಹೊರಬರುತ್ತಿದ್ದ ಗಂಧದ ಪರಿಮಳವನ್ನು ಸವಿದರೂ ಅಲ್ಲಿನ ನೀರಿನ ಬಗ್ಗೆ ಅರಿವಾಗದೇ ಇರುವುದಿಲ್ಲವೇ…? ನಂತರ ನಿಧಾನವಾಗಿ ಕಣ್ಣಾಡಿಸಿ ನೋಡಿದಾಗ ಅಲ್ಲಿ ಕಲ್ಯಾಣಿ ಇದ್ದದ್ದು ಸ್ಪಷ್ಟವಾಯಿತು…
ರಾತ್ರಿ
ಸುಮಾರು 8.30ಕ್ಕೆ ಸರಿಯಾಗಿ ಅಡುಗೆ ತಯಾರಾಯಿತು.ರಾತ್ರಿ ಊಟವನ್ನು ಎಲ್ಲರೂ ನಡು
ರಸ್ತೆಯ ರಸ್ತೆ ವಿಭಜಕದ(ರೋಡ್ ಡಿವೈಡರ್) ಮೇಲೆ ಕುಳಿತು ಊಟ ಮುಗಿಸಿದೆವು. ನಮ್ಮದೊಂದು ಥರ ಅಲೆಮಾರಿಗಳ ಜೀವನವನ ಆಗಿತ್ತು. ಎಲ್ಲೋ ಊಟ, ಎಲ್ಲೋ ನಿದ್ರೆ….!!
ಊಟದ ನಂತರ ರಾತ್ರಿ ಸುಮಾರು 9.15ಕ್ಕೆ ಸರಿಯಾಗಿ ಮತ್ತೆ ನಮ್ಮ ಪಯಣ ಆರಂಭವಾಯಿತು…ನೃತ್ಯ ವೈಭವದೊಂದಿಗೆ “ರಾಜರ ಅಂಬಾರಿ” ಮುಂದೆ ಸಾಗುತ್ತಿತ್ತು. ಮಧ್ಯ ರಾತ್ರಿ 3.30ಕ್ಕೆ ತ್ರಿವೇಂಡ್ರಂ ತಲುಪಿದೆವು.(30-10-2010)
ತ್ರಿವೇಂಡ್ರಂ ತಲುಪಲು ಸುಮಾರು 10 ಗಂಟೆಗಳ ಕಾಲ ಸುದೀರ್ಘ ಪ್ರಯಾಣ ಮಾಡಿದ್ದೆವು. ಎಲ್ಲರಿಗೂ ದಣಿವಾಗಿತ್ತು. ಆದರೆ ಅಲ್ಲಿ ತಂಗಲು(ಊಳಿದುಕೊಳ್ಳಲು) ವಸತಿ ವ್ಯವಸ್ಥೆ ಆಗಿರಲಿಲ್ಲ.
ನಮ್ಮ ಗುರುಗಳಾದ ಪ್ರೊ! ಕೋಡಿ ರಂಗಪ್ಪ, ಪ್ರೊ! ಜಿ.ಪಿ. ಬಾಹುಬಲಿ, ಲೋಕನಾಥ್ ಮತ್ತು
ಅಡುಗೆ ಕಾಂಟ್ರಾಕ್ಟರ್ ವೆಂಕಟೇಶ್ ಎಲ್ಲರೂ ವಸತಿಗಾಗಿ ಇಡೀ ತ್ರಿವೇಂಡ್ರಂನ್ನು
ಸುತ್ತಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸುಮಾರು ಮುಂಜಾನೆ 3 ಗಂಟೆಯವರೆಗೂ ನಾವು
ಚಳಿಯಲ್ಲಿ ಹೊರಗೆ ಕುಳಿತಿದ್ದೆವು. ಸುತ್ತಲಿನ ಪ್ರದೇಶದಲ್ಲಿ ಕೊಳಚೆ ನೀರು, ಕಸ ಇದ್ದ
ಕಾರಣ ಸೊಳ್ಳೆಗಳು ಹೆಚ್ಚಾಗಿದ್ದವು. ಆ ಸೊಳ್ಳೆಗಳ ಜೊತೆ ನಮ್ಮ ಪರದಾಟ ಹೇಳತೀರದು. ಆ ಸೊಳ್ಳೆಗಳಿಂದ ಪಟ ಪಟ ಎಂದು ನಮ್ಮ ಮೈ ಗೆ ನಾವೇ ಹೊಡೆದುಕೊಳ್ಳುವ ಶಿಕ್ಷೆ. ಆದರೆ ಅದರ ಮುಂದೆಯೇ ಒಂದು ದೇವಸ್ಥಾನವಿತ್ತು ಆದರೆ ಅಲ್ಲಿ ಹೋಗಲು ಆಗಲಿಲ್ಲ.
ನಮ್ಮ ಎನ್.ಎಸ್.ಆರ್. ಸರ್ ಜೊತೆ ಮಾತನಾಡುತ್ತಾ, ಹರಟೆ ಹೊಡೆಯುತ್ತಾ, ಆ ಸೊಳ್ಳೆಗಳೊಂದಿಗೆ ಬೆರೆತೆವು… ನಂತರ ರೂಂ ಹುಡುಕಲು ಹೋಗಿದ್ದ ನಮ್ಮ ಗುರುಗಳ ತಂಡ ಹರ ಸಾಹಸ ಪಟ್ಟು ಒಂದು ರೂಂ ನೋಡಿಕೊಂಡು ಬಂದರು.. ಅಷ್ಟೊತ್ತಿಗಾಗಲೇ 3 ಗಂಟೆಯಾಗಿತ್ತು. ಆದರೆ ರೂಮಿನ ಬಾಡಿಗೆ ಒಂದು ರಾತ್ರಿಗೆ 3000 ರೂಪಾಯಿಗಳು.…!!!
ಆದರೆ ನಾವು ಮಲಗುವುದು ಕೇವಲ 2 ಗಂಟೆಗಳು ಮಾತ್ರ… ಒಂದು ಲೆಕ್ಕದಲ್ಲಿ ಹೇಳುವುದಾದರೆ ಒಂದು ಗಂಟೆಗೆ 1.500 ರೂಪಾಯಿ ಬಾಡಿಗೆ…!!
ಆದರೆ
ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ನಮ್ಮ ಗುರುಗಳಿಗೆ ಆ ಮೊತ್ತದ ಹಣ
ದುಬಾರಿ ಎನಿಸಲಿಲ್ಲ. ಹೆಣ್ಣುಮಕ್ಕಳನ್ನು ಅಲ್ಲಿಯೇ ಇದ್ದ ಕೊಠಡಿಯಲ್ಲಿ ತಂಗಲು ವ್ಯವಸ್ಥೆ
ಮಾಡಲಾಯಿತು. ಕೇವಲ ಹುಡುಗರಿಗಾಗಿ ಮಾತ್ರ 3000ಮೊತ್ತದ ರೂಂ ವ್ಯವಸ್ಥೆ ಮಾಡಲಾಗಿತ್ತು.
ಹಣ ದುಬಾರಿ ಎಂದುಕೊಂಡರೂ ಅಲ್ಲಿನ ವ್ಯವಸ್ಥೆ ಮಾತ್ರ ಸುಂದರವಾಗಿತ್ತು. ಮಂಚ, ಕುಷನ್
ಬೆಡ್ ವ್ಯವಸ್ಥೆಯೂ ಇತ್ತು.
“ಅತುಕಲ್” ಎಂಬ ಪ್ರದೇಶದ “ಧನ ಲಕ್ಷ್ಮಿ ಬ್ಯಾಂಕ್” ನ ೪ನೇ ಮಹಡಿಯಲ್ಲಿ ನಾವು ತಂಗಿದ್ದೆವು. ರಾತ್ರಿ ಹೆಚ್ಚು ಸಮಯವಾದ್ದರಿಂದ ನಮಗೂ ನಿದ್ರೆ ಬೇಗ ಬಂದಿತು. ಅದೂ ಅಲ್ಲದೆ ಮೆತ್ತನೆಯ ಹಾಸಿಗೆ ಸುಮ್ಮನೆ ಬಿಡುವುದೇ…? ನಮ್ಮನ್ನು ನಿದ್ರಾ ಪ್ರಪಂಚಕ್ಕೆ ಕ್ಷಣಮಾತ್ರದಲ್ಲಿ ಕರೆದೊಯ್ಯಿತು.
ಬೆಳಿಗ್ಗೆ 6 ಗಂಟೆಗೆ ಎದ್ದು ಸ್ನಾನ ಮಾಡಿದೆವು. ನನ್ನ ಬಳಿ ಹಣ ಇಲ್ಲದ ಕಾರಣ ಅಲ್ಲಿಯೇ ಇದ್ದ ಎ.ಟಿ.ಎಂ. ನಿಂದ 200 ರೂಪಾಯಿಗಳನ್ನು ತೆಗೆದುಕೊಂಡೆ.
ಅಲ್ಲಿಯೇ ಕೆಲ ಫೋಟೊಗಳನ್ನು ಕ್ಲಿಕ್ಕಿಸಿ ನಂತರ ಎಲ್ಲರೂ ಮರಳಿ ರಾತ್ರಿ ಸೊಳ್ಳೆಗಳಿಂದ
ಕಚ್ಚಿಸಿಕೊಂಡಿದ್ದ ಮತ್ತು ಹುಡುಗಿಯರು ತಂಗಿದ್ದ ಬಸ್ ಮತ್ತು ರೂಂ ಬಳಿಗೆ ಬೆಳಿಗ್ಗೆ
8.30ಕ್ಕೆ ಬಂದೆವು ಬರುವಷ್ಟರಲ್ಲಿ ಬೆಳಗಿನ ಉಪಹಾರ ತಯಾರಿತ್ತು. ಆಗಲೇ ನಮ್ಮ ಮಹಿಳಾ
ಮಣಿಗಳು ತಿಂಡಿ ತಿಂದು ದೇವಸ್ಥನವನ್ನು ಸುತ್ತಿ ಬಂದಿದ್ದರು. ನಮಗೆ ಬಿಡದಂತೆ ಎಲ್ಲವನ್ನೂ
ಅವರೇ ತಿಂದಿದ್ದಾರೆಯೇ ಎಂಬ ಭಯವೂ ಆಯಿತು… ನಾವು ಬೇಗ ಹೋಗಿ ಸಿಕ್ಕಿದ್ದಷ್ಟನ್ನು ತಿಂದು
ಚಹಾ ಕುಡಿದೆವು.. ಆದರೆ ಸಮಯದ ಅಭಾವ ಇದ್ದದ್ದರಿಂದ ಎದುರಿಗಿದ್ದ ದೇವಸ್ಥಾನದ ಬಳಿಗೆ
ಮಾತ್ರ ಹೋಗಲು ಸಾಧ್ಯವಾಗಲಿಲ್ಲ.ಹೀಗಾಗಿ ಹಾಗೆಯೇ ವಾಪಸ್ ಬಂದೆವು…
8. ಕೋವಲಂ ಬೀಚ್
ಸಮುದ್ರದಾಳದಲ್ಲಿ ‘ಸ್ನಾನ’….!!
(30-10-2010)
ತ್ರಿವೇಂಡ್ರಂನಿಂದ
ಬೆಳಿಗ್ಗೆ 9 ಗಂಟೆಗೆ ನಮ್ಮ ಪಯಣ ಆರಂಭಿಸಿದೆವು. ಮಧ್ಯಾಹ್ನ ಸುಮಾರು 12.30ಕ್ಕೆ ನಾವು
ಕೋವಲಂ ಬೀಚ್ ತಲುಪಿದೆವು. ಅಲ್ಲಿ ಸಮುದ್ರ ಸ್ನಾನಕ್ಕೆ ನಮ್ಮ ಗುರುಗಳು ಅವಕಾಶ
ಕಲ್ಪಿಸಿಕೊಟ್ಟರು. ಜೊತೆಗೆ ಎಚ್ಚರಿಕೆ ಮತ್ತು ಸೂಚನೆಗಳನ್ನು ನೀಡಿ ನಮ್ಮನ್ನು ಸಮುದ್ರಕ್ಕೆ ಬಿಟ್ಟರು…!!
ನಮ್ಮ
ಬಟ್ಟೆಗಳನ್ನು ತೆಗೆದುಕೊಂಡು ಸಮುದ್ರದ ದಂಡೆಗೆ ಬಂದೆವು. ದಡದಲ್ಲಿ ಎನ್.ಎಸ್.ಆರ್.ಸರ್
ಇದ್ದರು. ಅಲ್ಲಿಯೇ ನಮ್ಮ ಬಟ್ಟೆಗಳನ್ನು ಇಟ್ಟು ನ್ಸಮುದ್ರದಲ್ಲಿ ಇಳಿದೆವು. ನನ್ನ
ಜೀವನದಲ್ಲಿ ಮೊದಲ ಬಾರಿಗೆ ಸಮುದ್ರದಲ್ಲಿ ಇಳಿದಿದ್ದು ಅಂದರೆ ಕೋವಲಂ ಬೀಚ್ ನಲ್ಲಿ.
ಅಲೆಗಳ ಬಿರುಸಿನ ಹೊಡೆತ, ಉಪ್ಪು ನೀರಿನ ಹೊಸ ಅನುಭವ, ಎಲ್ಲವೂ ಆಕರ್ಷಣೀಯ ಮತ್ತು ಮನ
ಮೋಹಕ. ಜೊತೆಗೆ ಒಂದು ಚಿಕ್ಕ ಭಯ… ಏನು ಅಂತೀರಾ…? ಸುನಾಮಿ ಬಂದರೆ..?
ಏನು ಮಾಡೋದು..? ಏನೇ ಆದರೂ ಹೆದರಲಿಲ್ಲ. ಅಲೆಗಳ ಅಬ್ಬರಕ್ಕೆ ಹೆದರದೇ ಸಮುದ್ರಕ್ಕೆ
ವಿರುದ್ಧವಾಗಿ ಈಜುವ ಸಾಹಸವೂ ಮಾಡಿದೆವು. ಆದರೆ ಅದು ಅಸಾಧ್ಯ ಎಂಬುದು ನಮಗೆ
ಗೊತ್ತಿತ್ತು. 2 ಗಂಟೆಗಳ ಕಾಲ “ಸಮುದ್ರದಲ್ಲಿ ಅಭ್ಯಂಜನ” ಮಾಡಿದೆವು.
ನಮ್ಮ ಹೆಣ್ಣು ಮಕ್ಕಳು ಅಂದ್ರೆ ನಮ್ಮ ಕಾಲೇಜಿನ ಮಹಿಳಾ ಮಣಿಗಳು ಸಮುದ್ರದಲ್ಲಿ ಇಳಿದರು.
ಆದರೆ ದಡ ಬಿಟ್ಟು ಒಳಗೆ ಬರುವ ಸಹ ಮಾಡಲಿಲ್ಲ. ನಂತರ ನಾವು ಸಮುದ್ರದಿಂದ ಹೊರ ಬಂದು
ಸ್ನಾನದ ಕೊಠಡಿಗೆ ಹೋಗಿ ಸ್ನಾನ ಮಾಡಿಕೊಂಡು ಹೊರ ಬಂದೆವು. ಸ್ನಾನಕ್ಕೆ 10 ರೂಪಾಯಿಯ ಶುಲ್ಕವಿತ್ತು. ನಂತರ ಸಮುದ್ರ ತೀರದಿಂದ ಬಸ್ ಬಳಿಗೆ ಬಂದೆವು. ಬಿರು ಬಿಸಿಲು ಇದ್ದ ಕಾರಣ ನಮ್ಮ ದೇಹ ತಂಪಾಗಿಸಿಕೊಳ್ಳಲು ಐಸ್ ಕ್ರೀಂ ತಿನ್ನುತ್ತಾ ಬಂದೆವು.
ಅಷ್ಟರಲ್ಲಿ ಮಧ್ಯಾಹ್ನ 2.10 ಆಗಿತ್ತು. ಮಧ್ಯಾಹ್ನದ ಊಟ ಮುಗಿಸಿದೆವು ಆದರೆ ಅಲ್ಲಿ
ನೀರಿನ ಅಭಾವವಿತ್ತು ಹೀಗಾಗಿ ಪಕ್ಕದಲ್ಲಿ ಇದ್ದ ತೋಟದ ಬಾವಿಯಲ್ಲಿ ಹೋಗಿ ನೀರು
ಕುಡಿದೆವು. ನಂತರಮತ್ತೆ ನಮ್ಮ ಪಯಣ ಆರಂಭವಾಯಿತು. 2.40ಕ್ಕೆ ಕೋವಲಂ ಬೀಚ್ ನಿಂದ
ಹೊರಟೆವು.
9. ಭಾರತದ ತುತ್ತ ತುದಿ-ಕನ್ಯಾಕುಮಾರಿ
ನೋಡದಿದ್ದವನು ಪಾಪದ ಕುರಿ,
ಕನ್ಯಾಕುಮಾರಿ ನೋಡುವುದೇ ನಮ್ಮ ಗುರಿ….!!
ಕೋವಲಂ ಬೀಚ್ ನಲ್ಲಿ ಸಮುದ್ರ ಸ್ನಾನ ಮುಗಿಸಿ ಊಟ ಮಾಡಿದ ನಂತರ 2.40ಕ್ಕೆ ನಮ್ಮ ಪಯಣ ಭಾರತದ ತುತ್ತ ತುದಿ ಕನ್ಯಾಕುಮಾರಿಯ ಕಡೆಗೆ ಸಾಗಿತ್ತು.
“ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ದೇಶವೇ ಭರತ ಖಂಡ” ಅದರ ಒಂದು ತುದಿಯನ್ನು ನೋಡುವ ಆಸೆ, ಕುತೂಹಲ, ಮತ್ತು ಸಂತೋಷ ನನ್ನದಾಗಿತ್ತು. ಸಂಜೆ 6 ಗಂಟೆಗೆ ಕನ್ಯಾಕುಮಾರಿಯ “ವಿವೇಕಾನಂದ ಪುರ” ತಲುಪಿದೆವು…
ವಿವೇಕಾನಂದರ
ಆಶ್ರಮದಲ್ಲಿ ತಂಗಿದೆವು. ಮುಖ ತೊಳೆದುಕೊಂಡು ವಿವೇಕಾನಂದರ ವಸ್ತು ಸಂಗ್ರಹಾಲಯಕ್ಕೆ
ಭೇಟಿ ನೀಡಿ ಅವೆಲ್ಲವನ್ನು ಅಭ್ಯಶಿಸಿದೆವು. ಅಲ್ಲಿಂದ 6.30ಕ್ಕೆ ಕನ್ಯಾಕುಮಾರಿ
ದೇವಸ್ಥಾನಕ್ಕೆ ತೆರಳಿದೆವು ಬಸ್ಸಿನಲ್ಲಿ ವಿವೇಕಾನಂದ ಪುರದಿಂದ ಕನ್ಯಾಕುಮಾರಿ
ದೇವಸ್ಥಾನಕ್ಕೆ 5 ನಿಮಿಷಗಳ ದಾರಿಯಾಗಿತ್ತು.
10. ಕನ್ಯಾಕುಮಾರಿಯ ದೇವಸ್ಥಾನಕ್ಕೆ ಪಯಣ
ಕತ್ತಲಲ್ಲಿ ಖಾಲಿಯಾಯಿತು ತಂದಿದ್ದ ಹಣ…!!
ನಾವು ತಂಗಿದ್ದ ತಾಣದಿಂದ ಸ್ವಲ್ಪ ದೂರದಲ್ಲಿ ಕನ್ಯಾಕುಮಾರಿಯ ದೇವಸ್ಥಾನವಿತ್ತು. ಅದರ ಜೊತೆಗೆ ಶಾಪಿಂಗ್ (ವಸ್ತುಗಳ ಖರೀದಿ)
ಮಾಡಲೂ ಅಂದು ಅವಕಾಶ ನೀಡಿದ್ದರು. ಸುಮಾರು 6.30ಕ್ಕೆ ಮೊದಲು ದೇವಸ್ಥಾನದೊಳಗೆ ಹೋದೆವು.
ಆದರೆ ನಿಮಗೆ ನಾನು ಮೊದಲೇ ತಿಳಿಸಿದಂತೆ ತಮಿಳುನಾಡು ಮತ್ತು ಕೇರಳದ ದೇವಸ್ಥಾನಗಳಲ್ಲಿ
ಒಳ ಹೂಗಲು ಹಲವು ನಿಯಮಗಳಿವೆ. ಈ ಕನ್ಯಾಕುಮಾರಿ ದೇವಸ್ಥಾನದೊಳಗೆ ಪ್ರವೇಶಿಸಲು ಕೆಲವು
ನಿಯಮಗಳಿವೆ.
ಕನ್ಯಾಕುಮಾರಿ ದೇವಸ್ಥಾನ ನಿಯಮಗಳು
೧. ಗಂಡಸರು ಅಂಗಿ ಅಥವಾ ಬನಿಯನ್ ಹಾಕುವಂತಿಲ್ಲ.
೨. ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಒಯ್ಯುವಂತಿರಲಿಲ್ಲ.
ನಮ್ಮ ಒಂದು ಅದೃಷ್ಟ ಅಂದ್ರೆ ಪಂಚೆ ಹಾಕಿಕೊಂಡು ಬರಬೇಕು ಎಂದು ಹೇಳಲಿಲ್ಲ. ಹಾಗೇನೇದರೂ ಹೇಳಿದ್ದರೆ, ನಾವು ದೇವಸ್ಥಾನಕ್ಕೆ ಹೋಗಲು ಆಗುತ್ತಿರಲಿಲ್ಲ. ಏಕೆಂದರೆ ಪಂಚೆಯನ್ನು ನಾವು ತಂಗಿದ್ದ ರೂಮಿನಲ್ಲೇ ಬಿಟ್ಟು ಬಂದಿದ್ದೆವು…. ನಮ್ಮ ಪುಣ್ಯ ಚೆನ್ನಾಗಿತ್ತು
ದೇವಸ್ಥಾನದೊಳಗೆ ಬಂದು ದೇವಿಯ ದರ್ಶನ ಪಡೆದೇವು. ಒಳಗೆ ತುಂಬಾ ಸೆಖೆ ಹೀಗಾಗಿ ಎ.ಸಿ
ವ್ಯವಸ್ಥೆ ಇದ್ದರು ನಮಗೆ ಬೆವರು ಇಳಿಯುತ್ತಿತ್ತು. ಆ ಸಂಕಷ್ಟದಲ್ಲಿ ದೇವಿಯ ಮುಗುತ್ತಿಯನ್ನು ನೋಡಲು ಆಗಲಿಲ್ಲ. ಕೆಲ ಕ್ಷಣ ಧ್ಯಾನ ಮಾಡಿದೆ. 60 ರೂಪಾಯಿಗಳ ಪ್ರಸಾದ ಪಡೆದು ಹೊರ ಬಂದೆವು.
ಕನ್ಯಾಕುಮಾರಿಯನ್ನೇ ಕೊಂಡುಕೊಂಡರು..!!
ಕನ್ಯಾಕುಮಾರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಮಾಡಿದೆವು.ರಾತ್ರಿಯಾಗಿದ್ದ ಕಾರಣ ದೇವಿಯ
ಮೂಗಿತಿ ಕಾಣಲಿಲ್ಲ. ನಂತರ ದೇವಸ್ಥಾನದಿಂದ ಹೊರಬಂದು ವಸ್ತುಗಳ ಖರೀದಿಗೆ ಸಿದ್ಧರಾದೆವು.ಏನು ನೋಡಿದರೂ ಖರೀದಿಸಬೇಕೆಂಬ ಆಸೆ. ಆಷ್ಟೊಂದು ಚೆಂದದ ವಸ್ತುಗಳು. ಆದರೆ ಅವೆಲ್ಲವನ್ನೂ ಖರೀದಿಸಲು “ಧನ ಲಕ್ಷ್ಮಿ” ಬೇಕಲ್ವಾ…?
ಹೀಗಾಗಿ ನಾನು ನನ್ನ ತಂಗಿಯರಿಗೆ ಕೆಲ ಅಲಂಕಾರಿಕ ವಸ್ತುಗಳಾದ ಸರಗಳು, ಬಳೆಗಳು,
ಖರೀದಿಸಿದೆ. ಆದರೆ ನನ್ನ ಸ್ನೇಹಿತೆಗೆ ಒಂದು ಸೀರೆ ಕೊಡಿಸುವ ಆಸೆ ಇತ್ತು. ಆದರೆ ಅವಳಿಗೆ
ಬೇಕಾದ ಡಿಜೈನ್, ಬಣ್ಣ, ಗೊತ್ತಿರಲಿಲ್ಲ. ಹುಡುಕಿದ ಯಾವ ಸೀರೆಗಳು ನಮ್ಮ ಬಡ್ಜೆಟ್ ಗೆ
ಹೊಂದಾಣಿಕೆಯಾಗಲಿಲ್ಲ.
ಹೀಗಾಗಿ ಸೀರೆಯ
ಕನಸನ್ನು ಬಿಟ್ಟು ಒಂದು ಕೈ ಗಡಿಯಾರವನ್ನು ಕೈ ಗಡಿಯಾರವನ್ನು, ಒಂದು ಗೊಂಬೆಯನ್ನು
ಖರೀದಿಸಿ ಆ ಗೊಂಬೆಯ ಕತ್ತಿಗೆ ಆ ಗಡಿಯಾರವನ್ನು ಕಟ್ಟಿ ಅದನ್ನೇ ಉಡುಗೊರೆಯಾಗಿ ಕೊಡೋಣ
ಎಂದುಕೊಂಡಿದ್ದೆ.
ನಮ್ಮ ಖರೀದಿ ಮುಗಿಯಿತು.
ಆದರೆ ಅಲ್ಲಿ ಒಂದು ಸುತ್ತು ಹಾಕಿದರೆ ಎಲ್ಲಾ ಅಂಗಡಿಗಳಲ್ಲಿಯೂ ನಮ್ಮ ಬಿ.ಎಡ್ ಮಹಿಳಾ ಮಣಿಗಳು ಮುಗಿಬಿದ್ದು ಖರೀದಿಸುತ್ತಿದ್ದರು.
ಸುಮಾರು 3 ಗಂಟೆಗಳ ಕಾಲ ಸುದೀರ್ಘವಾಗಿ ನಮ್ಮ ಸ್ನೇಹಿತೆಯರೆಲ್ಲರೂ ಸೀರೆ, ವಸ್ತುಗಳನ್ನು
ಖರೀದಿಸಿದರು. ಒಂದು ಅಂಗಡಿಯನ್ನೂ ಬಿಡಲಿಲ್ಲ. ಅವರು ಖರೀದಿ ಮಾಡುವುದನ್ನು ನೋಡಿಯೇ
ನನಗೆ ಸುಸ್ತಾಗಿ ಹೋಗಿತ್ತು.. ಅದರಲ್ಲೂ ಗಾಯತ್ರಿ, ಅರ್ಚನ, ಚೈತ್ರ ಮೊದಲಾದರು ಇಡೀ ಕನ್ಯಾಕುಮಾರಿಯನ್ನೇ ಖರೀದಿಸಿದ್ದರು… ೪೮ ಜನ ಹೆಣ್ಣುಮಕ್ಕಳು ಖರೀದಿ ಮಾಡಿದ ವಸ್ತುಗಳ ಒಟ್ಟು ಬೆಲೆ ಸುಮಾರು 20 ಸಾವಿರಕ್ಕೂ ಅಧಿಕವಾಗಿತ್ತು ಎಂಬುದು ಚಿಂತಿಸಲೇ ಬೇಕಾದ ಸಂಗತಿ.
ಒಟ್ಟಿನಲ್ಲಿ 30 ಸಾವಿರಕ್ಕೂ ಅಧಿಕ ಮೊತ್ತದ ವಸ್ತುಗಳನ್ನು ಖರೀದಿ ಮಾಡಿದ್ದರು. ಒಂದು ರೀತಿಯಲ್ಲಿ ಹೇಳುವುದಾದರೆ, ಇಡೀ ಕನ್ಯಾಕುಮಾರಿಯನ್ನೇ ಖರೀದಿ ಮಾಡಿದ್ದರು..!! ಅದೂ ಕೇವಲ ಮೂರು ಗಂಟೆಗಳ ಆವಧಿಯಲ್ಲಿ ಅಂದರೆ ನಿಜಕ್ಕೂಆಶ್ಚರ್ಯಕರ ಸಂಗತಿ...!!
ನಾವೆಲ್ಲಾ ಎಷ್ಟೆ ವಸ್ತುಗಳನ್ನು ಖರೀದಿಸಿದರೂ ಪ್ಲಾಸ್ಟಿಕ್ ಕವರ್ ಮಾತ್ರ ನೀಡಲಿಲ್ಲ. ಏಕೆಂದರೆ ತಮಿಳುನಾಡು ಸರ್ಕಾರ ಪ್ಲಾಸ್ಟಿಕನ್ನು ನಿಷೇಧಿಸಿದೆ.
ಅಕಸ್ಮಾತ್ ಸರ್ಕಾರದ ಆದೇಶಕ್ಕೂ ಮೀರಿ ಪ್ಲಾಸ್ಟಿಕ್ ಬಳಸಿದ್ದೇ ಆದರೆ 500ರೂಪಾಯಿಗಳ ದಂಡ
ತೆರಬೇಕಾಗುತ್ತದೆ. ಇದು ನಿಜಕ್ಕೂ ಒಳ್ಳೆಯ ಮತ್ತು ಪ್ರಗತಿಪರ ಕಾರ್ಯ.
ರಾತ್ರಿ
9 ಗಂಟೆಗೆ ಖರೀದಿ ಎಲ್ಲವನ್ನೂ ಮುಗಿಸಿ 9.30ಕ್ಕೆ ಅಲ್ಲಿಂದ ಹೊರಟು ನಾವು ತಂಗಿದ್ದ
ವಿವೇಕಾನಂದಪುರದ ವಿವೇಕಾನಂದರ ಆಶ್ರಮಕ್ಕೆ ವಾಪಾಸ್ ಬಂದೆವು. ರಾತ್ರಿ 10ಗಂಟೆಗೆ ಊಟ
ಮುಗಿಸಿ ಆಶ್ರಮದ ಉದ್ಯಾನವನದಲ್ಲಿ ಸ್ವಲ್ಪ ಸಮಯ ವಿಹರಿಸಿ ನಂತರ ರೂಂನಲ್ಲಿ ಮಲಗಿದೆವು.
ಸೂರ್ಯೋದಯದ ಬೆಳಕಿನ ವಿಸ್ಮಯ (31-10-2010)
ಅಂದು
31-10-2010. ಬೆಳಿಗ್ಗೆ ೫ ಗಂಟೆಗೆ ಎದ್ದೆವು. ಅಂದು ಭಾನುವಾರ. ರವಿವಾರದಂದು ಆ
ರವಿಯು ಹುಟ್ಟುವ ವಿಸ್ಮಯವನ್ನು ನೋಡಲು ನಮಗೂ ಆನಂದವಾಗಿತ್ತು. ಜೊತೆಗೆ ರವಿವಾರದಂದು ರವಿಯು ಉದಯಿಸುವುದನ್ನು ನಾವು ನೋಡುತ್ತಿದ್ದದ್ದು ನಮ್ಮ ಅದೃಷ್ಟವೇ ಸರಿ.
ಹೀಗಾಗಿ
ನಾವು ಬೆಳಿಗ್ಗೆ 5 ಗಂಟೆಗೆ ಎದ್ದು ಸ್ನಾನ ಮಾಡಿ ಬೇರೆ ಬಟ್ಟೆಗಳನ್ನು ಧರಿಸಿದೆವು.
ಸೂರ್ಯ ಉದಯಿಸುವುದನ್ನು ಸ್ಪಷ್ಟವಾಗಿ ಕಾಣಿಸುವ ಸಮುದ್ರದ ತೀರ ಪ್ರದೇಶಕ್ಕೆ ನಾವು
ಬಂದೆವು. ನಾವು ಬಂದು ಅರ್ಧ ಗಂಟೆಯ ನಂತರ ಸೂರ್ಯ ನಿಧಾನವಾಗಿ ಉದಯಿಸಲು ಆರಂಭಿಸಿದ…
ನಮ್ಮ ಕೈಯಲ್ಲೇ ಸೂರ್ಯ ಹಿಡಿದಿರುವಂತೆ ಮತ್ತು ನಮ್ಮ ಕೈಯಲ್ಲೇ ಸೂರ್ಯ ಉದಯಿಸುವಂತೆ ಕಾಣುವಂತೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡೆವು.
ಸೂರ್ಯೋದಯದ ಸುಂದರ ವಾತಾವರಣ, ಸೂರ್ಯೋದಯದ ವರ್ಣ ನೋಡಿ ನಮಗೆ ಆನಂದವೋ ಆನಂದ. ಸೂರ್ಯೋದಯದ ದೃಶ್ಯಗಳನ್ನು ಕಣ್ತುಂಬಿಕೊಂಡೆವು.
ಸವಿ ಸವಿ ನೆನಪು…!!
ನಂತರ ಅಲ್ಲಿಯೇ ನಮ್ಮ 2009-2010ರ ಬಿ.ಎಡ್ ವಿದ್ಯಾರ್ಥಿಗಳ ತಂಡ ಎಲ್ಲರೂ ಒಂದೇ ಫೋಟೋದಲ್ಲಿ ಕಾಣುವಂತೆ ಫೋಟೋ ತೆಗೆಯಲಾಯಿತು.
ಅದು ನಮ್ಮೆಲ್ಲರ ಜೀವನದಲ್ಲಿ ಮರೆಯಲಾಗದ ಫೋಟೋ. (ಅದು ಇಂದಿಗೂ ನನ್ನ ಮನೆಯಲ್ಲಿದೆ.
ನಮ್ಮ ಮನೆಗೆ ಯಾರೇ ಬಂದರೂ ಅದು ಎದುರಿಗೆ ಕಾಣುವಂತಿದೆ. ನಾನು ಸದಾ ಅದನ್ನು
ನೋಡುತ್ತೇನೆ.)
ನಮ್ಮ ಇತಿಹಾಸ ಉಪಾದ್ಯಾಯರಾದ ಪ್ರೊ!ಲೀಲಾವತಿ ಮೇಡಂ ಜೊತೆ ನಮ್ಮ ನಂದಿ ಶಿಕ್ಷಕರ ತರಬೇತಿ ತಂಡದ ಪ್ರಶಿಕ್ಷಣಾರ್ಥಿಗಳಾದ ಭವ್ಯ, ಉಷಾಕುಮಾರಿ, ಲಕ್ಷ್ಮಿ, ನಾನು, ಉಮೇಶ, ಚೇತನ್, ಮುನಿಸ್ವಾಮಿ, ಎಲ್ಲರೂ
ಸೇರಿ ಪ್ರತ್ಯೇಕ ಫೋಟೋವನ್ನು ತೆಗೆಸಿಕೊಂಡೆವು. ಜೊತೆಗೆ ನಮ್ಮ ಆತ್ಮೀಯ
ಸ್ನೇಹಿತ-ಸ್ನೇಹಿತೆಯರೊಂದಿಗೆ ಫೋಟೋ ತೆಗೆಸಿಕೊಂಡೆವು. ನಮ್ಮ ಈ ಬಿ.ಎಡ್ ಕೋರ್ಸ್ ಮುಗಿದ
ನಂತರ ಅವುಗಳೇ ನಮ್ಮ ಜೀವನದ ಸವಿ ಸವಿ ನೆನಪುಗಳಾಗಿ ಉಳಿಯುವುದು. ಏಕೆಂದರೆ, ಈ
ಕೋರ್ಸಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಎಲ್ಲರೂ ಬಂದು ಒಂದಾಗಿದ್ದೆವು. ಆದರೆ ಈ
ಕೋರ್ಸ್ ಮುಗಿದ ನಂತರ ಎಲ್ಲರೂ ಅವರವರ ಊರಿಗೆ ಹೋಗುತ್ತಾರೆ. ಅದರಲ್ಲೂ ಸ್ನೇಹಿತೆಯರು
ಮದುವಯಾಗಿ ಹೋದ ಮೇಲೆ ಎದುರಿಗೆ ಬಂದರೂ ಮಾತನಾಡಿಸುವ ಪರಿಸ್ಥಿತಿ ಇರುತ್ತದೆಯೋ ಇಲ್ಲವೋ…?
ಹೀಗಾಗಿ ಆ ಫೋಟೊಗಳೇ ಸವಿನೆನಪುಗಳು. ಈ ಫೋಟೊ ತೆಗೆಸಿಕೊಂಡ ಕ್ಷಣವೇ ನಮಗೊಂದು ಅದ್ಭುತ ಕ್ಷಣವಾಗಿತ್ತು. ನಮ್ಮ ವಿದ್ಯಾರ್ಥಿ ಜೀವನದ ಬಂಗಾರದ ದಿನಗಳ ಚಿತ್ರಣ ಆ ಫೋಟೋಗಳು. ದೇವರುಗಳ ಬಳಿ ನಾನು ಒಂದು ವರ್ಷ ಪಾಠ ಕೇಳಿದ್ದೆ ಎಂಬ ದೈವೀಕ ಭಾವನೆ ನನ್ನ ಗುರುಗಳ ಮೇಲೆ ಮೂಡುತ್ತಿತ್ತು. ನಿಜಕ್ಕೂ ಇಂಥಾ ಗುರುಗಳ ಬಳಿ ನಾವು ಪಾಠ ಕಲಿತಿದ್ದು ನಿಜಕ್ಕೂ ನಾನು ಧನ್ಯ…. ಕಣ್ಣೀರು ಹಾಕಿದರೂ ಕಾಲ ಬಿಡೋದಿಲ್ಲ. ಎಂದು ತಿಳಿದರೂ ನನ್ನ ಗುರುಗಳು, ಮತ್ತು ನನ್ನ ಸ್ನೇಹಿತರನ್ನು ದೂರವಾಗುತ್ತಿದ್ದಾರೆ ಎಂದು ನೆನೆದು ಕಣ್ಣಲ್ಲಿ ನೀರು ಬರುತ್ತಿತ್ತು.
ಆ
ಸವಿನೆನಪುಗಳ ಚಿತ್ರಣದೊಂದಿಗೆ ಸೂರ್ಯೋದಯ ನೋಡಿಕೊಂಡು ನಮ್ಮ ರೂಮಿನ ಕಡೆಗೆ ಬಂದೆವು.
ಅದಾಗಲೇ ಬಿಸಿ ಬಿಸಿ ಉಪಹಾರ ತಯಾರಿತ್ತು. ಅಲ್ಲೇ ಪಕ್ಕದಲ್ಲಿಯಾರೋ ಒಬ್ಬ ಮಹಿಳೆ ಮೊಸರು
ಮಾರುತ್ತಿದ್ದಳು ಅವರ ಬಳಿ 5 ರೂಪಾಯಿಗೆ ಮೊಸರು ಪಡೆದು ಉಪಹಾರ ಮುಗಿಸಿದೆವು. ನಂತರ ಚಹಾ
ಕುಡಿದು ವಿವೇಕಾನಂದರ ಬಂಡೆಗೆ ಹೋಗಲು ಸನ್ನದ್ಧರಾದೆವು.
ಬೆಳಿಗ್ಗೆ
8.45ಕ್ಕೆ ಕನ್ಯಾಕುಮಾರಿಯ ತುದಿಗೆ ಬಂದೆವು. ಆದರೆ ಭಾರತದ ತುದಿ ಅದಲ್ಲ..!! ಅಲ್ಲಿಂದ
ಸಮುದ್ರದಲ್ಲಿ 1 ಕಿಲೋ ಮೀಟರ್ ಸಾಗಿದಾಗ ಒಂದು ದ್ವೀಪವಿದೆ. ಅಲ್ಲಿ ಸ್ವಾಮಿ ವಿವೇಕಾನಂದರ
ಬಂಡೆಯಿದೆ. ಅದು ಭಾರತದ ತುತ್ತತುದಿ. ನಾವು ಹಡಗಿನಲ್ಲಿ ಪ್ರಯಾಣ ಆರಂಭಿಸಿದೆವು. ಹಡಗು
ಹತ್ತುವ ಮೊದಲು ನಮಗೆ ಸೇಫ್ಟಿ ಜಾಕೇಟ್ ಕೊಡ್ತಾರೆ. ಅಕಸ್ಮಾತ್ ಹಡಗು ಮುಳುಗಿದರೆ ಆ ಸೇಫ್ಟಿ ಜಾಕೇಟ್ ನಮ್ಮ ಪ್ರಾಣ ಉಳಿಸುತ್ತದೆ. ಅದನ್ನು ಧರಿಸಿ ಸಮುದ್ರದಲ್ಲಿ ಬೋಟಿಂಗ್ ನಲ್ಲಿ ಎರಡನೆಯ ಬಾರಿ ಪ್ರಯಾಣ ಮಾಡಿದೆವು. ವಿವೇಕಾನಂದರ ಧ್ಯಾನ ಸ್ಥಳದಲ್ಲಿ ವಿವೇಕಾನಂದರ ಬೃಹತ್ ಮೂರ್ತಿ ಪ್ರತಿಷ್ಟಾಪಿಸಲಾಗಿದೆ. ಸಮುದ್ರದ ಮಧ್ಯದಲ್ಲಿ ಇರುವ ದ್ವೀಪ ಈ ವಿವೇಕಾನಂದ ಬಂಡೆ.
ಈ ಸ್ಥಳದಿಂದ ಸಮುದ್ರವನ್ನು ನೋಡಿದರೆ ಕೊನೆಯೇ ಇಲ್ಲದಂತೆ ಕಾಣಿಸುತ್ತದೆ. ಹಾಗೇ
ದೂರಕ್ಕೆ ಕಣ್ಣಾಡಿಸಿದರೆ ದೊಡ್ಡ ಫ್ಯಾನುಗಳು, ಕಟ್ಟಡಗಳು ಕಾಣಿಸಿದವು. ಅದು ಏನು ಎಂದು
ಕೆಲವರನ್ನು ಕೇಳಿದರೆ ಶ್ರೀಲಂಕ ದೇಶ ಎಂದು ಕೆಲವರು ಹೇಳಿದರು. ಆದರೆ ಅದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ.
ನಾವು ಕೆಲ ವಿವೇಕಾನಂದರ ಪುಸ್ತಕಗಳನ್ನು ಖರೀದಿಸಿ ಆ ಸ್ಥಳಗಳನ್ನೆಲ್ಲಾ ನೋಡಿಕೊಂಡು ಬರುತ್ತಿದ್ದಾಗ ನಮ್ಮ ಗುರುಗಳಾದ ಡಾ! ಪ್ರೊ! ಕೋಡಿ ರಂಗಪ್ಪನವರು ಒಂದು ಮಾತು ಹೇಳಿದರು. “ಸ್ವಾಮಿ ವಿವೇಕಾನಂದರು ಪ್ರತಿದಿನ ಈ ಸಮುದ್ರದ ಆ ದಡದಲ್ಲಿ ಧುಮುಕಿ ಈಜಿಕೊಂಡು ಈ ದ್ವೀಪ ಸೇರುತ್ತಿದ್ದರು ಮತ್ತು ಈ ಬಂಡೆಯ ಮೇಲೆ ಧ್ಯಾನ ಮಾಡುತ್ತಿದ್ದರು.” ಈ
ಮಾತು ಕೇಳಿ ನಮಗೆ ಆಶ್ಚರ್ಯ. ಸಮುದ್ರದಲ್ಲಿ ಅಲೆಗೆ ವಿರುದ್ಧವಾಗಿ ಈಜಲು ಸಾಧ್ಯವೇ..?
ಎಂಬ ಪ್ರೆಶ್ನೆ ನಮ್ಮಲ್ಲಿ ಮೂಡುತ್ತಿತ್ತು. ಅದೇ ಅನುಮಾನದಿಂದ ಹೊರಬರುತ್ತಿದ್ದ ನಮಗೆ “ಇಬ್ಬರು ಚಿಕ್ಕ ಹುಡುಗರು ಅದೇ ಸಮುದ್ರದಲ್ಲಿ ಈಜಿಕೊಂಡು ವಿವೇಕಾನಂದರ ಬಂಡೆಯ ಕಡೆಗೆ ಬರುತ್ತಿದ್ದರು. ಅದನ್ನು ಕಂಡ ನಮಗೆ ಮತ್ತೆ ಆಶ್ಚರ್ಯ. ಮತ್ತೊಮ್ಮೆ ಅನುಮಾನ…!! ಅದೇನೆಂದರೆ, ಆ ಹುಡುಗರು ಕಾಲುಗಳಲ್ಲಿ ರೆಕ್ಕೆಯ ರೀತಿಯ ವಸ್ತುಗಳನ್ನು (ಪೆಂಗ್ವಿನ್, ಮೀನು ಮೊದಲಾದವುಗಳ ಬಾಲದಂತಿರುವ ವಸ್ತು) ಧರಿಸಿ ಈಜುತ್ತಿರಬಹುದೇ…?
ಎಂದುಕೊಂಡಿದ್ದೆ. ಆದರೆ ಹತ್ತಿರ ಬಂದಾಗ ತಿಳಿಯಿತು. ಅವರು ಏನೂ ಧರಿಸಿರಲಿಲ್ಲ. ಹಾಗೆಯೇ
ಸಮುದ್ರದ ಅಲೆಗಳನ್ನು ಲೆಕ್ಕಿಸದೇ ಗುರಿ ತಲುಪಲು ಮುನ್ನುಗ್ಗಿ ಬರುತ್ತಿದ್ದರು. ಆಗ
ನನಗೆ ಜ್ನಾನೋದಯವಾಯಿತು. ಈ ಮಕ್ಕಳೇ ಹೀಗೆ ಈಜುತ್ತಿರಬೇಕಾದರೆ, ಅಛಲ ನಂಬಿಕೆ ಮತ್ತು
ಗುರಿ ಹೊಂದಿದ್ದ ಸ್ವಾಮಿ ವಿವೇಕಾನಂದರು ಈಜುತ್ತಿರಲಿಲ್ಲವೇ…? ಆಗ ನನಗೆ ನಮ್ಮ ಗುರುಗಳ
ಮಾತಿನ ಮೇಲೆ ನಂಬಿಕೆ ಮೂಡಿತು….
ವಿವೇಕಾನಂದ
ಬಂಡೆಯ ಪಕ್ಕದಲ್ಲಿ ಮತ್ತೊಂದು ದ್ವೀಪವಿದೆ. ಅಲ್ಲಿ ತಮಿಳುನಾಡಿನ ಪ್ರಾಚೀನ ಹಾಗೂ
ದೊಡ್ಡಕವಿ ತಿರುವಳ್ಳುವರ್ ನನ್ನು ನೋಡಲು ಹಡಗಿನಲ್ಲಿ ಆ ದ್ವೀಪಕ್ಕೆ ಬಂದೆವು.
ತಿರುವಳ್ಳುವರ್ ನ ಆ ಬೃಹತ್ ಪ್ರತಿಮೆ ನಿಜಕ್ಕೂ ಅದ್ಭುತ.. ನಾವು ಅಲ್ಲಿ ನಿಂತು ಆ
ಪ್ರತಿಮೆಯನ್ನು ನೋಡಲು ನಿಂತರೆ ನಮ್ಮ ತಲೆಯ ಮೇಲಿದ್ದ ಟೋಪಿ ನೆಲಕ್ಕೆ ಬೀಳುತ್ತದೆ.
ಅಷ್ಟು ಎತ್ತರ…
ತಮಿಳು ಭಾಷೆಯಲ್ಲಿ ಹಲವಾರು ಮಹಾನ್ ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡದ ಸರ್ವಜ್ನನಷ್ಟೆ ಶ್ರೇಷ್ಟ ಕವಿ ಈ ತಿರುವಳ್ಳುವರ್ ಎಂಬುದು ನಗ್ನ ಸತ್ಯ. ಅಂತಹ ಮಹಾನ್ ಕವಿವರ್ಯರ ಬೃಹತ್ ಮೂರ್ತಿಯನ್ನು ನೋಡಲು ಹೋಗಬೇಕಾದರೆ ಬಂಡೆಯ ಒಳಗೆ ಮೆಟ್ಟಿಲುಗಳಿವೆ. ನಾವು ಅದನ್ನು ಹತ್ತಿದೆವು. ಆ ಮಹಡಿಯ 4ನೇ ಹಂತದ ಮೇಲೆ ನಿಂತು
ತಿರುವಳ್ಳುವರ್ ಪ್ರತಿಮೆಯನ್ನು ನೋಡಿದರೆ ಏನೇನೂ ಕಾಣಿಸುವುದಿಲ್ಲ. ಅಂತಹ ದೊಡ್ಡ
ಪ್ರತಿಮೆ ಅದಾಗಿತ್ತು.ಅದನ್ನು ನಿರ್ಮಿಸಿದ್ದು ಕಷ್ಟಕರವಾಗಿದ್ದರೂ ಯಾವುದೇ
ದೋಷವಿಲ್ಲದಂತೆ ಆ ಪ್ರತಿಮೆಯನ್ನು ಕೆತ್ತಿದ್ದರು. ನಿಜಕ್ಕೂ ಆ ಕಲಾವಿದನಿಗೆ ನನ್ನ ಸಲಾಂ….!!!
ಬೆಳಿಗ್ಗೆ
11.00ಕ್ಕೆ ಎಲ್ಲಾ ನೋಡ್ಕೊಂಡು ಬಸ್ಸ್ ಬಳಿಗೆ ಬನ್ನಿ ಎಂದು ನಮ್ಮ ಗುರುಗಳು
ಹೇಳಿದ್ದರು. ಆದರೆ ವಿವೇಕಾನಂದರ ಬಂಡೆ, ತಿರುವಳ್ಳುವರ್ ಪ್ರತಿಮೆ ಎಲ್ಲವನ್ನೂ
ನೋಡುವಷ್ಟರಲ್ಲಿ 12 ಗಂಟೆ ಆದದ್ದು ತಿಳಿಯಲೇ ಇಲ್ಲ.. ನಂತರ ಎಲ್ಲರೂ ಹಡಗಿನ ಮೂಲಕ
ಕನ್ಯಾಕುಮಾರಿ ದಡಕ್ಕೆ ಅಂದರೆ ನಮ್ಮ ಬಸ್ ನಿಂತಿದ್ದ ಸ್ಥಳಕ್ಕೆ ಬಂದೆವು. ಅಲ್ಲಿಂದ ನಮ್ಮ
ಪಯಣ ಆರಂಭವಾದದ್ದು ತಮಿಳುನಾಡಿನ ಆಕರ್ಷಣೀಯ ಮತ್ತು ಐತಿಹಾಸಿಕ ಪುಟಗಳಲ್ಲಿ ರಾರಾಜಿಸುತ್ತಿದ್ದ ’ಮಧುರೈ’
ನಗರದ ಕಡೆಗೆ. ಮಧ್ಯಾಹ್ನ 12ಗಂಟೆಯಿಂದ ನಮ್ಮ ಮಧುರೈ ಪ್ರಯಾಣ ಶುರುವಾಯಿತು. ದಕ್ಷಿಣ
ಭಾರತದ ತುತ್ತ ತುದಿಯನ್ನು ನೋಡಿದ ಸಂತಸ ನಮ್ಮದು. ತಿರುವಳ್ಳುವರ್ ರಂತಹ ಮಹಾನ್ ಕವಿಯ
ಧ್ಯೇಯ, ಉದ್ದೇಶಗಳು ಅಗಾಧವಾದದ್ದು. ಆದರೆ ಅವುಗಳನ್ನು ರಾಜಕೀಯದಲ್ಲಿ ತಮ್ಮ ಬೇಳೆ
ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಭ್ರಷ್ಟ ರಾಜಕೀಯ ಪುಡಾರಿಗಳ ವರ್ತನೆಗಳು ನಿಜಕ್ಕೂ
ನಮ್ಮ ಹೃದಯಕ್ಕೆ ನೋವನ್ನು ಉಂಟುಮಾಡಿದವು.
10.ಸು’ಮಧುರೈ’ ಮಂದಿರ
31-10-2010
ರಂದು ಮಧ್ಯಾಹ್ನ 12 ಗಂಟೆಗೆ ನಮ್ಮ ಸು’ಮಧುರ’ ಪಯಣ ಆರಂಭವಾಯಿತು. ಕನ್ಯಾಕುಮಾರಿಯಿಂದ
ಮಧುರೈ ಗೆ ಸುಮಾರು 300 ಕಿ.ಮೀ. ದೂರವಿದೆ. ಹೀಗಾಗಿ ಮಧ್ಯಾಹ್ನ 1 ಗಂಟೆಯವರೆಗೆ
ಕ್ರಮಿಸಿದೆವು. ಅಷ್ಟರಲ್ಲಾಗಲೇ ನಮ್ಮ ಹೊಟ್ಟೆಯಲ್ಲಿ ಹಸಿವಿನ ಗಂಟೆ ಹೊಡೆಯುತ್ತಿತ್ತು.
ಹೀಗಾಗಿಯೇ ಊಟದ ವ್ಯವಸ್ಥೆಗಾಗಿ ಮಧ್ಯೆ ದಾರಿಯಲ್ಲಿ ಒಂದು ಮಂದಿರದ ಬಳಿ ನಿಲ್ಲಿಸಲಾಯಿತು. ಏಕೆಂದರೆ ಅಲ್ಲಿ ನೀರಿನ ವ್ಯವಸ್ಥೆ ಇತ್ತು. ಕುಣಿದು ಕುಪ್ಪಳಿಸಿದ ನಮಗೆ ಶಕ್ತಿ ಬರಬೇಕಾದರೆ ಊಟದ ವ್ಯವಸ್ತೆ ಅಗತ್ಯವಾಗಿತ್ತು.
ಅನ್ನ
ಸಾಂಬಾರ್ ಊಟ ಮಾಡಿದ ನಂತರ ನಮಗೂ ಸ್ವಲ್ಪ ಶಕ್ತಿ ಬಂತು. ಪಕ್ಕದಲ್ಲಿದ್ದ ಬೇವಿನ
ಸೊಪ್ಪನ್ನು ತೆಗೆದುಕೊಂಡು ದೆವ್ವ ಬಿಡಿಸುವ ಮಂತ್ರವಾದಿಯ ವೇಷದಂತೆ ತಯಾರಾದೆವು.
ಏಕೆಂದರೆ ಮುಂದೆ ನಮ್ಮ ನಾಗೇಶ್ ನಿಂದ ಆಪ್ತಮಿತ್ರ ಚಿತ್ರದ ರಾ ರಾ ಹಾಡಿಗೆ ’ನಾಗವಲ್ಲಿ’ಯಂತೆ ನೃತ್ಯ ಮಾಡಲು ಸಿದ್ಧನಿದ್ದ.
ಊಟದ
ನಂತರ ಮತ್ತೆ ಕುಣಿಯಲು ತಯಾರದೆವು. ಸುಮಾರು 7 ಗಂಟೆಯ ಸುದೀರ್ಘ ಪ್ರಯಾಣದ ನಂತರ ಸಂಜೆ
7.00 ಗಂಟೆಗೆ ಮಧುರೈ ನಗರವನ್ನು ತಲುಪಿದೆವು. ಮಳೆ ಬಂದಿದ್ದ ಕಾರಣ ಮಧುರೈ ರೊಚಿನಿಂದ
ಕೆಸರುಮಯವಾಗಿತ್ತು. ಅದೇ ಕೆಸರಿನಲ್ಲಿ ’ಮಧುರೆ ಮೀನಾಕ್ಷಿ’ ದೇವಸ್ಥಾನಕ್ಕೆ ಹೋದೆವು. ಮಳೆಯಲಿ ಚಳಿಯಲಿ ಸ್ನೇಹಿತರ ಜೊತೆಯಲಿ ದೇವಸ್ಥಾನದ ಬಳಿಗೆ ಬಂದೆವು.
ಅಂತಹ ಚಳಿಯಲ್ಲೂ ಮಾವಿನ ಹಣ್ಣಿನ ತಂಪಾದ(ಜೂಸ್) ರಸವನ್ನು ಕುಡಿಯುವ ವಿಚಿತ್ರ ಆಸೆ ನಮ್ಮದಾಗಿತ್ತು. ವಿರೋಧಪಕ್ಷದ ನಾಯಕ ಅಂತಾನೇ ಪ್ರಸಿದ್ಧಿಯಾಗಿದ್ದ ನಾನು, ಉಮೇಶ್, ಮಂಜು.ಎಂ.ಎನ್.(ಜಾತ್ರೆ), ಸುರೇಶ್ ನಾಲ್ಕು ಜನ ಹೋಗಿ ತಂಪಾದ ಪಾನೀಯ ಕುಡಿದು ನಂತರ ದೇವಸ್ಥಾನ ಪ್ರವೇಶಿಸಿದೆವು.
ಸುಂದರ ಕಲಾಕೃತಿಯ, ಬೃಹತ್, ಅಧ್ಭುತ ದೇವಸ್ಥಾನ ಅದು.
ಈ ದೇವಸ್ಥನಕ್ಕೆ ನಾಲ್ಕು ಮಹಾದ್ವರಗಳಿದ್ದು, ಯವ ದ್ವಾರ ಯಾವ ದಿಕ್ಕಿನದ್ದು..? ನಾವು ಯವ ದಿಕ್ಕಿನ ದ್ವರದ ಮೂಲಕ ದೇವಸ್ಥಾನ ಪ್ರವೇಶಿಸಿದೆವು..? ಎಂಬುದೇ ಗೊಂದಲ ಆಗುವಷ್ಟರ ಮಟ್ಟಿಗೆ ಈ ದ್ವಾರಗಳಲ್ಲಿ ಸಮ್ಯತೆ ಮತ್ತು ಏಕರೋಪತೆ ಹೊಂದಿದೆ.
ನಾವು ಒಳ ಪ್ರವೇಶಿಸಿದ ಕೂಡಲೇ ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಕೆತ್ತನೆ ಕಣ್ಮುಂದೆ ಕಂಡವು.
ಬಹುಶಃ
ಇಂತಹ ಅತ್ಯದ್ಭುತ ಕಲ್ಲಿನ ಕೆತ್ತನೆಗಳಿಂದಲೇ ವಿದೇಶಗಳಿಂದ ಅತಿ ಹೆಚ್ಚು ಪ್ರವಾಸಿಗರು
ಭಾರತದತ್ತ ಆಕರ್ಶಿತರಾಗುತ್ತಿರುವುದು. ಮತ್ತು ಭಾರತೀಯರು ಕಲಾಕಾರರು ಎಂಬ ಕಾರಣಕ್ಕಾಗಿ,
ಮತ್ತು ಭಾರತೀಯ ಕಲೆಯನ್ನು ಕಂಡು ಹೊಟ್ಟೆ ಉರಿಯಿಂದಲೋ ಏನೋ “ಮಹಮದ್ ಘಜ್ನಿ ಮತ್ತು ಮಹಮದ್ ಘೋರಿ”ಯಂತಹ ಪರಕೀಯರು ನಮ್ಮ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಕಟ್ಟಡಗಳನ್ನು ನಾಶಪಡಿಸಿರಬೇಕು ಎಂಬ ಭಾವನೆ ನಮಗೆ ಮೂಡಿತ್ತು.
ಮೀನಾಕ್ಷಿದೇವಿಯ
ಮೂರ್ತಿ, ಈಶ್ವರನ ಮೂರ್ತಿ, ವಿಘ್ನೇಶ್ವರನ ವಿಗ್ರಹ, ಅಯ್ಯಪ್ಪ ಸ್ವಾಮಿಯ ವಿಗ್ರಹ
ಮೊದಲಾದ ದೇವರುಗಳ ದರ್ಶನ ಒಂದೇ ದೇಗುಲದ ಅಡಿಯಲ್ಲಿ ದೊರಕಿತೆಂದರೆ ನಿಜಕ್ಕೂ ನಾವೇ ಭಾಗ್ಯವಂತರು.. ದೊಡ್ಡ ದೇಗುಲ ಈ ಮೀನಾಕ್ಷಿ ದೇಗುಲ. ಅದರೊಳಗೆ ಬಳಸಲಾದ ಪ್ರತಿಯೊಂದು ಕಲ್ಲಿನ ಮೇಲೂ ಕೆತ್ತನೆಯ ಶಿಲ್ಪಕಲೆಗಳಿವೆ.
ಅಂತಹ
ಬೃಹತ್ ಕಲ್ಲುಗಳನ್ನು ನಿಲ್ಲಿಸಿ ದೇವಸ್ಥಾನ ನಿರ್ಮಿಸುವಾಗ ಅದೆಷ್ಟು ಅಮಾಯಕರ
ರಕ್ತದೋಕುಳಿ ಹರಿದಿರಬಹುದು..? ಇದು ನಿಘೂಡ ಕಹಿ ಸತ್ಯ. ಮತ್ತು ಆಶ್ಚರ್ಯದ ಸಂಗತಿ.
ಪತಿಯೊಬ್ಬ ಮನುಷ್ಯರೂ ಈ ದೇವಸ್ಥಾನ ನಿರ್ಮಿಸಲು ರಕ್ತ ಹರಿಸಿ, ಜೀವ ತೇದಿದ್ದಾರೆ.
ಆದರೆ ಈಗ ಅವರು ಶ್ರಮಕ್ಕೆ ಬೆಲೆ ಸಿಕ್ಕಿದೆ. ಆದರೆ ಅವರ ಶ್ರಮ ವ್ಯರ್ಥವಾಗಬಾರದು
ಎಂಬುದಾದರೆ, ಅವುಗಳೆಲ್ಲವನ್ನು ನಮ್ಮ ಮುಂದಿನ ಪೀಳಿಗೆಗೆ ಮತ್ತು ಶತ-ಶತಮಾನಗಳವರೆಗೆ
ಉಳಿಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಇಂತಹ
ಅದ್ಭುತ ದೇಗುಲ ಮತ್ತು ದೇವರ ಆಶೀರ್ವಾದ ಪಡೆದು ನಂತರ ನಾವು ಮರಳಿದೆವು. ಬರುವಾಗ
ತಂಗಿಯರಿಗೆ ಕೆಲವು ಬಳೆಗಳನ್ನು ಮತ್ತು ಮನೆಗೆ ಕೆಲವು ಹಪ್ಪಳಗಳನ್ನು ಖರೀದಿಸಿ, ರಾತ್ರಿ
8.30ಕ್ಕೆ ಬಸ್ಸಿನ ಬಳಿಗೆ ಬಂದೆವು.
ಅಲ್ಲಿಂದ
ರಾತ್ರಿ ತಂಗಲು ನಿರ್ಧರಿಸಿದ್ದ ವಸತಿನಿಲಯದ ಕಡೆಗೆ ನಮ್ಮ ಬಸ್ಸ್ ಸಾಗಿತ್ತು. ಸುಮಾರು ೨
ಗಂಟೆಗಳ ಪ್ರಯಾಣದ ನಂತರ ರಾತ್ರಿ 10.10ಕ್ಕೆ ಸರಿಯಾಗಿ ಒಂದು ದೊಡ್ಡ ಕಲ್ಯಾಣ ಮಂಟಪ
ತಲುಪಿದೆವು. ಅಡುಗೆ ಭಟ್ಟರು ಅಡುಗೆ ಮಾಡಲು ಆರಂಭಿಸಿದರು. ನಮ್ಮ ಮೊಬೈಲ್ ಚಾರ್ಜಿಂಗ್
ಹಾಕಿದೆವು. ಆದರೆ ನಮ್ಮ ಹೊಟ್ಟೆಯ ಚಾರ್ಜಿಂಗ್ ಕೂಡ ಖಾಲಿಯಾಗಿ ಹೊಟ್ಟೆ ತುಂಬಾ ಹಸಿಯುತ್ತಿತ್ತು. ಹೀಗಾಗಿ ನಿಧನವಾಗಿ ಹೊರಗೆ ಸುತ್ತಾಡಲು ಬಂದೆವು.
ಕಳ್ಳರಂತೆ ಚಿಕನ್ ತಿಂದೆವು..!!
ಸದ್ದಿಲ್ಲದೆ ರೂಮಿಗೆ ಬಂದೆವು…!!
ರಾತ್ರಿ 10.10ಕ್ಕೆ ನಮ್ಮ ವಸತಿ ಪ್ರದೇಶಕ್ಕೆ ತಲುಪಿದ ನಂತರ ನಾನು ಚೇತನ್, ಉಮೇಶ್, ಚಿಕ್ಕಪ್ಪ, ನಾಲ್ಕು ಜನ ಕೋಳಿ ಮಾಂಸವನ್ನು ತಿನ್ನಲು ಹೊರಟೆವು.
ರಾತ್ರಿಯಾದ್ದರಿಂದ ನಾವು ತಂಗಿದ್ದ ಪ್ರದೇಶದ ಹೆಸರೂ ನಮಗೆ ತಿಳಿಯಲಿಲ್ಲ. ತಡರಾತ್ರಿ
ಆಗಿದ್ದರಿಂದ ಮತ್ತು ಅದು ಹಳ್ಳಿಯಾಗಿದ್ದರಿಂದ ಎಲ್ಲಾ ಅಂಗಡಿಗಳೂ ಮುಚಿದ್ದವು. ನಮ್ಮ
ಚಿಕನ್ ತಿನ್ನುವ ಆಸೆ ಈಡೇರುವುದಿಲ್ಲ ಎಂದುಕೊಂಡು ಸುಮ್ಮನೆ ಹಾಗೆ ಮುಂದೆ ಸಾಗಿದೆವು. ಆ ಭಗವಂತನಿಗೆ ನಮ್ಮ ಕೂಗು ಕೇಳಿಸಿತೋ ಏನೋ..?
ಸ್ವಲ್ಪ ದೂರ ಹೋದ ಮೇಲೆ, ಮೂಲೆಯಲ್ಲಿ ಒಂದು ಮಾಂಸದ ಹೊಟೆಲ್ ನಮಗಾಗಿ ತೆರೆದಿತ್ತು.
ನಾವು ನಾಲ್ಕು ಜನರೂ ಹೊಟೆಲ್ ಪ್ರವೇಶಿಸಿದೆವು. ಆದರೆ ನಮಗಿಂತ ಮೊದಲು ನಮ್ಮ 20 ಜನರು
ಸ್ನೇಹಿತರು ಅದೇ ಬೀದಿಯಲ್ಲಿ ತಿರುಗಾಡುತ್ತಿದ್ದರು. ಅವರ ಕಣ್ ತಪ್ಪಿಸಿ ಹೊಟೆಲ್ ನಲ್ಲಿ
ಹೋದೆವು. ಆದರೆ ಎಷ್ಟೇ ಕಣ್ ತಪ್ಪಿಸಿ ತಿನ್ನುತ್ತಿದ್ದರೂ ನಮ್ಮ ಸ್ನೇಹ ಬಂಧನ ಎಲ್ಲರನ್ನು ನಮ್ಮಲ್ಲಿಗೆ ಆಕರ್ಶಿಸಿತು ಎಂದು ಕಾಣಿಸುತ್ತದೆ. ಏಕೆಂದರೆ ಇಬ್ಬರು ಸ್ನೇಹಿತರೊಂದಿಗೆ ನಮ್ಮ ಸ್ನೇಹಿತ ನರಸಿಂಹ ಮೂರ್ತಿ ಆ ಹೊಟೆಲ್ ಗೆ ಬಂದನು…!!
ಅವರಿಗೂ ಚಿಕನ್ ಊಟ ಮಾಡಿಸಿದೆವು. ನಾವು ಚಿಕನ್, ಮತ್ತು ಎರಡು ಪರೋಟ ತಿಂದೆವು.
ಒಬ್ಬೊಬ್ಬರಿಗೆ ಬರೋಬ್ಬರಿ 40 ರೂಪಾಯಿ ಬಿಲ್ ಆಯಿತು. ಬಿಲ್ ಪಾವತಿಸಿ ನಂತರ ನಾವು
ತಂಗಿದ್ದ ಕಲ್ಯಾಣ ಮಂಟಪಕ್ಕೆ ಬಂದೆವು. ಅಷ್ಟರಲ್ಲಾಗಲೇ
ಎಲ್ಲರೂ ಊಟ ಮುಗಿಸಿದ್ದರು. ನಮ್ಮ ಗುರುಗಳು ನಮಗಾಗಿ ಹುಡುಕಿದ್ದರಂತೆ. ಆದರೆ ನಾವು
ಎಲ್ಲಿದ್ದೆವು…? ಕಣ್ ತಪ್ಪಿಸಿ ಕೋಳಿ ತಿನ್ನುತ್ತಿದ್ದೆವು. ಆದರೆ ನಮ್ಮ ಗುರುಗಳಿಗೆ
ಗೊತ್ತಿರಲಿಲ್ಲ.
ಚಿಕನ್ ತಿಂದ ನಮಗೆ ನಿದ್ರಾ ದೇವತೆ ಕರೆಯುತ್ತಿದ್ದಳು. ಹೀಗಾಗಿ ಅಲ್ಲೇ ಹಾಸಿಗೆ ಹಾಕಿಕೊಂಡು ಮಲಗಿದ್ದೆವು. ಆಗ ಸಮಯ ಸರಿಯಾಗಿ ರಾತ್ರಿ 11.30
ಮರುದಿನ 1-11-2010. ಬೆಳಿಗ್ಗೆ 3.15ಕ್ಕೆ ಎದ್ದೆವು. ಏಕೆಂದರೆ ಬೇಗ ಏಳಬೇಕು ಎಂದು ನಮ್ಮ ಗುರುಗಳು ಹೇಳಿದ್ದರು.
11.ತಮಿಳುನಾಡಿನಲ್ಲಿ ಹಾರಾಡಿದ ಕನ್ನಡ ಬಾವುಟ.
ಎಲ್ಲೇ ಇರು, ಹೇಗೇ ಇರು. ಎಂದೆಂದಿಗೂನೀ ಕನ್ನಡವಾಗಿರು.
ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.
11."ಕೊಡೈಕೆನಾಲ್" ನಲ್ಲಿ“ಕನ್ನಡ ಹಬ್ಬ”
ಅಂದು
ನವೆಂಬರ್ 01-2010. ಕರ್ನಾಟಕವು ಕನ್ನಡಿಗರಿಗೆ ದೊರೆತ ಸುದಿನ. ಭಾಷಾವಾರು
ಪ್ರಾಂತ್ಯಗಳಾಗಿ ಭಾರತವನ್ನು ವಿಭಾಗಿಸಿದಾಗ ಕರ್ನಾಟಕವೂ ಅಸ್ತಿತ್ವಕ್ಕೆ ಬಂದಿತು.
ಹಲವಾರು ಮಹನ್ ಕನ್ನಡಿಗರ ಹೋರಾಟದ ಫಲವಾಗಿ ಕನ್ನಡಿಗರನ್ನು ಒಳಗೊಂಡ ಕರ್ನಾಟಕ ರಾಜ್ಯ
ಉದಯಿಸಿದ ಸುದಿನ ನವೆಂಬರ್-೦೧.
ಇಂತಹ ಸುದಿನದ ಸಂಭ್ರಮವನ್ನು ಆಚರಿಸಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಆದ್ಯ
ಕರ್ತವ್ಯ. ಹೀಗಾಗಿ ನಾವು ಬೆಳಗಿನ ಜಾವ 3.50ಕ್ಕೆ ಎದ್ದೆವು. ಆದರೆ 4.30ಕ್ಕೆ ಸ್ನಾನ
ಮುಗಿಸಿದೆವು. ರೇಷನ್ ಕಾರ್ಡ್ ಗಾಗಿ ಜನರು ಸಾಲಾಗಿ ನಿಲ್ಲುವಂತೆ ಸ್ನಾನಕ್ಕಾಗಿ 40
ನಿಮಿಷ ಕಾದು ನಿಂತಿದ್ದೆವು. ಅಂತೂ ಇಂತೂ ಸ್ನಾನ ಮುಗಿಸಿ 5 ಗಂಟೆಗೆ ’ಕೊಡೈ ಕೆನಾಲ್’ಗೆ
ನಮ್ಮ ಪ್ರಯಾಣ ಆರಂಭವಾಯಿತು. ಕೊಡೈ ಕೆನಾಲ್ ತುಂಬಾ ಮಂಜು, ಚಳಿ ಇರುವ ಪ್ರದೇಶ. ಅಲ್ಲಿ ಸೂರ್ಯ ಹುಟ್ಟುವುದೇ ಮಧ್ಯಾಹ್ನ 2 ಗಂಟೆಗೆ. ಅದೂ ಅಪರೂಪ. ಅಂತಹ ಸ್ಥಳಕ್ಕೆ ನಾವು ಭೇಟಿ ನೀಡಲು ಹೊರಟಿದ್ದೆವು. ಗುಡ್ಡಗಾಡು ಪ್ರದೇಶಒಅಲ್ಲಿ ನಮ್ಮ ವಾಹನ ಚಲಿಸುತ್ತಿತ್ತು…..
ನದಿ ಮೂಲ ಹುಡುಕುವ ಯತ್ನ…..!!
ಅಲ್ಲಿ ಮಂಜು ಇದ್ದ ಕಾರಣ ಸದಾ ಕಾಲ ನದಿ ಮತ್ತು ಬೆಟ್ಟದಲ್ಲಿ ಹರಿಯುವ ಜಲಪಾತಗಳ ಮೂಲ ಹುಡುಕುವ ಯತ್ನ ಮಾಡಿದೆವು. ಬೆಟ್ಟ ಹತ್ತಲು 55 ಕಿ.ಮೀ (ಘಾಟ್ ಸೆಕ್ಷನ್).
ಅದು ದಟ್ಟ ಅರಣ್ಯ ಮತ್ತು ಬೆಟ್ಟದ ಮಧ್ಯದಲ್ಲಿನ ಸುದೀರ್ಘ ಪಯಣ. ಭೂಮಿಯಿಂದ ಮೇಲೆ ಹೋದರೆ
ಅಂದರೆ, ಸಮುದ್ರ ಮಟ್ಟದಿಂದ ಮೇಲೆ ಹೋದಂತೆ ನಮಗೆ ಆಮ್ಲಜನಕದ ಕೊರತೆ ತಿಳಿಯತೊಡಗಿತು.
ಅದರೂ ನದಿ, ಜಲಪತ, ಮೊದಲಾದವು ಹರಿಯುತ್ತಿರುವುದನ್ನು ಕಂಡು ನಮಗೆ ಹೆಚ್ಚು ಕುತೂಹಲ.
ಏಕೆಂದರೆ, ಬೆಟ್ಟದ ಮೇಲೆ ನದಿ ಇದೆಯೇ..? ಅಲ್ಲಿ ನೀರು ಹೇಗೆ ಬರುತ್ತದೆ..? ಈ ಹರಿವ ನೀರಿನ ಮೂಲ ಯಾವುದು…? ಎಂದು ಸಂಶೋಧನೆಗೆ ನಿಂತೆವು.
ವಾಹನ
ಬೆಟ್ಟ ಹತ್ತಿ ಮೇಲಕ್ಕೆ ಮೇಲಕ್ಕೆ ಹೋರಟರೂ ಆ ನೀರಿನ ಮೂಲ ತಿಳಿಯಲೇ ಇಲ್ಲ. ಎಲ್ಲಿಂದಲೋ
ನೀರು ಹರಿದು ಬರುತ್ತಿದೆ. ಆದರೆ ಅದು ಎಲ್ಲಿಂದ..? ಎಂಬ ಸುಳಿವು ಕೊನೆಗೂ ಸಿಗಲಿಲ್ಲ. ಆಗ ನಮ್ಮ ಹಿರಿಯರು ಹೇಳಿದ ಮಾತು ನೆನಪಿಗೆ ಬಂತು…” ನದಿ ಮೂಲ ಮತ್ತು ಗುರು ಮೂಲ ಹುಡುಕ ಬೇಡಿ” ಎಂದು.
ಅದನ್ನು ಹುಡುಕುವ ಹುನ್ನಾರ ಮಾಡಿ ನಾವು ವಿಫಲವಾದೆವು. ನಂತರ 8.30ಕ್ಕೆ ಅಲ್ಲೇ ರಸ್ತೆಯ
ಪಕ್ಕದಲ್ಲಿ ಬಸ್ಸು ನಿಲ್ಲಿಸಿದರು. ಅಲ್ಲೇ ಬೆಳಗಿನ ಉಪಹಾರ ನೀಡಿದರು. ನಂತರ 9.40ಕ್ಕೆ ’ಸಿಲ್ವರ್ ಪಾರ್ಕ್” ಗೆ ಭೇಟಿ ನೀಡಿದೆವು. ಮಂಜು ಮುಸುಕಿದ ಸಮಯ ಅದು.
ಚುಮು ಚುಮು ಚಳಿಯಲ್ಲಿ ಸಿಲ್ವರ್ ಪಾರ್ಕ್ ಸುತ್ತಾಡಿ ಜಲಪಾತ ನೋಡಿಕೊಂಡು ಮತ್ತೆ ಪಯಣ
ಆರಂಭಿಸಿದೆವು. ಮಧ್ಯಾಹ್ನ್ 12.30ಕ್ಕೆ ಸರಿಯಾಗಿ ನಾವು ಕೊಡೈ ಕೆನಾಲ್ ತಲುಪಿದೆವು.
ಅಲ್ಲಿಯವರೆಗೂ ನದಿ ಮೂಲ ಹುಡುಕಿದೆವು. ಆದರೂ ನಮ್ಮ ಪ್ರಯತ್ನ ವ್ಯರ್ಥವಾಯಿತು ಎಂದು
ನಮಗೆ ಮನದಟ್ಟಾಯಿತು. ನಂತರ ಕೊಡೈ ಕೆನಾಲ್ ನ ಒಂದು ಉದ್ಯಾನವನಕ್ಕೆ ಹೋದೆವು.ಆದರೆ
ಆ ಉದ್ಯಾನವನದ ಹೆಸರು ತಿಳಿಯಲಿಲ್ಲ. ಅಷ್ಟೊಂದು ದಟ್ಟ ಮಂಜು ಕವಿದಿತ್ತು. ಹೆಸರು
ಗೊತ್ತಿಲ್ಲದ ಪಾರ್ಕಿನಲ್ಲಿ ನಮ್ಮ ಗುರುಗಳು ನಮ್ಮನ್ನು ಕರೆದೊಯ್ದು ಅಲ್ಲಿಯೆ ನಮ್ಮನ್ನು
ಕೂರಿಸಿ ಕನ್ನಡ ರಾಜ್ಯೋತ್ಸವದ ಬಗ್ಗೆ ನಮ್ಮೆಲ್ಲರಿಗೂ ತಿಳಿಸಿ ಶುಭ ಕೋರಿ ಸಿಹಿ ಹಂಚಿದರು. ನಾವು ಆರಂಭಾಕ್ಷರಿ ಪಂದ್ಯಕ್ಕೆ ನೀಡಿದ ಹಣದಿಂದ ಈ ಸಿಹಿಯನ್ನು ತರಿಸಲಾಗಿತ್ತು. ಅದೂ ಅಲ್ಲದೆ ಐರಾವತ ಬಸ್ಸಿನಲ್ಲಿ ಕೆಲವರ ಗುಂಪು ಮಾಡಿ ಅದಕ್ಕೆ “ಭಿಕ್ಷುಕರ ಗುಂಪು” ಎಂದು ನಾಮಕರಣ ಮಾಡಿ ಅದರಿಂದ ಸ್ವಲ್ಪ ಹಣ ಸಂಗ್ರಹಿಸಲಾಗಿತ್ತು. ಈ ಭಿಕ್ಷುಕರ ಗುಂಪಿನ ನಾಯಕ ಮತ್ತು ಸಂಸ್ಥಾಪಕ ರಾಮಕೃಷ್ಣ ಅಲಿಯಾಸ್ ಕರಗ ರಾಮಕೃಷ್ಣ. ನಂತರ ಉಳಿದ ಹಣವನ್ನು ನಮ್ಮ ಗುರುಗಳು ಹಾಕಿದರು. ಹೀಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಸಿಹಿ ತಿಂದೆವು.
ಪರ
ರಾಜ್ಯದಲ್ಲಿದ್ದರೂ ಕನ್ನಡವನ್ನು ಮರೆಯದೇ ಕನ್ನಡ ಮಾತೆಯನ್ನು ನೆನೆದು
ಸಂಭ್ರಮಾಚರಣೆಯನ್ನು ಮಾಡಿದ್ದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿ. ಮಧ್ಯಾಹ್ನ 2
ಗಂಟೆಯವರೆಗೂ ಆ ಉದ್ಯಾನವನದಲ್ಲಿ ಸುತ್ತಾಡಿ ಫೋಟೋ ಕ್ಲಿಕ್ಕಿಸಿದೆವು. ಕಡೈ ಕೆನಾಲ್
ನಲ್ಲಿಯೇ ದೊಡ್ಡ ಉದ್ಯಾನವನ ಅದಾಗಿತ್ತು. ಸುತ್ತಾಟ ಮುಗಿದ ನಂತರ ನಮ್ಮ ಬಸ್ ನಿಂತಿದ್ದ
ಸ್ಥಳಕ್ಕೆ ಮರಳಿದೆವು. 2 ಗಂಟೆ ಸಮಯವಾದ್ರೂ ಸೂರ್ಯ ಪತ್ತೇನೇ ಇಲ್ಲ… ಅಲ್ಲಿ ಊಟ ಮುಗಿಸಿ
ಮಧ್ಯಾಹ್ನ 3ಗಂಟೆಗೆ ಅಲ್ಲಿಂದ ಹೊರಟೆವು. ಆಗ ಸೂರ್ಯ ೩ ಸೆಕೆಂಡುಗಳ ಕಾಲ ಕಾಣಿಸಿ ಮತ್ತೆ
ಕಣ್ಮರೆಯಾದ… ಅದು ಮಂಜು, ಹಿಮದ ಪ್ರದೇಶ. .. ನಮಗಂತೂ ತಡೆಯಲಾಗದ ಚಳಿ-ಚಳಿ. ಕೈಲಾಸದ
ದೃಶ್ಯಗಳನ್ನು ಸಿನೆಮಾದಲ್ಲಿ ನೋಡಿದ್ದೆವು. ಆದರೆ, ಕೊಡೈ ಕೆನಾಲ್ ನಲ್ಲಿನ ಮಂಜು ದೃಶ್ಯ ನೆನೆದರೆ ಸಿನೆಮಾದಲ್ಲಿನ ಕೈಲಾಸವೇ ನೆನಪಿಗೆ ಬರುತ್ತದೆ. ಯಾಕೆ ಗೊತ್ತ..? ನಮಗೆ ನಿಜವಾದ ಕೈಲಾಸ ಹೇಗಿರುತ್ತೆ ಅಂತಾ ಗೊತ್ತಿಲ್ಲ ಅದಕ್ಕೆ.
ಕೊಡೈ ಕೆನಾಲ್ ನಿಂದ ೩ ಗಂಟೆಗೆ ಆರಂಭವಾದ ನಮ್ಮ ಪಯಣ ’ಫಳನಿ’ಯ ಕಡೆಗೆ ಸಾಗಿತ್ತು.
12. ಬೆಟ್ಟದ ಮೇಲೆ “ಭಗವಂತ”
ಕೊಡೈ ಕೆನಾಲ್ ನಲ್ಲಿ ಊಟ ಮುಗಿಸಿದ ನಂತರ ೩ ಗಂಟೆಗೆ ನಮ್ಮ ಪಯಣ ’ಫಳನಿ’ಯ ಕಡೆಗೆ ಸಾಗಿತ್ತು. ಅಲ್ಲಿನ ಚಳಿಯ ಪ್ರಭಾವವೋ ಏನೋ ನಾವೆಲ್ಲಾ ಇಲಿಮರಿಗಳು ಗೂಡು ಸೇರಿದಂತೆ ಬಸ್ಸಿನ ಸೀಟಿನಲ್ಲಿ ಕಂಬಳಿ ಹೊದ್ದುಕೊಂಡು ಕುಳಿತೆವು. ಕಣ್ಣು ಬಾಯಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ನೃತ್ಯವೂ ಇಲ್ಲ. ಗಾನ ಬಜಾನಾನೂ ಇಲ್ಲ. ಆದರೆ ನನ್ನಿಂದ ಹಾಸ್ಯ ಮತ್ತು ಮಿಮಿಕ್ರಿಗೆ ಬರವೇ ಇರಲಿಲ್ಲ. ನಾನು ನನ್ನ ಮಾತುಗಳಿಂದ ಕುಳಿತ ಜಾಗದಿಂದಲೇ ಬಸ್ಸಿನಲ್ಲಿದ್ದ ಸ್ನೇಹಿತರನ್ನು ನಗಿಸುತ್ತಾ ಪಯಣ ಸಾಗಿಸಿದೆವು.. ಮಧ್ಯ ದಾರಿಯಲ್ಲಿ “ರಾಜರ ಗ್ರಹಚಾರ” ಕೆಟ್ಟಿತ್ತು” ಎಂದು
ಕಾಣಿಸುತ್ತದೆ. ರಾಜ ಹಂಸ ಬಸ್ಸು ಪಂಚರ್ ಆಯ್ತು. ಅಲ್ಲಿಯವರೆಗೂ ನಮ್ಮ ಸ್ನೇಹಿತ
ಸ್ನೇಹಿತೆಯರು ತಂದು ಕೊಟ್ಟಿದ್ದ ತಿಂಡಿ ತಿನಿಸು, ಸಿಹಿ, ಖಾರ ಎಲ್ಲವನ್ನು ಕಡೆಯ ಸೀಟಿಗೆ
ಜೋಳಿಗೆ ಕಟ್ಟಿ
ಚೆನ್ನಾಗಿ ಕಲೆಸಿ ತಿನ್ನುತ್ತಿದ್ದೆವು. ಬಸ್ ಪಂಚರ್ ಆದಾಗ ಅದೆಲ್ಲವನ್ನೂ ಹೊರ
ಚೆಲ್ಲಿದೆವು. ಆಗ ನಮ್ಮ ನಾಗವಲ್ಲಿ ನಾಗೇಶ್ ಗೆ ಬಸ್ಸಿನ ಪ್ರಯಾಣ ತಲೆ ತಿರುಗಿಸಿ ವಾಂತಿ
ಯಾಯಿತು. ಕೆಳಗಿಳಿದು ಅಲ್ಲಿದ್ದ ನೀರಿನ ಕೊಳವೆಯ ಬಳಿ ಹೋಗಿ ರೀಫ್ರೆಷ್ ಆದ. ನಾನು ಆ
ನಲ್ಲಿಯ ಬಳಿಗೆ ಹೋಗಿ ತಲೆಗೆ ಸ್ವಲ್ಪ ನೀರು ಹಾಕಿಕೊಂಡು ನಮ್ಮ ಎನ್.ಎಸ್.ಆರ್. ತರಹ ತಲೆ ಕೂದಲನ್ನು ಬಾಚಿಕೊಂಡು ನಡೆದುಕೊಂಡು ಹೋಗುತ್ತಿದ್ದೆ. ಅವರು ನೋಡಿ ನಕ್ಕರು. ನಮ್ಮ ಹೊಸ ಗೆಟಪ್ ನಲ್ಲಿ “ಐರಾವತಕ್ಕೆ ಪಾದಾರ್ಪಣೆ” ಮಾಡಿದೆವು.
ಐರಾವತದಲ್ಲಿ
ಇದ್ದವರಿಗೂ ನಮಗೂ ದೊಡ್ಡ ವಾಗ್ವಾದವೇ ನಡೆಯಿತು. ನಾವೇ ಗ್ರೇಟ್ ಎಂದು ಬಡಾಯಿ
ಕೊಚ್ಚಿಕೊಳ್ಳುತ್ತಿದ್ದ ಅವರನ್ನು ಮಾತಿನಿಂದಲೇ ಬಗ್ಗಿಸಿದ ಕೀರ್ತಿ ನಮಗೆ ಸಲ್ಲುತ್ತದೆ.
ನಾನು, ಕಿಶೋರ, ಚಿಕ್ಕಣ್ಣ, ಉಮೇಶ್, ಚೈತ್ರ, ಗಾಯತ್ರಿ, ಲಕ್ಷ್ಮಿ, ಮೊದಲಾದವರು
ಐರವತದವರನ್ನು ವಿರೋಧಿಸಿ ಮಾತನಾಡಿದೆವು. ಬಿ.ಎಡ್ ಆರಂಭದಿಂದಲೂ ನನ್ನ ಮಾತು ಮತ್ತು
ಹೋರಾಟವನ್ನುನೋಡಿದ ಎಲ್ಲರೂ ನನ್ನನ್ನು ವಿರೋಧ ಪಕ್ಷದ ನಾಯಕ ಎಂದು ಕರೆಯುತ್ತಿದ್ದರು.
ಕಿರುಚಿ ಕಿರುಚಿ ಗಂಟಲಿಂದ ಧ್ವನಿಯೇ ಬರುತ್ತಿರಲಿಲ್ಲ. ಆದರೂ ಅವರ ನಂಬಿಕೆ, ಅವರು
ಕೊಟ್ಟಿರುವ ಸ್ಥಾನವನ್ನು ಉಳಿಸಿಕೊಳ್ಳಲು ಜೋರಾಗಿಯೇ ಮಾತನಾಡಿದೆ. ನಮ್ಮ ಈ ಹುಡುಗಾಟ ಎನ್.ಎಸ್.ಆರ್.ಸರ್ ರವರಿಗೆ ತೀಕ್ಷ್ಣವಾಗಿ ಕಂಡಿತು. ಜಗಳ ಮಾಡುತ್ತಿದ್ದಾರೆಂದು ಗ್ರಹಿಸಿ ಎಲ್ಲರನ್ನೂ ಗದರಿಸಿ ಸುಮ್ಮನಾಗಿಸಿದರು.
ಸಂಜೆ 6.15ಕ್ಕೆ ಫಳನಿ ತಲುಪಿದೆವು. ಲೀಲಾವತಿ ಮೇಡಂ ಜೊತೆ ನಾವು ಫಳನಿ ಬೆಟ್ಟವನ್ನು ಹತ್ತಿದೆವು. ಆಗ ನಮ್ಮ ಮೇಡಂಗೆ ನಾನು ಒಂದು ಮಾತು ಕೇಳಿದೆ. “ ಬೆಟ್ಟ ಹತ್ತುವುದು ಕಷ್ಟ ಅಲ್ವಾ ಮೇಡಂ” ಎಂದಾಗ ಅವರು “ನಮ್ಮ ಹಿರಿಯರು ಏನೇ ಮಾಡಿದರೂ ಅದಕ್ಕೆಲ್ಲಾ ಒಂದು ಅರ್ಥ ಇರುತ್ತೆ. ದೇವರನ್ನು ನಾವು ನೋಡಲು ಎಷ್ಟು ಕಷ್ಟ ಪಡಬೇಕು ಎಂಬುದನ್ನು ನಾವು ತಿಳಿದುಕೊಳ್ಳಲು ಹೀಗೆ ಬೆಟ್ಟದ ಮೇಲೆ ದೇವರನ್ನು ಪ್ರತಿಷ್ಟಾಪಿಸಲಾಗಿದೆ” ಎಂದು ಉತ್ತರಿಸಿದರು. ನಿಜಕ್ಕೂ ಅದು ಸತ್ಯ ಸ್ನೇಹಿತರೇ….!
ನಾವು ಹಾಗೆ ಮಾತನಾಡುತ್ತಾ ಬೆಟ್ಟ ಹತ್ತಿದೆವು.ಬೆಟ್ಟದ ಮೇಲೆ ನೆಲೆಸಿದ್ದ ಭಗವಂತನನ್ನು ನೋಡಲು 700ರಿಂದ 750 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.
ಆಗ ನಮಗೆ ಸುಬ್ರಮಣ್ಯ ಸ್ವಾಮಿಯ ದರ್ಶನ ಸಿಗುತ್ತದೆ. ದರ್ಶನ ಮಾಡಿ ಬೆಟ್ಟದ ಮೇಲೆ ನಿಂತು
ಸುತ್ತಲಿನ ಪ್ರದೇಶವನ್ನು ನೋಡಿದೆವು. ರಾತ್ರಿಯಾದ್ದರಿಂದ ವಿದ್ಯುತ್ ದೀಪಗಳಿಂದ
ಸುತ್ತಲಿನ ಪ್ರದೇಶ ಮಿಂಚುತ್ತಿತ್ತು. ಆಮೇಲೆ ಅಲ್ಲಿಂದ ಬಂದೆವು. ಆಗ ನಮ್ಮ ಎನ್.ಲೋಕನಾಥ್ ಸರ್ ನಮಗೆ ಒಂದು ಛಾಲೆಂಜ್ ಹಾಕಿದರು.
“ಈ ಬೆಟ್ಟವನ್ನು ಎಲ್ಲೂ ನಿಲ್ಲದಂತೆ ಯಾರು ಹತ್ತುತ್ತಾರೆ ನೋಡೇ ಬಿಡೋಣ. ನಾನಾ ಅಥವ
ನೀವಾ? ನೋಡೋಣ ಎಂದರು. ಆಗ ನಾನು ಪಂದ್ಯಕ್ಕೆ ರೆಡಿ ಎಂದೆ. ಪಂದ್ಯ ಶುರುವಾಯಿತು. ಮೊದಲು
ಎನ್.ಎಲ್ ಸರ್ ಮುಂದೆ ಹೋದರು. ನಂತರ ನಾನು ಅವರನ್ನು ಹಿಂದೆ ಹಾಕಿ ಮುಂದೆ ಓಡುತ್ತಿದ್ದೆ.
ಆಗ ಎನ್.ಎಲ್.ಸರ್ ಅಲ್ಲೆ ನಿಂತು ಹಿಂದಕ್ಕೆ ಬಂದರು. ನಾನು “ಇದು ನಿಜವಾದ ಪಂದ್ಯ”
ಎಂದುಕೊಂಡಿದ್ದೆ. ಆದರೆ ನಮ್ಮ ಗುರುಗಳು ನನ್ನನ್ನು ಕುರಿ ಮಾಡಿದರು ಎಂದು ನಂತರ
ತಿಳಿಯಿತು. ಹ್ಯಾಪ್ ಮೋರೆ ಹಾಕಿಕೊಂಡು ನಮ್ಮ ಬಸ್ಸ್ ಬಳಿಗೆ ಬಂದೆವು. ಅಷ್ಟರಲ್ಲಿ
ರಾತ್ರಿ 8.00ಗಂಟೆಯಾಗಿತ್ತು. ರಾತ್ರಿಯ ಊಟ ಮುಗಿಸಿ 9 ಗಂಟೆಗೆ ನಮ್ಮ ಪಯಣ ಮತ್ತೆ
ಹೊಸೂರು ರೈಲ್ವೇ ನಿಲ್ದಾಣದ ಕಡೆಗೆ ಸಾಗಿತ್ತು. ಅದು ಕಡೆಯ ದಿನದ ಪ್ರವಾಸವಾಗಿತ್ತು.
ಮತ್ತು ನಮ್ಮ ಪ್ರವಾಸದ ಕಡೆಯ ರಾತ್ರಿ ಸಹ ಅದಾಗಿತ್ತು.
ಬ್ಯಾಕ್ ಟು ಹೊಸೂರು…
ಫಳನಿಯಿಂದ
ರಾತ್ರಿ 9 ಗಂಟೆ ಸುಮಾರಿಗೆ ನಮ್ಮ ಬಸ್ಸ್ ಹೊಸೂರು ರೈಲ್ವೆ ನಿಲ್ದಾಣದ ಕಡೆಗೆ
ಸಾಗಿತ್ತು. ಬೆಳಿಗ್ಗೆ 5 ಗಂಟೆಗೆ (02-11-2010) ಹೊಸೂರು ತಲುಪುವ ಗುರಿಯನ್ನು
ಇಟ್ಟುಕೊಳ್ಳಗಿತ್ತು.
ಫಳನಿಯಿಂದ
ಎಲ್ಲರೂ ಹೊರಟೆವು.. ಅದು ಕಡೆಯ ರಾತ್ರಿಯ ಪ್ರವಾಸ.. ಮತ್ತೆ ಅದೇ ಸಿಡಿಯನ್ನು
ಹಾಕಿದೆವು. ಬಸ್ಸಿನಲ್ಲಿ ಇದ್ದ ಎಲ್ಲರೂ ನೃತ್ಯ ಮಾಡುತ್ತಿದ್ದರು. ಆದರೆ ಸೈಲೆಂಟ್ ಹುಡುಗಿಯರು ಎಂದು ಕೊಂಡಿದ್ದ ಶ್ವೇತ, ಗಾಯತ್ರಿ, ಅರ್ಚನ, ನಿರ್ಮಲ, ಉಷಾರಾಣಿ, ಲಕ್ಷ್ಮಿ ಎಲ್ಲರೂ ಕಡೆಯ ದಿನ ನಮ್ಮ ನೃತ್ಯದಲ್ಲಿ ಭಾಗವಹಿಸಿ ಸಂತೋಷದಿಂದ ಕುಣಿದು-ಕುಪ್ಪಳಿಸಿ, ಆನಂದಿಸಿದರು.
ಚೈತ್ರ ಅಂತೂ ಸದಾ ನಮ್ಮ ಡ್ಯಾನ್ಸ್ ನಂತರ ಅವಳದ್ದೂ ಒಂದು ಡ್ಯಾನ್ಸ್ ಎಂಬಂತೆ ಪೈ ಪೋಟಿಯಿಂದ ಪಾಲ್ಗೊಂಡಳು.
ಅಲ್ಲಿಯವರೆಗೂ ಯಾರೊಂದಿಗೂ ಅಷ್ಟಾಗಿ ಸಂಪರ್ಕ ಬೆಳೆಸಿಕೊಳ್ಳದ ಕೃಷ್ಣಾ ರೆಡ್ಡಿ ಕೂಡ ಕಡೆಯ ದಿನ ನೃತ್ಯ ಮಾಡಿದ್ದ. ಮುನಿಸ್ವಾಮಿ ಮತ್ತು ಮುನಿರಾಜು ಹಾಕಿದ ಹೆಜ್ಜೆ ಮತ್ತು ಅವರ ಮೈ ಭಾರಕ್ಕೆ ಬಸ್ಸೂ ಕೂಡ ಗಡ-ಗಡ ಎಂದು ಡ್ಯಾನ್ಸ್ ಮಾಡಿತ್ತು…!!
ಹೀಗೆ ರಾತ್ರಿಯೆಲ್ಲಾ ನೃತ್ಯೋತ್ಸವ ಮಾಡುತ್ತ ಸಂಪೂರ್ಣವಾಗಿ ಮನರಂಜನೆಯಿಂದ ಖುಷಿ ಪಟ್ಟೆವು..
ಈ ನೃತ್ಯೋತ್ಸದ ಕೇಂದ್ರ ಬಿಂದುಗಳು ಹಲವರಿದ್ದಾರೆ. ನಾನು(ಶೇಖರ್), ಕಿಶೋರ, ನಾಗವಲ್ಲಿ ನಾಗೇಶ್, ಚಿಕ್ಕಣ್ಣ, ಉಮೇಶ್, ಮುನಿರಾಜು, ಮುನಿಸ್ವಾಮಿ, ಮತ್ತು ಹೆಣ್ಣುಮಕ್ಕಳಲ್ಲಿ ಪ್ರಮುಖಳಾದವರು ಎಂದರೆ ಮಿಸ್.ಚೈತ್ರ….. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಅಂತು ಇಂತು ಒಂದು ವಾರದ ಸಂಭ್ರಮ (02-11-2010) ಬೆಳಿಗ್ಗೆ 6ಗಂಟೆಗೆ ಹೊಸೂರು ತಲುಪುತ್ತಿದ್ದಂತೆ ಮುಗಿದು ಹೋಯಿತು.
ಬೆಳಿಗ್ಗೆ
6ಗಂಟೆಗೆ ಹೊಸೂರು ತಲುಪುತ್ತಿದ್ದಂತೆಯೇ ನಾವೆಲ್ಲರೂ ದೂರ ಹೋಗುತ್ತೇವೆ ಎಂಬ ಬೇಸರ
ನಮ್ಮಲ್ಲಿ ಮನೆ ಮಾಡಿತ್ತು. ಅಷ್ಟು ದಿನ ಒಂದೇ ಕುಟುಂಬದವರಂತೆ ಹೊಂದಿಕೊಂಡಿದ್ದೆವು.
ಎಲ್ಲರೂ ದೂರವಾಗಿ ಅವರವರ ಮನೆ ಸೇರುತ್ತಿದ್ದುದು ಬೇಸರವಾಯಿತು.
ಅದೇ ಗುಂಗಿನಲ್ಲಿ ಹೊಸೂರಿನಿಂದ ಚಿಕ್ಕಬಳ್ಳಾಪುರಗೆ ಬರುವ ರೈಲು ಹತ್ತಿದೆವು. ಕಿಟಕಿಯ ಕಡೆಗೆ ಮುಖ ಮಾಡಿ ನಾವು ಕಳೆದ ಸವಿ ನೆನಪುಗಳನ್ನು ನೆನೆಯುತ್ತಾ ಕಣ್ಣಲ್ಲಿ ನೀರು ಬಂತು.
ಹಾಗೆಯೇ ಕಣ್ಣೀರು ಒರೆಸಿಕೊಳ್ಳುತ್ತಾ ನಗು ಮುಖ ಹೊತ್ತವನಂತೆ ಎಲ್ಲರನ್ನೂ ಹಾಸ್ಯದ
ಮಾತಿನಲ್ಲಿ ಮುಳುಗಿಸಿದೆ. ಕೆಲ ಕ್ಷಣ ರಂಜಿಸಿದೆ. ಎಲ್ಲರೂ ಹರಟೆ ಹೊಡೆದೆವು. ಬೆಂಗಳೂರು
ತಲುಪುತ್ತಿದ್ದಂತೆ ಎಲ್ಲರಿಗೂ ಉಪ್ಪಿಟ್ಟಿನ ಊಟ ಹಾಕಿದರು.
ನನ್ನದು
ಯಲಹಂಕ. ಆದ್ದರಿಂದ ನಾನು ಯಲಹಂಕದಲ್ಲಿ ಇಳಿಯುತ್ತೇನೆ ಎಂದು ಮೊದಲೇ ತಿಳಿಸಿದ್ದೆ.
ದೊಡ್ಡಬಳ್ಳಾಪುರಕ್ಕೆ ಹೋಗುವ ನನ್ನ ಸ್ನೇಹಿತರಿಗೂ ಯಲಹಂಕದಿಂದ ಹತ್ತಿರವಾಗುತ್ತದೆ ಎಂಬ
ಕಾರಣಕ್ಕೆ ಅವರೆಲ್ಲರೂ ಯಲಹಂಕದಲ್ಲಿ ಇಳಿಯುತ್ತೇನೆ ಎಂದಿದ್ದರು. ಯಲಹಂಕ ಬಂದಾಗ ನನ್ನ ಮನದಲ್ಲಿ ದುಃಖವಿದ್ದರೂ ನಗುತ್ತಲೇ ಇಳಿಯುತ್ತಿದ್ದೆ. ಆಗ ಎಲ್ಲರೂ ಟಾಟಾ ಮಾಡಿದರು. ಆಗ ಎನ್.ಎಸ್.ಆರ್ ಸರ್ “ಏನಯ್ಯಾ ಇಷ್ಟೋಂದು ಜನ ಅಭಿಮಾನಿಗಳು ನಿನಗೆ ಟಾಟಾ ಮಾಡ್ತಾ ಇದ್ದಾರೆ” ಅಂದ್ರು. ಆಗ “ಎಲ್ಲರೂ ನಾನು ಹೋಗುತ್ತಿರುವುದರಿಂದ ಬೇಸರವಾಗಿದ್ದಾರೆ ಮತ್ತು ಟಾಟಾ ಮಾಡುತ್ತಿದ್ದಾರೆ” ಎಂದೆ. ಆಗ ಎನ್.ಎಸ್.ಆರ್.ಸರ್ “ ನೀನು ಆವಾಗಿನಿಂದ ಬರ್ಲಾ…ಬರ್ಲಾ… ಅಂತಾ ಕ್ಯೂರಿಯಾಸಿಟಿ ಹುಟ್ಟಿಸಿದೆ ಅಲ್ವಾ ಅದಕ್ಕೆ ಬೇಗ ತೊಲಗಲಿ ಅಂತಾ ಇರಬೇಕು ಕಣೋ” ಎಂದು ಹಾಸ್ಯದ ಚಟಾಕಿ ಹಾರಿಸಿದರು.
ಮರಳಿ ಮನೆಗೆ…!!!
ಯಲಹಂಕಾ ದಲ್ಲಿ ನಾನು ಮತ್ತು ದೊಡ್ಡಬಳ್ಳಾಪುರಕ್ಕೆ ಹೋಗಬೇಕಿದ್ದ ಚೇತನ್, ಚೈತ್ರ, ಅಮರ ನಾರಾಯಣ ಇಳಿದರು. ಆದರೆ ಉಮೇಶ ಮತ್ತು ಮುನಿಸ್ವಾಮಿ, ಲಕ್ಷ್ಮಿ ಮಾತ್ರ ಇಳಿಯಲಿಲ್ಲ. ಆದರೆ ದೇವನಹಳ್ಳಿಗೆ ಹೋಗಬೇಕಿದ್ದ ರಮಾಮಣಿ ಇಳಿದರು.
ಅವರೆಲ್ಲರನ್ನೂ
ಅವರವರ ಊರಿನ ಬಸ್ ಹತ್ತಿಸಿ ದೆ. ಎಲ್ಲರೂ ಹೋದ ನಂತರ ನಾನು ಮನೆಗೆ ಹೋಗಿ ಮಲಗಿದೆ.
ಕಣ್ಣೀರು ತುಂಬಿ ಬಂದಿತು. ನನ್ನ ವಿದ್ಯಾರ್ಥಿ ಜೀವನದಲ್ಲಿ ಕಾಣದಂಥಹ ನನ್ನ ಗುರುಗಳು
ಮತ್ತು ಆತ್ಮೀಯ ಸ್ನೇಹಿತ-ಸ್ನೇಹಿತೆಯರು ಮತ್ತು ಅವರೊಂದಿಗೆ ಸಂಭ್ರಮಿಸಿದ ಕ್ಷಣಗಳು
ನಿಜಕ್ಕೂ ನನ್ನ ಜೀವನದ ಬಂಗಾರದ ಕ್ಷಣಗಳು.
ಅದು ಸದಾ
ಬಂಗಾರವಾಗಿಯೇ ನನ್ನ ಮನದಲ್ಲಿ ಉಳಿದಿರುತ್ತವೆ..!
ಆದರೆ ನನ್ನ ಮನದಲ್ಲಿ ಕಾಡುತ್ತಿರುವ ಒಂದೇ ಒಂದು ಪ್ರೆಶ್ನೆ ಎಂದರೆ, “ಮತ್ತೊಮ್ಮೆ ಆ ಕ್ಷಣಗಳು ಬರುತ್ತವೆಯೇ..?”
ಇದಕ್ಕೆ ಉತ್ತರ ಇಲ್ಲ….!!
ಆದರೂ ಇಂಥಾ ಮಧುರ ಕ್ಷಣಗಳಿಗಾಗಿ ಕಾಯುತ್ತಿದ್ದೇನೆ.
ಬರುತ್ತವೆಯೇ ಆ ಕ್ಷಣಗಳು…?
ಮತ್ತೆ ಎಲ್ಲರೂ ಸಿಗುತ್ತಾರೆಯೇ….?
ಇದಕ್ಕಾಗಿ ಶಬರಿಯಂತೆ ಕಾಯುತ್ತಿದ್ದಾನೆ
ಈ
ಸವಿ ನೆನಪಿನ
ಶೇಕ್(ಸ್ಪಿಯ)ರ್
ನನ್ನನ್ನು ಭೇಟಿ ಮಾಡುವ ಸ್ನೇಹಿತರಿಗೆ..ಇದು ನನ್ನ ವಿಳಾಸ.
kranthikidi@gmail.ಕಂ
0 Комментарии