Hot Posts

10/recent/ticker-posts

ನಾ ಬೇಕು ಎಂದಾಗ ಅವಳು ಸಾಕು ಎಂದಳು- ನೋವಿನ ಕಥೆ




ನಿನಗೆ ಆಟ ಅಂದ್ರೆ ಇಷ್ಟ ಅಂತ ಮೊದಲೇ ಹೇಳಬೇಕಿತ್ತು ಗೆಳತಿ.. ನಿನಗಾಗಿ ಒಂದು ದೊಡ್ಡ ಗ್ರೌಂಡನ್ನೇ ನಿರ್ಮಿಸುತ್ತಿದ್ದೆ.. ಆಟದ ಗ್ರೌಂಡ್ ಇಲ್ಲ ಅಂತ ಹೃದಯವನ್ನೇ ಆಟದ ಗ್ರೌಂಡ್ ಮಾಡಿಕೊಂಡೆ.. ಭಾವನೆಗಳ ಜೊತೆಗೆ ಆಟವಾಡಿಬಿಟ್ಟೆ.. ನೀನೇನೋ ಗೆಲುವಿನ ನಗೆ ಬೀರಿ ಹೋದೆ.. ಆದ್ರೆ ಭಾವನೇಗಳೇ ಬದುಕು ಅಂದುಕೊಂಡ ನಾನು, ಬದುಕಲ್ಲೇ ಸೋತು ಹೋದೆ..





ನನಗೆ ಗೊತ್ತು.. ನೀನು ಗೆದ್ದೇ ಗೆಲ್ತೀಯ ಅಂತ.. ಯಾಕಂದ್ರೆ, ನೀನು ಆವತ್ತು ನನಗೆ ಒಂದು ಮಾತು ಕೇಳಿದ್ದೆ ನೆನಪಿದೆಯಾ?



“ನಾನು ಜೀವನದಲ್ಲಿ ಏನನ್ನೂ ಬಯಸಿಲ್ಲ.. ಬಯಸಿದ್ದು ನಿನ್ನನ್ನೇ..! ನಾನು ಸಾಕು ಅನ್ನೋವರೆಗೂ ನಿನ್ನ ಪ್ರೀತಿ ಬೇಕು.. ಅಷ್ಟೋಂದು ಪ್ರೀತಿ ನನಗೆ  ಸಿಗುತ್ತಾ?  ” ಅಂತ ಕೇಳಿದ್ದೆ..



ಆಗ ನಾನು ಆ ದೇವರ ಹತ್ರ ಬೇಡಿಕೊಂಡಿದ್ದೆ.. “ದೇವ್ರೆ, ನನ್ನಾಕೆಯ ಎಲ್ಲಾ ಕನಸನ್ನು ಈಡೇರಿಸು.. ನನ್ನ ಹುಡುಗಿ ಬಯಸಿದ್ದೆಲ್ಲವೂ ಆಕೆಗೆ ಸಿಗಲಿ” ಅಂತ.. ಈವತ್ತು ಆ ದೇವ್ರು ನಿನ್ನ ಬೇಡಿಕೆಯನ್ನು ಈಡೇರಿಸಿದ್ದಾನೆ.. ಯಾಕಂದ್ರೆ ಈವತ್ತು “ನಿನಗೆ ನನ್ನ ಪ್ರೀತಿ ಸಾಕು” ಅನ್ನೋ ಟೈಮು ಬಂದು ಬಿಟ್ಟಿದೆ.. ಆ ದೇವ್ರು ನೀನು ಅಂದುಕೊಂಡದ್ದೆಲ್ಲವನ್ನೂ ಈಡೇರಿಸಿದ್ದಾನೆ.. ಖುಷಿ ಪಡು ಗೆಳತಿ.. ಖುಷಿ ಪಡು..



 ಒಂಥರ ನಾನು ಸಾಲಗಾರನಾಗಿ ಹೋದೆ.. ನೀನೇನೋ ನನ್ನ ಪ್ರೀತೀನ ಬಿಟ್ಟು ದೂರ ಹೋಗ್ತಾ ಇದೀಯ.. ನನ್ನ ಪ್ರೀತಿಯ ಒಂದಿಷ್ಟು ಅನುಬಂಧವೂ ನಿನ್ನ ಮನಸ್ಸಿನೊಳಗೆ ಇಲ್ಲ.. ಆದ್ರೆ ನಾನೇನು ಮಾಡಲಿ ಗೆಳತಿ.. ನನ್ನ ಹೃದಯದ ತುಂಬೆಲ್ಲಾ ಇರೋದು ಬರೀ ನಿನ್ನದೇ ನೆನಪುಗಳು.. ಅಳಿಸಲಾಗದ ಬದುಕಿನ ಕ್ಷಣಗಳು.. ಅದೆಲ್ಲವನ್ನೂ ನಾನು ನಿನಗೆ ವಾಪಸ್ ಕೊಡಲು ಆಗುತ್ತಿಲ್ಲ.. ಅಳಿಸಿ ಹಾಕಲೂ ಸಾಧ್ಯವಾಗುತ್ತಿಲ್ಲ.. ಹೀಗಾಗಿ ನಿನ್ನ ನೆನಪುಗಳನ್ನು, ನನ್ನಲ್ಲೇ ಇಟ್ಟುಕೊಂಡಿರುವ ಸಾಲಗಾರ ನಾನು.. ಈ ಸಾಲದ ಅಸಲನ್ನೂ ನಾನು ತೀರಿಸಲಾಗದು.. ಬಡ್ಡಿ, ಚಕ್ರಬಡ್ಡಿ ಅಂತ ಸಾಲದ ಶೂಲ ಎದೆಯನ್ನು ಇಬ್ಭಾಗ ಮಾಡುವವರೆಗೂ ನಿನ್ನ ನೆನಪು ನನ್ನೊಳಗೆ ಇರುತ್ತೆ..!





 ಈ ಜಗತ್ತಿನಲ್ಲಿ ಮನೆ ಬಾಡಿಗೆಗೆ ಸಿಗುತ್ತೆ.. ವಸ್ತುಗಳು ಬಾಡಿಗೆಗೆ ಸಿಗುತ್ತೆ.. ಆದ್ರೆ ನಿನ್ನ ಪ್ರೀತಿಯೂ ಕೂಡ ಕೆಲವು ಕ್ಷಣಗಳವರೆಗೆ ನನಗೆ ಬಾಡಿಗೆಗೆ ಸಿಕ್ಕಿತ್ತು.. ನಾನೂ ಪ್ರೀತಿ ಕೊಟ್ಟೆ. ನೀನು ಪ್ರೀತಿ ಕೊಟ್ಟೆ.. ಆದ್ರೆ ಈವತ್ತು ನೀನು ಬಾಡಿಗೆ ಕೊಟ್ಟ ಪ್ರೀತಿಯನ್ನು ವಾಪಾಸ್ ಕಿತ್ತುಕೊಂಡು ಹೋಗ್ತಾ ಇದೀಯ.. ಆದ್ರೆ ನೀನು ಬಾಡಿಗೆ ಕೊಟ್ಟ ಪ್ರೀತಿಯನ್ನು ನಾನು ಬಿಟ್ಟು ಕೊಡೋದಕ್ಕೆ ಆಗ್ತಾ ಇಲ್ಲ.. ಆ ದೇವರು ಬಾಡಿಗೆ ಕೊಟ್ಟ ಈ ಜೀವನ ಮುಗಿಯೋವರೆಗೂ ನಿನ್ನ ಬಾಡಿಗೆ ಪ್ರೀತಿಯನ್ನು ಈ ಮನಸು ಬಯಸ್ತಾನೇ ಇರುತ್ತೆ.. ಪ್ರೀತಿಗೆ ಓನರ‍್ ನೀನು.. ಪ್ರೀತಿಯನ್ನು ನೀಡೋದು ಬಿಡೋದು ಪ್ರೀತಿಯ ಒಡತಿಯಾದ ನಿನಗೆ ಸೇರಿದ್ದು.. ನಿನ್ನ ಮನಸಿಗೆ ಬಿಟ್ಟದ್ದು.. ನಾನು ಜಸ್ಟ್ ಬಾಡಿಗೆದಾರ ಮಾತ್ರ.. ಬೇಡುವ ಹಕ್ಕು ನನಗೆ ಇದೆಯೇ ಹೊರತು.. ಕಸಿದುಕೊಳ್ಳುವ ಹಕ್ಕು ನನಗಿಲ್ಲ.. ನೀ ಹೋದರೂ ನಿನ್ನ ನೆನಪುಗಳು ಹೋಗಲ್ಲ.. ನಾ ಸತ್ತರೂ, ನನ್ನ ಪ್ರೀತಿ ಸಾಯಲ್ಲ..







ಇಂತಿ..

ಬಾಡಿಗೆ ಹೃದಯ



ಲೇಖನ

ಶೇಖ್​​(ಸ್ಪಿಯ)ರ್​​

Отправить комментарий

0 Комментарии