Hot Posts

10/recent/ticker-posts

ವಿಜಯ್​ ಮಲ್ಯ ಸಾಲ ಎಷ್ಟಿದೆ ಗೊತ್ತಾ?



 

ಸಾಲ ಅನ್ನೋದು ಶೂಲ ಅನ್ನೋ ಮಾತಿದೆ. ಆದ್ರೆ ಸಾಲದ ಶೂಲ ಭಾರತದ ಮದ್ಯದ ದೊರೆಯ ಪಾಲಿಗೆ, ಸುಖದ ಸುಪ್ಪತ್ತಿಗೆಯೇ ಆಗಿಬಿಟ್ಟಿದೆ. ವಿಜಯ್ ಮಲ್ಯಗೆ ಇಂದು ದೇಶದ ಅತಿದೊಡ್ಡ ಸಾಲಗಾರ ಅನ್ನೋ ಅಪಖ್ಯಾತಿ ಬೆನ್ನು ಬಿದ್ದಿದೆ. ವಿಜಯ್ ಮಲ್ಯ ಸಾಲದ ಸುಳಿಯಲ್ಲಿ ಸಿಲುಕಿದ್ದು ಹೇಗೆ..? ಮಲ್ಯಗೆ ಸಾಲಕೊಟ್ಟ ಬ್ಯಾಂಕ್​ಗಳ ಪರಿಸ್ಥಿತಿ ಇಂದು ಹೇಗಿದೆ ಇಲ್ಲಿದೆ ನೋಡಿ..

ವಿಜಯ್ ಮಲ್ಯ... ಭಾರತದ ಆಗರ್ಭ ಶ್ರೀಮಂತರೆಲ್ಲರನ್ನೂ ತಕ್ಕಡಿಯ ಒಂದು ಕಡೆ ತೂಗಿದ್ರೆ, ವಿಜಯ್ ಮಲ್ಯರನ್ನ ಮತ್ತೊಂದು ಕಡೆ ತೂಗಬೇಕು. ಮಲ್ಯ ಖದರ್​ ಅಂತದ್ದು. ಭಾರತದ ಕುಬೇರರ ಕುಳಗಳಲ್ಲಿ ಮಲ್ಯ ಹೆಸರು ಹೇಳ್ತಿದ್ದ ಹಾಗೆ ಹುಟ್ಟೋ ಥ್ರಿಲ್ಲೇ ಬೇರೆ. ಮಲ್ಯ ಸ್ಪೆಷಾಲಿಟಿಯೇ ಅಂತದ್ದು.

ಸಂಪತ್ತಿನ ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ರಾಜನಾಗಿ ಮೆರೆದಾಡ್ತಿರೋದು ವಿಜಯ್​ ಮಲ್ಯ ಹೆಗ್ಗಳಿಕೆ. ಮಲ್ಯ ಕೈಯಿಟ್ಟ ಕಡೆಯಲ್ಲೆಲ್ಲಾ ಸಂಪತ್ತಿನ ಸುರಿಮಳೆಯೇ ಆಗಿದೆ.  ಚಿನ್ನದ ಚಮಚವನ್ನ ಬಾಯಲ್ಲೇ ಇಟ್ಟುಕೊಂಡು ಹುಟ್ಟಿದ ಮಲ್ಯ ಇಂದು ವಿಶ್ವದ ಮದ್ಯದ ದೊರೆಯಾಗಿ ಬೆಳೆದುನಿಂತಿದ್ದಾರೆ. ಮಲ್ಯ ಒಡೆತನದ ಯುನೈಟೆಡ್ ಬ್ರೇವರೀಸ್ ಇಂದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಮದ್ಯ ಸರಬರಾಜು ಕಂಪನಿಯಾಗಿ ಬೆಳೆದು ನಿಂತಿದೆ.

ಕೋಲ್ಕತ್ತಾದಲ್ಲಿ ಡಿಸೆಂಬರ್ 18, 1955ರಲ್ಲಿ ಖ್ಯಾತ ಉದ್ಯಮಿ ವಿಠ್ಠಲ್ ಮಲ್ಯ ಹಾಗು ಲಲಿತಾ ರಾಮಯ್ಯ ಮಗನಾಗಿ ಮಲ್ಯ ಜನಿಸಿದ್ರು. ಕೊಲ್ಕತ್ತಾದ ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ಮಲ್ಯ, 1975ರಲ್ಲಿ ಅಪ್ಪನ ಬ್ಯುಸಿನೆಸ್ ಸಾಮ್ರಾಜ್ಯದ ವಿಸ್ತರಣೆಗೆ ನಿಂತ್ರು. 1983ರಲ್ಲಿ ಯುನೈಟೆಡ್​ ಬ್ರೇವರೀಸ್ ಗ್ರೂಪ್ ಅನ್ನೋ ಸಾಮ್ರಾಜ್ಯ ಹುಟ್ಟುಹಾಕಿದ ಮಲ್ಯಗೆ ಕೇವಲ 28 ವರ್ಷ. ಅಂದಿನಿಂದ ಮಲ್ಯ ಮುಟ್ಟಿದ್ದೆಲ್ಲವೂ ಚಿನ್ನ. ಯಶಸ್ಸು, ಕೀರ್ತಿ, ಹಣ ಅನ್ನೋದು ಮಲ್ಯಗೆ ಸ್ವತಃ ಕುಬೇರನೇ ದಯಪಾಲಿಸಿದ ವರದಂತೆ ಆಗಿಬಿಡ್ತು.   

ಮಲ್ಯ ಅಂದ್ರೆ ಕೇವಲ ಅಷ್ಟೇ ಅಲ್ಲ. ಅವರೊಬ್ಬ ಪಕ್ಕಾ ಬ್ಯುಸಿನೆಸ್ ಮ್ಯಾನ್. ಯುಬಿ ಗ್ರೂಪ್​, ಕಿಂಗ್ ಫಿಷರ್​ ಏರ್​ಲೈನ್ಸ್​, ಕಿಂಗ್ ಫಿಶರ್ ಬಿಯರ್​, ಸೇರಿದಂತೆ ಅನೇಕ ವ್ಯವಹಾರಗಳನ್ನ ಕಟ್ಟಿ ಬೆಳೆಸಿದ ರೀತಿಯೇ ಹೇಳುತ್ತೆ. ಮಲ್ಯ ಅದೆಂತಾ ಚಾಣಾಕ್ಷ ಉದ್ಯಮಿ ಅಂತಾ.  60 ಮದ್ಯ ಮಾರಾಟ ಕಂಪನಿಗಳಿ ಇಂದು ಮಲ್ಯ ಒಡೆತನದ ಯುಬಿ ಗ್ರೂಪ್​ನ ಅಧೀನದಲ್ಲಿವೆ ಅಂದ್ರೆ ಅದು ಮಲ್ಯ ಅದೆಂತಾ ಮಾಸ್ಟರ್​ ಮೈಂಡ್ ಅನ್ನೋದು ಗೊತ್ತಾಗುತ್ತೆ.

ಇದೆಲ್ಲದರ ಜೊತೆಗೆ ಮಲ್ಯ ಪಕ್ಕಾ ಶೋಕಿಲಾಲಾ ಕೂಡ. ಪ್ರತಿವರ್ಷವೂ ಮಲ್ಯ ಕಿಂಗ್ ಫಿಷನ್ ಕ್ಯಾಲೆಂಡರ್ ಗರ್ಲ್​ ಹಂಟಿಗ್ ನಡೆಸೋದು, ಮಲ್ಯ ಹಾಬಿ. ಹೈಪ್ರೊಫೈಲ್ ಪಾರ್ಟಿಗಳಲ್ಲಿ, ಪೇಜ್​3 ಈವೆಂಟ್​ಗಳಲ್ಲಿ ಚಿಗರೆಯಂತಾ ಹುಡುಗಿಯರೊಂದಿಗೆ ಸೊಂಟ ಬಳಸಿ ನಿಲ್ಲೋದೇ ಮಲ್ಯ ತುಂಟತನಕ್ಕೆ ಸಾಕ್ಷಿ.

ಆಗರ್ಭ ಶ್ರೀಮಂತರಿಗೆ ಇರುವಂತಾ ಕೆಲ ಪ್ರತಿಷ್ಠಿತ ಶೋಕಿಗಳು ಕೂಡ ಮಲ್ಯಗಿವೆ. ಕಿಂಗ್​ ಫಿಶರ್​ ಡರ್ಬಿ ಟೀಮ್ , ಹಾಗು ಮೆಕ್​ ಡೊನಾಲ್ ಟರ್ಬಿ ಟೀಮ್ ಅಂದ್ರೆ ಕುದುರೆ ಸವಾರಿ ತಂಡಗಳಿಗೆ ಮಲ್ಯ ಮಾಲೀಕರು. ಅಲ್ಲದೇ ಸಿಗ್ನೇಚರ್ ಗಾಲ್ಫ್ ಟೂರ್ನಿಮೆಂಟಿಗೆ ಕೂಡ ಮಲ್ಯ ಪ್ರಮುಖ ಪ್ರಾಯೋಜಕರು. ಮೋಹನ್ ಬಾಗನ್ ಹಾಗು ಈಸ್ಟ್ ಬೆಂಗಾಲ್ ಫುಟ್ ಬಾಲ್ ಕ್ಲಬ್ ಗಳನ್ನ ಕೂಡ ಮಲ್ಯ ಘನತೆಗೆ ಸಾಕ್ಷಿ. 

ಇದರ ಹೊರತಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಕೂಡ ಮಲ್ಯ ಒಡೆತನದಲ್ಲಿದೆ. ಇದರ ಜೊತೆಗೆ ಮಲ್ಯ ಸಾಮ್ರಾಜ್ಯದ ಹೊಳಪು ಹೆಚ್ಚಿಸಿರೋದು ಫಾರ್ಮುಲಾ ಒನ್ ರೇಸಿಂಗ್ ಟೀಮ್​. ಭಾರತಕ್ಕೆ ಫಾರ್ಮುಲಾ ಒನ್ ಟೀಮ್ ಪರಿಚಯಿಸಿದ ಕ್ರೆಡಿಟ್​ ಮಲ್ಯಗೆ ಸಲ್ಲಬೇಕು.

ಚಿನ್ನದ ಚಮಚವನ್ನ ಬಾಯಲ್ಲೇ ಇಟ್ಟುಕೊಂಡು ಹುಟ್ಟಿದ ಮಲ್ಯಾಗೆ ಶುಕ್ರದೆಸೆ ಜೀವನದ ಬಹುತೇಕ ಕಾಲದವರೆಗೂ ಇತ್ತು. ಮಲ್ಯ ಸಾಮ್ರಾಜ್ಯದಲ್ಲಿ ಸೂರ್ಯ ಎಂದೆಂದಿಗೂ ಮುಳುಗೋದೇ ಇಲ್ಲವೇನೋ ಅನ್ನುವಷ್ಟು ವೈಭೋವೋಪೇತನಾಗಿ ಬದುಕ್ತಿರೋ ಮಲ್ಯ ಸ್ಥಿತಿ ಬದಲಾಗಿದೆ. ಮಲ್ಯ ಕುಂಡಲಿಯಲ್ಲಿ ಗ್ರಹಗಳ ಪಥ ಬದಲಾಗಿದೆ. ಮಲ್ಯ ಪಾಲಿಗೆ ಶುಕ್ರದೆಸೆ ಎಂದೋ ಮುಗಿದು ಇದೀಗ ಅವರ ಬಾಳಲ್ಲಿ ರಾಹುಕಾಲ ನಡೀತಿದೆ. ಒಂದು ಕಾಲದ ಭಾರತದ ಅತಿ ಶ್ರೀಮಂತ ಉದ್ಯಮಿ ಇಂದು ಭಾರತದ ನಂಬರ್1 ಸಾಲಗಾರ ಎನಿಸಿಕೊಂಡಿದ್ದಾರೆ.
ವಿಜಯ್ ಮಲ್ಯ ಪಾಲಿನ ವಿಜಯ ದಿವಸಗಳು ಮುಗಿದು ಯಾವುದೋ ಕಾಲವಾಗಿದೆ. ಈಗ ಮಲ್ಯ ದೇಶದ ನಂಬರ್1 ಸಾಲಗಾರ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ. ಮಲ್ಯ ಪಾಲಿನ ದುರ್ಗತಿಗೆ ಕಾರಣವಾಗಿದ್ದು ಅವರದ್ದೇ ಮತ್ತೊಂದು ಉದ್ಯಮದಿಂದ. 
----------------------------
ಮಲ್ಯ ಒಡೆತನದ ಕಿಂಗ್ ಫಿಷರ್ ಏರ್​ಲೈನ್ಸ್​ ಹಾರಾಟ ಮಲ್ಯ ಸಾಮ್ರಾಜ್ಯಕ್ಕೆ ಕಲಶಪ್ರಾಯವಾಗಿತ್ತು. ಖಾಸಗಿ ವಿಮಾನಯಾನದಲ್ಲಿ ಕಿಂಗ್​ಫಿಷರ್​ ಸಾಕಷ್ಟು ಹೆಸರನ್ನೂ ಮಾಡಿತ್ತು. ಆದ್ರೆ ನಂತರದ ದಿನಗಳಲ್ಲಿ ಕಿಂಗ್​ಫಿಷರ್ ಏರ್​ಲೈನ್ಸ್​ ಹಾರಿದಷ್ಟು ಎತ್ತರಕ್ಕೆ ವಿರುದ್ಧವಾಗಿ ಪಾತಾಳಕ್ಕಿಳಿಯಿತು. ಅದರ ಜೊತೆಗೆ ಮಲ್ಯ ಸಾಮ್ರಾಜ್ಯದ ಅಧಃಪತನವೂ ಶುರುವಾಯ್ತು. ಎಲ್ಲದರ ಟೋಟಲ್ ಎಫೆಕ್ಟೇ ಇಂದು ಅವರನ್ನ ದೇಶದ ನಂಬರ್1 ಸಾಲಗಾರನನ್ನಾಗಿಸಿವೆ.





ಖಾಸಗಿ ವಿಮಾನಯಾನಕ್ಕೂ ಅಡಿಯಿಟ್ಟ ಮದ್ಯದ ದೊರೆ
ಮಲ್ಯ ಘನತೆ ಹೆಚ್ಚಿಸಿತು ಕಿಂಗ್ ಫಿಶರ್ ಏರ್​ಲೈನ್ಸ್​

ಕಿಂಗ್ ಫಿಶರ್​ ಬ್ರ್ಯಾಂಡ್​ ಮದ್ಯ ಮಾರುಕಟ್ಟೆಯಲ್ಲಿ ಶಿಖರ ಸೂರ್ಯನಾಗಿ ಹೊಳೆಯುತ್ತಿದ್ದ. ಕಿಂಗ್ ಫಿಶರ್​ ಉತ್ಪನ್ನಗಳಿಗೆ ಜನರು ಕೂಡ ಫಿದಾ ಆಗಿಬಿಟ್ಟಿದ್ರು. ವಿಶ್ವ ಮಾರುಕಟ್ಟೆಯಲ್ಲಿ ಕಿಂಗ್ ಫಿಶರ್​ನ ಎರಡನೇ ಸ್ಥಾನವನ್ನ ಅಲ್ಲಾಡಿಸುವಂತಾ ಮತ್ತೊಂದು ಉತ್ಪನ್ನವೇ ಇರಲಿಲ್ಲ. ಹೀಗಿರುವಾಗ್ಲೇ ಮಲ್ಯ ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಮತ್ತೊಂದು ಬೃಹತ್ ಉದ್ಯಮಕ್ಕೆ ಬಂಡವಾಳ ಹೂಡಿಬಿಟ್ರು. ಹಾಗೆ ಅವರು ಬಂಡವಾಳ ಹೂಡಿದ್ದೇ ಕಿಂಗ್ ಫಿಶರ್ ಏರ್​ಲೈನ್ಸ್​ಗೆ.

2003ರಲ್ಲಿ ಕಿಂಗ್ ಫಿಶರ್ ಏರ್​ಲೈನ್ಸ್​ ಕಾರ್ಯಾರಂಭ ಮಾಡ್ತು. ವಿಮಾನಯಾನ ಶುರುಮಾಡೋದಕ್ಕೆ ಸರ್ಕಾರದ ಅನುಮತಿ ಸೇರಿದಂತೆ ಇತರೆ ಕಾರ್ಯಗಳೆಲ್ಲಾ ಮುಗಿದು ಮೇ 9, 2005ರಂದು ಕಿಂಗ್ ಫಿಶರ್ ತನ್ನ ದೇಶೀಯ ಹಾಗು ಅಂತರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸಿಯೇ ಬಿಡ್ತು.

ದೇಶೀಯ ವಿಮಾನಯಾನ ಸೇವೆಯಲ್ಲಿ ಸರ್ಕಾರ ಪ್ರಯಾಣಿಕರಿಗೆ ನೀಡ್ತಿದ್ದಕ್ಕಿಂತಲೂ ಹೆಚ್ಚಿನ ಸೌಲಭ್ಯವನ್ನ ಮಲ್ಯ ಕಿಂಗ್​ಫಿಶರ್​ ಏರ್​ಲೈನ್ಸ್​ನಲ್ಲಿ ನೀಡಿದ್ರು. ಪ್ರಯಾಣದ ವೆಚ್ಚದಲ್ಲೂ ಕೂಡ ಅಂತರ ಕಾಯ್ದುಕೊಳ್ತು. ಮಲ್ಯ ಉಪಯೋಗಿಸಿದ ಮಾರ್ಕೆಟಿಂಗ್ ಸ್ಟ್ರಾಟಜಿಗಳು ಚೆನ್ನಾಗಿಯೇ ವರ್ಕೌಟ್ ಆಗಿತ್ತು. ದೇಶದ ಆಂತರಿಕ ವಿಮಾನಯಾನ ಸಾರಿಗೆ ವ್ಯವಸ್ಥೆಯಲ್ಲಿ ಕಿಂಗ್ ಫಿಶರ್ ಎರಡನೇ ಸ್ಥಾನಕ್ಕೆ ಜಿಗಿದುಬಿಡ್ತು.

ಕಿಂಗ್​ಫಿಶರ್​ ರೆಡ್, ಕಿಂಗ್ ಫಿಶರ್ ಕ್ಲಾಸ್ ಹಾಗು ಕ್ಲಬ್​ ವಿಮಾನಗಳು ಬ್ಯುಸಿನೆಸ್ ಟೈಕೂನ್​ಗಳನ್ನೂ ಸೂಜಿಗಲ್ಲಿನಂತೆ ಸೆಳೆದ್ವು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ನೆಲೆಯಾಗಿ ಹೊಂದಿದ್ದ  ಕಿಂಗ್ ಫಿಶರ್ ಏರ್​ಲೈನ್​ ಮುಂಬೈ, ಕೋಲ್ಕತ್ತ, ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಸಂಚರಿಸ್ತಿತ್ತು. ಅದರ ಜೊತೆಜೊತೆಗೆ ಬೆಂಗಳೂರುನಿಂದ ಲಂಡನ್​ಗೂ ಕೂಡ ವಿಮಾನಯಾನ  ಸೇವೆ ಆರಂಭಿಸಲಾಗಿತ್ತು.

ಮೊದಲೇ ಮಲ್ಯ ಐಷಾರಾಮಿ ಉದ್ಯಮಿ. ವಿಶ್ವದ ನಂಬರ್2 ಮದ್ಯದ ದೊರೆ. ಮಲ್ಯ ವೈಭೋಗಕ್ಕೆ ಪ್ರತೀಕವಾಗಿ ಒಂದು ಎ3 ಅನ್ನೋ ಐಷಾರಾಮಿ ವಿಮಾನಯಾನವನ್ನ ಶುರುಮಾಡಿದ್ರು. ಕಿಂಗ್​ಫಿಶರ್ ಏರ್​ಲೈನ್ಸ್ ಹಾರಿದಷ್ಟೂ ಎತ್ತರಕ್ಕೆ ಮಲ್ಯ ಕೀರ್ತಿ ಪತಾಕೆಗಳು ಹಾರಿದ್ವು. ಸುಮಾರು ಆರು ವರ್ಷಗಳ ಕಾಲ ಕಿಂಗ್​ಫಿಶರ್ ಏರ್​ಲೈನ್ಸ್​ ಆಗಸದಲ್ಲೂ ಕಿಂಗ್ ಆಗಿಬಿಡ್ತು. ಆದ್ರೆ 2011ರ ಡಿಸೆಂಬರ್​ನಲ್ಲಿ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ಕಷ್ಟಕಾಲ ಶುರುವಾಯ್ತು.

ಆರ್ಥಿಕ ಸಂಕಷ್ಟಕ್ಕೆ ಒಳಗಾಯ್ತು ಕಿಂಗ್​ ಫಿಶರ್​ ಏರ್​ಲೈನ್ಸ್
ಮದ್ಯದ ದೊರೆಗೂ ಬಂತು ಇದರಿಂದ ದುರ್ಗತಿ

2011ರಲ್ಲಿ ಷೇರು ಮಾರುಕಟ್ಟೆಯಲ್ಲಿ ಬದಲಾದ ಸನ್ನಿವೇಶಗಳು ಕಿಂಗ್​ಫಿಶರ್​ ಸ್ಥಿತಿಗತಿ ಬದಲಾಗೋದಕ್ಕೂ ಕಾರಣವಾದ್ವು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಹೆಚ್ಚಾದ ಹಿನ್ನೆಲಯಲ್ಲಿ ಕಿಂಗ್​ಫಿಶರ್ ಏರ್​ಲೈನ್ಸ್​ಗೆ ಆದಾಯಕ್ಕೆ  ಹೊಡೆತ ಬಿತ್ತು.  ಕಿಂಗ್​ಫಿಶರ್ ಏರ್​ಲೈನ್ಸ್ ಆರ್ಥಿಕ ದುಸ್ಥಿತಿಯ ನಡುವೆಯೇ ಹಾರಾಟ ನಡೆಸಿತ್ತು. ಆದ್ರೆ ಅದು ಕೇವಲ ಅಲ್ಪಾವಧಿಯಷ್ಟೇ ಆಗಿತ್ತು.

2012ರ ಅಕ್ಟೋಬರ್​ನಲ್ಲಿ ಕಿಂಗ್​ಫಿಶರ್​ ಏರ್​ಲೈನ್ಸ್​ ಆರ್ಥಿಕ ದಿವಾಳಿತನದ ಕುರುಹುಗಳು  ಒಂದೊಂದಾಗಿ ಜಗಜ್ಜಾಹೀರಾದ್ವು. ಮಲ್ಯ ತಮ್ಮ ಏರ್​ಲೈನ್ಸ್ ಸಿಬ್ಬಂದಿಗಳಿಗೆ ಸಂಬಳವನ್ನೇ ನೀಡದಂತಾ ಸ್ಥಿತಿಗೆ ತಲುಪಿದ್ರು. ಅಲ್ಲದೇ ಸೂಕ್ತ ಕಾರಣವನ್ನ ನೀಡದೆ ಏಕಾಏಕಿ ಅನೇಕ ನೌಕರರನ್ನ ಸೇವೆಯಿಂದ ವಜಾಗೊಳಿಸಿದ್ರು. ಇದರಿಂದ ಸಿಟ್ಟಿಗೆದ್ದ ಕಿಂಗ್​ಫಿಶರ್​ ಏರ್​ಲೈನ್ಸ್​ ಸಿಬ್ಬಂದಿಗಳು ಮಾಲೀಕರ ವಿರುದ್ಧವೇ ಪ್ರತಿಭಟನೆಗಿಳಿದ್ರು. ಸುಮಾರು ಆರು ತಿಂಗಳ ವೇತನ ಬಾಕಿ ಉಳಿಸಿಕೊಳ್ಳುವಂತಾಯ್ತು. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ಷೋ ಕಾಸ್ ನೊಟೀಸ್ ಜಾರಿ ಮಾಡಿದ್ರೂ, ಅದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ.

ಹಾರಾಟ ನಿಲ್ಲಿಸಿತು ಕಿಂಗ್​ಫಿಶರ್ ಏರ್​ಲೈನ್ಸ್​
ಮಲ್ಯ ಹೆಗಲಿಗೆ ಬಿತ್ತು ಕೋಟಿ ಕೋಟಿ ಸಾಲದ ಹೊರೆ

ಯಾವಾಗ ಈ ಸಮಸ್ಯೆ ಬಗೆಹರಿಯಲಾರದು ಅಂತಾ ಗೊತ್ತಾಯ್ತೋ ಕೂಡ್ಲೇ ಡಿಸಿಜಿಎ ಕಿಂಗ್​ಫಿಶರ್ ಏರ್​ಲೈನ್ಸ್​ ಪರವಾನಗಿಯನ್ನ ರದ್ದುಗೊಳಿಸ್ತು. ದೇಶೀಯ ಹಾಗು ವಿದೇಶಿ ವಿಮಾನಯಾನಾ ಹಾರಾಟವನ್ನ 2013ರ ಫೆಬ್ರವರಿಯಲ್ಲಿ ನಿಲ್ಲಿಸಲಾಯ್ತು. ಕಿಂಗ್​ಫಿಶರ್​ ಏರ್​ಲೈನ್ಸ್​ಗೆ 2014ರ ಫೆಬ್ರವರಿಯಲ್ಲಿ ಕಿಂಗ್​ಫಿಶರ್​ ಸಿಇಓ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ರು. ಅಲ್ಲಿಗೆ ಕಿಂಗ್​ಫಿಶರ್​ ಏರ್​ಲೈನ್ಸ್​ ರೆಕ್ಕೆಪುಕ್ಕಗಳು ಸಂಪೂರ್ಣವಾಗಿ ಕತ್ತರಿಸಲ್ಪಟ್ವು. 

ಕಿಂಗ್​ ಫಿಶರ್​ ಏರ್​​ಲೈನ್ಸ್  ಹಾರಾಟ ನಿಲ್ಲಿಸಿದ ಮೇಲೂ ಮಲ್ಯಗೆ ಕಷ್ಟಗಳು ತಪ್ಪಲಿಲ್ಲ. ಅಸಲಿಗೆ ಮಲ್ಯ ಸಾಮ್ರಾಜ್ಯಕ್ಕೆ ಕತ್ತಲು ಕವಿಯೋಕೆ ಆರಂಭವಾಗಿದ್ದೇ ಇಲ್ಲಿಂದ. ಕಿಂಗ್​ಫಿಶರ್​ ವಿಮಾನಯಾನ ನಿಲ್ಲಿಸಿದ ಬೆನ್ನಿಗೇ ಮಲ್ಯ ಮೇಲೆ ಸುಮಾರು 4000 ಕೋಟಿ ರೂಪಾಯಿ ಸಾಲದ ಹೊರೆ ಬಿತ್ತು.

ಲಕ್ಷಾಂತರ ಕೋಟಿ ರೂಪಾಯಿಗೆ ಒಡೆಯರಾಗಿದ್ದ ಮಲ್ಯ ಸಾವಿರಾರು ಕೋಟಿಗಳಿಗೆ ಸಾಲಗಾರನೂ ಆದ್ರು. ಮಲ್ಯರನ್ನ ನಂಬಿ ಸಾಲ ಕೊಟ್ಟ ಬ್ಯಾಂಕ್​ಗಳೇ ಇಂದು ದೇಹಿ ಅನ್ನೋ ಸ್ಥಿತಿಗೆ ಬಂದು ನಿಂತಿವೆ. ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಅನ್ನೋ ಗಾದೆ ಮಲ್ಯ ವಿಚಾರದಲ್ಲಿ ನಿಜವಾಗಿದೆ. 
--------------------
ಕಿಂಗ್​ ಫಿಶರ್​ ಏರ್​ಲೈನ್ಸ್ ಕೊಟ್ಟ ಹೊಡೆತದ ಬಿಸಿ, ಇತರೆ ಉದ್ಯಮಗಳಿಗೂ ತಾಕಿತ್ತು. ವಿಮಾನಯಾನಕ್ಕಾಗಿ ಮಾಡಿದ ಸಾಲ ತೀರಿಸೋದಕ್ಕಾಗಿ ಮಲ್ಯ ಖಾಸಗಿ ಆಸ್ತಿಗಳನ್ನೇ ಮಾರಬೇಕಾಯ್ತು. ದೇವರ ಮೊರೆ ಹೋದ್ರು ಮಲ್ಯ ಕಷ್ಟದ ದಿನಗಳು ದೂರಾಗಲಿಲ್ಲ. ಮಲ್ಯರನ್ನ ನಂಬಿ ಸಾಲ ಕೊಟ್ಟ ಬ್ಯಾಂಕ್​ಗಳ ಸ್ಥಿತಿಯೂ ಇಂದು ಅಧೋಗತಿ ತಲುಪಿದೆ.

ಸಾಲದಲ್ಲೂ ಕಿಂಗ್ ಆದ್ರು ವಿಜಯ್​ ಮಲ್ಯ
ಕಷ್ಟ ಪರಿಹಾರಕ್ಕೆ ದೇವರಲ್ಲಿ ಮೊರೆ ಇಟ್ಟ ಮದ್ಯದ ದೊರೆ

ವಿಜಯ್ ಮಲ್ಯ ಪಾಲಿನ ವಿಜಯ ಕಿಂಗ್​ಫಿಶರ್​ ಏರ್​ಲೈನ್ಸ್ ಜೊತೆಜೊತೆಗೆ ಮುಗಿದುಹೋಗಿತ್ತು. ಕಿಂಗ್​ಫಿಶರ್ ಏರ್​ಲೈನ್ಸ್ ಸುಮಾರು 12,000 ಕೋಟಿ ರೂಪಾಯಿ ಸಾಲದ ಹೊರೆಯನ್ನ ಮದ್ಯದ ದೊರೆಯ ಹೆಗಲಿಗೆ ಕಟ್ಟಿತ್ತು. ಮಲ್ಯ ಉದ್ದಿಮೆಗಳ ಸಾಮ್ರಾಜ್ಯಕ್ಕೆ ಇದರಿಂದ ದೊಡ್ಡ ಹೊಡೆತ ಬಿತ್ತು. ಮಲ್ಯ ಖಾಸಗಿ ಆಸ್ತಿಗಳನ್ನೇ ಆಪೋಶನ ತೆಗೆದುಕೊಳ್ಳೋ ಮಟ್ಟಕ್ಕೆ ಮಲ್ಯ ಪಾಲಿಗೆ ಸಾಲ ಶೂಲವಾಯ್ತು.

ಈ ಸಾಲದ ಸುಳಿ ಹಾಗು ಕಷ್ಟದ ದಿನಗಳಿಂದ ಹೇಗೆ ಹೊರಗೆ ಬರೋದು ಅನ್ನೋದೇ ಮಲ್ಯಗೆ ಯಕ್ಷಪ್ರಶ್ನೆಯಾಗಿಬಿಡ್ತು. ಆ ವೇಳೆಯಲ್ಲೇ ಮಲ್ಯ ಕಂಡಕಂಡ ದೇವರಿಗೆಲ್ಲಾ ಕೈ ಮುಗಿದ್ರು. ತಿರುಪತಿ, ಸೇರಿದಂತೆ ದೇಶದ ಅನೇಕ ದೇವಾಲಯಗಳಿಗೆ ತೆರಳಿದ್ರು. ತಮ್ಮ ಕಷ್ಟ ಪರಿಹರಿಸುವಂತೆ ದೇವರಿಗೆ ಮೊರೆ ಇಟ್ಟರು. ಇದರಿಂದ ಕಷ್ಟ ಪರಿಹಾರವಾಗುತ್ತೆ ಅಂತಾ ನಂಬಿದ್ದ ಮಲ್ಯ ಅದಕ್ಕೆ ಪ್ರತಿಯಾಗಿ ಭಾರೀ ಹರಕೆಗಳನ್ನೂ ಮಲ್ಯ ಮಾಡಿಕೊಂಡ್ರು.

ಆದ್ರೆ ಯಾವ ದೇವರು ಕೂಡ ಮಲ್ಯ ಆರ್ಥಿಕ ಸಂಕಷ್ಟವನ್ನ ಪರಿಹರಿಸಲಿಲ್ಲ. ಅದರ ಬದಲಾಗಿ ಮಲ್ಯ ಸಾಲದ ಹೊರೆ ಮತ್ತಷ್ಟು ಹೆಚ್ಚಾಯ್ತು. ಮದ್ಯ ದೊರೆಯ ಇಡೀ ಸಾಮ್ರಾಜ್ಯವನ್ನೇ ಮಾರಿದ್ರೂ ಆ ಸಾಲ ತೀರೋದಿಲ್ಲ ಅನ್ನೋ ಲೆಕ್ಕಾಚಾರ ಬ್ಯಾಂಕ್​ಗಳೇ ಹಾಕಿಕೊಂಡ್ವು.

ಮಲ್ಯಗೆ ಸಾಲ ಕೊಟ್ಟಿದ್ವು 17 ಸಾರ್ವಜನಿಕ ಬ್ಯಾಂಕ್​ಗಳು
ಆಸ್ತಿ ಹರಾಜಿಗಿಟ್ಟರೂ ತೀರಲಿಲ್ಲ ದೊರೆಯ ಸಾಲ  

ವಿಜಯ್ ಮಲ್ಯರ ಲೋಹದ ಹಕ್ಕಿಯ ಹಾರಾಟಕ್ಕೆ ಸುಮಾರು 17 ಸಾರ್ವಜನಿಕ ಬ್ಯಾಂಕ್​ಗಳು ಅವರು ಕೇಳಿದಷ್ಟು ಸಾಲ ಕೊಟ್ಟಿದ್ವು. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್​ ಸೇರಿದಂತೆ 17 ಬ್ಯಾಂಕ್​ಗಳು ಮಲ್ಯಗೆ ಸುಮಾರು 12,000 ಕೋಟಿ ಸಾಲವನ್ನ ನೀಡಿದ್ವು. ಮಲ್ಯ ಒಡೆತನದ ಕೆಲವು ಸ್ಥಿರಾಸ್ತಿಗಳು, ಮಲ್ಯ ಒಡೆತನದ ಕಂಪನಿಗಳ ಷೇರುಗಳು ಹಾಗು ಮಲ್ಯರ ವೈಯಕ್ತಿಕ ಗ್ಯಾರಂಟಿಯ ಮೇಲೆ ಸಾಲ ನೀಡಲಾಗಿತ್ತು. ಆ ಬಳಿಕ ಮಲ್ಯ ಕಂಪನಿಯ ಷೇರುಗಳನ್ನ ಮಾರಾಟ ಮಾಡಿ ತಮ್ಮ ಸಾಲದ ಮೊತ್ತ ಸರಿದೂಗಿಸಿಕೊಳ್ಳೋಕೆ ನೋಡಿದ್ವು.

ಮಲ್ಯ ಹೆಸರಿನಲ್ಲಿ ಗೋವಾದಲ್ಲಿದ್ದ ವಿಲ್ಲಾ ಹಾಗು ಮುಂಬೈನಲ್ಲಿದ್ದ ಖಾಸಗಿ ಆಸ್ತಿಗಳನ್ನೂ ಹರಾಜಿಗಿಟ್ರೂ ಸಾಲ ತೀರಲಿಲ್ಲ. ಈ ನಡುವೆ ಬಹಿರಂಗವಾದ ಮತ್ತೊಂದು ವಿಚಾರವೆಂದ್ರೆ ಮಲ್ಯ ಒಂದೇ ಆಸ್ತಿಯ ಮೇಲೆ ಮೂನ್ನಾಲ್ಕು ಬ್ಯಾಂಕ್​ಗಳು ಸಾಲ ನೀಡಿದ್ವು. ಹಾಗಾಗಿ ಯಾವ ಬ್ಯಾಂಕ್ ಆ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಬೇಕು ಅನ್ನೋ ಗೊಂದಲ ನಿರ್ಮಾಣವಾಯ್ತು.

ಸಾವಿರ ಕೋಟಿ ಸಾಲವಿದ್ರೂ ಮದ್ಯ ದೊರೆ ನಿರುಮ್ಮಳ
ಸಾಲ ಕೊಟ್ಟ ಬ್ಯಾಂಕ್​ಗಳಿಗೇ ಎದುರಾಯ್ತು ದುಸ್ಥಿತಿ



ಸ್ಥಿರ ಹಾಗು ಚರಾಸ್ಥಿಗಳನ್ನ ಹರಾಜಿಗಿಟ್ಟು ಸಾಲ ಮರುಪಾವತಿಸಿಕೊಂಡ್ರೂ, ಮಲ್ಯ ಇನ್ನೂ 4000 ಕೋಟಿ ರೂಪಾಯಿ ಸಾಲಕ್ಕೆ ಹೊಣೆಗಾರ. ಹೀಗಿದ್ರೂ ಕೂಡ ಮಲ್ಯ ವೈಭವಗಳು ಕಡಿಮೆಯಾಗಿಲ್ಲ. ಮದ್ಯದ ದೊರೆಯಾಗಿದ್ದಾಗ ಮಲ್ಯ ನಡೆಸ್ತಿದ್ದ ಶೋಕಿ ಜೀವನಕ್ಕೂ, ಈಗಿನ ಸಾಲಗಾರ ಮಲ್ಯ ಜೀವನಕ್ಕು ಏನೂ ವ್ಯತ್ಯಾಸವಿಲ್ಲ. ಮೊದಲಿನಷ್ಟೇ ನಿರುಮ್ಮಳರಾಗಿ ಮಲ್ಯ ದಿನಕಳೀತಾ ಇದಾರೆ. ಆದ್ರೆ ಮಲ್ಯ ವರ್ತನೆಯಿಂದ ನಿಜಕ್ಕೂ ಚಿಂತೆಗೆ ಬಿದ್ದಿರೋದೇ ಸಾಲ ಕೊಟ್ಟ ಬ್ಯಾಂಕ್​ಗಳು.

ಮಲ್ಯರಿಗೆ ಸಾಲ ನೀಡಿದ 17 ಬ್ಯಾಂಕ್​ಗಳ ಮ್ಯಾನೇಜರ್​ಗಳು ಈಗ ನಿವೃತ್ತರಾಗಿದ್ದಾರೆ. ಹೊಸದಾಗಿ ಬಂದಿರೋ ಬ್ಯಾಂಕ್ ಮ್ಯಾನೇಜರ್​ಗಳಿಗೆ ಬ್ಯಾಲೆನ್ಸ್​ ಶೀಟ್ ಕ್ಲಿಯರ್ ಮಾಡುವಂತೆ ಮಲ್ಯರ ಮನವೊಲಿಸೋದೇ ದೊಡ್ಡ ಸವಾಲು. ಸಾಲ ವಸೂಲಾತಿ ಹೇಗೆ ಅನ್ನೋ ಪೂರ್ವಾಪರ ಯೋಜನೆಗಳಿಲ್ಲದೆ ಸಾಲ ಕೊಟ್ಟ ಬ್ಯಾಂಕ್​ಗಳೇ ಇಂದು ಮಲ್ಯ ಎದುರು ಅಕ್ಷರಶಃ ದೇಹಿ ಅನ್ನೋ ಸ್ಥಿತಿಯನ್ನ ಎದುರಿಸ್ತಿವೆ.

ಸಾಲ ತೆಗೆದುಕೊಂಡು ಅದನ್ನ ತೀರಿಸದೇ ಇರೋದು ಮಾತ್ರ ಮಲ್ಯ ಮಾಡಿದ ತಪ್ಪು ಅನ್ನೋ ಹಾಗೆ ಕಾಣಿಸ್ತಿಲ್ಲ. ಯಾಕಂದ್ರೆ ಮಲ್ಯಗೆ ಸಾಲ ಕೊಟ್ಟ ಬ್ಯಾಂಕ್​ಗಳು ಕೂಡ ಕಾನೂನು ಉಲ್ಲಂಘನೆ ಮಾಡಿರೋ ಸ್ಪಷ್ಟ ನಿದರ್ಶನಗಳು ಮೇಲ್ನೋಟಕ್ಕೆ ಕಾಣಿಸ್ತಿವೆ. ಒಂದೇ ಆಸ್ತಿಯ ಮೇಲೆ ಮೂರು ನಾಲ್ಕು ಬ್ಯಾಂಕ್​ಗಳು ಸಾಲ ಕೊಟ್ಟಿರೋದೇ ಹೇಳುತ್ತೆ ಬ್ಯಾಂಕ್​ಗಳು ಕೂಡ ಇಲ್ಲಿ ಮೋಸದ ಆಟವಾಡಿವೆ ಅಂತಾ.

ಒಟ್ಟಿನಲ್ಲಿ ಮಲ್ಯಗೆ ಕೊಟ್ಟ ಸಾಲವನ್ನ ಇಂದು ಹೇಗೆ ಮರುಪಾವತಿಸಿಕೊಳ್ಳಬೇಕು ಅನ್ನೋದೇ ಇಂದು ಬ್ಯಾಂಕ್​ಗಳ ಮುಂದಿರೋ ಬಗೆಹರಿಯದ ಸಮಸ್ಯೆ. ಬ್ಯಾಂಕ್​ಗಳನ್ನ ದುಸ್ಥಿತಿಗೆ ದೂಡಿರೋ ಮಲ್ಯ ಮಾತ್ರ ತಮ್ಮ ಎಂದಿನ ಶೋಕಿಯಲ್ಲೇ ದಿನ ಕಳೀತಿದಾರೆ. ಇದಕ್ಕೆ ಅಲ್ವಾ ಹೇಳೋದು ಕೊಟ್ಟವನು ಕೋಡಂಗಿ. ಈಸ್ಕೊಂಡೋನು ಈರಭದ್ರ ಅಂತಾ.

ಒಂದು ಕಾಲದ ಮದ್ಯದ ದೊರೆ ಇಂದು ಸಾಲದಲ್ಲೂ ದೊರೆ. ಮಲ್ಯ ಸಾಲ ತೀರಿಸ್ತಾರೋ ಇಲ್ವೋ. ಆದ್ರೆ ಅವರ ಕಲರ್​ಫುಲ್ ಜೀವನಕ್ಕೆ ಮಾತ್ರ ಎಂದಿಗೂ ಚ್ಯುತಿ ಬಂದಿಲ್ಲ. ಸಾಲದಲ್ಲೂ ಸರ್ದಾರನಾಗಿಯೇ ಮಲ್ಯ ದಿನಕಳೀತಾ ಇದಾರೆ.

Отправить комментарий

0 Комментарии